ಪುಟಾಣಿಗಳೆ,
ಅಡುಗೆ ಮನೆಗೆ ಹೋದಾಗ ಅಲ್ಲಿ ಎಲ್ಲಾದ್ರೂ ಎಣ್ಣೆ ಚೆಲ್ಲಿದ್ದು ಕಂಡರೆ ಅದರ ಮೇಲೆ ಸ್ವಲ್ಪ ನೀರು ಹಾಕಿ. ಮಜಾ ನೋಡಿ. ಎಣ್ಣೆ ಮೇಲೆ ತೇಲುತ್ತೆ. ಇದನ್ನೇ ಇಟ್ಟುಕೊಂಡು ಒಂದು ಪುಟ್ಟ ಪ್ರಯೋಗ ಮಾಡೋಣ.
ಸಣ್ಣ ಬಾಟಲಿಗೆ ನೀರು ತುಂಬಿಸಿ. ಗ್ಲಾಸ್ ಆದರೂ ಪರವಾಗಿಲ್ಲ. ಅಮ್ಮ ಕೊಟ್ಟರೆ ಫುಡ್ ಕಲರ್ ಅನ್ನೂ ಸೇರಿಸಬಹುದು. ನೀರಿಗೆ ಎರಡು ಚಮಚ ಅಡುಗೆ ಎಣ್ಣೆ ಸೇರಿಸಿ ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಕುಲುಕಿ. ನೀವು ಕುಲುಕಿದಾಗ ಎಣ್ಣೆ ಮತ್ತು ನೀರು ಪರಸ್ಪರ ಸೇರುತ್ತಿರುವಂತೆ ಭಾಸವಾಗುತ್ತದೆ. ಹಾಗೇ ನೋಡುತ್ತಿರಿ. ಕೆಲವೇ ಕ್ಷಣಗಳಲ್ಲಿ ಎಣ್ಣೆಯು ನೀರಿನ ಮೇಲ್ಭಾಗದಲ್ಲಿ ತೇಲುತ್ತಿರುತ್ತದೆ. ಅವು ಒಂದಕ್ಕೊಂದು ಸೇರುವುದೇ ಇಲ್ಲ!
ಏಕೆ ಹೀಗಾಗುತ್ತೆ ಗೊತ್ತಾ? ನೀರಿನಲ್ಲಿರುವ ಕಣಗಳು ಬೇರೆ ವಸ್ತುವಿನ ಕಣಗಳ ಬದಲಾಗಿ ತಮ್ಮತಮ್ಮ ನಡುವೆಯೇ ಆಕರ್ಷಣೆಗೆ ಒಳಗಾಗುತ್ತವೆ. ಎಣ್ಣೆಯ ಕಣಗಳದ್ದೂ ಇದೇ ಕಥೆ. ಆದರೆ ಅವುಗಳ ಸಾಂದ್ರತೆ ನೀರಿನ ಕಣಗಳ ಸಾಂದ್ರತೆಗಿಂತ ಕಡಿಮೆ. ಹೀಗಾಗಿ ಅವು ನೀರಿನೊಂದಿಗೆ ಮಿಶ್ರವಾಗದೆ ಅಥವಾ ನೀರಿರುವ ಪಾತ್ರೆಯ ತಳ ಸೇರದೆ ಮೇಲ್ಭಾಗದಲ್ಲಿ ತೇಲುತ್ತಿರುತ್ತದೆ.