ಮಕ್ಕಳೆ,
ಕೆಲದಿನಗಳ ಹಿಂದೆ ರಾಜ್ಯದ ಅಲ್ಲಲ್ಲಿ ಭಾರಿ ಮಳೆಯಾಗಿದ್ದು ಗೊತ್ತಲ್ವಾ? ಕೆಲವು ಕಡೆ ಆಲಿಕಲ್ಲುಗಳೂ ಬಿದ್ದಿವೆಯಂತೆ.
ಧೋ ಅಂತ ಮಳೆ ಸುರೀತಿದ್ರೂ, ಅಮ್ಮ 'ಮಳೇಲಿ ನೆನೀಬೇಡ' ಅಂತ ಬೈತಿದ್ರೂ ಅಂಗಳಕ್ಕೆ ಇಳಿದು ಆಲಿಕಲ್ಲು ಆರಿಸೋದು ಎಷ್ಟು ಮಜವಾಗಿರುತ್ತೆ ಅಲ್ವಾ? ಈ ಆಲಿಕಲ್ಲು ಹೇಗೆ ಬರುತ್ತೆ? ಆಲಿಕಲ್ಲು ಮಳೆಗೆ ಕಾರಣ ಏನು ಎನ್ನುವುದು ನಿಮಗೆ ಗೊತ್ತಾ?
ಸಾಮಾನ್ಯವಾಗಿ ಆಲಿಕಲ್ಲು ಮಳೆ ಬರುವುದು ಬೇಸಿಗೆ ಕಾಲ ಮುಗಿಯುತ್ತಾ ಬಂದಾಗ. ಆ ವೇಳೆಯಲ್ಲಿ ಗುಡುಗು ಸಿಡಿಲಿನ ಆರ್ಭಟವೂ ಜೋರಾಗಿಯೇ ಇರುತ್ತದೆ. ದೊಡ್ಡದೊಡ್ಡ ಕಪ್ಪು ಮೋಡಗಳನ್ನು ಆಕಾಶದಲ್ಲಿ ನೋಡ್ತೀವಿ. ಈ ಮೋಡಗಳು ಸಣ್ಣಸಣ್ಣ ನೀರಿನ ಕಣಗಳನ್ನು ಒಳಗೊಂಡಿರುತ್ತವೆ. ಅಂತಹ ಭಾರಿ ಮೋಡಗಳು ನೀರಿನ ಕಣಗಳನ್ನು 10 ಕಿ.ಮೀ.ಗಳಷ್ಟು ಎತ್ತರಕ್ಕೆ ಒಯ್ಯಬಲ್ಲವು. ಅತೀ ಎತ್ತರದಲ್ಲಿ ಗಾಳಿ ಬಹಳಷ್ಟು ತಂಪಾಗಿರುವುದರಿಂದ ನೀರಿನ ಹನಿಗಳು ಗಟ್ಟಿಯಾಗುತ್ತವೆ. ಅವು ಗಾಳಿಯ ಮೇಲ್ಮುಖ ಒತ್ತಡದಿಂದ ಇನ್ನೂ ಮೇಲಕ್ಕೆ ಹೋಗುತ್ತವೆ. ಈ ಘನೀಕೃತ ನೀರಿನ ಹನಿಗಳು ಒಂದಕ್ಕೊಂದು ಕೂಡಿಕೊಂಡು ದೊಡ್ಡದಾದ ಆಲಿಕಲ್ಲುಗಳುಂಟಾಗುತ್ತವೆ. ಈ ಆಲಿಕಲ್ಲುಗಳು ಭಾರವಾಗಿರುವುದರಿಂದ ಪುನಃ ಮೇಲಕ್ಕೆ ಹೋಗಲಾರದೆ ನೆಲಕ್ಕೆ ಬೀಳುತ್ತವೆ. ಇದನ್ನೇ ನಾವು ಆಲಿಕಲ್ಲು, ಮುಗಿಲ್ಗಲ್ಲು, ಆಣಿಕಲ್ಲು ಎಂದೆಲ್ಲ ಕರೆಯುವುದು.