ಮಕ್ಕಳೆಲ್ಲ ಕೂಡಿಕೊಂಡು
ರೊಟ್ಟಿಬುತ್ತಿ ಕಟ್ಟಿಕೊಂಡು
ಬೆಳದಿಂಗಳೂಟಕೆಂದು
ಹೊರಟರಂದು ತೋಟಕೆ
ಹಾಲಿನಂಥ ಬೆಳದಿಂಗಳಲ್ಲಿ
ಹಾಡು ಹೇಳುತ ನಡೆದರು
ಉಕ್ಕಿಬಂದ ಹಿಗ್ಗಿನಲ್ಲಿ
ದಾರಿ ದೂರವ ಮರೆತರು
ಅಲ್ಲಿ ತೋಡದ ಮಾಲಿಯು
ಮಕ್ಕಳನು ಬರಮಾಡಿಕೊಂಡು
ಸುತ್ತಾಡಿಸಿ ತೋರಿಸಿದನು
ಹೂವು ಹಣ್ಣು ಕಾಯಿಪಲ್ಯ
ಗಿಡಗಳಲಿದ್ದ ಹೂಗಳು
ಗಾಳಿಗೆ ಅಲುಗಾಡುತಿರಲು
ಮಕ್ಕಳಿಗೆ ಕಾಣುತಿದ್ದವು
ನಲಿವ ನರ್ತಕಿಯರಂತೆ
ಹುಲ್ಲು ಹಾಸಿನ ಮೇಲೆ
ಮಕ್ಕಳೆಲ್ಲರು ಕುಳಿತರು
ನೋಡನೋಡುತಲಿ
ಬುತ್ತಿಗಂಟು ಬಿಚ್ಚಿದರು
ಸುತ್ತಮುತ್ತ ನೋಡುತ
ನಿಧಾನವಾಗಿ ಉಣುತಿರಲು
ಮಕ್ಕಳೆಲ್ಲರ ಹೊಟ್ಟೆತುಂಬಿ
ಮಿಕ್ಕಿ ಉಳಿಯಿತು ರೊಟ್ಟಿಬುತ್ತಿ
ಮಿಕ್ಕಿ ಉಳಿದ ರೊಟ್ಟಿಬುತ್ತಿ
ಕೊಟ್ಟು ತೋಡದ ಮಾಲಿಗೆ
ಮಕ್ಕಳೆಲ್ಲರು ಹಿಗ್ಗಿನಿಂದಲಿ
ಹೊರಟು ಬಂದರು ಊರಿಗೆ
- ಮಾಣಿಕರಾವ್ ಪಸಾರ