

ಗೌಜಲ ಹಕ್ಕಿ ಮುಖ್ಯವಾಗಿ ಭಾರತದ ಉಪಖಂಡದಲ್ಲಿ ಕಂಡುಬರುವ ಹಕ್ಕಿ. ಇದನ್ನು ತಿತ್ತಿರಿ ಹಕ್ಕಿ ಎಂದೂ ಕರೆಯುತ್ತಾರೆ. ಇದು ಗ್ಯಾಲಿಫಾರ್ಮಿಸ್ ಗಣದ ಫಸಿಯಾನಿಡೇ ಕುಟುಂಬಕ್ಕೆ ಸೇರಿದೆ. ಸಂಸ್ಕೃತದಲ್ಲಿ ಇದನ್ನು ಕಪಿಂಜಲ, ಗೌರತಿತ್ತಿರ ಎಂದೂ ಕರೆಯುತ್ತಾರೆ. ಗೌಜುಗ, ಕೆಸ್ಟೆ ಹಕ್ಕಿ, ಗೆರ್ಜನ ಹಕ್ಕಿ ಎಂದು ಸ್ಥಳೀಯವಾಗಿ ಕರೆಯುತ್ತಾರೆ. ಕೋಳಿಗಿಂತ ಚಿಕ್ಕದಾದ, ತಿಳಿ ಕಂದುಬಣ್ಣದ ಪಕ್ಷಿ ಇದು. ಹುಬ್ಬು, ಕತ್ತು, ಎದೆ ಮಾಸಲು ಹಳದಿಯಾಗಿರುತ್ತದೆ. ಕಣ್ಣಿನ ಮೇಲೆ ಕಪ್ಪು ಗೆರೆ ಇದ್ದು, ಕೊಕ್ಕು ಕೆಂಪಾಗಿರುತ್ತದೆ. ಪರ್ಣಪಾತಿ ಕಾಡು, ಕುರುಚಲು ಕಾಡು, ಹುಲ್ಲುಗಾವಲು ಮುಂತಾದೆಡೆ ಕಂಡುಬರುತ್ತದೆ. ಹುಲ್ಲಿನಿಂದ ಗೂಡನ್ನು ಕಟ್ಟಿಕೊಳ್ಳುತ್ತದೆ. ಹುಳುಹುಪ್ಪಟೆಗಳು, ಬೀಜಗಳು ಇದರ ಆಹಾರ. ಏಪ್ರಿಲ್-ಸೆಪ್ಟೆಂಬರ್ ತಿಂಗಳಿನಲ್ಲಿ ಮೊಟ್ಟೆಗಳನ್ನಿಡುತ್ತದೆ. ಒಂದುಸಾರಿ 6ರಿಂದ 8 ಮೊಟ್ಟೆಗಳನ್ನಿಡುತ್ತದೆ.