ಅದೊಂದು ಶಾಲೆ. ಅಧ್ಯಾಪಕರು ಚರಿತ್ರೆಯ ಪಾಠವನ್ನು ಮಾಡುತ್ತಿದ್ದರು. ಅವರು ಮಕ್ಕಳಿಗೆ ಪಾಠದ ಸಾರಾಂಶವನ್ನು ಬರೆಸುತ್ತಿದ್ದರು. ಆಗ ಹೊರಗಡೆ ಬೇರೆ ಮಕ್ಕಳ ಗಲಾಟೆ ನಡೆಯುತ್ತಿತ್ತು. ಹೀಗಾಗಿ ಮಕ್ಕಳಿಗೆ ಬರೆದುಕೊಳ್ಳಲು ಕಷ್ಟವಾಗುತ್ತಿತ್ತು.
ಅಧ್ಯಾಪಕರು ಒಮ್ಮೆ ಎಲ್ಲಾ ವಿದ್ಯಾರ್ಥಿಗಳ ಮೇಲೆ ದೃಷ್ಟಿ ಹರಿಸಿದರು. ಒಬ್ಬ ವಿದ್ಯಾರ್ಥಿ ಮಾತ್ರ ಏನೂ ಬರೆದುಕೊಳ್ಳುತ್ತಿರಲಿಲ್ಲ. ಅವನು ತನ್ನ ನೋಟ್ ಪುಸ್ತಕವನ್ನೇ ತೆರೆದಿರಲಿಲ್ಲ. ಅಧ್ಯಾಪಕರಿಗೆ ರೇಗಿತು.
'ನೀನೇಕೆ ಬರೆದುಕೊಳ್ಳುತ್ತಿಲ್ಲ?'
'ಗುರುಗಳೇ, ನೀವು ಕಲಿಸಿದ್ದು ನನಗೆ ನೆನಪಿದೆ, ನಾನೇಕೆ ಬರೆದುಕೊಳ್ಳಲಿ?' ಎಂದ ವಿದ್ಯಾರ್ಥಿ.
'ಸರಿ ಹೇಳು, ನನ್ನ ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ಬೆತ್ತದ ರುಚಿ ತೋರಿಸುವೆ.'
ಆಗ ವಿದ್ಯಾರ್ಥಿ ಎದ್ದುನಿಂತು ಇಡೀ ಪಾಠವನ್ನೇ ಒಪ್ಪಿಸಿದ.
ಮತ್ತೊಂದು ದಿನ ಅದೇ ಅಧ್ಯಾಪಕರು ಪಾಠ ಬೋಧಿಸುವಾಗ ಅವನ ದೃಷ್ಟಿ ನೆಲದ ಮೇಲೆ ಬಿತ್ತು. ಅಲ್ಲಿ ಕಡಲೆಕಾಯಿಯ ಸಿಪ್ಪೆಗಳು ಬಿದ್ದಿದ್ದವು. ಅಧ್ಯಾಪಕರಿಗೆ ರೇಗಿತು. ಅವರು ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಕಡೆಯಿಂದ ಬೆತ್ತದಿಂದ ಹೊಡೆಯುತ್ತಾ ಬಂದರು. ಗುರುಗಳು ಆ ವಿದ್ಯಾರ್ಥಿಯ ಬಳಿಗೆ ಬಂದಾಗ ಅವನು ಹೇಳಿದ, 'ಗುರುಗಳೇ, ನನಗೆ ಹೊಡೆಯಬೇಡಿ, ನಾನು ತಪ್ಪೇ ಮಾಡದಿರುವಾಗ ಶಿಕ್ಷೆ ಏಕೆ ಅನುಭವಿಸಲಿ?'
ಗುರುಗಳಿಗೆ ಅವನ ಮಾತಿನಲ್ಲಿ ಸತ್ಯಾಂಶ ಇರುವುದು ಸ್ಪಷ್ಟವಾಯಿತು.
ಇದು ಲೋಕಮಾನ್ಯ ತಿಲಕರ ಬಾಲ್ಯ ಜೀವನಕ್ಕೆ ಸಂಬಂಧಿಸಿದ ಘಟನೆಯಾಗಿದೆ. ಅವರು ಬಾಲ್ಯದಿಂದಲೇ ನಿರ್ಭೀತರಾಗಿದ್ದರು. ಅವರು ಮುಂದೆ 'ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು' ಎಂಬ ಘೋಷಣೆಯನ್ನು ದೇಶಕ್ಕೆ ನೀಡಿದರು. ಇದರೊಂದಿಗೇ ದೇಶಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
(ಹಿಂದಿಯಿಂದ)
- ಡಿ.ಎನ್. ಶ್ರೀನಾಥ್, ಶಿವಮೊಗ್ಗ