ಪ್ರಧಾನ ಸುದ್ದಿ

ಮಂಡ್ಯ ಈಗ ರಮ್ಯ

ಲೋಕಸಭಾ ಉಪಚುನಾವಣೆಯಲ್ಲಿ ರಾಹುಲ್ ಗಾಂಧಿ 'ಯುವ ಸೂತ್ರ' ಪ್ರಯೋಗಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.

ಮಂಡ್ಯ ಈಗ ರಮ್ಯ
Published On :

-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಕರ್ನಾಟಕದ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ರಾಹುಲ್ ಗಾಂಧಿ 'ಯುವ ಸೂತ್ರ' ಪ್ರಯೋಗಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚಿತ್ರ ನಟಿ ರಮ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಡಿ.ಕೆ.ಸುರೇಶ್ ಕಣಕ್ಕಿಳಿಯಲಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಅವರು ಎಐಸಿಸಿ ಕಚೇರಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಮುನ್ನ ಉಭಯ ನಾಯಕರು ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಡಿ.ಕೆ.ಸುರೇಶ್  ಹೆಸರನ್ನು ಅನುಮೋದಿಸಲಾಗಿದೆ. ಆದರೆ, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ರಮ್ಯ ಮತ್ತು ಎಲ್.ಆರ್. ಶಿವರಾಮೇಗೌಡ ಅವರ ಹೆಸರನ್ನು ಔಪಚಾರಿಕ ಪ್ರಕ್ರಿಯೆಯಾಗಿ ಹೈಕಮಾಂಡ್‌ಗೆ ನೀಡಲಾಗಿದೆ. ಆದರೆ, ಹೈಕಮಾಂಡ್ ಅಭ್ಯರ್ಥಿ ಆಯ್ಕೆ ಹೊಣೆಯನ್ನು ಸಿದ್ದರಾಮಯ್ಯ, ಪರಮೇಶ್ವರ ಹೆಗಲಿಗೆ ಹೊರಿಸಿದೆ.
ರಮ್ಯ ಗೆಲ್ಲಿಸುವ ಹೊಣೆ ಅಂಬರೀಷ್‌ಗೆ: ರಾಹುಲ್ ಗಾಂಧಿ ಸೂತ್ರದ ಪ್ರಕಾರ, ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿ ಮರಳಿರುವ ಶಿವರಾಮೇಗೌಡರಿಗಿಂತ ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ರಮ್ಯ ಉತ್ತಮ ಆಯ್ಕೆ. ಅದನ್ನು ಈಗಾ ಗಲೇ ನಿರ್ಧರಿಸಿದಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಕರೆ ಮಾಡಿ, ರಮ್ಯ ಗೆಲ್ಲಿಸುವ ಹೊಣೆಯನ್ನು ಅಂಬರೀಷ್ ಹೆಗಲಿಗೇರಿಸಿದ್ದಾರೆ.
ಇತ್ತೀಚೆಗಷ್ಟೆ ಮುಗಿದ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿದ್ದ ವರ್ಚಸ್ಸನ್ನು ಮತ್ತೆ ಗಳಿಸಿಕೊಳ್ಳುವ ಅವಕಾಶವನ್ನು ಈ ಚುನಾವಣೆ ಅಂಬರೀಷ್ ಅವರಿಗೆ ತಂದುಕೊಟ್ಟಿದೆ. ಹೀಗಾಗಿ ಅಂಬಿ ಮಂಡ್ಯದಲ್ಲಿ ಕಾಂಗ್ರೆಸ್ ಸಾರಥಿ.
ಪರಿಷತ್ ಅಭ್ಯರ್ಥಿಗಳು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ. ಮೈಸೂರು ಜಿಲ್ಲೆಯಿಂದ ಧರ್ಮಸೇನ, ಚಿತ್ರದುರ್ಗದಿಂದ ಸೇತೂರಾಮ್ ಮತ್ತು ಧಾರವಾಡ ಜಿಲ್ಲೆಯಿಂದ ನಾಗರಾಜ ಛಬ್ಬಿ ಅವರು ಕಣಕ್ಕೆ ಇಳಿಯಲಿದ್ದಾರೆ.

ತಮ್ಮನ ಗೆಲವು ಅಣ್ಣನ ಕೈಲಿ
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಿಕೆಶಿ ಸಹೋದರ ಸುರೇಶ್

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲ್ಲಿಸುವ ಹೊಣೆಯನ್ನು ಮಾಜಿ ಸಚಿವ, ಮಾಜಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಲಾಗಿದೆ. ಡಿ.ಕೆ. ಶಿವಕುಮಾರ್  ತಮ್ಮ ಸಹೋದರನನ್ನು ಗೆಲ್ಲಿಸುವ ಜತೆಗೆ ತಮ್ಮ ರಾಜಕೀಯ ವೈರಿ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಾಬಲ್ಯ ಮುರಿಯುವ ಗುರಿಯೂ ಇದೆ. ಉಭಯ ಕ್ಷೇತ್ರಗಳೂ ಜೆಡಿಎಸ್ ತೆಕ್ಕೆಯಲ್ಲಿ ಇರುವುದರಿಂದ ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈ ಉಪ ಚುನಾವಣೆ ಪ್ರಮುಖ ಪ್ರಥಮ ಸವಾಲು. ಮುಂದಿನ ಏಪ್ರಿಲ್- ಮೇನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹೀಗಾಗಿ ಈ ಉಪ ಚುನಾವಣೆಯನ್ನು ಮುಂದಿನ ಚುನಾವಣೆಗೆ ತಾಲೀಮು ನಡೆಸಲು ಹಾಗೂ ಹೊಸ ಪ್ರಯೋಗ ಮಾಡಲು ಬಳಸಿಕೊಳ್ಳಲಾಗುತ್ತಿದೆ.ಹೀಗಾಗಿ ರಾಹುಲ್ ಪ್ರತಿಪಾದಿಸುತ್ತಿದ್ದ ಯುವ ಮತ್ತು ಪಕ್ಷ ನಿಷ್ಠ ವ್ಯಕ್ತಿಗಳಿಗೆ ಸ್ಥಾನ ಮಾನ ನೀಡಬೇಕೆಂಬ ವಾದವನ್ನು ಚಾಚೂತಪ್ಪದೇ ಅನುಷ್ಠಾನಗೊಳಿಸಲಾಗುತ್ತಿದೆ. ಹೀಗಾಗಿ ಮಂಡ್ಯ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಾರೆಂದೇ ನಂಬಲಾಗಿದ್ದ ಶಿವರಾಮೇಗೌಡ ಅವರಿಗೆ ಟಿಕೆಟ್ ತಪ್ಪಿದೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.