ಗಲ್ಲು ಕಾಯಂ
ಚಾಮರಾಜನಗರದಲ್ಲಿ 12 ವರ್ಷಗಳ ಹಿಂದೆ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಇಬ್ಬರು ಆರೋಪಿ...
ಬೆಳಗಾವಿ: ಚಾಮರಾಜನಗರದಲ್ಲಿ 12 ವರ್ಷಗಳ ಹಿಂದೆ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದು, ಹಿಂಡಲಗಾ ಜೈಲಿನಲ್ಲಿ ಆ.22ರಂದು ನೇಣಿಗೇರಿಸುವ ಸಾಧ್ಯತೆ ಇದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಭದ್ರಯ್ಯನಹಳ್ಳಿಯ ಶಿವು ಮುನಿಶೆಟ್ಟಿ ಮತ್ತು ಜಡೇಸ್ವಾಮಿ ರಂಗಶೆಟ್ಟಿ ಎಂಬುವರೇ ಗಲ್ಲು ಶಿಕ್ಷೆಗೆ ಗುರಿಯಾಗಿರುವವರು. 2001, ಅ.15ರಂದು ಭದ್ರಯ್ಯನಹಳ್ಳಿಯಲ್ಲಿ ತಿಪ್ಪೆಗುಂಡಿಗೆ ಕಸ ಎಸೆಯಲು ತೆರಳಿದ್ದ ಯುವತಿ ಮೇಲೆ ಆರೋಪಿಗಳು ಅತ್ಯಾಚಾರವೆಸಗಿ, ಆಕೆಯ ಕೊರಳಿಗೆ ಚೂಡಿದಾರದ ದುಪ್ಪಟ್ಟಾದಿಂದ ಬಿಗಿದು ಕೊಲೆ ಮಾಡಿದ್ದರು. ಈ ಕುರಿತು ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಆರೋಪಿಗಳ ಖಚಿತ ಸುಳಿವು ದೊರೆತಿರಲಿಲ್ಲ.
ಯುವತಿ ಆರೋಪಿಯೊಬ್ಬನಿಗೆ ಹಲ್ಲಿನಿಂದ ಕಚ್ಚಿದ್ದ ಗಾಯವನ್ನು ಪೊಲೀಸರು ಪತ್ತೆ ಮಾಡಿದ್ದರು. ಯುವತಿಯ ಮರಣೋತ್ತರ ಪರೀಕ್ಷೆ ಹಾಗೂ ಡಿಎನ್ಎ ಪರೀಕ್ಷಾ ವರದಿಯಿಂದ ಆರೋಪಿಗಳ ಕೃತ್ಯ ಬಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಚಾಮರಾಜನಗರ ಜಿಲ್ಲಾ ನ್ಯಾಯಾಲಯ 30-7-2005ರಂದು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದು, ಅಲ್ಲಿಯೂ ಗಲ್ಲೇ ಕಾಯಂ ಆಗಿತ್ತು. ಸುಪ್ರೀಂ ಕೋರ್ಟ್ಗೆ ಮೊರೆ ಹೋದಾಗಲೂ ಮರಣದಂಡನೆ ಶಿಕ್ಷೆ ವಿಧಿಸಿಯೇ ತೀರ್ಪು ನೀಡಿತ್ತು. 19-11-2005ರಿಂದಲೂ ಈ ಆರೋಪಿಗಳು ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇದೀಗ ಕಾರಾಗೃಹದ ಅಧಿಕಾರಿಗಳು ಆರೋಪಿಗಳಿಗೆ ಗಲ್ಲು ಕುಣಿಕೆ ಬಿಗಿಯುವ ಸಲುವಾಗಿ ಬ್ಲ್ಯಾಕ್ ವಾರಂಟ್ ತರಲು ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ತೆರಳಿದ್ದಾರೆ.
ಪ್ರತಿಕ್ರಿಯೆಗೆ ನಕಾರ: ಗಲ್ಲು ಶಿಕ್ಷೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ಪ್ರತಿಕ್ರಿಯೆ ನೀಡಲು ಬರುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವುದು ರಾಜ್ಯಮಟ್ಟದ ಉನ್ನತ ಅಧಿಕಾರಿಗಳಿಗೆ ಬಿಟ್ಟದ್ದು ಎಂದು ಕಾರಾಗೃಹದ ಡಿಐಜಿ ವೀರಭದ್ರಸ್ವಾಮಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

