ಆಹಾರ ಮಾಡಿತ್ತು ಊಹಾತೀತ ಮ್ಯಾಜಿಕ್

ಆತ ಫಿಲಿಡೆಲ್ಫಿಯಾದ ಬ್ಯಾಂಕರ್. ವಯಸ್ಸು 47 ವರ್ಷ. ಐದು ವರ್ಷಗಳಿಂದ ವರ್ಷದಲ್ಲಿ ಐದು ಸಲ ಆಸ್ಪತ್ರೆವಾಸ ಕಾಯಂ. ಸಿಬ್ಬಂದಿಗೆ ಎಷ್ಟು ಪರಿಚಿತನಾಗಿಬಿಟ್ಟಿದ್ದ ಎಂದರೆ ಈತನ ಮೂತ್ರಪಿಂಡದಲ್ಲಿ ಮತ್ತೆ ಕಲ್ಲು ಬೆಳೆದಿದೆ ಎಂದು ರಿಸೆಪ್ಶನಿಸ್ಟ್ಳಿಂದ ಹಿಡಿದು ಎಲ್ಲರೂ ಅಂದಾಜು ಮಾಡಿಬಿಡುತ್ತಿದ್ದರು! ವೈದ್ಯರಿಗೂ ಬಹಳ ತಲೆನೋವಾಗಿತ್ತು ಈ ಕೇಸು. ಎಷ್ಟು ಸಲ ಕಲ್ಲು ಕರಗಿಸಿದರೂ, ಕಲ್ಲು ತೆಗೆದರೂ ಮತ್ತೆಮತ್ತೆ ಅದೇ ಸಮಸ್ಯೆ. ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಲ್ಲುಗಳು ಬೆಳೆದಿರುತ್ತಿದ್ದವೇ ವಿನಾ ಕಡಿಮೆಯಂತೂ ಆಗುತ್ತಿರಲಿಲ್ಲ. ಅಂತಿಮವಾಗಿ ಅವರನ್ನು ಕೂಡ್ರಿಸಿಕೊಂಡು ಆಹಾರ ಪದ್ಧತಿ ಕುರಿತು ವಿವರ ಮಾಹಿತಿ ಕಲೆ ಹಾಕಲು ನಿರ್ಧರಿಸಿದರು. ಆತ ಪ್ರತಿದಿನ ಬಹಳಷ್ಟು ಪ್ರಮಾಣದಲ್ಲಿ ಪ್ರೊಟೀನ್ ಸೇವಿಸುತ್ತಿದ್ದುದು ಗಮನಕ್ಕೆ ಬಂದಿತು. ನಿತ್ಯ 110 ಗ್ರಾಮ್ನಷ್ಟು ಪ್ರೊಟೀನ್ ಸೇವಿಸುತ್ತಿದ್ದ. ಅದರಲ್ಲಿ 80 ಗ್ರಾಂ ಪ್ರಾಣಿಜನ್ಯ ಪ್ರೊಟೀನ್ ಆಗಿರುತ್ತಿತ್ತು. ಇದರ ಜತೆಯಲ್ಲಿ ಸೋಡಿಯಂ ಕೂಡ ಅಗತ್ಯಕ್ಕಿಂತ ಹೆಚ್ಚೇ ದೇಹ ಸೇರುತ್ತಿತ್ತು. ಆತನಿಗೆ ಡಯಟಿಶಿಯನ್ಗಳ ಮಾರ್ಗದರ್ಶನ ನೀಡಲಾಯಿತು. ಪ್ರೊಟೀನ್ ಸೇವನೆ 65 ಗ್ರಾಮ್ಗೆ ಇಳಿಯಿತು. ಸೋಡಿಯಂ ಪ್ರಮಾಣವೂ ಕಡಿಮೆ ಆಯಿತು. ಆಕ್ಸಲೇಟ್ಗಳು ಅಧಿಕವಾಗಿರುವ ಆಹಾರದ ಸೇವನೆಯೂ ಗಣನೀಯವಾಗಿ ತಗ್ಗಿತು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಪ್ರತಿ ಎರಡು ಗಂಟೆಗೆ ಒಮ್ಮೆ 12 ಔನ್ಸ್ಗಳಷ್ಟು ನೀರು ಕುಡಿಯುವಂತೆ ಸೂಚಿಸಲಾಯಿತು. ಪರಿಣಾಮ ಎಷ್ಟು ಅದ್ಭುತವಾಗಿತ್ತು ಎಂದರೆ ಕಳೆದ ಮೂರು ವರ್ಷಗಳಿಂದ ಆತನಲ್ಲಿ ಮತ್ತೆ ಮೂತ್ರಪಿಂಡ ಕಲ್ಲಿನ ಸಮಸ್ಯೆ ಕಾಣಿಸಿಕೊಂಡಿಲ್ಲ!
ಆಹಾರ ಮೂತ್ರಪಿಂಡದ ಮೇಲೆ ಎಂಥ ಪರಿಣಾಮ ಬೀರುತ್ತದೆ, ಕಲ್ಲು ಬೆಳೆಯುವುದನ್ನು ಹೇಗೆ ಕಡಿಮೆ ಮಾಡುತ್ತದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ. ಮೂತ್ರಪಿಂಡದಲ್ಲಿ ಕಲ್ಲಿನ ಸೂಚನೆಗಳು ಪತ್ತೆಯಾದ ತಕ್ಷಣ ಡಯಟ್ ಬಗ್ಗೆ ಗಮನ ಕೊಡಿ. ನಿಮ್ಮ ಆಹಾರ ಪದ್ಧತಿ ಕುರಿತಂತೆ ವೈದ್ಯರೊಂದಿಗೆ ಮುಕ್ತವಾಗಿ ಸಮಾಲೋಚನೆ ನಡೆಸಿ. ಕಲ್ಲಿನ ಸ್ವರೂಪ ಮತ್ತು ನಿಮ್ಮ ದೇಹ ಪ್ರಕೃತಿ ಆಧರಿಸಿ ಅವರು ಸೂಕ್ತವಾದ ಡಯಟ್ ಸಲಹೆ ನೀಡುತ್ತಾರೆ.
ನೀರು, ಸೋಡಿಯಂ, ಪ್ರೊಟೀನ್ ಇತ್ಯಾದಿಗಳ ಜತೆಯಲ್ಲಿ ನೀವು ಗಮನಹರಿಸಬೇಕಾದ ಇನ್ನೊಂದು ಸಂಗತಿ ಎಂದರೆ ನಾರಿನ ಬಗ್ಗೆ. ನಾರಿನ ಅಂಶ ಇರುವ ಆಹಾರಗಳನ್ನು ಹೆಚ್ಚೆಚ್ಚು ಸೇವಿಸಿದಷ್ಟೂ ಮೂತ್ರಾಂಗಗಳಲ್ಲಿ ಕ್ಯಾಲ್ಶಿಯಂ ಸಂಗ್ರಹಗೊಳ್ಳುವುದು ಕಡಿಮೆ ಆಗುತ್ತದೆ. ಅಧಿಕ ನಾರು ಇರುವ ಆಹಾರಗಳಲ್ಲಿ ಆಕ್ಸಲೇಟ್ಗಳು ಕೊಂಚ ಜಾಸ್ತಿಯೇ ಇರುತ್ತವೆಯಾದರೂ, ನಾರಿನಿಂದ ತೊಂದರೆಯಾದ ಪ್ರಕರಣಗಳು ವರದಿಯಾಗಿಲ್ಲ. ಹೀಗಾಗಿ ಧೈರ್ಯದಿಂದ ಅಧಿಕ ನಾರಿನ ಅಂಶ ಇರುವ ಆಹಾರಗಳನ್ನು ಸೇವಿಸಬಹುದು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


