

ಒಂದು ನರಿ ಕಾಡನ್ನು ಬಿಟ್ಟು ನಾಡಿಗೆ ಬಂತು. ಅಲ್ಲೊಂದು ಮನೆ. ಅಲ್ಲಿ ರಂಗಪ್ಪ ಎಂಬ ರೈತನಿದ್ದ. ಆ ರಂಗಪ್ಪನಿಗೆ ನರಿಯು 'ನಾನು ಕಾಡಿನ ಮಂತ್ರಿ ನರಿಯಪ್ಪ, ನನ್ನ ಯುಕ್ತಿಗೆ ಕಾಡಿನ ಪ್ರಾಣಿಗಳೆಲ್ಲವೂ ನನ್ನನ್ನು ಸನ್ಮಾನಿಸಿವೆ. ನನ್ನ ಬುದ್ಧಿ, ಯುಕ್ತಿಗೆ ಸರಿಸಾಟಿ ಇಲ್ಲದೆ ಇದುವರೆಗೂ ಯಾರೂ ಕಾಡಿಗೆ ಮಂತ್ರಿಪದವಿಗೆ ಬಂದಿಲ್ಲ, ಬರುವುದೂ ಇಲ್ಲ. ಕಾಡಿನ ರಾಜನಾದ ಸಿಂಹರಾಜನು ನನಗೆ ಸ್ವಲ್ಪ ದಿನಗಳವರೆಗೆ ವಿಶ್ರಾಂತಿ ತೆಗೆದುಕೊ ಎಂದು ಹೇಳಿದ್ದರಿಂದ ನಾನು ನಾಡಿಗೆ ನಿನ್ನ ಮನೆಗೆ ವಿಶ್ರಾಂತಿಗಾಗಿ ಬಂದಿದ್ದೇನೆ' ಎಂದಿತು ನರಿ.
ಆಗ ರಂಗಪ್ಪನು, 'ನೀನು ಕಾಡಿಗೆ ಮಂತ್ರಿಯಾಗಿರಬಹುದು. ಆದರೆ ನನ್ನ ಮನೆಯಲ್ಲಿ ಇರುವಷ್ಟು ದಿನ ನಿನ್ನ ಬೇಕುಬೇಡಗಳನ್ನು, ನಿನ್ನ ಆಹಾರಗಳನ್ನು ನೀನೇ ಸಂಪಾದಿಸಬೇಕು. ಇಲ್ಲಿ ಯಾರೂ ನಿನಗೆ ಸೇವಕರಿಲ್ಲ' ಎಂದನು. ನರಿ 'ಆಯಿತು' ಎಂದಿತು. ಒಂದೆರಡು ದಿನಗಳವರೆಗೆ ನರಿಗೆ ಯಾವುದೇ ಕೊರತೆ ಆಗಲಿಲ್ಲ. ರೈತ ರಂಗಪ್ಪ ಬೇಸಾಯದ ದಿನಗಳು ಇರುವುದರಿಂದ ನರಿಗೆ 'ಮನೆ ಕಡೆ ಹುಷಾರು' ಎಂದು ಹೇಳಿ ಒಂದು ವಾರ ಹೊಲದಲ್ಲಿಯೇ ಉಳಿದನು.
ಒಂದು ದಿನ ನರಿಗೆ ಊಟವಾದ ಮೇಲೆ ನೀರಡಿಕೆಯಾಯಿತು. ಮನೆಯಲ್ಲಿ ಎಲ್ಲೂ ನೀರಿರಲಿಲ್ಲ. ಮನೆಗೆ ಸ್ವಲ್ಪದೂರದಲ್ಲಿ ಒಂದು ಹೂಜಿ ಇತ್ತು. ಅದರಲ್ಲಿ ನೀರಿತ್ತು. ಮೊದಲೇ ಮಾಂಸ ತಿಂದಿದ್ದ ನರಿ ನೀರು ಕುಡಿಯಲು ಪ್ರಯತ್ನಿಸಿತು. ನಾಲಿಗೆಗೆ ನೀರು ಸಿಗಲಿಲ್ಲ, ಕಾಗೆಯ ಹಾಗೆ ಒಂದೊಂದೇ ಕಲ್ಲುಗಳನ್ನು ಹಾಕಿ ನೀರು ಮೇಲೆ ಬಂದಾಗ ಕುಡಿಯೋಕೆ ನರಿಯು ಅಷ್ಟು ಬುದ್ಧಿವಂತನೆ? ದಾಹ ಹೆಚ್ಚಾಯಿತು. ಸಣ್ಣ ಹೂಜಿಯ ಬಾಯಿಗೆ ಮುಖ ಹಾಕಿತು ಹೋಗಲಿಲ್ಲ. ತುಂಬಾ ಪ್ರಯಾಸದ ನಂತರ ಹೂಜಿಯೊಳಗೆ ಮುಖ ಹೋಯಿತು. ಸದ್ಯ ನೀರು ಸಿಕ್ಕಿತು ಎಂದು ಸಂತೋಷದಿಂದ ಹೊಟ್ಟೆತುಂಬಾ ನೀರು ಕುಡಿಯಿತು. ಇನ್ನೇನು ಮುಖ ಹೊರಗೆ ತೆಗೆಯಬೇಕು ಆದರೆ ತೆಗೆಯಲಾಗುತ್ತಿಲ್ಲ. ಸಾಕಷ್ಟು ಪ್ರಯತ್ನಿಸಿತು. ಹೂಜಿಯೊಂದಿಗೆ ಹೊರಳಾಡಿತು. 'ಎಂಥ ದಡ್ಡತನವಾಯಿತು, ಹೂಜಿಯ ಸಣ್ಣ ಬಾಯಿಯೊಳಗೆ ನನ್ನ ದೊಡ್ಡ ಮುಖ ಹಾಕಿಬಿಟ್ಟೆನಲ್ಲ. ಸ್ವಲ್ಪವೂ ಯೋಚಿಸಲಿಲ್ಲ ನಾನು' ಎಂದು ಪರಿತಪಿಸಿತು. ಅದೇ ಸಮಯಕ್ಕೆ ರೈತ ರಂಗಪ್ಪ ಬಂದು ನರಿಯ ಸ್ಥಿತಿ ನೋಡಿ 'ಏನು ಮಂತ್ರಿಗಳೇ, ಹೂಜಿಯೊಳಗೆ ಏನೋ ಹುಡುಕುತ್ತಿರುವ ಹಾಗಿದೆ?' ಎಂದು ಕೇಳಿದ.
'ನಾನು ಸಂಕಷ್ಟದಲ್ಲಿದ್ದೇನೆ. ಈ ಹೂಜಿಯಿಂದ ನನ್ನ ಮುಖವನ್ನು ಹೊರಗೆ ತೆಗೆದು ನನ್ನನ್ನು ಮುಕ್ತಗೊಳಿಸು ಮನುಷ್ಯನೇ' ಎಂದು ನರಿ ಕೇಳಿಕೊಂಡಿತು.
'ನಿನ್ನ ಬಗ್ಗೆ ಯಾರಿಗೆ ಗೊತ್ತಿಲ್ಲ, ಕೆಟ್ಟ ಕುಯುಕ್ತಿ, ಮೋಸದ ಬುದ್ಧಿಯುಳ್ಳವನಾದ ನೀನು ಒಂದು ಹೂಜಿಯಿಂದ ಮೋಸ ಹೋದೆಯಲ್ಲ. ಸಣ್ಣಬಾಯಿಯ ಹೂಜಿಯೊಳಗೆ ನನ್ನ ದೊಡ್ಡ ಬಾಯಿ ಸಿಕ್ಕಿಕೊಳ್ಳುತ್ತೆ ಅನ್ನುವ ಜ್ಞಾನ ನಿನಗಿಲ್ಲ. ನೀನೊಬ್ಬ ಕಾಡಿನ ಮಂತ್ರಿಯಾ? ನಿನ್ನ ಮೋಸದ ಬಲೆಗೆ ಬೀಳಬಾರದೆಂದೇ ಕಾಡಿನ ಪ್ರಾಣಿಗಳೆಲ್ಲ ನಿನಗೆ ಮಂತ್ರಿಪದವಿ ಕೊಟ್ಟಿದ್ದಾರೆಯೇ ಹೊರತು ನಿನ್ನ ಬುದ್ಧಿ, ಯುಕ್ತಿಗೆ ಅಲ್ಲ. ನೀನು ನನ್ನ ಮನೆಯೊಳಗೆ ಇರಲು ನಾಲಾಯಕ್ಕು' ಎಂದು ರಂಗಪ್ಪ ಕಟ್ಟಿಗೆಯಿಂದ ನರಿಗೆ ಚೆನ್ನಾಗಿ ಬಾರಿಸಿ ಓಡಿಸಿಬಿಟ್ಟ.
ನೀತಿ: ನಾನು ಜಾಣ, ನನ್ನಿಂದಲೇ ಎಲ್ಲ ಎನ್ನುವ ಅಹಂ ಇದ್ದರೆ ಸೋಲು ಶತಸಿದ್ಧ.
= ತಯಬ್ ಅಲಿ ಅ. ಹೊಂಬಳ