ನಿಮ್ಮ ಗೌರವಕ್ಕೆ ಚ್ಯುತಿ ತಂದಿಲ್ಲ

ಭೂ ಒತ್ತುವರಿ ನಿಯಂತ್ರಣಕ್ಕೆ ಕಾಯಂ ಸದನ ಸಮಿತಿ ರಚಿಸಿ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ.4-
ರಾಜ್ಯದಲ್ಲಿ ಭೂ ಒತ್ತುವರಿ ನಿಯಂತ್ರಣಕ್ಕಾಗಿ ಕಾಯಂ ಸದನ ಸಮಿತಿ ರಚಿಸುವಂತೆ ಸರ್ಕಾರಿ ಜಮೀನು ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಹೇಳಿದ್ದಾರೆ.
ದೇಶದ ಸಂಸತ್ತು ಮತ್ತು ರಾಜ್ಯದ ಶಾಸನಸಭೆಯ ಬಗ್ಗೆ ನಾನು ಅಪಾರ ಗೌರವ ಹೊಂದಿದ್ದೇನೆ. ಯಾವತ್ತೂ ಈ ಸಾಂವಿಧಾನಿಕ ಸಂಸ್ಥೆಗಳಿಗೆ ಅವಮಾನವಾಗುವ ರೀತಿ ವರ್ತಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಾವು ಇತ್ತೀಚೆಗೆ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿರುವ ಅಂಶಗಳನ್ನೇ ಕಾರ್ಯಪಡೆ ವರದಿಯಲ್ಲೂ ಹೇಳಿದ್ದೇನೆ.
ಆದರೆ, ಈಗ ಅದು ಏಕೆ ವಿವಾದವಾಯಿತೋ ಗೊತ್ತಿಲ್ಲ ಎಂದಿದ್ದಾರೆ. ಭೂ ಅತಿಕ್ರಮಣ ವಿಚಾರದಲ್ಲಿ 'ಕನ್ನಡಪ್ರಭ'ದಲ್ಲಿ ಪ್ರಕಟವಾದ ಸಂದರ್ಶನದಲ್ಲಿ ರಾಜಕಾರಣಿಗಳ ಹೆಸರು ಪ್ರಸ್ತಾಪಿಸಿದ್ದ ಹಿನ್ನೆಲೆಯಲ್ಲಿ ವಿಧಾನ ಮಂಡಲದಲ್ಲಿ ತಮ್ಮ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಹೇಳಿಕೆಯಲ್ಲಿ ಏನಿದೆ?: ಭೂ ಒತ್ತುವರಿ ಪ್ರಕರಣ ಇತ್ತೀಚೆಗೆ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದೇಶದ ಸಂಸತ್ತು ಮತ್ತು ಶಾಸನಸಭೆಯ ಬಗ್ಗೆ ನಾನು ಅಪಾರ ಗೌರವ ಹೊಂದಿದ್ದೇನೆ. ವಾಸ್ತವವಾಗಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ಅರ್ಜಿಗಳ ಸಮಿತಿಯಂತೆ ಭೂ ಒತ್ತುವರಿ ಕುರಿತಂತೆ ಸದನ ಸಮಿತಿ ರಚಿಸಬೇಕು ಎಂದು 2011ರ ಜುಲೈ 4ರಂದು ಸಲ್ಲಿಸಿದ್ದ ವರದಿಯಲ್ಲಿ ಶಿಪಾರಸು ಮಾಡಿದ್ದೆ. ಇದರಿಂದ ಕಂದಾಯ ಅಧಿಕಾರಿಗಳು, ಅರಣ್ಯ ಮತ್ತಿತರೆ ಇಲಾಖೆಗಳ ಮೂಲಕ ಯಾವುದೇ ಮಧ್ಯಪ್ರವೇಶವಿಲ್ಲದೆ ಒತ್ತುವರಿ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದ್ದೆ.
ಪ್ರಸ್ತುತ ರಾಜ್ಯದಲ್ಲಿ 1.95 ಲಕ್ಷ ಕೋಟಿ ಮೌಲ್ಯದ 11 ಲಕ್ಷ ಎಕರೆ ಮೌಲ್ಯದ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಇದು 2ಜಿ, ಕಾಮನ್ವೆಲ್ತ್ ಗೇಮ್ಸ್, ಕಲ್ಲಿದ್ದಲು ಹಗರಣಗಳ ಒಟ್ಟು ಮೊತ್ತಕ್ಕಿಂತ ಹೆಚ್ಚು. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಸುಮಾರು 1 ಲಕ್ಷ ಕೋಟಿ ಮೌಲ್ಯದ 96 ಸಾವಿರ ಎಕರೆ ಸರ್ಕಾರಿ ಭೂಮಿ ಭೂ ಕಬಳಿಕೆದಾರರ ಪಾಲಾಗಿದೆ. ಅಧಿಕಾರಿಗಳು, ಪ್ರಬಲ ನಾಯಕರ ಬೆಂಬಲವಿಲ್ಲದೆ ಭಾರೀ ಹಗರಣ ನಡೆಯಲು ಸಾಧ್ಯವಿಲ್ಲ.
ರಾಜ್ಯದಲ್ಲಿ 2006ರಲ್ಲಿ ಈ ಕುರಿತಂತೆ ಸರ್ಕಾರ ಗಮನಹರಿಸಿದ್ದರಿಂದ ಮತ್ತು ಶಾಸನಸಭೆಯಲ್ಲಿ ಚರ್ಚೆಯಾಗಿದ್ದರಿಂದ ಎ.ಟಿ. ರಾಮಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರು ನಗರ ಜಿಲ್ಲೆಯ ಭೂ ಒತ್ತುವರಿ ಕುರಿತಂತೆ ತನಿಖೆ ನಡೆಸಲು ಜಂಟಿ ಸದನ ಸಮಿತಿ ರಚಿಸಲಾಗಿತ್ತು.
ನಾನು ಈ ಸಮಿತಿಯ ಸಲಹೆಗಾರನಾಗಿದ್ದೆ. ಈ ಸಮಿತಿ 2007ರಲ್ಲಿ ಎರಡು ವರದಿಗಳನ್ನು ಸಲ್ಲಿಸಿತ್ತು. ನಂತರದಲ್ಲಿ ಜಂಟಿ ಸದನ ಸಮಿತಿಯನ್ನು ವಿಸರ್ಜಿಸಲಾಯಿತು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು. 2008ರಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ನಂತರದಲ್ಲೂ ಭೂ ಒತ್ತುವರಿ ಕುರಿತಂತೆ ಸದನದಲ್ಲಿ ಚರ್ಚೆಯಾಯಿತು. ಇದರ ಪರಿಣಾಮ 2009ರಲ್ಲಿ ಸರ್ಕಾರಿ ಜಮೀನು ಸರಕ್ಷಣಾ ಕಾರ್ಯಪಡೆ ರಚಿಸಿ, ಇದಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡಲಾಯಿತು.
2011ರವರೆಗೆ ಕೆಲಸ ಮಾಡಿದ್ದು, ಇದು ತನ್ನ ಕೆಲವನ್ನು ಮುಂದುವರಿಸುತ್ತಿದ್ದಂತೆ ಈ ಕಾರ್ಯಪಡೆಯನ್ನು ವಿಸರ್ಜಿಸಲಾಯಿತು. ಇದರ ಮಧ್ಯೆಯೂ ಕಾರ್ಯಪಡೆ ತನ್ನ ವರದಿ ನೀಡಿತ್ತು. ಜಂಟಿ ಸದನ ಸಮಿತಿ ಮತ್ತು ಕಾರ್ಯಪಡೆ ನೀಡಿರುವ ವರದಿಗಳಲ್ಲಿ ಭೂ ಒತ್ತುವರಿಗಳ ಬಗ್ಗೆ ಉದಾಹರಣೆಸಹಿತ ವಿವರಿಸಿ ಅಧಿಕಾರಿಗಳು ಇವರನ್ನು ಯಾವ ರೀತಿ ರಕ್ಷಿಸುತ್ತಾರೆ ಎಂಬುದನ್ನು ವಿವರಿಸಲಾಗಿತ್ತು.
ಈ ಮಧ್ಯೆ 2013ರ ಜೂನ್ ತಿಂಗಳಲ್ಲಿ ತಮ್ಮ ಸಂದರ್ಶನ ಪ್ರಕಟವಾಯಿತು. ಇದರಲ್ಲಿ ಈ ಹಿಂದಿನ ಮೂರು ವರದಿಗಳಲ್ಲಿರುವ ಅಂಶಗಳನ್ನಷ್ಟೇ ನಾನು ಪ್ರಸ್ತಾಪಿಸಿದ್ದೆ. ಹೀಗಿರುವಾಗ ವರದಿ ಪ್ರಕಟವಾದ ಎರಡು ವರ್ಷಗಳ ಬಳಿಕ ಆ ವರದಿಯಲ್ಲಿರುವ ಅಂಶಗಳು ಸದನದ ನಿರ್ದಿಷ್ಟ ಸದಸ್ಯರ ಹಕ್ಕು ಮತ್ತು ಗೌರವಕ್ಕೆ ಕುಂದುಂಟುಮಾಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸಂವಿದಾನದ ಪ್ರಕಾರ ಇರುವ ಸದನದ ಹಕ್ಕಿನ ಬಗ್ಗೆ ತಮಗೆ ಗೌರವವಿದೆ. ಅದೇ ರೀತಿ ಕೆಲವು ಅರ್ಹ ಪ್ರಕರಣಗಳಲ್ಲಿ ಸದನದ ಹಕ್ಕುಚ್ಯುತಿ ವಿಚಾರ ಬಂದಾಗ ರಾಜ್ಯದ ನ್ಯಾಯಾಲಯಗಳ ವ್ಯಾಪ್ತಿ ಮತ್ತು ಅಧಿಕಾರದ ಬಗ್ಗೆಯೂ ನನಗೆ ನಂಬಿಕೆ ಇದೆ. ಜತೆಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಆಧರಿಸಿ ತಮಗೆ ಹಕ್ಕುಚ್ಯುತಿ ಕುರಿತಂತೆ ಸಮನ್ಸ್ ಜಾರಿ ಮಾಡಿದಾಗ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳಲು ಅವಕಾಶವಿದೆ ಎಂದು ಕೆಲವರು ನನಗೆ ಕಾನೂನು ಸಲಹೆಯನ್ನೂ ನೀಡಿದ್ದಾರೆ. ಇದಕ್ಕೆ ಅವಕಾಶವಾಗುವುದಿಲ್ಲ ಎಂಬ ನಂಬಿಕೆ ನನ್ನದು. ಆದ್ದರಿಂದ ಸದನದ ಗೌರವವನ್ನು ಎತ್ತಿಹಿಡಿಯಲು ನಾನು ಕಾರ್ಯಪಡೆ ವರದಿಯಲ್ಲಿ ಮಾಡಿರುವ ಶಿಫಾರಸಿನಂತೆ ಭಾರೀ ಪ್ರಮಾಣದ ಭೂ ಒತ್ತುವರಿಗೆ ನಿಯಂತ್ರಣ ಹೇರಲು ಕಾಯಂ ಸದನ ಸಮಿತಿ ರಚಿಸಬೇಕು ಎಂಬುದು ನನ್ನ ಅಪೇಕ್ಷೆ.
ಭ್ರಷ್ಟಾಚಾರ ಎಂಬುದು ನಮ್ಮ ಸಮಾಜದಲ್ಲಿ ಅವ್ಯಾಹತವಾಗಿದೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಇಂತಹ ವಿಚಾರಗಳ ಬಗ್ಗೆ ಮಾತನಾಡಲು ದೇಶದ ಸಂವಿಧಾನದಲ್ಲಿ ಅವಕಾಶವಿದೆ. ಭ್ರಷ್ಟಾಚಾರದ ಬಗ್ಗೆ ತನ್ನದೇ ಆದ ವ್ಯಾಖ್ಯಾನವನ್ನೂ ನೀಡಬಹುದು. ಅಷ್ಟಕ್ಕೂ ನಾನು ಮುಂದಿನ ಪೀಳಿಗೆಗಾಗಿ ಇರುವ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಭಾರೀ ಸಮಸ್ಯೆಯ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಸಸ್ಯವಿಜ್ಞಾನ ಅಥವಾ ರಸಾಯನ ವಿಜ್ಞಾನದ ಬಗ್ಗೆ ಉಪನ್ಯಾಸ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


