

ಒಂದಾನೊಂದು ಕಾಲದಲ್ಲಿ ಸಾಗರ ರಾಜ್ಯವನ್ನು ಸೋಮಶೇಖರನೆಂಬ ರಾಜನು ಆಳುತ್ತಿದ್ದನು. ತನ್ನ ಉದಾತ್ತವಾದ ಗುಣ ಮತ್ತು ಉತ್ತಮವಾದ ಆಡಳಿತದಿಂದ ಪ್ರಜೆಗಳ ಪ್ರೀತಿಗೆ ಪಾತ್ರನಾಗಿದ್ದನು.
ರಾಜ್ಯದಲ್ಲಿ ಕಾಲಕಾಲಕ್ಕೆ ಮಳೆಯಾಗುತ್ತಿತ್ತು. ರಾಜನು ಪ್ರಜಾಹಿತ ಕಾರ್ಯಗಳನ್ನು ಕೈಗೊಳ್ಳುತ್ತಿದ್ದುದರಿಂದ ಪ್ರಜೆಗಳು ತಮ್ಮ ಪಾಲಿನ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಿದ್ದರು.
ರಾಜನ ಕೀರ್ತಿ ಪ್ರತಿಷ್ಠೆಗಳು ಹೆಚ್ಚಲು ಅವನ ಮಹಾಮಂತ್ರಿ ಪ್ರಮುಖ ಕಾರಣನಾಗಿದ್ದನು. ಅವನು ತುಂಬಾ ಚತುರನಾಗಿದ್ದು ರಾಜನಿಗೆ ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದನು. ಕಷ್ಟ ಪರಿಸ್ಥಿತಿಗಳು ಎದುರಾದಾಗ ತನ್ನ ಸೂಕ್ಷ್ಮ ಬುದ್ಧಿಯನ್ನು ಬಳಸಿ ರಾಜನನ್ನು ಪಾರುಮಾಡುತ್ತಿದ್ದನು. ರಾಜನು ಕರ್ತವ್ಯವಿಮುಖನಾಗದಂತೆ ಸದಾ ಎಚ್ಚರ ವಹಿಸುತ್ತಿದ್ದನು.
ಆದರೆ ಆ ಮಹಾಮಂತ್ರಿಗೆ ಮುಪ್ಪು ಆವರಿಸಿತು. ಒಂದು ದಿನ ಆತ ಮರಣ ಹೊಂದಿದನು. ಇದರಿಂದ ರಾಜನಿಗೆ ಬಹಳ ದುಃಖವಾಯಿತು. ತಮ್ಮ ಹಿತೈಷಿ ಹಾಗೂ ನಿಷ್ಠ ಮಂತ್ರಿಯ ಸಾವು ಇಡೀ ರಾಜ ಕುಟುಂಬವನ್ನು ಚಿಂತೆಗೀಡುಮಾಡಿತು.
ತೆರವಾದ ಮಹಾಮಂತ್ರಿ ಸ್ಥಾನಕ್ಕೆ ಯೋಗ್ಯ ವ್ಯಕ್ತಿಯನ್ನು ಆರಿಸಿಕೊಳ್ಳಲು ನಿರ್ಧರಿಸಿದ ರಾಜ, ಆಯ್ಕೆಗಾಗಿ ವಿವಿಧ ಪರೀಕ್ಷೆಗಳನ್ನು ಏರ್ಪಡಿಸಿದನು. ಸಾವಿರಾರು ವಿದ್ಯಾವಂತರು, ಪಂಡಿತರು ಮತ್ತು ಬುದ್ಧಿವಂತರು ಪರೀಕ್ಷೆಗಳಲ್ಲಿ ಪಾಲ್ಗೊಂಡರು. ಎಲ್ಲ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ ಇಬ್ಬರು ಅಭ್ಯರ್ಥಿಗಳು ಮಾತ್ರ ಕೊನೆಯ ಆಯ್ಕೆಗಾಗಿ ಉಳಿದರು.
ಆ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಅದು ಅಷ್ಟೇನೂ ಸುಲಭದ ಕೆಲಸವಾಗಿರಲಿಲ್ಲ. ರಾಜ ಬಹಳ ಹೊತ್ತು ಆಲೋಚಿಸಿದ ನಂತರ ಒಂದು ನಿರ್ಧಾರಕ್ಕೆ ಬಂದನು. ಆ ಇಬ್ಬರು ಮೇಧಾವಿಗಳನ್ನು ಅಂದು ರಾತ್ರಿ ತಮ್ಮ ಅರಮನೆಗೆ ಭೋಜನಕ್ಕೆ ಆಹ್ವಾನಿಸಿದನು.
ಆ ಇಬ್ಬರು ಮೇಧಾವಿಗಳಿಗೂ ಬೇರೆಬೇರೆ ಕೋಣೆಗಳಲ್ಲಿ ಊಟದ ಏರ್ಪಾಡಾಗಿತ್ತು. ರಾಜನ ಸೇವಕರು ಬಗೆಬಗೆಯ ಅಡುಗೆಗಳನ್ನು ತಂದು ಬಡಿಸಿದರು. ಅವರು ಊಟ ಮಾಡುತ್ತಿದ್ದಂತೆ ರಾಜ ಮೊದಲನೆಯ ಮೇಧಾವಿಯ ಬಳಿಗೆ ಬಂದು 'ಪಂಡಿತರೇ, ಅಡುಗೆಯನ್ನು ನಾನೇ ಸ್ವತಃ ತಯಾರಿಸಿದ್ದು. ಹೇಗಿದೆ?' ಎಂದು ಪ್ರಶ್ನಿಸಿದನು. ಆ ಮೇಧಾವಿ ಅತಿ ವಿನಯವನ್ನು ಪ್ರದರ್ಶಿಸುತ್ತಾ 'ತಮ್ಮ ಅಮೃತಹಸ್ತದಿಂದ ತಯಾರಾದ ಅಡುಗೆ ಅಮೃತಕ್ಕಿಂತಲೂ ಮಿಗಿಲಾಗಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದನು.
ಅಲ್ಲಿಂದ ಎರಡನೆಯ ಮೇಧಾವಿಯ ಬಳಿಗೆ ಬಂದ ರಾಜ, ಮೊದಲನೆಯವನಿಗೆ ಕೇಳಿದ ಪ್ರಶ್ನೆಯನ್ನೇ ಕೇಳಿದನು. ಮೇಧಾವಿ ಎದ್ದು ನಿಂತು 'ಮಹಾಸ್ವಾಮಿಗಳೇ ಕ್ಷಮಿಸಬೇಕು. ನೀವು ಮೊದಲು ಅಡುಗೆ ಮಾಡುವುದನ್ನು ಬಿಟ್ಟುಬಿಡಿ. ನಮಗೆ ಬಡಿಸುವ ಮೊದಲು ನೀವು ರುಚಿ ನೋಡಿದ್ದರೆ ಚೆನ್ನಾಗಿತ್ತು. ಬಾಯಲ್ಲಿ ಇಡಲಾಗದಷ್ಟು ಉಪ್ಪನ್ನು ಸಾರಿಗೆ ಹಾಕಿದ್ದೀರಿ. ಸಪ್ಪೆ ರಸವನ್ನು ಮಾಡಿದ್ದೀರಿ. ವಡೆಗೆ ನೆತ್ತಿ ಹತ್ತುವಷ್ಟು ಖಾರವನ್ನು ಹಾಕಿದ್ದೀರಿ' ಎಂದು ಹೇಳಿ ತಿನ್ನದೆ ಕೈ ತೊಳೆದನು.
ಎರಡನೆಯ ಮೇಧಾವಿಯ ಮಾತು ರಾಜನಿಗೆ ಸಂತೋಷವನ್ನುಂಟುಮಾಡಿತು. ಅವನು ಹೇಳಿದ್ದೆಲ್ಲವೂ ನಿಜವಾಗಿತ್ತು. ಮೊದಲನೆಯ ಮೇಧಾವಿಗೂ ಅದೇ ಅಡುಗೆಯನ್ನು ಬಡಿಸಿದ್ದರೂ ಅಡುಗೆ ಚೆನ್ನಾಗಿಲ್ಲವೆಂದರೆ ರಾಜ ಕೋಪಗೊಳ್ಳಬಹುದು. ತನ್ನ ಸ್ಥಾನ ತಪ್ಪಿಹೋಗಬಹುದೆಂದು ತಿಳಿದು ರಾಜನನ್ನು ಮೆಚ್ಚಿಸಲು ಸುಳ್ಳು ಹೇಳಿದನು.
ರಾಜನಿಗೆ ಬೇಕಾದ್ದು ನಿಷ್ಠುರವಾದರೂ ನಿಜ ಹೇಳುವ, ತನ್ನ ತಪ್ಪನ್ನು ಎತ್ತಿ ತೋರಿಸುವ, ಒಳ್ಳೆಯ ಸಲಹೆಗಳನ್ನು ನೀಡುವ ಮಹಾಮಂತ್ರಿ. ಆ ಗುಣಗಳು ಎರಡನೆಯ ಮೇಧಾವಿಯಲ್ಲಿ ಕಂಡುಬಂದುದರಿಂದ ಅವನನ್ನು ತನ್ನ ರಾಜ್ಯದ ಮಹಾಮಂತ್ರಿಯನ್ನಾಗಿ ಮಾಡಿಕೊಂಡನು. <
= ಶಿವರಾಮ ಭಟ್ ಹತ್ತೊಕ್ಕಲು