ಬೈಟುಕಾಫಿ

ಸ್ವಲ್ಪ ನಾರು, ಮಾಡಬಲ್ಲದು ಕ್ಯಾನ್ಸರ್‌ನಿಂದ ಪಾರು

ಸ್ವಲ್ಪ ನಾರು, ಮಾಡಬಲ್ಲದು ಕ್ಯಾನ್ಸರ್‌ನಿಂದ ಪಾರು
Published On :

ಕರುಳು ಕ್ಯಾನ್ಸರ್‌ಗೆ ಅತಿ ಸುಲಭದ ಮತ್ತು ಕಡಿಮೆ ಖರ್ಚಿನ ಮದ್ದು ಇದೆ ಎಂದರೆ ಯಾರಿಗೆ ತಾನೇ ಆಶ್ಚರ್ಯ ಆಗದು? ಆ ಮದ್ದಿನಲ್ಲಿ ಯಾವ ಅಡ್ಡಪರಿಣಾಮವೂ ಇಲ್ಲ ಅಂತಾದರೆ ಯಾರಿಗೆ ತಾನೆ ಖುಷಿ ಆಗುವುದಿಲ್ಲ? ಅದಕ್ಕಿಂತ ಮುಖ್ಯವಾಗಿ ಕ್ಷಿಪ್ರಗತಿಯಲ್ಲಿ ಪರಿಣಾಮ ಬೀರುವ ಮದ್ದು ಮನೆಯಲ್ಲೇ ಸಿಗುತ್ತದೆ ಅಂತಾದರೆ ಅದಕ್ಕಿಂತ ಸಂತಸದ ಸಮಾಚಾರ ಇನ್ನೇನಿದೆ?
ಅಮೆರಿಕದ ಜರ್ನಲ್ ಆಫ್ ನ್ಯಾಶನಲ್ ಕ್ಯಾನ್ಸರಿ ಇನ್‌ಸ್ಟಿಟ್ಯೂಟ್ ಇಂತಹ ಪ್ರಶ್ನೆಗಳನ್ನು ಮುಂದಿಟ್ಟಾಗ ಹುಬ್ಬೇರಿಸಿದವರು ಹಲವರು. ಮನೆಯಲ್ಲೇ ಮಾಡಿಕೊಳ್ಳಬಹುದಾದ ಅಗ್ಗದ ಔಷಧ ಇದೆ ಅಂತಾದರೆ ವೈದ್ಯರು ಏಕೆ ಬೇಕು ಎಂದೂ ಕೆಲವರು ಕಟಕಿಯಾಡಿದರು. ಅದೆಲ್ಲಕ್ಕೂ,  'ದಿನಕ್ಕೆ ಕೇವಲ 13 ಗ್ರಾಮ್ ನಾರಿನ ಪದಾರ್ಥವನ್ನು ಹೆಚ್ಚುವರಿಯಾಗಿ ಸೇವಿಸಿ ನೋಡಿ' ಎನ್ನುವುದೇ ಸಂಶೋಧಕರ ಉತ್ತರವಾಗಿತ್ತು. 13 ಗ್ರಾಮ್ ಎಂದರೆ ಒಂದು ಕಪ್ ಗೋಧಿ ಹೊಟ್ಟಿನಿಂದ ಮಾಡಿದ ಆಹಾರ ಅಷ್ಟೆ. ಕೆಲವು ಸಂಶೋಧಕರು ಇನ್ನೂ ಮುಂದೆ ಹೋಗಿ, 'ಅಮೆರಿಕದಲ್ಲಿ ಪ್ರತಿವರ್ಷ 50 ಸಾವಿರ ಜನ ಕರುಳಿನ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ, ನಾರಿನ ಪದಾರ್ಥದ ಅಧಿಕ ಸೇವನೆಯಿಂದ ಇಂಥವರ ಸಂಖ್ಯೆಯನ್ನು ಶೇ 31ರಷ್ಟು ತಗ್ಗಿಸಬಹುದು' ಎನ್ನುವ ಅಭಿಪ್ರಾಯ ಮುಂದಿಟ್ಟರು.
ನಾರಿನಿಂದ ಕರುಳಿನ ಕ್ಯಾನ್ಸರ್ ಅನ್ನು ಹೋಗಲಾಡಿಸಬಹುದು ಎನ್ನುವುದನ್ನು ಮೊದಲು ಪತ್ತೆ ಮಾಡಿದವರು ಕ್ಯಾನ್ಸರ್ ತಜ್ಞ ಜೆರೋಮ್ ಜೆ.ಡೆ'ಕೊಸ್ಸೆ. ಕರುಳು ಕ್ಯಾನ್ಸರ್‌ಗೆ ತುತ್ತಾಗಿದ್ದ ಇಬ್ಬರನ್ನು ಆಯ್ಕೆ ಮಾಡಿಕೊಂಡು ನಾರಿನ ಡಯಟ್‌ಗೆ ಮನವೊಲಿಸಿದರು. ನಿತ್ಯ ಸರಿಸುಮಾರು 22 ಗ್ರಾಮ್ ಗೋಧಿಯನ್ನು ಅವರು ಸೇವಿಸುತ್ತಿದ್ದರು. ಆರು ತಿಂಗಳ ತರುವಾಯ ಎಂಡೊಸ್ಕೋಪಿ ಮೂಲಕ ಪರೀಕ್ಷಿಸಿದಾಗ ಅವರಲ್ಲಿ ಪಾಲಿಪ್‌ಗಳ ಗಾತ್ರ ಗಣನೀಯ ಪ್ರಮಾಣದಲ್ಲಿ ಕುಗ್ಗಿರುವುದು ಕಂಡುಬಂತು. ಮುಂದಿನ ಮೂರು ತಿಂಗಳಲ್ಲಿ ಅವುಗಳ ಗಾತ್ರ ಇನ್ನಷ್ಟು ಸಣ್ಣದಾಗಿತ್ತು. ಹೀಗಾಗಿ ನಾರಿನಿಂದ ಕರುಳು ಕ್ಯಾನ್ಸರ್ ತಡೆಯಬಹುದು ಎನ್ನುವುದು ಅವರಿಗೆ ಮನವರಿಕೆಯಾಯಿತು. ಸಾಮಾನ್ಯವಾಗಿ ಪಾಲಿಪ್‌ಗಳು ಗಡ್ಡೆಯ ರೂಪ ತಾಳಲು ಹತ್ತು ವರ್ಷ ಬೇಕು. ಅಷ್ಟರ ಒಳಗಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಪಾಲಿಪ್‌ಗಳನ್ನೇ ಇನ್ನಿಲ್ಲದಂತೆ ಮಾಡಲು ಸಾಧ್ಯ.
ಏಕದಳ ಧಾನ್ಯಗಳು, ಹಣ್ಣು ಮತ್ತು ತರಕಾರಿ, ನಟ್ಸ್‌ಗಳಲ್ಲಿ ನಾರು ಅಧಿಕವಾಗಿರುತ್ತದೆ. ಕರುಳು ಕ್ಯಾನ್ಸರ್ ಮಟ್ಟಿಗೆ ಬೇರೆ ಏಕದಳ ಧಾನ್ಯಗಳಿಗಿಂತ ಗೋಧಿ ಹೆಚ್ಚು ಪರಿಣಾಮಕಾರಿ. ನಾರು ಎಲ್ಲ ರೀತಿಯ ಕ್ಯಾನ್ಸರ್ ಗೂ ಒಳ್ಳೆಯದು. ಆದಾಗ್ಯೂ ಕೆಲವು ಬಗೆಯ ಕ್ಯಾನ್ಸರ್‌ಗೆ ನಿರ್ದಿಷ್ಟ ಆಹಾರಗಳೇ ಹೆಚ್ಚು ಪರಿಣಾಮಕಾರಿ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.