ಬೈಟುಕಾಫಿ

ಗೆಲುವು ಸಾಧಿಸಲು ಇರೋದು ಎರಡೇ ಮೆಟ್ಟಿಲು!

ಗೆಲುವು ಸಾಧಿಸಲು ಇರೋದು ಎರಡೇ ಮೆಟ್ಟಿಲು!
Published On :

ಮಾರಿಯಾ ಷರಪೋವಾ ತನ್ನ ನಾಲ್ಕನೆಯ ವಯಸ್ಸಿನಲ್ಲಿ ಟೆನಿಸ್ ರ್ಯಾಕೆಟ್ ಹಿಡಿದುಕೊಂಡಳು. ವಿಶ್ವದ ನಂಬರ್ ಒನ್ ಟೆನ್ನಿಸ್ ಪ್ಲೇಯರ್ ಮಾರ್ಟಿನಾ ನವರಟ್ಟಿಲೋವಾ ಆ ನಾಲ್ಕು ವರ್ಷ ವಯಸ್ಸಿನ ಚಿಕ್ಕ ಹುಡುಗಿಯ ಪ್ರತಿಭೆಯನ್ನು ಗುರುತಿಸಿ, ಅವಳಿಗೆ ಅಮೆರಿಕಾದಲ್ಲಿ ಕೋಚಿಂಗ್ ಕೊಡಿಸಿರೆಂದು ಆ ಹುಡುಗಿಯ ತಾಯ್ತಂದೆಯರಿಗೆ ಸೂಚಿಸಿದಳು. ಆ ಬಡ ತಾಯ್ತಂದೆಯರು ಬಹಳವೇ ಕಷ್ಟಪಟ್ಟು ಅವಳನ್ನು ಅಮೆರಿಕಾಗೆ ಕರೆದೊಯ್ದರು. ಅಷ್ಟು ಚಿಕ್ಕ ಹುಡುಗಿಗೆ ಟ್ರೈನಿಂಗ್ ಕೊಡಲು ಅಲ್ಲಿ ಅಮೆರಿಕನ್ ಕೋಚ್ ಇಷ್ಟಪಡಲಿಲ್ಲ. ಆದರೆ ಅವಳು ಮೊಟ್ಟಮೊದಲ ಚೆಂಡನ್ನು ಹೊಡೆದೊಡನೆ ನಿಬ್ಬೆರಗಾಗಿ ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಂಡ.
ಹಾಗೆಂದು ಮಾರಿಯಾಳ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಬಡತನದಿಂದ ಅನೇಕ ಕಷ್ಟನಷ್ಟಗಳನ್ನು ಸೈರಿಸಿಕೊಳ್ಳಬೇಕಾಗಿ ಬಂದಿತು. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ತಾಯ್ತಂದೆಯರಿಗೆ ದೂರವಾಗಿ ಒಂದು ಅಗ್ಗದ ಡಾರ್ಮೆಟರಿಯಲ್ಲಿ ವಾಸ ಮಾಡಬೇಕಾಗಿ ಬಂದಿತ್ತು.
ಪರಿಸ್ಥಿತಿಗಳಿಗೆ ಎದುರಾಗಿ ಈಜಿದಳು. ಆದರೆ, ಗೆಲುವು ಎಂದಿಗೂ ಸೂರ್ಯ ಕಿರಣಗಳಂತೆ ಮುನ್ನುಗ್ಗಿ ಬರುತ್ತದೆ. ಮೊಟ್ಟಮೊದಲ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ನಲ್ಲಿ ಪಾಲ್ಗೊಂಡು ಆರು ಮಿಲಿಯನ್ ಡಾಲರ್ಗಳನ್ನು (ಸುಮಾರು ಮೂರು ಕೋಟಿ ರೂಪಾಯಿಗಳು) ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ಗೆದ್ದಳು. ಇಂಟರ್ವೂ ಒಂದರಲ್ಲಿ ಅವಳಿಗೆ ಅವಳ ವಿಜಯದ ಕಾರಣವನ್ನು ಒಂದೇ ಒಂದು ವಾಕ್ಯದಲ್ಲಿ ಹೇಳೆಂದಾಗ ಆಕೆ ಹೇಳಿದ ಉತ್ತರ, "ಸಮಯದ ಬೆಲೆಯನ್ನು ತಿಳಿದುಕೊಂಡಿದ್ದು".
`ಅಭಿಲಾಷ, ಛಾಲೆಂಜ್' ಎನ್ನುವ ಚಲನಚಿತ್ರಗಳಿಗೆ ಸತ್ಯಮೂತರ್ಿ ಎನ್ನುವ ಲೇಖಕನೊಂದಿಗೆ ಕಲೆತು ಕೆಲಸ ಮಾಡಿದೆ. ಆತ ಸ್ಕ್ರೀನ್ ಪ್ಲೇ ಬರೆದ. ಆತನ ಮಗನಿಗೆ ಚಿಕ್ಕಂದಿನಿಂದ ಸಂಗೀತದ ಬಗ್ಗೆ ಆಸಕ್ತಿ ಇದ್ದಂತೆ ಕಾಣಿಸುತ್ತಿತ್ತು. ಕೊಠಡಿಯ ತುಂಬಾ ವಿವಿಧ ಸಂಗೀತ ವಾದ್ಯಗಳೊಂದಿಗೆ ಅಭ್ಯಾಸ ಮಾಡುತ್ತಿರುತ್ತಿದ್ದ. ನಾವು `ಕೊಂಡವೀಟಿ ದೊಂಗ' ತೆಗೆಯುವ ಸಮಯಕ್ಕೆ ಅವನು ಪರಿಪೂರ್ಣನಾಗಿದ್ದ. ಬಹಳ ಚಿಕ್ಕವಯಸ್ಸಿಗೇ ರಾಕೆಟ್ನಂತೆ ಸಿನಿಮಾಕ್ಷೇತ್ರಕ್ಕೆ ನುಗ್ಗಿ ಬಂದಿದ್ದ. `ವರ್ಷಂ' ಚಿತ್ರದಲ್ಲಿ ತನ್ನ ಸ್ಥಾನವನ್ನು ಸುಸ್ಥಿರಗೊಳಿಸಿಕೊಂಡಿದ್ದ. ಆ ಹುಡುಗ ದೇವಿ ಶ್ರೀಪ್ರಸಾದ್.
ಮನುಷ್ಯನಲ್ಲಿನ ಅಂತರ್ಲೀನ ಶಕ್ತಿಯನ್ನು ಎಷ್ಟು ಬೇಗ ಗುರುತಿಸಿದರೆ ಅಷ್ಟು ತ್ವರಿತವಾಗಿ ಬದುಕಿನಲ್ಲಿ ಮೇಲೆ ಬರಬಹುದು ಎನ್ನುವ ಮಾತು ನಿಜವೇ ಆದರೂ, 'ವಯಸ್ಸು ಆಗಿ ಹೋಗಿದೆ ಅಲ್ಲವಾ, ಇನ್ನೇನು ಮಾಡಬಲ್ಲೆವು' ಎಂದು ಅಂದುಕೊಳ್ಳುವ ಅಗತ್ಯ ಕೂಡಾ ಇಲ್ಲ. ಅಂತರ್ಗತವಾಗಿರುವ ಶಕ್ತಿಯನ್ನು ಹೊರಗೆ ತರುವುದು ಮುಖ್ಯ. ಯಾವ ವಯಸ್ಸಿನಲ್ಲಿ ಎನ್ನುವುದು ಮುಖ್ಯವಲ್ಲ. ಏನೂ ಮಾಡದೇ ಇರುವುದಕ್ಕಿಂತ ಏನೋ ಒಂದು ಮಾಡುವುದು ಒಳ್ಳೆಯದೇ ಅಲ್ಲವಾ?
ನನ್ನ `ನಲ್ಲಂಚು ತೆಲ್ಲಚೀರ' ಕಾದಂಬರಿಯನ್ನು ಆಧರಿಸಿ `ದೊಂಗ ಮೊಗುಡು' ಸಿನಿಮಾ ತೆಗೆದಾಗ ನಮ್ಮ ಬಳಿ ಭೂಪತಿರಾಜು ರವಿಶಂಕರ್ ಎನ್ನುವ ಸಹಾಯಕ ನಿರ್ದೇಶಕನಿದ್ದ. ಆಗ ಆತನಿಗೆ ಮೂವತ್ತು ವರ್ಷ ವಯಸ್ಸು. ನಟನಾಗಬೇಕೆಂಬ ಆಸೆಯಿತ್ತು. 'ದೊಂಗ ಮೊಗುಡು' ಚಿತ್ರದಲ್ಲಿ ಚಿರಂಜೀವಿಯ ಹೆಸರು ಬಹಳವೇ ಹೊಸದಾಗಿ, ಸರಳವಾಗಿತ್ತು. ಅದಕ್ಕೇ ಭೂಪತಿರಾಜು ರವಿಶಂಕರ್ನನ್ನು ಆ ಹೆಸರಿನಿಂದಲೇ ಕರೆಯುತ್ತಿದ್ದೆ. ಆನಂತರ ಆತನಿಗೆ ಬ್ರೇಕ್ ಸಿಕ್ಕಿತು. ನಾನು ಕರೆಯುತ್ತಿದ್ದ ಹೆಸರಿನಿಂದಲೇ ಸಿನಿಮಾಕ್ಷೇತ್ರವನ್ನು ಪ್ರವೇಶಿಸಿ ಬಹಳವೇ ವಿಜಯ ಸಾಧಿಸಿದ. ಸುಮಾರು ಐವತ್ತು ವರ್ಷಗಳ ವಯಸ್ಸಿನಲ್ಲಿಯೂ ಕೂಡ ಬಹಳವೇ ಚುರುಕಾಗಿ ನೃತ್ಯಗಳನ್ನೂ, ಫೈಟುಗಳನ್ನೂ ಮಾಡುತ್ತಾನೆ. ಆ ಸಿನಿಮಾದಲ್ಲಿ ಚಿರಂಜೀವಿಯ ಹೆಸರು `ರವಿತೇಜ'.
ಪ್ರತಿ ವ್ಯಕ್ತಿ ತನ್ನಲ್ಲಿನ ಎಕ್ಸ್-ಫ್ಯಾಕ್ಟರ್ (ನೈಪುಣ್ಯ)ವನ್ನು ಗುರುತಿಸಿಕೊಳ್ಳಬೇಕು. ಓದಿ ಮುಗಿದ ಕೂಡಲೇ ಉದ್ಯೋಗ ಹುಡುಕುತ್ತಿದ್ದಾಗ ಸುಮ್ಮನೇ ಇರದೇ, ಅಂತರ್ಗತ ಶಕ್ತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಯಾವುದಾದರೊಂದು ಕೆಲಸವನ್ನು ಮಾಡಲು ಆರಂಭಿಸಬೇಕು. ಏನೂ ಮಾಡದೇ ಸುಮ್ಮನಿರುವುದು ಕ್ಯಾನ್ಸರ್ಗಿಂತ ಭಯಂಕರವಾದ ರೋಗ.
ಕೆಲವು ಜನ ವಿದ್ಯಾರ್ಥಿಗಳು ಒಳ್ಳೆಯ ಅಂಕಗಳನ್ನು ಗಳಿಸದೇ, ಬಂದಿರುವ ಸುಮಾರಾದ ಅಂಕಗಳಿಂದ ಉದ್ಯೋಗವನ್ನು ಸಂಪಾದಿಸಿಕೊಳ್ಳಲಾಗದೇ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಹೋಗುತ್ತಾರೆ. ಬೆಳಿಗ್ಗೆ ಓದುತ್ತಾ, ರಾತ್ರಿ ಪಾರ್ಟೈಮ್ಮ್ ಕೆಲಸ ಮಾಡುತ್ತಾ ಪಾಪ, ಎಷ್ಟೋ ಕಷ್ಟ ಪಡುತ್ತಾರೆ. ಹೆಸರಿಲ್ಲದ ಅನಾಮಿಕ ವಿದೇಶೀ ಯೂನಿವಸರ್ಿಟಿಗಳಲ್ಲಿ ಓದಿ(ದುತ್ತಿ)ರುವ ಶೇಕಡಾ ಐವತ್ತು ಜನರಿಗೆ ಪ್ರಸ್ತುತ ನಮ್ಮ ದೇಶದಲ್ಲಿಯೂ ಕೂಡ ಸಾಮಾನ್ಯವಾದ ಕೆಲಸಗಳೇ ಸಿಗುತ್ತವೆ ಎನ್ನುವುದು ಕಹಿ ಸತ್ಯ. ಆ ಪಡುವ ಕಷ್ಟ ಯಾವುದೋ ಅದನ್ನು ಓದುವಾಗ ನಮ್ಮ ದೇಶದಲ್ಲಿಯೇ ಪಟ್ಟಿದ್ದರೆ, ಆಗ ಭಾರತದಲ್ಲಿಯೇ ಕೆಲಸ ಸಿಕ್ಕಿರುತ್ತಿತ್ತು, ಮೇಲಾಗಿ ವಿದೇಶಯಾನದ ಖರ್ಚು ಉಳಿದಿರುತ್ತಿತ್ತು.
ಐನ್ಸ್ಟೀನ್, ನ್ಯೂಟನ್, ಎಡಿಸನ್, ಲೂಯೀಪ್ಯಾಶ್ಚರ್ನಂತಹವರ ಆಯುಸ್ಸು ದ್ವಿಗುಣವಾಗಿದ್ದಿದ್ದರೆ ಇಷ್ಟು ಹೊತ್ರಿಗೆ ನಾವು ಕ್ಯಾನ್ಸರ್ಗೆ, ಏಯ್ಡ್ಸ್ ಗೆ ಔಷಧಿಗಳನ್ನು ಕಂಡುಕೊಂಡಿರುತ್ತಿದ್ದವು. ಇತರ ಗ್ರಹಗಳಿಗೆ ಹೋಗಿ ಜೀವಿಸುವುದನ್ನು ಆರಂಭಿಸಿರುತ್ತಿದ್ದೆವು. ದುರದೃಷ್ಟವಶಾತ್ ನಮ್ಮ ಬದುಕನ್ನು ನಾವು ಲಂಬಿಸಲಾರೆವು. ಆದರೆ ಕೆಲಸ ಮಾಡುವ ಕಾಲವನ್ನು ನಿಶ್ಚಯವಾಗಿ ಹೆಚ್ಚು ಮಾಡಿಕೊಳ್ಳಬಲ್ಲೆವು...! ಬಹಳ ಜನ ನಾಯಕರನ್ನು, ಆಟಗಾರರನ್ನು, ಚಿತ್ರಕಾರರನ್ನು, ಲೇಖಕರನ್ನು, ವಿಜ್ಞಾನಿಗಳನ್ನು ಗಮನಿಸಿದರೆ, ಅವರೆಲ್ಲರೂ ಬಹಳ ಚಿಕ್ಕ ವಯಸ್ಸಿನಿಂದಲೇ ತಮ್ಮ ವೃತ್ತಿಯಲ್ಲಿ ಪ್ರಥಮಪಾದವನ್ನು ಊರಿದ್ದಾರೆ. ಅದೇ ಸಮಯದ ಮೌಲ್ಯ.
ಬದುಕಿನ ನಾಲ್ಕು ಭಾಗಗಳಲ್ಲಿ ನಾಲ್ಕು ಕೆಲಸಗಳನ್ನು ಮಾಡಬೇಕು.
=    ಬಾಲ್ಯದಲ್ಲಿ ಚೆನ್ನಾಗಿ ಓದಬೇಕು. ನೈಪುಣ್ಯ, ಜ್ಞಾನಗಳನ್ನು ವರ್ಧಿಸಿಕೊಳ್ಳಬೇಕು. ಆಟ, ಕ್ರಮಶಿಕ್ಷಣಗಳನ್ನು ಅಭ್ಯಾಸ ಮಾಡಿಕೊಳ್ಳಬೇಕು.
=    ಯೌವ್ವನದಲ್ಲಿ ಹಣ, ಕುತೂಹಲ ಹೆಚ್ಚಿಸಿಕೊಳ್ಳಬೇಕು. ಒಳಗಿನಿಂದ ಒದ್ದುಕೊಂಡು ಬರುತ್ತಿರುವ ಎನರ್ಜಿಯನ್ನು ಸರಿಯಾದ ದಾರಿಯಲ್ಲಿ ಇಟ್ಟುಕೊಂಡು ಗಮ್ಯದತ್ತ ಹೋಗಲು ಬುನಾದಿಕಲ್ಲನ್ನು ಹಾಕಬೇಕು. ಆಕರ್ಷಣೆ-ಅನಾರೋಗ್ಯದ ಸುಳಿಗಾಳಿಯಲ್ಲಿ ಸಿಲುಕಕೂಡದು.
=    ಮಧ್ಯವಯಸ್ಸಿನಲ್ಲಿ ಅಧಿಕಾರ, ಸೌಖ್ಯ, ಒಳ್ಳೆಯ ಹೆಸರು, ಸಮಾಜದಲ್ಲಿ ಮನ್ನಣೆ - ಇವನ್ನು ಹೆಚ್ಚಿಸಿಕೊಳ್ಳಬೇಕು. ಬದುಕಿನ ಕೊನೆಯ ಮಜಲಿನಲ್ಲಿ ಹಿತಕರವಾಗಿ ಬಾಳಲು ಬೇಕಾದ ಭವನವನ್ನು ನಿಮರ್ಿಸಿಕೊಳ್ಳಬೇಕು. ಇತರರೊಂದಿಗಿನ ಬಂಧಗಳನ್ನು ಗಟ್ಟಿಮಾಡಿಕೊಳ್ಳಲು ಪ್ರಯತ್ನ ಪಡಬೇಕು.
=    ವೃದ್ಧಾಪ್ಯದಲ್ಲಿ ದಯೆ, ತೃಪ್ತಿ, ಲೋಕೋಪಕಾರ, ಆಧ್ಯಾತ್ಮದ ಆಭರಣಗಳನ್ನು ಪಡೆದುಕೊಳ್ಳಬೇಕು. ಹಿಂದಕ್ಕೆ ತಿರುಗಿ ನೋಡಿದಾಗ ಜೀವನವನ್ನು ಬಹಳ ತೃಪ್ತಿಕರವಾಗಿ ಕಳೆದ ಭಾವನೆ ಉಂಟಾಗಬೇಕು. ಸಾಧಿಸಿದ ವಿಜಯಗಳನ್ನು ನೋಡಿ ಹೆಮ್ಮೆ ಪಡಬೇಕು.
ಈ ದಿನ ನಾವು ಮಾಡುವ ಕೆಲಸಗಳು, ನಮ್ಮನ್ನು ನಮ್ಮ ಗುರಿಗೆ ಹತ್ತಿರವಾಗಿಯೋ, ಇಲ್ಲವೇ ದೂರವಾಗಿಯೋ ಮಾಡುತ್ತವೆ. ಆದರೆ ನಾವು ಒಮ್ಮೆ ಏರ್ಪಡಿಸಿಕೊಂಡ ಗಮ್ಯಗಳಲ್ಲಿ ಕೆಲವು ಅನೂಹ್ಯವಾದ ಮಾರ್ಪಾಡುಗಳು ಕೂಡಾ ತಪ್ಪದೇ ಬರಬಹುದು. ಅದಕ್ಕೆ ಕೂಡಾ ಸಿದ್ಧವಾಗಿರಬೇಕು. ಮಳೆಗಾಲದಲ್ಲಿ ಬಯಲಿನಲ್ಲಿ ಮದುವೆಯನ್ನು ಯೋಜಿಸಿದಾ, ಒಳಗೆ ಕೂಡಾ ಪರ್ಯಯ ಏರ್ಪಾಡು ಮಾಡಿಕೊಳ್ಳುವಂತಹುದ್ದೇ ಇದು ಕೂಡ.
ಇತ್ತೀಚೆಗೆ ಬಂದ ನರಗಳ ಬಲಹೀನತೆಯಿಂದಾಗಿ ಚಿತ್ರಕಾರನಾಗಬೇಕೆಂದಿದ್ದ ವ್ಯಕ್ತಿ, ಆ ಗಮ್ಯವನ್ನು ಸಾಧಿಸಲಾರದೇ ಹೋಗಬಹುದು. ರಸ್ತೆ ಪಕ್ಕದಲ್ಲಿ ಟೈಪಿಂಗ್ ಮೆಷಿನ್ ಇಟ್ಟುಕೊಂಡು ಜಾಬ್ ವರ್ಕ್ ಮಾಡಿಕೊಡುವ ವ್ಯಕ್ತಿಗೆ, ಬದಲಾಗುತ್ತಿರುವ ಈ ಕಾಲದಲ್ಲಿ ಮಾರ್ಕೆಟ್ ಹೋಗಬಹುದು. ಏನು ಮಾಡಬೇಕು? ಕಂಪ್ಯೂಟರ್ ಕಲಿತುಕೊಳ್ಳಬಹುದು. ಇಲ್ಲವೇ ಬೇರೊಂದು ಕೆಲಸವನ್ನು ಹುಡುಕಿ ಕೊಳ್ಳಬೇಕು. ಓದುಗರ ನಾಡಿಮಿಡಿತವನ್ನು ಓದುವುದನ್ನು ನಿಲ್ಲಿಸಿದಾಗ ಫಿಕ್ಷನ್ ಬರೆಯುವ ಲೇಖಕ ಏನು ಮಾಡಬೇಕು? ಬದಲಾಗಬೇಕು. 'ನಾನು ಬದಲಾಗಲಾರೆ' ಅಂದರೆ ಹೇಗೆ? ಹಾಗೆ ಬದಲಾಗದ ಪ್ರಮುಖರು ಬದುಕಿರುವಾಗಲೇ ಹೇಗೆ ಕೀರ್ತಿಶೇಷರಾದರೋ ನಮಗೆ ತಿಳಿದಿದೆ ಅಲ್ಲವೇ?
ವಿಜಯಶಿಖರವನ್ನು ಹತ್ತಬೇಕೆಂದರೆ ಸಾವಿರಮೆಟ್ಟಿಲುಗಳನ್ನು ಏರಬೇಕು. ಎಷ್ಟು ಬೇಗ ಏರಲಾರಂಭಿಸಿದರೆ ಅಷ್ಟೂ ಒಳ್ಳೆಯದೇ. ಮೊದಲ ಮೆಟ್ಟಿಲು: ನಮ್ಮ ಬಲಹೀನತೆಗಳನ್ನು ಆತ್ಮಶೋಧನೆಯ ಮೂಲಕ ತಿಳಿದುಕೊಳ್ಳುವುದು (ಕಣಿವೆ). ಎರಡನೆಯ ಮೆಟ್ಟಿಲು: ಅವನ್ನು ಅತಿಕ್ರಮಿಸುವುದು (ಶಿಖರ). ಎರಡೇ ಮೆಟ್ಟಿಲು. ಸಾಕು. ಮಿಕ್ಕ 998 ಮೆಟ್ಟಿಲುಗಳು ಅಷ್ಟು ಮುಖ್ಯವಾದುವಲ್ಲ. ಭಯ, ಸೋಮಾರಿತನ, ಸಂಕೋಚಗಳಂತಹವು ನಮ್ಮನ್ನು ಕಣಿವೆಗೆ ಇಳಿಸುವ ಮೆಟ್ಟಿಲುಗಳು. ಜ್ಞಾನ, ಕಮ್ಯೂನಿಕೇಷನ್ಗಳಂತಹವು ಶಿಖರವನ್ನು ಹತ್ತಲು ಸಹಾಯ ಮಾಡುವ ಮೆಟ್ಟಿಲುಗಳು.
ಮೊದಲು ಕೆಳಗಿನಿಂದ ಪ್ರಾರಂಭಿಸೋಣ.
(ಮುಂದುವರಿಯುವುದು)

-ಯಂಡಮೂರಿ ವೀರೇಂದ್ರನಾಥ್

-ಕನ್ನಡಕ್ಕೆ: ಯತಿರಾಜ್ ವೀರಾಂಬುಧಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.