ಅದೇನು ಬಾಗಿದ ಕೆಂಪು ಮೂಗಿನ ಮಾಟ?
ಎಡಬಲಕ್ಕೆರಡಾದ ಕಣ್ಣಿನ ಚುರುಕು ನೋಟ
ಅಷ್ಟ ದಿಕ್ಕುಗಳಿಗೂ ಇಣುಕಿಬಿಡುವ ಕೊರಳು
ಪಂಚಭೂತಗಳಿಂದಾದ ಆತ್ಮದ ಹೊರಳು
ಚಿಗುರು ಚೈತ್ರದ ಮಾಮರದ ಕೊಂಬೆ
ರೆಂಬೆಗಳಲ್ಲಿ ಕುಳಿತ ಪಂಕ್ತಿಸಾಲು
ಹಬ್ಬದ ಗಾಬಿಲಿಗೆ ಸಂಭ್ರಮದಿ ಜೋಡಿಸಿದ
ಹಸಿರು ತೋರಣದ ನೂಲು
ಹೂಕಾಯಿ ಮಾಗಿ ಹೊಸಹಣ್ಣು ತಿಂದು
ಕೊಂಬೆಬಿಟ್ಟು ರೆಕ್ಕೆ ಬಿಚ್ಚಿ ತೃಪ್ತಗೊಂಡು
ಹಾರಿದೆ ಆಕಾಶದತ್ತತ್ತ ಗಿಳಿ ಮೇಲೆ ನೀಲಿ
ಮೋಡಗಳೆಡೆಯಲ್ಲೋ ಅಚ್ಚ ಬಿಳಿ
ಗಾಳಿಯಲ್ಲಿ ತೋಲಿ ಬಿಸಿಲಿಗೆ ಕಾದು
ತುಂತುರು ಮಳೆಹನಿಗೆ ಪುಳಕಿಸಿ ಪುಕ್ಕ
ಇಟ್ಟ ಕಾಳು ನೀರಿಗೆ ನೆಲಮುಟ್ಟಿ ಒಮ್ಮೊಮ್ಮೆ
ಅಚ್ಚರಿಯೆಂಬಂತೆ ಸೇರಿ ನನ್ನ ಬೊಗಸೆ ತುಂಬಾ
ಮುದ್ದಿಸಿಕೊಂಡ ಹಕ್ಕಿಯೆಡೆಗೆ ಇದೀಗ
ಎಲ್ಲರ ಚಿತ್ತ, ಹಕ್ಕಿ ಹಿಡಿಯುವ ಚಾಣಾಕ್ಷರೇ
ನನ್ನೆರಡೂ ಅಂಗೈ ಚೆಲ್ಲಿದ್ದೇನೆ ನಿಮ್ಮೆಡೆಗೆ
ಇದೋ ಕೊಳ್ಳಿ, ಆಟ ಶುರುವಾಗಲಿ
'ಕಣ್ಣಾಮುಚ್ಚೇ ಕಾಡೇಗೂಡೇ...
ಉದ್ದಿನ ಮೂಟೆ ಉರುಳೇಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ
ನಿಮ್ಮಯ ಹಕ್ಕಿ ಹುಡುಕಿಕೊಳ್ಳಿ'
- ಕೆ.ಎನ್. ಲಾವಣ್ಯಪ್ರಭಾ