ಗ್ರೀನ್ ಟೀ ಕುಡಿದು ಹಸಿರಾಗಿರಿ!

ನನ್ನ ಗೆಳೆಯನೊಬ್ಬನಿದ್ದ. ಅವನಿಗೆ ವಿಪರೀತ ಚಹಾ ಕುಡಿಯುವ ಹುಚ್ಚು. 'ಇಷ್ಟು ಚಹಾ ಒಳ್ಳೆಯದಲ್ಲ ಕಣೋ' ಎಂದರೆ, 'ನಿಮಗೇನು ಗೊತ್ತು ಚಹಾ ಮಹಿಮೆ? ಇದು ಕ್ಯಾನ್ಸರ್ ಬರದಂತೆ ನಮ್ಮನ್ನು ಕಾಪಾಡುತ್ತದೆ ಗೊತ್ತಾ' ಎನ್ನುತ್ತಿದ್ದ. ಇದು ಸುಮಾರು 40 ವರ್ಷ ಹಿಂದಿನ ಮಾತು ಎನ್ನಿ. ಪುಣ್ಯಾತ್ಮ ಆಗಲೇ ಇದನ್ನು ಎಲ್ಲಿಂದ ತಿಳಿದುಕೊಂಡಿದ್ದನೊ! ಈಗ ಆಧುನಿಕ ಕಾಲದಲ್ಲಿನ ಸಂಶೋಧನೆಗಳೂ ಇದೇ ಮಾತು ಹೇಳುತ್ತಿವೆ!!
ಚಹಾದಲ್ಲಿ ಕ್ಯಾನ್ಸರ್ ವಿರೋಧಿ ಅಂಶಗಳು ಸಾಕಷ್ಟಿವೆ. ಕ್ಯಾಚಿನ್ನಂಥ ಪೊಲಿಫಿನೋಲ್ಗಳು; ಕೆಫೀನ್, ಥಿಯೊಫಿಲ್ಲೀನ್, ಥಿಯೊಬ್ರೊವೈನ್ನಂಥ ಅಲ್ಕೊಲೈಡ್ಗಳು (ಕ್ಷಾರಭ!); ಅಮಿನೊ ಆಮ್ಲಗಳು, ಕ್ಲೋರೊಫಿಲ್, ಪ್ರೊಟೀನ್ಗಳು, ಖನಿಜಗಳು, ಫ್ಲೋರೈಡ್, ಅಲ್ಯುಮಿನಿಯಂ, ಭಾಷ್ಪಶೀಲ ಸಂಯುಕ್ತಗಳು ಚಹಾದಲ್ಲಿರುವ ಪ್ರಮುಖ ರಾಸಾಯನಿಕಗಳು. ಎಪಿಗಾಲೊಕ್ಯಾಚಿನ್-3-ಗಲ್ಲಾಟ್ (ಇಜಿಸಿಜಿ) ಅತ್ಯಂತ ಕ್ರಿಯಾಶೀಲ ಮತ್ತು ಹೇರಳವಾಗಿರುವ ಅಂಶ. ಇದುವೇ ಚಹಾಕ್ಕೆ ವಿಶಿಷ್ಟತೆ ತಂದುಕೊಡುತ್ತದೆ ಎಂದರೂ ತಪ್ಪಲ್ಲ. ಇವುಗಳಲ್ಲಿ ಹೆಚ್ಚಿನವು ಆ್ಯಂಟಿ ಆಕ್ಸಿಡೆಂಟ್ಗಳು. ಕ್ಯಾನ್ಸರ್ ಮತ್ತು ಆ್ಯಂಟಿಆಕ್ಸಿಡೆಂಟ್ ಬದ್ಧವೈರಿಗಳು. ನಾನು ಹಿಂದೊಮ್ಮೆ 'ಬೈಟು ಕಾಫಿ'ಯಲ್ಲಿಯೇ ಹೇಳಿದ್ದ 'ಕ್ಯಾನ್ಸರ್ಗೆ ಮದ್ದು ಇಡ್ಲಿ'ಯಲ್ಲಿ ಬಳಸುವುದೂ ಇದೇ ತತ್ವವನ್ನು. ಆ ಇಡ್ಲಿ ಕುರಿತು ಮುಂದೆ ಹೇಳುತ್ತೇನೆ. ಚಹಾದಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಹಲವು ರೀತಿಯ ಕ್ಯಾನ್ಸರ್ಗಳು ಬೆಳವಣಿಗೆ ಹೊಂದದಂತೆ ನೋಡಿಕೊಳ್ಳುತ್ತವೆ. ಕ್ಯಾಚಿನ್ನ ಇನ್ನೊಂದು ಪ್ರಯೋಜನ ಎಂದರೆ ಗಡ್ಡೆಗಳಾಗುವುದನ್ನು ತಡೆಯುತ್ತದೆ. ಪೊಲಿಫಿನೋಲ್ಗಳು ಅತಿ ನೇರಳೆ ಕಿರಣಗಳಿಂದ ಜೀವಕೋಶಗಳಿಗೆ ಹಾನಿ ಸಂಭವಿಸಿದ್ದಲ್ಲಿ ಅದನ್ನು ಸರಿಪಡಿಸುವ ಜತೆಗೆ ಶರೀರದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ನೂರಾರು ಪ್ರಯೋಗಗಳು ಚಹಾದಿಂದ ಕ್ಯಾನ್ಸರ್ ತಡೆಯಬಹುದು ಎಂದು ಹೇಳಿವೆಯಾದರೂ ಇನ್ನೂ ಸಂಶೋಧನೆಗಳು ಮುಂದುವರಿದೇ ಇವೆ.
ಜಗತ್ತಿನಾದ್ಯಂತ ಬಳಕೆಯಲ್ಲಿರುವುದು ಗ್ರೀನ್ ಟೀ, ಬ್ಲ್ಯಾಕ್ ಟೀ ಮತ್ತು ಊಲಾಂಗ್ ಟೀ. ಈ ಮೂರರಲ್ಲಿಯೂ ಆ್ಯಂಟಿಆಕ್ಸಿಡೆಂಟ್ಗಳು ಹೇರಳವಾಗಿವೆ. ಇದೇ ಮಾತು ಈಗ ಭಾರಿ ಅಬ್ಬರದ ಪ್ರಚಾರದೊಂದಿಗೆ ಮಾರುಕಟ್ಟೆಯಲ್ಲಿರುವ ಹರ್ಬಲ್ ಚಹಾಕ್ಕೆ ಅನ್ವಯ ಆಗುವುದಿಲ್ಲ ಎನ್ನುವುದು ನೆನಪಿರಲಿ. ಮೂರರ ಪೈಕಿ ಅತ್ಯಂತ ಹೆಚ್ಚಿನ ಪ್ರಮಾಣದ ಪರಿಣಾಮ ಕಂಡುಬರುವುದು ಗ್ರೀನ್ ಚಹಾದಲ್ಲಿ. ಅದನ್ನೇ ಬ್ಲ್ಯಾಕ್ ಟೀ ಆಗಿ ಪರಿವರ್ತಿಸುವಾಗ ನಡೆಯುವ ಪ್ರಕ್ರಿಯೆಯಲ್ಲಿ ಸ್ವಲ್ಪಮಟ್ಟಿನ ಸತ್ವ ನಾಶವಾಗುತ್ತದೆ. ಹೀಗಾಗಿ ಪದೇಪದೇ ಚಹಾ ಕುಡಿಯುವ ಅಭ್ಯಾಸ ಉಳ್ಳವರು ಗ್ರೀನ್ ಟೀಯನ್ನೇ ಕುಡಿಯುವುದು ಉತ್ತಮ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


