ಹೇಮೆ ಇದ್ದರೇನು ಹತ್ತಿರ ಶುದ್ಧ ನೀರು ದೂರ
ಎಚ್.ಡಿ.ಗುರುಪ್ರಸಾದ್
ಕ.ಪ್ರ.ವಾರ್ತೆ ಹೊಳೆನರಸೀಪುರ ಆ.12
ವರ್ಷದ 365 ದಿನವೂ ಪಕ್ಕದಲ್ಲಿ ಹೇಮಾವತಿ ನದಿಯಲ್ಲಿ ನೀರು ಹರಿಯುತ್ತಿದ್ದರೂ, ಪಟ್ಟಣದ ಕೆಲವು ಬಡಾವಣೆಗಳಲ್ಲಿ ಮಾತ್ರ ಇಂದಿಗೂ ನೀರಿನ ಬವಣೆ ತಪ್ಪಿಲ್ಲ.
ಸಮುದ್ರದ ನೆಂಟಸ್ಥನ-ಉಪ್ಪಿಗೆ ಬಡತನ ಎನ್ನುವಂತೆ ನೀರಿನ ತೆರಿಗೆ ಪಾವತಿಸುವ ಇಲ್ಲಿನ ನಾಗರಿಕರು ಕಲುಷಿತ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ. ಆದರೆ, ಇಲ್ಲಿನ ಪುರಸಭೆ ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದೆ.
ಹಿಂದೆ ಬಿದ್ದ ಪುರಸಭೆ: ಜಿಲ್ಲೆಯಲ್ಲಿನ ಎಷ್ಟೋ ಪಟ್ಟಣಗಳಲ್ಲಿ ಇಂದಿಗೂ ವಾರಕ್ಕೊಮ್ಮೆ ಅಥವಾ ಎರಡು ಬಾರಿಯಷ್ಟೆ ನೀರು ಸರಬರಾಜಾಗುತ್ತಿರುವ ನಿದರ್ಶನಗಳಿದೆ. ಅದರಲ್ಲಿಯೂ ಕುಡಿಯಲು ಸರಬರಾಜು ಮಾಡುವ ನೀರು ಕೂಡ ಸಪ್ಪೆಯಾಗಿರುವುದು ಸುಳ್ಳಲ್ಲ. ಆದರೆ ಸುದೈವವಶಾತ್ ಪಕ್ಕದಲ್ಲಿಯೇ ಹೇಮಾವತಿ ನದಿ ಹರಿಯುತ್ತಾ ಸಾಕಷ್ಟು ನೀರಿನ ಸೌಲಭ್ಯವಿದ್ದರೂ ಇಲ್ಲಿನ ಪುರಸಭೆ ಮಾತ್ರ ಅದೇ ಓಬೀರಾಯನ ಕಾಲದ ನೀರು ಶುದ್ಧೀಕರಿಸುವ ಯಂತ್ರಕ್ಕೇ ಜೋತು ಬಿದ್ದಿರುವ ಕಾರಣದಿಂದಾಗಿ ಜಿಲ್ಲೆಯಷ್ಟೇ ಅಲ್ಲದೇ, ರಾಜ್ಯದಲ್ಲಿಯೇ ಅಭಿವೃದ್ಧಿಯತ್ತ ಸಾಗುತ್ತಿರುವ ಪುರಸಭೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಇಲ್ಲಿನ ಪುರಸಭೆ ತನ್ನ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಶುದ್ಧವಾದ ಕುಡಿಯುವ ನೀರನ್ನು ನೀಡುವಲ್ಲಿ ಹಿಂದೆ ಬಿದ್ದಿದೆ.
8ರಿಂದ10ಲಕ್ಷ ಗ್ಯಾಲನ್ ನೀರು: ಅಲ್ಲಲ್ಲಿ ಕೆಲವೊಮ್ಮೆ ಮಾತ್ರ ನೀರಿನ ವ್ಯತ್ಯಾಸಗಳಾಗುವುದನ್ನು ಹೊರತುಪಡಿಸಿದರೆ, ಪುರಸಭೆಯು ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಎರಡು ಬಾರಿ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ 1ಲಕ್ಷ ಗ್ಯಾಲನ್ ಸಾಮರ್ಥ್ಯದ 7 ಟ್ಯಾಂಕುಗಳು, 50ಸಾವಿರ ಗ್ಯಾಲನ್ ಸಾಮರ್ಥ್ಯದ 1ಟ್ಯಾಂಕ್ ಹಾಗೂ 30 ಸಾವಿರ ಗ್ಯಾಲನ್ ಸಾಮರ್ಥ್ಯದ 3 ಟ್ಯಾಂಕುಗಳನ್ನು ಹೊಂದಿರುವ ಪುರಸಭೆಯು ಪ್ರತಿ ದಿನವೂ ಕನಿಷ್ಠ 8ರಿಂದ10ಲಕ್ಷ ಗ್ಯಾಲನ್ನಷ್ಟು ಕುಡಿಯುವ ನೀರನ್ನು ಸರಬರಾಜು ಮಾಡುತ್ತದೆ.
ಹೆಚ್ಚಾದ ಜನಸಾಂದ್ರತೆ: ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡಲು ಅರಕಲಗೂಡು ರಸ್ತೆಯಲ್ಲಿ ಹೊಳೆಯ ಪಕ್ಕದಲ್ಲಿಯೇ ಹಲವು ದಶಕಗಳ ಹಿಂದೆಯೇ ನೀರು ಸರಬರಾಜು ಕೇಂದ್ರವನ್ನು ಸ್ಥಾಪಿಸಲಾಗಿದೆ. ಆದರೆ ಕಾಲ ಬದಲಾಗಿದ್ದು ಊರು ಬೆಳೆದಿದೆ. ಅದರ ಜೊತೆಯಲ್ಲಿಯೇ ಜನಸಾಂದ್ರತೆಯೂ ಬದಲಾಗಿದೆ.
ಜನಸಂಖ್ಯೆ ಬೆಳೆದಂತೆಲ್ಲಾ ನೀರಿನ ಅವಶ್ಯಕತೆ ಕೂಡ ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಆದರೆ ಇಲ್ಲಿನ ನೀರು ಸರಬರಾಜು ಘಟಕದಲ್ಲಿ ಈ ಹಿಂದೆ ಇದ್ದ ಯಂತ್ರಗಳಲ್ಲಿಯೇ ಶುದ್ಧೀಕರಿಸಿದ ನೀರು ನೀಡುವುದಿರಲಿ, ಹೆಚ್ಚಿನ ಪ್ರಮಾಣದ ನೀರನ್ನು ನೀಡುವುದೂ ಕೂಡ ಕಷ್ಟಸಾಧ್ಯ ಕಾರ್ಯವಾಗಿದೆ.
ಇಲ್ಲಿನ ನೀರು ಸರಬರಾಜು ಘಟಕದಲ್ಲಿನ ಫಿಲ್ಟರ್ ಮೀಡಿಯಾ ಹಳೆಯ ಕಾಲದ್ದಾಗಿದ್ದು, ಇದನ್ನು ಕನಿಷ್ಠ ಎರಡು ವರ್ಷಗಳಿಗೊಮ್ಮೆಯಾದರೂ ಬದಲಾಯಿಸಬೇಕಿದೆ. ಆದರೆ, ಕಳೆದ ನಾಲ್ಕೈದು ವರ್ಷದಿಂದಲೂ ಇಲ್ಲಿರುವ ಫಿಲ್ಟರ್ ಮೀಡಿಯಾಬದಲಾಯಿಸಲು ಪುರಸಭೆ ಕಾಳಜಿ ವಹಿಸಿಲ್ಲ.
ಸಾಮರ್ಥ್ಯ ಸಾಲದಾಗಿದೆ: ಹೊಳೆಯಿಂದ ಸರಬರಾಜಾಗುವ ನೀರನ್ನು ಈ ಫಿಲ್ಟರ್ ಮೀಡಿಯಾದಲ್ಲಿ ಶುದ್ಧೀಕರಿಸಿ ಟ್ಯಾಂಕುಗಳಿಗೆ ಸರಬರಾಜು ಮಾಡಲಾಗುತ್ತದೆ. ಆದರೆ, ಈಗಿರುವ ಫಿಲ್ಟರ್ ಮೀಡಿಯಾದ ಸಾಮರ್ಥ್ಯ ಯಾವುದಕ್ಕೂ ಸಾಲದಾಗಿದೆ. ಇದನ್ನು ಈಗಿನ ಮತ್ತು ಮುಂದಿನ 20 ವರ್ಷದ ಜನಸಾಂದ್ರತೆ ಗಮನದಲ್ಲಿಟ್ಟುಕೊಂಡು ಹೆಚ್ಚಿನ ಸಾಮರ್ಥ್ಯವುಳ್ಳ ಫಿಲ್ಟರ್ ಮೀಡಿಯಾ ನಿರ್ಮಿಸಬೇಕಿದ್ದು, ಫಿಲ್ಟರ್ ಬಡ್ಗಳ ಸಾಮರ್ಥ್ಯವನ್ನೂ ಸಹ ಹೆಚ್ಚಿಸುವ ಅವಶ್ಯಕತೆ ಇದೆ.
ಹೊಳೆಯಿಂದ ನೀರೆತ್ತಲು ಈಗಿರುವ 50ಎಚ್ಪಿ ಸಾಮರ್ಥ್ಯದ ಮೋಟರಿನ ಬದಲಿಗೆ ಕನಿಷ್ಠವೆಂದರೂ 80ರಿಂದ 100ಎಚ್ಪಿ ಮೋಟಾರನ್ನು ಅಳವಡಿಸುವ ಅವಶ್ಯಕತೆ ಇದೆ.
ಗೌಡರ ಕಾಲದಲ್ಲಿ ಆಸ್ಟ್ರೇಲಿಯಾ ಮಾದರಿ: ಈ ಹಿಂದೆ 1997ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪಟ್ಟಣದಲ್ಲಿ ಎರಡನೇ ಹಂತದ ನೀರು ಪೂರೈಕೆ ಘಟಕವನ್ನು ಸ್ಥಾಪಿಸಿ ಇದರಲ್ಲಿ ಆಸ್ಟ್ರೇಲಿಯಾ ಮಾದರಿಯಲ್ಲಿನ ನೀರು ಶುದ್ಧೀಕರಿಸಿ ನೀಡುವ ಘಟಕವನ್ನೇನೋ ಸ್ಥಾಪಿಸಲಾಯಿತು. ಇದಕ್ಕಾಗಿ ಘಟಕದ ಆವರಣದಲ್ಲಿಯೇ ದೊಡ್ಡದಾದ ನೀರು ತುಂಬುವ ಲಗೂನ್ಗಳನ್ನೂ ಸಹ ಸ್ಥಾಪಿಸಲಾಯಿತು.
ಆದರೆ, ಇದು ಆರಂಭಗೊಂಡಿತೇ ಹೊರತು, ಕಾರಣಾಂತರಗಳಿಂದ ಮುಂದುವರಿಯದೆ, ಇದಕ್ಕಾಗಿ ವ್ಯಯಿಸಿದ ಲಕ್ಷಾಂತರ ಹಣ ನೀರಿನಲ್ಲಿಯೇ ಹೋಮ ಮಾಡಿದಂತಾಯಿತು.
ಪುರಸಭೆ ಇನ್ನಾದರೂ ಗಮನ ಹರಿಸಲಿ: ಇದರಿಂದಾಗಿ ಪಟ್ಟಣಕ್ಕೆ ಇಂದು ಸರಬರಾಜಗುತ್ತಿರುವ ನೀರು ಯಾವುದೇ ವಿಧದಲ್ಲೂ ಶುದ್ಧವಾಗಿರದ ಕಾರಣದಿಂದಾಗಿ ಇಲ್ಲಿನ ನಾಗರಿಕರು ಹಲವು ಆರೋಗ್ಯದ ಸಮಸ್ಯೆಗಳಿಂದ ಬಳಲುವಂತಾಗಿದೆ ಎಂದು ನಾಗರಿಕರು ದೂರಿರುವುದಲ್ಲದೇ, ತಾವು ನೀಡುವ ತೆರಿಗೆ ಹಣಕ್ಕೆ ಉಳಿದೆಲ್ಲಾ ಸವಲತ್ತುಗಳಿರಲಿ ಕುಡಿಯಲು ಶುದ್ಧ ನೀರನ್ನಾದರೂ ಪುರಸಭೆ ನೀಡಲಿ ಎಂಬುದು ಇಲ್ಲಿನ ನಾಗರಿಕರ ಬೇಡಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

