

ಒಮ್ಮೆ ಒಂದು ಮುದಿ ಹೆಣ್ಣುಕುರಿಯು ಆಕಸ್ಮಿಕವಾಗಿ ಕುರಿಗಳ ಮಂದೆಯಿಂದ ಬೇರ್ಪಟ್ಟು ದೂರ ಉಳಿದು ಹೋಯಿತು. ಸಂಜೆ ಕಳೆದು ರಾತ್ರಿಯ ಕತ್ತಲು ಆವರಿಸತೊಡಗಿತು. ಕುರಿಯು ಬಹಳ ದೂರದ ಹಳ್ಳಿಯನ್ನು ತಲುಪಬೇಕಿತ್ತು. ಆದರೆ ಈ ಕತ್ತಲೆಯಲ್ಲಿ ಅದು ಒಂಟಿಯಾಗಿ ಹೋಗಲು ಸಾಧ್ಯವಿಲ್ಲದಾಗಿತ್ತು. ಸಮೀಪದಲ್ಲಿಯೇ ಎಲ್ಲಿಯಾದರೂ ರಾತ್ರಿಯನ್ನು ಕಳೆಯುವುದೇ ಸೂಕ್ತವೆಂದು ಕುರಿಯು ತೀರ್ಮಾನಿಸಿತು.
ಸ್ವಲ್ಪ ದೂರದಲ್ಲಿ ಗುಹೆಯೊಂದು ಕಾಣಿಸಿತು. ಬೆಟ್ಟದ ಬಳಿ ಇದ್ದ ಆ ಗುಹೆಯಲ್ಲಿ ರಾತ್ರಿ ಉಳಿದುಕೊಳ್ಳಬಹುದೆಂದು ನಿಶ್ಚಯಿಸಿ ನೇರವಾಗಿ ಗುಹೆಯೊಳಕ್ಕೆ ಹೋಯಿತು. ಈ ಗುಹೆಯಲ್ಲಿ ಒಂದು ಸಿಂಹವು ವಾಸವಾಗಿತ್ತು. ಸಿಂಹವನ್ನು ನೋಡಿದೊಡನೆಯೇ ಕುರಿಯು ಜೀವಭಯದಿಂದ ತತ್ತರಿಸಿಹೋಯಿತು. ಅದು ಅಲ್ಲಿಂದ ಓಡಿಹೋಗಲಿಕ್ಕಾಗಲಿ, ಸಿಂಹವನ್ನು ಎದುರಿಸುವುದಕ್ಕಾಗಲಿ ಸಾಧ್ಯವಾಗದಂಥ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿತು. ತಕ್ಷಣ ಅದರ ತಲೆಯಲ್ಲಿ ಒಂದು ಉಪಾಯ ಹೊಳೆಯಿತು. ಕುರಿಯು ತನ್ನ ಕತ್ತನ್ನು ಮೇಲೆತ್ತಿ ಸೆಟೆದು ನಿಂತು ಸಿಂಹದ ಕಣ್ಣಲ್ಲಿ ಕಣ್ಣಿಟ್ಟು ದುರುಗುಟ್ಟಿ ನೋಡಲಾರಂಭಿಸಿತು.
ಇದನ್ನು ನೋಡಿದ ಸಿಂಹವು ತನ್ನ ಕಣ್ಣುಗಳನ್ನು ತಾನೇ ನಂಬದಾಯಿತು. ಇದುವರೆಗೂ ಯಾವುದೇ ಪ್ರಾಣಿಯಾಗಲಿ ಈ ಗುಹೆಯೊಳಕ್ಕೆ ಪ್ರವೇಶಿಸುವ ಸಾಹಸವನ್ನು ಮಾಡಿರಲಿಲ್ಲ. ಆದರೆ ಈಗ ಕುರಿಯೊಂದು ಧೈರ್ಯದಿಂದ ಒಳನುಗ್ಗಿ ಬಂದಿರುವುದನ್ನು ನೋಡುತ್ತಲೇ ನಿಂತಿತು. ನಂತರ ಕುರಿಯನ್ನು ಕುರಿತು 'ಹೇಳು.. ಯಾರು ನೀನು? ಇಲ್ಲಿಗೇಕೆ ಬಂದಿರುವೆ?' ಎಂದು ಪ್ರಶ್ನಿಸಿತು.
ಆಗ ಕುರಿಯು 'ನಾನು ಕುರಿಗಳ ಮಾಲೀಕಳಾಗಿದ್ದೇನೆ. ನಾನೊಂದು ಪ್ರತಿಜ್ಞೆ ಮಾಡಿದ್ದೇನೆ. ಅದೇನೆಂದರೆ, ನೂರು ಚಿರತೆಗಳನ್ನು, ಇಪ್ಪತ್ತೈದು ಆನೆಗಳನ್ನು ಹಲ್ಲುಗಳಿಂದಲೇ ಅರೆದುಹಾಕಿದ್ದೇನೆ. ಈಗ ಹತ್ತು ಸಿಂಹಗಳಿಗಾಗಿ ಹುಡುಕಾಡುತ್ತಿದ್ದೇನೆ' ಎಂದಿತು. ಇದನ್ನು ಕೇಳಿದ ಸಿಂಹವು ಭಯಪಟ್ಟಿತಲ್ಲದೆ ಇದು ನನ್ನನ್ನೂ ತಿಂದುಹಾಕುವುದು ಖಂಡಿತವೆಂದು ಭಾವಿಸಿ ಕುರಿಗೆ ಹೇಳಿತು 'ನಾನು ಸಾಯುವ ಮೊದಲು ಸಮುದ್ರದಲ್ಲಿ ಸ್ನಾನ ಮಾಡಬೇಕೆಂದು ಇಚ್ಛಿಸಿರುವೆ'. ಕುರಿ ಇದಕ್ಕೆ ಅನುಮತಿ ನೀಡಿತು. ಕೂಡಲೇ ಸಿಂಹವು ಗುಹೆಯಿಂದ ಹೊರಬಂದು ವೇಗವಾಗಿ ಓಡಲಾರಂಭಿಸಿತು. ದಾರಿಯಲ್ಲಿ ಇದನ್ನು ನೋಡಿದ ನರಿ 'ಎಲೈ ಕಾಡಿನ ರಾಜನೇ.. ಎಲ್ಲಿಗೆ ಓಡಿಹೋಗುತ್ತಿರುವೆ?' ಎಂದು ಕೇಳಿತು. 'ಈ ದಿನ ರಾತ್ರಿ ನನ್ನ ಗುಹೆಯೊಳಗೆ ಕುರಿಯಂತೆ ಕಾಣುವ ಪ್ರಾಣಿಯೊಂದು ಬಂದಿದೆ. ಆದರೆ ಅದು ಸಿಂಹವನ್ನೇ ತಿಂದುಹಾಕುವುದು. ಆದ್ದರಿಂದ ನಾನು ಜೀವ ಉಳಿಸಿಕೊಳ್ಳುವುದಕ್ಕಾಗಿ ಓಡಿಹೋಗುತ್ತಿರುವೆನು' ಎಂದಿತು ಸಿಂಹ. ಇದನ್ನು ಕೇಳಿ ನರಿ ನಗುತ್ತಾ, 'ಈಗ ನನಗೆ ಅರ್ಥವಾಯಿತು. ನೀನು ನನ್ನೊಡನೆ ಗುಹೆಗೆ ಬಾ. ಅಲ್ಲಿ ಭರ್ಜರಿ ಭೋಜನ ತಿನ್ನೋಣ' ಎಂದಾಗ ಸಿಂಹ ಒಪ್ಪಿಕೊಂಡಿತು.
ಸಿಂಹ ಮತ್ತು ನರಿ ಗುಹೆಯ ಕಡೆ ಬರುತ್ತಿರುವುದನ್ನು ಕಂಡು ಕುರಿ ಗಾಬರಿಗೊಂಡಿತಾದರೂ ಅದನ್ನು ತೋರ್ಪಡಿಸದೇ ನರಿಯನ್ನು ನೋಡುತ್ತಾ ಕೋಪದಿಂದ 'ನಂಬಿಕೆಗೆ ಅನರ್ಹವಾದ ಗುಲಾಮ ನರಿಯೇ... ನಾನು ನಿನಗೆ ಹತ್ತು ಸಿಂಹಗಳನ್ನು ತರಲು ಹೇಳಿದ್ದೆ. ಆದರೆ ನೀನು ಕೇವಲ ಒಂದು ಸಿಂಹವನ್ನು ಮಾತ್ರ ಕರೆತಂದಿರುವೆಯಲ್ಲ.. ನನ್ನ ಆಜ್ಞೆಯನ್ನು ಪಾಲಿಸದ ನಿನಗೆ ಶಿಕ್ಷೆ ನೀಡಲೇಬೇಕು' ಎಂದಿತು. ಇದನ್ನು ಗಮನಿಸಿದ ಸಿಂಹವು ನರಿಯು ತನ್ನೊಡನೆ ಮೋಸ ಮಾಡುತ್ತಿರುವುದೆಂಬುದಾಗಿ ಭಾವಿಸಿ, ಒಂದೇ ಏಟಿಗೆ ನರಿಯನ್ನು ಕೊಂದು ಬಿಸಾಕಿತು. ಅಲ್ಲದೇ ಬಾಲ ಮುದುಡಿಕೊಂಡು ಹಿಂತಿರುಗಿ ನೋಡದೇ ಅಲ್ಲಿಂದ ಪರಾರಿಯಾಯಿತು.
ಸಿಂಹವು ಹೊರಟುಹೋದ ಮೇಲೆ ಕುರಿಯು ಗುಹೆಯೊಳಗೆ ಆರಾಮವಾಗಿ ಮಲಗಿಕೊಂಡಿತು.
ಸಂಕಷ್ಟದ ಸಮಯದಲ್ಲಿ ಕುರಿ ತೋರಿದ ಸಮಯಪ್ರಜ್ಞೆ ಹಾಗೂ ಧೈರ್ಯದಿಂದಾಗಿ ಅದರ ಜೀವ ಉಳಿಯಿತು. ಸಿಂಹವು ತನ್ನಲ್ಲಿದ್ದ ಅಹಂಕಾರ ಹಾಗೂ ಅಧೈರ್ಯಗಳಿಂದಾಗಿ ಗುಹೆಯಿಂದ ಹೊರಗೆ ಕಾಡಿನಲ್ಲಿ ಅಲೆಯುತ್ತಾ ರಾತ್ರಿ ಕಳೆಯಬೇಕಾಗಿ ಬಂತು. <
- ಕೆ.ಎನ್. ಅಕ್ರಂ ಪಾಷ