ಶ್ರಮದ ಫಲ

ಶ್ರಮದ ಫಲ
Updated on: 

ಚಿಕ್ಕ ಹಳ್ಳಿಯೊಂದರಲ್ಲಿ ಶಿವಪ್ಪ ಮತ್ತು ಸೋಮಪ್ಪ ಎಂಬ ಸಹೋದರರಿದ್ದರು. ವ್ಯವಸಾಯವೇ ಅವರ ಜೀವನಕ್ಕೆ ಆಧಾರವಾಗಿತ್ತು. ಹೀಗಿರುವಾಗ ಒಮ್ಮೆ ಮಳೆಬಾರದೇ ಭೀಕರ ಬರಗಾಲವುಂಟಾಯಿತು. ವ್ಯವಸಾಯ ಮಾಡಲಾಗದೇ ತುಂಬಾ ಕಂಗಾಲಾದರು. ಅವರ ಕುಟುಂಬಗಳು ಆಹಾರವಿರದೇ ಉಪವಾಸದಿಂದ ದಿನದೂಡುವಂತಾಯಿತು. ಶಿವಪ್ಪ ಉಪಾಯವೊಂದನ್ನು ಯೋಚಿಸಿದ. ಅದೇನೆಂದರೆ ಜಮೀನಿನಲ್ಲಿ ಬಾವಿಯನ್ನು ತೋಡಿದರೆ ಆ ಬಾವಿಯ ನೀರಿನಿಂದ ವ್ಯವಸಾಯ ಮಾಡಿ ಬರಗಾಲದ ಸಂಕಷ್ಟವನ್ನು ಪರಿಹರಿಸಿಕೊಳ್ಳಬಹುದು ಎಂದು.
ಆ ಆಲೋಚನೆ ಬಂದಿದ್ದೇ ತಡಮಾಡದೇ ಕಿರಿಯ ಸಹೋದರ ಸೋಮಪ್ಪನಲ್ಲಿಗೆ ಹೋಗಿ- 'ನೋಡು ತಮ್ಮಾ, ಈ ಭೀಕರ ಬರಗಾಲದಿಂದ ವ್ಯವಸಾಯ ಮಾಡೋದು ಸಾಧ್ಯವಿಲ್ಲದಂತಾಗಿದೆ. ಅಲ್ಲದೆ ನಮ್ಮ ಕುಟುಂಬಗಳು ಅನ್ನ ನೀರಿಲ್ಲದೆ ಸಂಕಷ್ಟಕ್ಕೀಡಾಗಿವೆ. ನಾವಿಬ್ಬರೂ ಸೇರಿ ಜಮೀನಿನಲ್ಲಿ ಬಾವಿಯೊಂದನ್ನು ತೋಡುವಾ. ಆ ನೀರಿನಿಂದ ವ್ಯವಸಾಯ ಮಾಡಿ ಧಾನ್ಯ ಬೆಳೆಯೋಣ...' ಎಂದು ತನ್ನ ಮುಂದಾಲೋಚನೆಯನ್ನು ವಿವರಿಸಿದಾಗ ಸೋಮಪ್ಪ ದೊಡ್ಡದಾಗಿ ನಗುತ್ತಾ, 'ಅಯ್ಯೋ ಶಿವನೇ! ಬಾವಿ ಅಗೆಯೋದಂದ್ರೆ ಸಾಮಾನ್ಯವೇ? ಅದೂ ಅಲ್ದೇ ನೀರು ಬರೋ ಭರವಸೆಯಾದ್ರೂ ಏನು? ನನ್ನಿಂದಾಗದು...' ಎಂದು ಸಾರಾಸಗಟಾಗಿ ತಿರಸ್ಕರಿಸಿದ.
ಆದರೆ ಶಿವಪ್ಪ ಹಠವಾದಿಯಾಗಿದ್ದಲ್ಲದೇ ಶ್ರಮಪಟ್ಟು ಕೆಲಸ ಮಾಡುವ ವ್ಯಕ್ತಿಯಾಗಿದ್ದ. ಆತನಿಗೆ ತನ್ನ ಕಾರ್ಯದಲ್ಲಿ ಬಲವಾದ ನಂಬಿಕೆಯಿತ್ತು. ಹೀಗಾಗಿ ನಿರಾಶನಾಗದೇ ಏಕಾಂಗಿಯಾಗಿ ತನ್ನ ಜಮೀನಿನಲ್ಲಿ ಹಗಲಿರುಳು ಶ್ರಮಪಟ್ಟು ಬಾವಿಯನ್ನು ಅಗೆಯಲು ಪ್ರಾರಂಭಿಸಿದ. ಕೆಲವೇ ದಿನಗಳಲ್ಲಿ ಬಾವಿಯಲ್ಲಿ ನೀರು ಜಿನುಗಿತು. ಶಿವಪ್ಪನ ಶ್ರಮ ವ್ಯರ್ಥವಾಗದೇ ನೀರು ತುಂಬಿಕೊಂಡಿತು. ಶಿವಪ್ಪನಿಗೆ ಮಹದಾನಂದವಾಯಿತು. ಆತ ಭೂಮಿಯನ್ನು ಹದಗೊಳಿಸಿ ಧಾನ್ಯ ಬಿತ್ತಿ ನೀರು ಹಾಯಿಸಿದ. ಬೆಳೆ ಚೆನ್ನಾಗಿಯೇ ಬಂದು ಜಮೀನು ಫಸಲಿನಿಂದ ಕಂಗೊಳಿಸಿತು. ಬರಗಾಲದಿಂದ ಬಂದ ಸಂಕಷ್ಟವನ್ನು ತನ್ನ ದೃಢನಿರ್ಧಾರ ಹಾಗೂ ಬುದ್ಧಿವಂತಿಕೆಯಿಂದ ಪರಿಹರಿಸಿಕೊಂಡ ಶಿವಪ್ಪ.
ನೀತಿ: 'ಶ್ರಮಪಟ್ಟರೆ ಖಂಡಿತ ಫಲವುಂಟು..'

- ಶಿವುಕುಮಾರ ಪತ್ರಿಮಠ ಶೋರಾಪೂರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com