ನಿದ್ರಿಸುತ್ತಿರುವ ತೋಟದೊಳಗೆ ಗೆಲವೊಂದು ಬಂದಿದೆ

ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ನಾವು ಬಹಳ ಆಹ್ಲಾದಕರವಾದ ಜೀವನ ಕಳೆಯುತ್ತಾ ಹಾಯಾಗಿದ್ದೇವೆ. ಆದರೆ ಈ ಸುಖಗಳನ್ನು ಹೊಂದುವುದಕ್ಕಾಗಿ ಮನುಷ್ಯ ಬಹಳವೇ ಕಷ್ಟಪಟ್ಟಿದ್ದಾನೆ. ವಿಜ್ಞಾನಿಗಳು, ಶಾಸ್ತ್ರಜ್ಞರು ನಿದ್ರೆಯಿಲ್ಲದ ಎಷ್ಟೋ ರಾತ್ರಿಗಳನ್ನು
ಕಳೆದಿದ್ದಾರೆ. ಇದಕ್ಕೆಲ್ಲಾ ಒಂದೇ ಕಾರಣ - ಕೋರಿಕೆ ..!
ಮತ್ತಷ್ಟು ಸುಖಕರವಾದ ಬದುಕಿಗಾಗಿ ಏನು ಮಾಡಬೇಕೆಂದು ಮನುಷ್ಯ ಕಲಿತುಕೊಂಡಿದ್ದಾನೆ. ಗಣಿತ, ವಿಜ್ಞಾನ, ತರ್ಕ ಎಲ್ಲವೂತಿ ಆ ಪರಿಣಾಮಕ್ರಮದಲ್ಲಿಯೇ ಅಭಿವೃದ್ಧಿ ಹೊಂದಿವೆ. ಸರಿಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಈಜಿಪ್ಟ್ ದೇಶದ ರಾಜರು, ರೈತರ ಹೊಲದ ಉದ್ದಗಲಗಳನ್ನು ಅಳೆದು ಯಾವ ರೈತ ಎಷ್ಟು ತೆರಿಗೆ ಕಟ್ಟಬೇಕೆಂದು ನಿರ್ಧರಿಸುತ್ತಿದ್ದರು.
`ವೈಶಾಲ್ಯ' ಎನ್ನುವ ಶಬ್ದ ಆ ದಿನಗಳಲ್ಲಿ ಆಗಲೇ ಬಳಕೆಗೆ ಬಂದಿತು. ಸುಮಾರು ಎರಡು ಸಾವಿರದ ಐನೂರು ವರ್ಷಗಳ ಹಿಂದೆಯೇ ಅಂಕೆಗಳನ್ನು ಕೂಡುವ ಯಂತ್ರಗಳು ಚೀನಾದಲ್ಲಿ ಬಂದವು. ಅಂತಹ ಯಂತ್ರದ ಹೆಸರು `ಅಬಾಕಸ್'. ಈಗ ಮಕ್ಕಳು ಕಲಿತುಕೊಳ್ಳುವ ಅಬಾಕಸ್ ಎನ್ನುವ ಹೆಸರು ಅಲ್ಲಿಂದಲೇ ಬಂದಿದ್ದು.
ಭಯಂಕರವಾದ ಪೋಲಿಯೋ, ಸಿಡುಬು, ಕ್ಷಯದಂತಹ ರೋಗಗಳನ್ನು ನಿರ್ಮೂಲನ ಮಾಡಬಲ್ಲವರಾದೆವು. ಕನಿಷ್ಠಪಕ್ಷ ಕಡಿಮೆ ಮಾಡಿಕೊಳ್ಳಬಲ್ಲವರಾದೆವು. ಮುಂಬರುವ ದಶಕದಲ್ಲಿ ಕ್ಯಾನ್ಸರ್, ಏಯ್ಡ್ಸ್ಗಳನ್ನು ಕಿತ್ತುಹಾಕುವ ಮಾರ್ಗಗಳನ್ನು ಕಂಡುಹಿಡಿಯುತ್ತೇವೆ. ಪೋಸ್ಟ್ಕಾರ್ಡ್ಗಳು, ಟೆಲಿಗ್ರಾಮ್ಗಳು
ಅಂತರ್ಧಾನವಾದವು. ಕುದುರೆಗಾಡಿಗಳೂ, ಎತ್ತಿನ ಬಂಡಿಗಳೂ ಮ್ಯೂಜಿಯಮ್ಮುಗಳಿಗೆ ಪರಿಮಿತವಾದವು. ಇಂಟರ್ನೆಟ್, ಜೆಟ್ ವಿಮಾನಗಳು ಬಂದವು. ಮನೆಯಲ್ಲಿ ಕುಳಿತು, ನಾಯಕನ ಮಗನ ಮದುವೆಯಿಂದ ಮಗಳ ವಿವಾಹವಿಚ್ಛೇದನದವರೆಗೂ ಕಣ್ಣಾರೆ ನೋಡಿ ಆನಂದಿಸುತ್ತಿದ್ದೇವೆ. ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಎ.ಸಿ., ಅಡುಗೆ ಮಾಡುವುದನ್ನು ತಪ್ಪಿಸಿಕೊಳ್ಳಲು ಕರ್ರೀ ಪಾಯಿಂಟ್ಗಳು ಬಂದಿವೆ.
ಐದು ಸಾವಿರ ವರ್ಷಗಳ ಕೆಳಗೆ ನಮಗೆ ಇಷ್ಟೊಂದು ಜ್ಞಾನವಿರಲಿಲ್ಲ. ರೋಗಿಯ ವ್ಯಾಧಿಗೆ ಕಾರಣ ಹೆಚ್ಚಿನ ರಕ್ತ ಎಂದು ನಂಬಿ, ಆ ರಕ್ತವನ್ನು ಹೀರಿಕೊಳ್ಳಲು ರೋಗಿಗಳ ದೇಹಗಳ ಮೇಲೆ ಜಿಗಣೆಗಳನ್ನು ಬಿಡುತ್ತಿದ್ದರು. ದುಷ್ಟಶಕ್ತಿಗಳೇ ವ್ಯಾಧಿಗಳನ್ನು ಉಂಟು ಮಾಡುತ್ತವೆಂದು ಆ ದುಷ್ಟ ಪಿಶಾಚಿಗಳನ್ನು ದೇಹದ ಒಳಗಿನಿಂದ ಹೊರಕ್ಕೆ ಎಸೆಯುವುದಕ್ಕೋಸ್ಕರ, ರೋಗಿಗಳನ್ನು ಪ್ರಜ್ಞೆ ತಪ್ಪುವವರೆಗೂ ಹೊಡೆಯುತ್ತಿದ್ದರು. ಈ ಕ್ರಮದಲ್ಲಿ ಬಹಳ ಜನ
ಸತ್ತುಹೋಗುತ್ತಿದ್ದರು ಕೂಡಾ. ಎಲ್ಲಕ್ಕಿಂತ ಅಚ್ಚರಿ ತರುವ ಸಂಗತಿ ಏನೆಂದರೆ, ಐನೂರು ವರ್ಷಗಳ ಕೆಳಗೆ ಶಸ್ತ್ರಚಿಕಿತ್ಸೆ ಮಾಡುವುದು `ಗೌರವಕ್ಕೆ ಕಡಿಮೆ' ಎಂದು ಭಾವಿಸುತ್ತಿದ್ದರು. ಕೇವಲ ನಾಪಿತರೇ ಆಪರೇಷನ್ ಮಾಡುತ್ತಿದ್ದರು.
ನಿಮಗೆ ಗೊತ್ತೇ? ಪ್ರಪಂಚದ ವೈದ್ಯಕೀಯ ಚರಿತ್ರೆಯಲ್ಲಿ ಶಸ್ತ್ರಚಿಕಿತ್ಸಾ ಪಿತಾಮಹನೆಂದು ಕರೆಯಲ್ಪಡುವ ಆಂಬ್ರೋಸ್ ಪರೇ ಒಬ್ಬ ನಾಪಿತ..!! ಗಿಡಮರಗಳಿಂದ ತೆಗೆದ ಮೂಲಿಕೆ
ಯಿಂದ ತೈಲವನ್ನು ತಯಾರು ಮಾಡಿ ಗಾಯದ
ಮೇಲೆ ಸವರುವ ಮೂಲಕ ರಕ್ತಸ್ರಾವ ನಿಲ್ಲುವುದೆಂದು ಕಂಡುಕೊಂಡವನು ಈ ಆಂಬ್ರೋಸ್. ಅದಕ್ಕೇ ಅವನಿಗೆ `ಫಾದರ್ ಆಫ್ ಸರ್ಜರಿ' ಎನ್ನುವ ಹೆಸರು ಬಂದಿದೆ.
ಅವನಿಗಿಂತ ಮೊದಲು ವೈದ್ಯರು ರಕ್ತಸ್ರಾವ ನಿಲ್ಲಿಸುವುದಕ್ಕೋಸ್ಕರ ಕೆಂಪಗೆ ಕಾದಿದ್ದ ಕಬ್ಬಿಣದಿಂದ ಗಾಯದ ಮೇಲೆ ಬರೆಯನ್ನು ಹಾಕುತ್ತಿದ್ದರು. ಬಹಳ ಕಾಲ ತಲೆನೋವಿನಿಂದ ನರಳುತ್ತಿದ್ದ ರೋಗಿಯ ತಲೆಯಲ್ಲಿ ದೆವ್ವ ಸಿಕ್ಕಿಕೊಂಡಿದೆಯೆಂದು ಭಾವಿಸಿ ಅದನ್ನು ಹೊರಕ್ಕೆ ಕಳುಹಿಸುವುದಕ್ಕಾಗಿ ತಲೆಯ ಮೇಲೆ ಮೊಳೆಯಿಂದ ಹೊಡೆದು ರಂಧ್ರ ಮಾಡುತ್ತಿದ್ದರು. ದೆವ್ವ ಹೊರಗೆ ಹೋದಮೇಲೆ (!) ಬೆಣಚುಕಲ್ಲಿನಿಂದ ಆ ರಂಧ್ರವನ್ನು ಮುಚ್ಚುತ್ತಿದ್ದರು. ಆ ದಿನಗಳಲ್ಲಿ ಅರಿವಳಿಕೆ ಔಷಧಗಳಾಗಲೀ, ಮುಲಾಮುಗಳಾಗಲೀ ಇಲ್ಲದಿದ್ದ ಕಾರಣ, ಮೊಳೆಯನ್ನು ತಲೆಗೆ ಬಡಿದಾಗ ರೋಗಿ ಎಚ್ಚರವಾಗಿಯೇ ಇರುತ್ತಿದ್ದ.
ಮನುಷ್ಯ ಕ್ರಮೇಣ ಅಭಿವೃದ್ಧಿ ಹೊಂದಿದ.
ಕಾಲಕ್ರಮೇಣ ಹೊಸ ಔಷಧಿಗಳು ಕಂಡುಹಿಡಿಯಲ್ಪಟ್ಟವು. ದೈಹಿಕ ನೋವುಗಳಿಂದ ಹೊರಬೀಳಲು ಬಹುಮುಖ್ಯವಾದ ಮಾರ್ಗಗಳ ಅನ್ವೇಷಣೆ ಆಯಿತು. ದೈಹಕವೇನೋ ಸರಿಯೇ. ಆದರೆ ಮಾನಸಿಕ ನೋವುಗಳಿಂದ?
ಆ ಪ್ರಯೋಗಗಳೂ ನಡೆದವು. ದೈಹಿಕ ಬಾಧೆಗಳನ್ನು ಕಡಿಮೆ ಮಾಡಲು ಪರಿಶೋಧನೆ ಮಾಡಿ ಔಷಧಿಗಳನ್ನು ಕಂಡುಕೊಂಡಂತೆ ಯೇ, ಕೋಪ, ಭಯ, ಟೆನ್ಷನ್, ಸ್ಟ್ರೆಸ್ ಮೊದಲಾದ ಜಾಡ್ಯಗಳ ಪ್ರಭಾವವನ್ನು ತಗ್ಗಿಸಲು, ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಮಾನಸಿಕ ಶಾಸ್ತ್ರಜ್ಞರು ವಿವಿಧ ರೀತಿಯ ಹಾದಿಗಳನ್ನು ಕಂಡುಕೊಂಡರು. ತಮ್ಮ ಬೋಧನೆಗಳ ಮೂಲಕ, ಲೇಖನಗಳ ಮೂಲಕ ಜನರನ್ನು ಜಾಗ್ರತೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. `ದಿ ಸೆವೆನ್ ಹ್ಯಾಬಿಟ್ಸ್ ಆ¥sóï ಹೈಲಿ ಎಫೆóಕ್ಟಿವ್ ಪೀಪಲ್' ಎನ್ನುವ ಒಂದು ಪುಸ್ತಕದ ಮೂಲಕ ನನ್ನ ಕೋಪವನ್ನು ಕಡಿಮೆ ಮಾಡಿಕೊಂಡೆ. ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಈ ರೀತಿಯಾದ ಪುಸ್ತಕಗಳು ಬಹಳವೇ ಉಪಯೋಗಕ್ಕೆ ಬರುತ್ತವೆ. ಮಾಡಬೇಕಾದುದೆಲ್ಲಾ, ಕೇವಲ ಓದುವುದು ಮಾತ್ರವಲ್ಲದೇ ಸ್ವಲ್ಪ ಆಚರಣೆಗೂ ತರಬೇಕು.
ಔಷಧವಿಲ್ಲದ ಬಾಧೆಗಳನ್ನೂ, ಮಾನಸಿಕ ರೋಗಗಳನ್ನೂ ಒಂದು ಪಕ್ಕಕ್ಕಿಟ್ಟರೆ, ಹೆಚ್ಚಿನಂಶ ನಮ್ಮ ಕಷ್ಟಗಳೆಲ್ಲಾ ಸ್ವಯಂ ನಿರ್ಮಿತವೇ..! ಶೇಕಡಾ ತೊಂಬತ್ತು ದು:ಖಕ್ಕೆ ಕಾರಣಗಳು ಸ್ವಯಂಕೃತಾಪರಾಧಗಳೇ..!!
ಒಬ್ಬ ವ್ಯಕ್ತಿಯ ವರ್ತನೆ, ಎಮೋಷನ್ಸ್, ನಿಯತ್ತು, ಸಂಭಾಷಣಾ ಚಾತುರ್ಯ, ಬುದ್ಧಿವಂತಿಕೆ ಮೊದಲಾದ ಗುಣಗಳನ್ನೆಲ್ಲಾ ಸೇರಿಸಿ, `ವ್ಯಕ್ತಿತ್ವ' ಎನ್ನುತ್ತೇವೆ. ವ್ಯಕ್ತಿತ್ವ ವಿಕಾಸವೆಂದರೆ ಪರ್ಸನಲ್ ಡೆವೆಲಪ್
ಮೆಂಟ್. ಸಂಕ್ಲಿಷ್ಟವಾದ ಜೀವನಪಯಣದಲ್ಲಿ ಗೆಲುವಿನ ಗುರಿಯನ್ನು ಸಾಧ್ಯಮಾಡಿಕೊಳ್ಳಲು ಸುಸ್ಪಷ್ಟವಾದ ದಾರಿಯೆಂದರೆ ವ್ಯಕ್ತಿತ್ವವಿಕಾಸ.
ಇತ್ತೀಚೆಗೆ ಒಬ್ಬ ಪ್ರಮುಖ ನಟ ಫೋನ್ ಮಾಡಿ, `ಮುಂದಿನ ನಾಲ್ಕು ದಿನಗಳಲ್ಲಿ ನನ್ನ ಚಿತ್ರದ ಷೂಟಿಂಗ್ ಪ್ರಾರಂಭವಾಗಲಿದೆ. ಕಥೆ ಅರ್ಧಕ್ಕೇ ನಿಂತುಹೋಗಿದೆ. ನೀವು ಬಂದು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು' ಎಂದು ಕೋರಿಕೊಂಡ. ಅರ್ಧ ಬೆಂದ ಅಡುಗೆಯಲ್ಲಿ ಬೆರಳು ಹಾಕುವ ಇಷ್ಟವಿಲ್ಲದೇ, `ಕ್ಷಮಿಸಬೇಕು. ಪ್ರಸ್ತುತ ನಾನು ಪರ್ಸನಾಲಿಟಿ ಡೆವೆಲಪ್ಮೆಂಟ್ನಲ್ಲಿದ್ದೇನೆ' ಎಂದೆ. `ಅದಕ್ಕೆ ತುಂಬಾ `ಜಿಮ್'ಗಳಿವೆ. ಮತ್ತೆ ನೀವು ಕೂಡಾ ಅದನ್ನೇಕೆ ಮಾಡಬೇಕು?' ಎಂದು ಫೋನಿಟ್ಟುಬಿಟ್ಟ ಕೋಪದಿಂದ.
ಪರ್ಸನಾಲಿಟಿ ಎಂದರೆ ಅದಲ್ಲ. ಪೆರ್ಸೋನ್ ಎಂದರೆ
ಮುಸುಕು. ಹುಟ್ಟಿದಾಗ, ಮದರ್ ಥೆರೆಸ್ಸಾರಿಂದ ಬಿನ್ಲಾಡೆನ್ ವರೆಗೂ, ಐನ್ಸ್ಟೀನ್ನಿಂದ ಐಶ್ವರ್ಯಾರಾಯ್ವರೆಗೂ ಎಲ್ಲರೂ ಒಂದೇ ರೀತಿ ಇರುತ್ತಾರೆ. ಆದರೆ ಬೆಳೆಯುತ್ತಿದ್ದಂತೆ ಬುದ್ಧಿವಂತಿಕೆ, ಸೌಂದರ್ಯ, ಆಶಯದಂತಹ ವಿವಿಧ ರೀತಿಯ ಆಭರಣಗಳಿಂದ, ಆಯುಧಗಳಿಂದ ಮಾನವಜಾತಿಗೆ ಒಳ್ಳೆಯದೋ, ಕೆಟ್ಟದೋ
ಮಾಡುತ್ತಾರೆ. ಅದೇ ಅವರ ಪರ್ಸನಾಲಿಟಿ, ವ್ಯಕ್ತಿತ್ವ, ಮುಸುಕು. ಇವು ಎರಡು ರೀತಿಯವು. ಬಾಹ್ಯ ಮುಸುಕು, ಅಂತರ್ಗತ
ಮುಸುಕು. ಬಟ್ಟೆಗಳಿಂದ, ಮುಖದ ಮೇಲಿನ ಕಿರುನಗೆಯವರೆಗೆ;
ನಡೆಯುವ ವಿಧಾನದಿಂದ ಮಾತಿನ ನೈಪುಣ್ಯದವರೆಗೆ ಬಾಹ್ಯ...! ಶೀಲ, ಸೌಶೀಲ್ಯ, ಮಾನವತೆ, ಒಳ್ಳೆಯತನ ಅಂತರ್ಗತ..!
ನಾವು ಇತರರಿಗಾಗಿ ಮುಖದ ಮೇಲೆ ಮೇಕಪ್ ಹಾಕಿಕೊಳ್ಳುತ್ತೇವೆ. ಆದರೆ ಹೊಟ್ಟೆಯು ಗುಡಾಣದಂತೆ ಬೆಳೆದರೂ ತಲೆಕೆಡಿಸಿಕೊಳ್ಳುವುದಿಲ್ಲ. ಮನೆಯ ಮುಂದೆ ಸುಂದರವಾಗಿ ರಂಗೋಲಿ ಬಿಡಿಸುತ್ತೇವೆ. ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ಹಾಗೆಯೇ ಬಿಟ್ಟಿರುತ್ತೇವೆ. `ನಮ್ಮೊಂದಿಗೆ ನಮಗಿರುವ ಸಂಬಂಧವನ್ನು, ನಮ್ಮ ಸುತ್ತಲೂ ಇರುವ ವಾತಾವರಣವನ್ನು, ನಮ್ಮ ವರ್ತಮಾನವನ್ನು ತಿದ್ದಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮದೇ' ಎನ್ನುವ ವಿಷಯದ ಬಗ್ಗೆ ಚಿಂತಿಸುವುದಿಲ್ಲ. ಇತರರಿಗಾಗಿ ಯಾವಾಗ ನಾವು ಬೇರೆ ಮುಸುಕು ಧರಿಸಲು ಆರಂಭಿಸುತ್ತೇವೋ, ನಮ್ಮ ವಿಷಾದಗಳಿಗೆ ಅದೇ ಉಪೋದ್ಘಾತ. ಹಾಗೆಂದು ನಾವು ತಪ್ಪೇ ಮಾಡುವುದಿಲ್ಲವೆಂದಲ್ಲ. ಆ ಮಾತಿಗೆ ಬಂದರೆ, ನಮ್ಮ ಚಿಕ್ಕಂದಿನ ತಪ್ಪುಗಳನ್ನು, ತರಲೆಗಳನ್ನು ನೆನೆದು `ಛೇ! ಹಾಗೇಕೆ ಮಾಡಿದೆ ನಾನು' ಎಂದುಕೊಳ್ಳದಿದ್ದರೂ, ನಗದಿದ್ದರೂ,
ನಾಚದಿದ್ದರೂ, ಗಿಲ್ಟೀಯಾಗಿ ಫಿûೀಲ್ ಆಗದಿದ್ದರೂ ನಮ್ಮ ಬಾಲ್ಯದಲ್ಲಿಯೇ ಏನೋ ತಪ್ಪಾಗಿದೆ ಎಂದರ್ಥ. ಆ ಸ್ಥಿತಿಯಿಂದ ಕ್ರಮೇಣ ಬೆಳೆದು ನಮಗೆಂದೇ ಒಂದು ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳುತ್ತೇವೆ.
ಯದ್ಯ ದಾಚರತಿ ಶ್ರೇಷ್ಠ: | ತ ತ್ತ ದೇವೇತರೋ ಜನ: ||
ಸಯತ್ ಪ್ರಮಾಣಂ ಕುರುತೇ| ಲೋಕ ಸ್ತ ದುವರ್ತತೇ||
ಭಾವಾರ್ಥ: ಲೋಕದಲ್ಲಿ ಉತ್ತಮರು ಯಾವುದನ್ನು ಪ್ರಮಾಣ
ವಾಗಿ ಸ್ವೀಕರಿಸುವರೋ, ಜನರನ್ನೂ ಆ ವಿಧವಾಗಿಯೇ
ನಡೆಸುತ್ತಾರೆ (ಭಗವದ್ಗೀತೆ) ಒಂದು ಕಾಲದಲ್ಲಿ ಈ ಶ್ಲೋಕ ನಿಜವಾಗಿದ್ದಿರಬಹುದು. ಈಗ `ಉತ್ತಮ' ಎನ್ನುವ ಪದಕ್ಕೆ ಅರ್ಥವೇ ಬದಲಾಗಿಹೋಗಿದೆ. ಗೆಲುವಿಗೆ ಅರ್ಥ ನಿರೂಪಣೆ ಒಬ್ಬೊಬ್ಬರದು ಒಂದೊಂದು ರೀತಿಯಲ್ಲಿ ಇರುತ್ತದೆ.
(ಮುಂದುವರಿಯುವುದು)
ಕನ್ನಡಕ್ಕೆ: ಯತಿರಾಜ್ ವೀರಾಂಬುಧಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


