ಯಾರಿಗೆ ಯಾರುಂಟು ಎರವಿನ ಸಂಸಾರ

ಒಂದಾನೊಂದು ಊರು. ಅಲ್ಲೊಂದು ಸೂರು. ಆ ಸೂರಿನಲ್ಲಿ ವಾಸವಾಗಿದ್ದ ಕುಟುಂಬ ಮೂರು. ಒಂದು ಹಸು-ಕರು, ಮತ್ತೊಂದು ಕುರಿ...
ಯಾರಿಗೆ ಯಾರುಂಟು ಎರವಿನ ಸಂಸಾರ
Updated on: 

ಒಂದಾನೊಂದು ಊರು. ಅಲ್ಲೊಂದು ಸೂರು. ಆ ಸೂರಿನಲ್ಲಿ ವಾಸವಾಗಿದ್ದ ಕುಟುಂಬ ಮೂರು. ಒಂದು ಹಸು-ಕರು, ಮತ್ತೊಂದು ಕುರಿ-ಕುರಿಮರಿ, ಇನ್ನೊಬ್ಬರು ಸೂರ-ತಾರಾ ದಂಪತಿ. ಸೂರ ಮತ್ತು ತಾರಾ ದಂಪತಿಗೆ ಕುರಿಮರಿ ಕಂಡರೆ ಎಲ್ಲಿಲ್ಲದ ಪ್ರೀತಿ. ಆ ಕುರಿಮರಿಗೆ ತಾರಾಳ ಸೊಂಟವೇ ಪ್ರಧಾನ ಸೋಪಾನ. ಕುರಿಮರಿಯನ್ನು ಕೆಳಗಿಳಿಸದ ತಾರಾಳಿಗೆ ತಾನಾಯಿತು ತನ್ನ ಕುರಿಮರಿಯಾಯಿತು. ಪಾಪ ಹಸು ಮತ್ತು ಕರುವನ್ನು ಕೇಳುವವರೇ ಇಲ್ಲ.
ಬೆಳಗ್ಗೆ ಸಂಜೆ ಸೂರ ಹಾಲು ಕರೆಯುವಾಗ ಗಲ್ಲ ಸವರಿ ಕರುವನ್ನು ತಾಯಿ ಹಸು ಬಳಿ ಬಿಟ್ಟರೆ, ಇನ್ನೇನು ಒಂದಿಷ್ಟು ಹಾಲು ಗುಟುಕಿಸಬೇಕು ಅನ್ನುವಷ್ಟರಲ್ಲಿ... ದರದರ ಎಳೆದು ತಂದು ಕಂಬಕ್ಕೆ ಬಿಗಿದರೆ ಮುಗಿಯಿತು. ಕರುವಿನ ಪ್ರೀತಿ ಅಷ್ಟೇ. ನಂತರ ಸ್ವಚ್ಛಂದವಾಗಿ ಹಾಲು ಕರೆದು ಒಂದು ಹಿಡಿ ಹುಲ್ಲು ಬಳಲಿದ ಜೀವಕ್ಕೆ ಒಗೆದರೆ ಮುಗೀತು. ಹಸು ಕರುವಿನ ಬಡಕಲ ಹೊಟ್ಟೆ ತುಂಬಿದ್ದರೆ ಸರಿ, ಇಲ್ಲವಾದರೆ ಹರೋಹರ.
ನಿತ್ಯದ ದಿನಚರಿ ಹೀಗೆ ಸಾಗಿರುವಾಗ ಒಮ್ಮೆ ಕರು ತಡೆಯಲಾರದೆ ತನ್ನ ತಾಯಿಗೆ ಕೇಳಿತು, 'ಅಮ್ಮಾ ಏನಿದು ಅನ್ಯಾಯ. ನಿನ್ನ ಹಾಲು ಕರೆದು, ಮೆರೆದು ಬಾಳುವ ಜನ, ನನ್ನನ್ನಾಗಲೀ ನಿನ್ನನ್ನಾಗಲೀ ನೆನೆಯದೆ, ಯಾವುದೇ ಲೆಕ್ಕಕ್ಕಿಲ್ಲದ ಕುರಿಮರಿ ಜತೆ ಮುದ್ದಿನ ಚೆಲ್ಲಾಟವಾಡುವುದು ನ್ಯಾಯವೇ? ಉಪಕಾರ ಸ್ಮರಣೆಯೇ ಇಲ್ಲದ ಜನ. ಅಲ್ಲವೇನಮ್ಮ'.
'ಮಗಳೇ ನಿನಗೆ ಈಗ ತಿಳಿಯದು. ಇನ್ನು ಕೆಲವೇ ದಿನ ನಿನ್ನಯ ಅಂತರಾಳಕ್ಕೆ ಅನುಭವವಾಗುವುದು ಕಂದ. ಆದರೆ ನಿನಗೇಕೆ ಚಿಂತೆ. ನಾವಾಯಿತು, ನಮ್ಮ ಪಾಡಾಯಿತು. ಅರಿಯದ ವಿಷಯಕ್ಕೆ ಮರೆಯಬೇಕೆನ್ನುವ ಸಾಹಸವೇ ಸರಿ. ಇನ್ನಾರು ತಿಂಗಳಲ್ಲಿ ನಿನಗರಿವಾಗುವುದು. ಬೆಡಗಿನ ಬಣ್ಣ ಬಯಲಾಗುವುದು. ನಿನಗ್ಯಾಕೆ ಈಗ ಚಿಂತೆ. ಬಿಡು ಮಗಳೇ ಚಿಂತೆ ನಾಳಿನ ಬಗ್ಗೆ ನೀ ಅರಿಯುವೆಯಂತೆ' ನುಡಿಯಿತು ಹಸು ಸಂತೈಸುತ್ತಾ.
ದಿನಗಳುರುಳಿದವು ಮೆಲ್ಲಗೆ. ವಾರ ಕಳೆಯಿತು, ತಿಂಗಳಾಯಿತು. ಅದೊಂದು ಕಗ್ಗತ್ತಲ ರಾತ್ರಿ. ಆಷಾಢ ಅಮಾವಾಸ್ಯೆ. ಬಾನಲ್ಲಿ ತುಂಬಿತ್ತು ಕಪ್ಪಗಿನ ಕಾರ್ಮೋಡ. ಎಲ್ಲೆಲ್ಲೂ ಕಾರ್ಗತ್ತಲು, ತುಂತುರು ಮಳೆ, ಆಗೊಮ್ಮೆ, ಈಗೊಮ್ಮೆ ಗುಡುಗುಸಿಡಿಲಿನ ಆರ್ಭಟ. ಸೊಂಯ್ ಅನ್ನುತ್ತಾ ಆರ್ಭಟಿಸಿದ ಗಾಳಿ ಗಿಡಮರಗಳ ಹೊಯ್ದಾಟ. ಎಂಥವನೂ ಚಳಿಗಾಳಿಗೆ ನಡುಗದೆ ಇರಲಾರ. ಆದರೆ ಸೂರ ಮತ್ತು ತಾರಾ ದಂಪತಿ ಮನೆಯಲ್ಲಿ ಹಬ್ಬದ ಸಂಭ್ರಮ. ಮನೆತುಂಬ ಬಂಧು-ಬಳಗ, ಆಪ್ತೇಷ್ಟರ ಆಗಮನ. ಅಲ್ಲೊಂದು ಹಬ್ಬದ ಸಂಭ್ರಮ.
ಕೊಟ್ಟಿಗೆಯಲ್ಲಿ ಕಟ್ಟಿದ್ದ ತಾಯಿ ಮಗಳು ಚಳಿಗೆ ಗುಗ್ಗರಿಸಿ, ಮುದುಡಿ ಮಲಗಲು ಹೋದರೆ ಕೆಸರ ಹೊಂಡ, ನಿಲ್ಲಲು ಚಳಿ.. ಎಂತಹ ಕಾಲವಯ್ಯ. ಕರು ನಡುಗುತ್ತಲೇ ತಾಯಿ ಹಸುವಿನೊಂದಿಗೆ ನುಡಿಯಿತು, 'ಅಮ್ಮಾ ನಮ್ಮ ಹಟ್ಟಿಯಲ್ಲಿದ್ದ ಕುರಿ-ಕುರಿಮರಿ ಎಲ್ಲಿ ಹೋದವು? ಕಾಣುತ್ತಿಲ್ಲವಲ್ಲ? ಈ ಚಳಿಗಾಳಿ, ಮಳೆಗೆ ಹೊರಗೆಲ್ಲೋ ಉಳಿದವೇ? ಪಾಪ, ಅವುಗಳನ್ನು ಹುಡುಕಾಡದೇ ಮನೆತುಂಬ ನೆಂಟರಿಷ್ಟರೊಡನೆ ಕೂಡಿ ಹಬ್ಬ ಆಚರಿಸುತ್ತಾ ಇದ್ದಾನಲ್ಲ ಈ ನಮ್ಮ ಯಜಮಾನ. ಒಂದಿಷ್ಟೂ ಕರುಣೆ ಬಾರದೇ ಈ ಜನರಿಗೆ?'
'ಎಲೈ ಮರುಳೆ, ನೀನೆಂತಹ ಮುಗ್ಧ ಬಾಲೆ. ಪ್ರಪಂಚ ಅರಿಯದ ಜನ ಅವರಲ್ಲ, ನೀನು. ನೀ ಎಣಿಸಿದಂತೆ ಅವರ್ಯಾರೂ ಮರೆತಿಲ್ಲ. ಇಂದು ಅವರ ಮನೆಯಲ್ಲಿ ಹಬ್ಬ. ಅದಕ್ಕೇ ಅಲ್ಲವೇ ಮನೆ ತುಂಬ ನೆಂಟರೂ, ಇಷ್ಟರೂ, ಆಪ್ತರೂ. ಅವರೆಲ್ಲ ಆಶಾವಾದಿಗಳು. ನೀ ಕೇಳಿದಂತೆ ಕುರಿ, ಕುರಿಮರಿ ಎಲ್ಲೂ ಹೋಗಿಲ್ಲ. ಇಂದು ಎಲ್ಲ ನೆಂಟರಿಷ್ಟರ ಹೊಟ್ಟೆಗೆ ಉಣಲಿಕ್ಕೆ ಒಲೆಯ ಮೇಲೆ ಕುದಿಯುತ್ತಿವೆ, ಹಬ್ಬದೂಟ ಸಿದ್ಧವಾಗುತ್ತಿದೆ. ಇಷ್ಟೇ ನೋಡು ನ್ಯಾಯ'.

- ಸಕಲೇಶಪುರ ಚಂದ್ರಶೇಖರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com