ಆಹಾರ ಕುರಿತ ನಿರ್ಲಕ್ಷ್ಯವೂ ಕ್ಯಾನ್ಸರ್ ತಂದೀತು!

ಕ್ಯಾನ್ಸರ್ ಹೇಗೆ ಬರುತ್ತದೆ? ಅದಕ್ಕೆ ಕಾರಣಗಳೇನು? ಈ ವಿಚಾರಗಳನ್ನು ವಿವರವಾಗಿ ಅರಿತೆವು. ನಮ್ಮ ಜೀವನಶೈಲಿ ಕೂಡ ಕ್ಯಾನ್ಸರ್ ತರಬಲ್ಲದು ಎನ್ನುವ ಸಂಗತಿಯನ್ನೂ ತಿಳಿದೆವು. ಆದರೆ, 'ಅರ್ಬುದ ರೋಗದ ಕುರಿತು ಇಷ್ಟು ವಿವರವಾಗಿ ಹೇಳುವ ಅಗತ್ಯವಿತ್ತಾ' ಎನ್ನುವ ಪ್ರಶ್ನೆಯನ್ನು ನನ್ನ ಕೆಲವು ವಾಕಿಂಗ್ ಸಂಗಾತಿಗಳು ಎತ್ತಿದ್ದರು. ಅವರಿಗೆ ನಾನು ಹೇಳಿದ್ದಿಷ್ಟೆ-
ಇವತ್ತು ಪ್ರತಿ ಹಳ್ಳಿಯಲ್ಲೂ ಕ್ಯಾನ್ಸರ್ ಪೀಡಿತರು ಸಿಗುತ್ತಾರೆ. ಅಷ್ಟೇಕೆ, ಮುಖ್ಯಮಂತ್ರಿ ಅಥವಾ ಪ್ರಧಾನಿಗಳ ಪರಿಹಾರ ನಿಧಿಯ ನೆರವು ಕೋರಿ ಬರುವ ಆರ್ಜಿಗಳ ವಿವರ ತೆಗೆಸಿ ನೋಡಿ. ದಂಗಾಗಿ ಹೋಗುತ್ತೀರಿ. ಹೆಚ್ಚಿನ ಅರ್ಜಿಗಳು ಕ್ಯಾನ್ಸರ್ ಅಥವಾ ಮೂತ್ರಪಿಂಡ ವೈಫಲ್ಯದ ಡಯಾಲಿಸಿಸ್ ಚಿಕಿತ್ಸಾ ವೆಚ್ಚಕ್ಕೆ ಸಂಬಂಧಿಸಿದ್ದೇ ಆಗಿರುತ್ತವೆ. ಅಷ್ಟರಮಟ್ಟಿಗೆ ಕ್ಯಾನ್ಸರ್ ನಮ್ಮ ಸಮಾಜವನ್ನು ಆವರಿಸಿಕೊಂಡಿದೆ. ಆದರೆ ಎಷ್ಟು ಜನರಿಗೆ ಈ ಕಾಯಿಲೆ ಬಗ್ಗೆ ಗೊತ್ತಿದೆ? ಎಷ್ಟು ಮಂದಿ ವೈದ್ಯರು ಅರ್ಬುದ ಹೇಗೆ ಬರುತ್ತದೆ? ಏಕೆ ಬರುತ್ತದೆ ಎನ್ನುವ ಮಾಹಿತಿಯನ್ನು ರೋಗಿ ಮತ್ತು ಅವರ ಆರೈಕೆಗೆ ನಿಂತವರಿಗೆ ಕೊಡುತ್ತಾರೆ? ನಮ್ಮಲ್ಲಿ ಜಾಗೃತಿಯ ಕೊರತೆ ಇದೆ ಎಂದು ನಿಮಗೆ ಅನ್ನಿಸುವುದಿಲ್ಲವೆ?
ಯಾರಿಂದಲೂ ಬೇರೆ ಪ್ರತಿಕ್ರಿಯೆ ಬರಲಿಲ್ಲ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ ಎಂದುಕೊಳ್ಳುತ್ತೇನೆ. ನಮ್ಮ ವಿಷಯಕ್ಕೆ ಬರೋಣ. ಕ್ಯಾನ್ಸರ್ ವಿರುದ್ಧ ಆಹಾರ ಮತ್ತು ಡಯಟ್ ಪ್ರಮುಖ ಅಸ್ತ್ರ ಎನ್ನುವುದನ್ನು ಆಧುನಿಕ ವೈದ್ಯಲೋಕ ಪ್ರಾಂಜಲ ಮನಸ್ಸಿನಿಂದಲೇ ಒಪ್ಪಿಕೊಂಡಿದೆ. ಅಮೆರಿಕದ ನ್ಯಾಶನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಂಥ ಸಂಸ್ಥೆಯೇ ಜಗತ್ತಿನಲ್ಲಿ ಪ್ರತಿ ಮೂವರು ಕ್ಯಾನ್ಸರ್ ರೋಗಿಗಳಲ್ಲಿ ಒಬ್ಬರಿಗೆ ತಪ್ಪು ಡಯಟ್ನಿಂದಲೇ ಕ್ಯಾನ್ಸರ್ ಬರುತ್ತದೆ ಎಂದು ಹೇಳಿದೆ. ಬ್ರಿಟಿಷ್ ತಜ್ಞ ರಿಚರ್ಡ್ ಡಾಲ್ ಅವರ ಸಂಶೋಧನೆ ಪ್ರಕಾರ ಶೇ 60ರಷ್ಟು ರೋಗಿಗಳಲ್ಲಿ ಕ್ಯಾನ್ಸರ್ ಮತ್ತು ಅವರ ಆಹಾರ ಪದ್ಧತಿಗೆ ನೇರಾನೇರ ಸಂಬಂಧವಿದೆ. 20 ವರ್ಷ ಹಿಂದೆಯೇ ಅಮೆರಿಕವೊಂದರಲ್ಲೇ ಸುಮಾರು ಏಳು ಲಕ್ಷ ಜನರಲ್ಲಿ ಕ್ಯಾನ್ಸರ್ ಸಾಧ್ಯತೆಯನ್ನು ಮೊದಲೇ ಪತ್ತೆ ಹಚ್ಚಿ ಸರಿಯಾದ ಆಹಾರ ಕ್ರಮದ ಸಲಹೆ ನೀಡಿ ಕ್ಯಾನ್ಸರ್ ಅಪಾಯದಿಂದ ಪಾರು ಮಾಡಲಾಗಿದೆಯಂತೆ!
ಆಶ್ಚರ್ಯ ಅನ್ನಿಸಬಹುದು, ಅಲ್ಲಿ ಸಮಸ್ಯೆ ಎಷ್ಟು ತೀವ್ರವಾಗಿತ್ತು ಎಂದರೆ ಪ್ರತಿ ಐವರು ಅಮೆರಿಕನ್ನರಲ್ಲಿ ಒಬ್ಬನ ಸಾವು ಕ್ಯಾನ್ಸರ್ನಿಂದ ಸಂಭವಿಸುತ್ತಿತ್ತಂತೆ. ಈಗಲೂ ಕ್ಯಾನ್ಸರ್ ಪೀಡಿತರ ಪ್ರಮಾಣ ಇಳಿಮುಖವಾಗಿಲ್ಲ ಎನ್ನುವುದು ಇನ್ನೂ ಸೋಜಿಗ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


