ಬೈಟುಕಾಫಿ

ಇನ್ನೊಬ್ಬ ಚಾಯ್‌ವಾಲಾ

ಇನ್ನೊಬ್ಬ ಚಾಯ್‌ವಾಲಾ
Published On :

ಟೀ ಮಾರುವವನೊಬ್ಬ ಭಾರತದ ಭವಿಷ್ಯದ ನಾಯಕನಾದುದನ್ನು ನೀವು ನೋಡಿದ್ದೀರಿ. ಈಗ ಅದೇ ಟೀ ಮಾರುವ ವೃತ್ತಿಯಲ್ಲಿದ್ದವನೊಬ್ಬ ಸಾಫ್ಟ್‌ವೇರ್ ಉದ್ಯೋಗಿಯಾದುದನ್ನೂ ಓದಿ. ಈ ಕತೆಯ ವಿಶಿಷ್ಟತೆ ಇರುವುದು- ಆತನ ಕನಸಿಗೆ ಕುಡಿಗೆ ನೀರೆರೆದವರು 'ಕನ್ನಡಪ್ರಭ' ಓದುಗರೇ ಎಂಬುದರಲ್ಲಿ!
ಟೀ ಮಾರುತ್ತಾ, ಸಿಇಟಿಯಲ್ಲಿ ಉತ್ತಮ ಸಾಧನೆ ಮಾಡಿ, ಕುಟುಂಬದ ಆರ್ಥಿಕ ದುಸ್ಥಿತಿಯಿಂದಾಗಿ ಭವಿಷ್ಯದ ಓದಿನ ಬಗ್ಗೆ ಆತಂಕದಿಂದ ಕಣ್ಣೀರು ಹಾಕುತ್ತಿದ್ದ ಹುಡುಗ ಮತ್ತು ಆತನ ಪಾಲಕರ ಬಗ್ಗೆ 7 ವರ್ಷದ ಹಿಂದೆ ಮೇ.29ರಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಓದುಗರು ಆತನ ಕನಸನ್ನು ಪೋಷಿಸಿದ್ದರಿಂದ ಇಂದು ಆತ ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯಾಗಿದ್ದಾನೆ.
ಹರಿಹರ ನಗರದ ಬಸ್ಸು ನಿಲ್ದಾಣ, ಸರ್ಕಾರಿ- ಖಾಸಗಿ ಕಚೇರಿ, ಮಾರುಕಟ್ಟೆ, ದೇವಸ್ಥಾನ ಪ್ರದೇಶ ಹೀಗೆ ಇಡೀ ಊರು ಸುತ್ತುತ್ತಾ ಮೊಬೈಲ್ ಟೀ ಸ್ಟಾಲ್ ನಡೆಸುತ್ತಿದ್ದ ಬಾಲಕ ಸಂಜಯ್ ಎಸ್. ಬೆಣ್ಣೆ. ಟೀ ಮಾರುತ್ತಿದ್ದ ತಂದೆಗೆ ಕೈ ಜೋಡಿಸುತ್ತಿದ್ದ ಸಂಜಯ್ ಆಗ ಸಿಇಟಿಯಲ್ಲಿ ಇಂಜಿನಿಯರಿಂಗ್‌ನಲ್ಲಿ 681, ವೈದ್ಯಕೀಯದಲ್ಲಿ 429 ಹಾಗೂ ಐಎಸ್‌ಎಂಎಚ್‌ನಲ್ಲಿ 715ನೇ ರ್ಯಾಂಕ್ ಪಡೆದಿದ್ದ. ಆದರೆ ಇಡೀ ಕುಟುಂಬವೇ ಆರ್ಥಿಕ ದುಸ್ಥಿತಿಯಲ್ಲಿತ್ತು. ತಂದೆ ಶಾಂತಕುಮಾರ್‌ಗೆ ಸಂಜಯ್ ಆಸರೆಯಾಗಿದ್ದ. ಕಿತ್ತು ತಿನ್ನುವ ಬಡತನ ಆತನ ಮುಂದಿನ ಓದಿಗೆ ಎಲ್ಲಿ ಮಾರಕವಾಗುತ್ತದೋ ಎಂಬ ಆತಂಕ ಪಾಲಕರಲ್ಲಿ ಮನೆ ಮಾಡಿತ್ತು.
ಈ ಬಗ್ಗೆ 29.5.2007ರಂದು ಕನ್ನಡಪ್ರಭ ಸಚಿತ್ರ ವರದಿ ಪ್ರಕಟಿಸಿತ್ತು. ಅದನ್ನು ಓದಿ ಕನ್ನಡ ಪರ ಸಂಘಟನೆ ಮುಖಂಡ ರುದ್ರಗೌಡ ಆತನ ನೆರವಿಗೆ ಮುಂದಾದರು. ಸಾವಿರಾರು ಓದುಗರು ನಾಡಿನ ಮೂಲೆ ಮೂಲೆಯಿಂದ ಕರೆ ಮಾಡಿದರು. ರಾಜ್ಯಪಾಲರ ಕಚೇರಿಯಿಂದಲೂ ಕರೆ ಬಂತು. ಅಧಿಕಾರಿಗಳು, ಸಂಘಸಂಸ್ಥೆಗಳು, ದಾನಿಗಳು ನೆರವಿನ ಹಸ್ತ ಚಾಚಿದರು.
ತನ್ನ ಓದಿಗೆ ಎಷ್ಟು ಹಣ ಬೇಕಿತ್ತೋ ಅಷ್ಟೇ ಹಣವನ್ನು ದಾನಿಗಳಿಂದ ಪಡೆದರು ಸಂಜಯ್ ಬೆಣ್ಣೆ ಮತ್ತು ಆತನ ತಂದೆ. ಉಳಿದ ಹಣವನ್ನು ಇದೇ ರೀತಿ ಬೇರೆ ಬಡ ಮಕ್ಕಳಿಗೆ ಬಳಸಿ ಎಂದು ವಿನಯವಾಗಿ ಹೇಳಿದರು. ನಂತರ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಪ್ರವೇಶ ಪಡೆದ ಸಂಜಯ್, ಈಗ ಇಲ್ಲಿನ ರಾಬರ್ಟ್ ಬೋಷ್ ಇಂಜಿನಿಯರಿಂಗ್ ಅಂಡ್ ಬಿಸಿನೆಸ್ ಸೊಲ್ಯೂಷನ್ ಕಂಪನಿಯ ಉದ್ಯೋಗಿ. ತನ್ನ ಓದಿಗೆ ದಾನಿಗಳು ನೆರವಾದಂತೆ ತಾನೂ ಕೈಲಾದಷ್ಟು ಜನರಿಗೆ ನೆರವಿನ ಹಸ್ತ ಚಾಚುತ್ತಿದ್ದಾನೆ. ಮೊದಲ ಸಂಬಳವನ್ನು ತಾನು ಓದಿದ್ದ ಹರಿಹರದ ಮಹಿಳಾ ಸಮಾಜ ಹಿರಿಯ ಪ್ರಾಥಮಿಕ ಶಾಲೆಯ ಬಡ ಮಕ್ಕಳ ಓದಿಗೆ ನೀಡಿದ್ದಾನೆ. ತನಗೆ ನೆರವು ನೀಡಿದ ಓದುಗರಿಗೆ, ತನ್ನನ್ನು ಬೆಳಕಿಗೆ ತಂದ ಕನ್ನಡಪ್ರಭಕ್ಕೆ ಕೃತಜ್ಞತೆ ಸಲ್ಲಿಸುತ್ತಾನೆ. ಸಂಜಯ್ ಸಂಪರ್ಕ: 9738105759. ಇಮೇಲ್- sanjay.s.b.25zgmail.com

= ಚಿತ್ರ ಲೇಖನ: ವಿವೇಕ್ ಬದ್ದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.