ಪ್ರಧಾನ ಸುದ್ದಿ

ರುಪಯ್ಯೋ..!

ಅಮೆರಿಕದ ಡಾಲರ್‌ಗೆ 64, ಬ್ರಿಟನ್‌ನ ಪೌಂಡ್‌ಗೆ ಬರೋಬ್ಬರಿ 100...!ಇದು ಭಾರತೀಯ ರುಪಾಯಿ ಸ್ಥಿತಿಗತಿ.

Published On :

ನವದೆಹಲಿ: ಅಮೆರಿಕದ ಡಾಲರ್‌ಗೆ 64, ಬ್ರಿಟನ್‌ನ ಪೌಂಡ್‌ಗೆ ಬರೋಬ್ಬರಿ 100...!
ಇದು ಭಾರತೀಯ ರುಪಾಯಿ ಸ್ಥಿತಿಗತಿ.  ದಿನದಿಂದ ದಿನಕ್ಕೆ ರುಪಾಯಿ ಅಪಮೌಲ್ಯವಾಗುತ್ತಲೇ ಇದ್ದು, ಈ ನಿಟ್ಟಿನಲ್ಲಿ ಆರ್‌ಬಿಐ ಕೆಲ ಕ್ರಮಗಳನ್ನು ಕೈಗೊಂಡಿದೆ.
ಆಗಸ್ಟ್ 23 ರಂದು ಲಿಕ್ವಿಡಿಟಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ಆರ್‌ಬಿಐ 8000 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಲಿದೆ. ಇದಲ್ಲದೇ ಶಾಸನಬದ್ಧ ಲಿಕ್ವಿಡಿಟಿ ಅನುಪಾತ (ಎಸ್‌ಎಲ್‌ಆರ್) ಅನ್ನು ಸರಳೀಕರಿಸಿ ಬ್ಯಾಂಕುಗಳಿಗೆ ಇನ್ನಷ್ಟು ಹಣ ಹರಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.
ಡಾಲರ್‌ಗೆ 64
ಮಂಗಳವಾರ ಫಾರೆಕ್ಸ್ ಮಾರುಕಟ್ಟೆಯಲ್ಲಿ ರುಪಾಯಿ ಐತಿಹಾಸಿಕ ಕುಸಿತ ಅನುಭವಿಸಿತು. ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯ 64ಕ್ಕೆ ಕುಸಿತವಾಯಿತು. ಆಮದುದಾರರು ಡಾಲರ್‌ಗೆ ಹೆಚ್ಚಿನ ಬೇಡಿಕೆ ಇಟ್ಟಿದ್ದರಿಂದ ಡಾಲರ್ ಮೌಲ್ಯ ಹೆಚ್ಚಾಯಿತು.
ಡಾಲರ್ ಎದುರು ರುಪಾಯಿ ಮೌಲ್ಯ 64 ಮುಟ್ಟುತ್ತಿದ್ದಂತೆಯೇ ಆರ್‌ಬಿಐ, ಬ್ಯಾಂಕುಗಳ ಮೂಲಕ ಡಾಲರ್‌ಗಳನ್ನು ಮಾರಾಟ ಮಾಡಿತು. ಬಳಿಕ ರುಪಾಯಿ ಚೇತರಿಕೆಯಾಗಿ 63.25ಕ್ಕೆ ನಿಂತಿತು.
ಇದೇ ವೇಳೆ ಬ್ರಿಟನ್‌ನ ಪೌಂಡ್ ಎದುರು ರುಪಾಯಿ ಭಾರಿ ಪ್ರಮಾಣದ ಕುಸಿತ ಅನುಭವಿಸಿತು. ಇದೇ ಮೊದಲ ಬಾರಿಗೆ ಪೌಂಡ್ ಮೌಲ್ಯ 100 ಮುಟ್ಟಿತು. ಕಡೆಗೆ ಇದೂ ಕೂಡ 99.7ಕ್ಕೆ ಬಂದು ತಲುಪಿತು.
ರುಪಾಯಿ ಭಾರಿ ಪ್ರಮಾಣದಲ್ಲಿ ಅಪಮೌಲ್ಯೀಕರಣವಾಗುತ್ತಿದ್ದಂತೆ ಸ್ಟಾಂಡರ್ಡ್ ಆ್ಯಂಡ್ ಪೂರ್ ರೇಟಿಂಗ್‌ನಲ್ಲಿ ಭಾರತವನ್ನು ನೆಗೆಟಿವ್ ಔಟ್‌ಲುಕ್‌ನಲ್ಲೇ ಇಟ್ಟಿತು.
ಹೂಡಿಕೆಗೆ ವಿಪುಲ ಅವಕಾಶ
ವಿದೇಶಿ ಕರೆನ್ಸಿಯನ್ನು ಸೆಳೆಯುವ ಸಲುವಾಗಿ ಆರ್‌ಬಿಐ ಕೆಲವೊಂದು ನಿಬಂಧನೆಗಳನ್ನು ಸಡಿಲಗೊಳಿಸಿದೆ. ಈ ಮೂಲಕವಾಗಿ ಅನಿವಾಸಿ ಭಾರತೀಯರಿಗೆ ಇಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಪೋರ್ಟ್‌ಫೋಲಿಯೋ ಇನ್‌ವೆಸ್ಟ್‌ಮೆಂಟ್ ಸ್ಕೀಮ್ ಯೋಜನೆಯಡಿ ಷೇರು ಮಾರುಕಟ್ಟೆ ಮತ್ತು ಸಾಲ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಈ ಯೋಜನೆಯಡಿ ಬ್ಯಾಂಕುಗಳಲ್ಲಿ ಎನ್‌ಆರ್‌ಐಗಳಿಗಾಗಿ ವಿಶಿಷ್ಟ ಕೋಡ್ ನೀಡಲಾಗಿರುತ್ತದೆ.
ಅಂದರೆ ಬ್ಯಾಂಕುಗಳ ಗುರುತಿಸಲ್ಪಟ್ಟ ಬ್ರಾಂಚ್‌ಗಳಲ್ಲಿ ಎನ್‌ಆರ್‌ಐಗಳಿಗೆ ಒಂದು ಬಾರಿ ಷೇರುಗಳನ್ನು ಮಾರುವ ಅಥವಾ ಕೊಳ್ಳುವ ಅವಕಾಶ ಅಥವಾ ಭಾರತೀಯ ಕಂಪನಿಯ ಡಿಬೆಂಚರ್‌ಗಳಾಗಿ ಪರಿವರ್ತಿಸುವ ಅವಕಾಶ ಮಾಡಿಕೊಡಲಾಗುತ್ತದೆ. ಇದಕ್ಕಾಗಿ ಗುರುತಿಸಲ್ಪಟ್ಟ ಬ್ರಾಂಚ್‌ಗಳಲ್ಲಿ ಎನ್‌ಆರ್‌ಐ ಅಥವಾ ಎನ್‌ಆರ್‌ಓಗಳು ಖಾತೆ ತೆರೆಯಬೇಕಾಗಿದೆ.
ಸಮಾಲೋಚನೆ
ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹೆಗಾರ ರಂಗರಾಜನ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ದೇಶದ ಸದ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಅವರು ಚರ್ಚಿಸಿದರು.

ಇತರ ಕರೆನ್ಸಿ ಮತ್ತು ರುಪಾಯಿ
ಬ್ರಿಟಿಷ್ ಪೌಂಡ್ ರು. 100.52
ಯೂರೋ ರು. 84.66
ಸ್ವಿಸ್ ಫ್ರಾಂಕ್ ರು. 69.07
ಆಸ್ಟ್ರೇಲಿಯನ್ ಡಾಲರ್ ರು.  57.34
ನ್ಯೂಜಿಲೆಂಡ್ ಡಾಲರ್ ರು.  50.46
ಸಿಂಗಾಪುರ ಡಾಲರ್ ರು.  49.6

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.