ಬೇಸಿಗೆ ರಜಾದಲ್ಲಿ ಹೊತ್ತು ಕಳೆಯೋದು ಕಷ್ಟ ಅಲ್ವಾ? ಸಿಂಪಲ್ಲಾಗಿ ಒಂದು ಪ್ರಯೋಗ ಮಾಡೋಣ. ಒಂದು ದೊಡ್ಡ ಪ್ಲಾಸ್ಟಿಕ್ ಚೀಲ, ಕತ್ತರಿ, ಒಂದಷ್ಟು ದಾರ, ಭಾರಕ್ಕೆ ಏನಾದರೂ ವಸ್ತು- ಇಷ್ಟಿದ್ದರೆ ಸಾಕು.
ಪ್ಲಾಸ್ಟಿಕ್ ಚೀಲವನ್ನು ನೀಟಾಗಿ ಕತ್ತರಿಸಿ ಒಂದೇ ದೊಡ್ಡ ಶೀಟ್ ಥರ ಮಾಡಿಕೊಳ್ಳಿ. ಅಂಚುಗಳಲ್ಲಿ ಸಣ್ಣ ರಂಧ್ರ ಮಾಡಿಕೊಳ್ಳಿ. ಒಂದೇ ಅಳತೆಯ ದಾರಗಳನ್ನು ಈ ಎಂಟೂ ರಂಧ್ರಗಳ ಮೂಲಕ ತೂರಿಸಿ. ದಾರದ ತುದಿಗಳನ್ನು ಸೇರಿಸಿ ಭಾರದ ವಸ್ತುವಿಗೆ ಕಟ್ಟಿ. ಶೀಟ್‌ನ ಮಧ್ಯಭಾಗದಲ್ಲೂ ಪುಟ್ಟ ರಂಧ್ರ ಮಾಡಿ. ಪ್ಯಾರಾಚೂಟ್ ರೆಡಿ. ಈಗ ಖುರ್ಚಿ ಅಥವಾ ಸ್ವಲ್ಪ ಎತ್ತರದ ಸ್ಥಳದಿಂದ ಎಷ್ಟು ಸಾಧ್ಯವೊ ಅಷ್ಟು ಸಾವಕಾಶವಾಗಿ ಹಾರಿಸಿ ಬಿಡಿ. ನಿಮ್ಮ ಪ್ಯಾರಾಚೂಟ್ ನಿಧಾನವಾಗಿ ಇಳಿದು ನೆಲದ ಮೇಲೆ ನಿಲ್ಲುತ್ತದೆ.
ಇಲ್ಲಿ ಯಾವ ತತ್ವ ಕೆಲಸ ಮಾಡಿದೆ ಊಹಿಸಬಲ್ಲಿರಾ ಪುಟಾಣಿಗಳೆ? ಪ್ಯಾರಾಚೂಟ್ ಅನ್ನು ಹಾರಿ ಬಿಟ್ಟಾಗ ಭಾರದ ವಸ್ತು ತನಗೆ ಅಂಟಿಕೊಂಡಿರುವ ದಾರವನ್ನು ಕೆಳಕ್ಕೆ ಎಳೆಯುತ್ತದೆ. ಹೀಗೆ ಆದಾಗ ವಿಶಾಲ ವಾತಾವರಣದಲ್ಲಿನ ಗಾಳಿಯೂ ಪ್ರತಿರೋಧ ತೋರಿಸಿ ತನಗಿಂತ ಚಿಕ್ಕದಾದ ಪ್ಯಾರಾಚೂಟ್ ನಿಧಾನವಾಗಿ ಕೆಳಕ್ಕೆ ಇಳಿಯುವಂತೆ ಮಾಡುತ್ತದೆ. ನಿಜವಾದ ಪ್ಯಾರಾಚೂಟ್ ಕೆಲಸ ಮಾಡುವುದು ಕೂಡ ಇದೇ ಸಿದ್ಧಾಂತದಲ್ಲಿ!