ನಿದ್ದೆ ವೇಳೆ ಗುಂಡು ಹಾರಿಸಿ ಕೊಂದರು!
ನವದೆಹಲಿ: ಅವರು ಮನುಷ್ಯರಲ್ಲ, ನರರೂಪದ ರಾಕ್ಷಸರು!
ಪಾಕಿಸ್ತಾನ ಸೇನೆಯ ವ್ಯಾಘ್ರ ಮುಖ ಅನಾವರಣಗೊಂಡಿದೆ. ಭಾರತೀಯ ಸೇನೆಯನ್ನು ಎದುರಿಸುವ ಬದಲು ಪಾಕ್ನ ವಿಶೇಷ ಪಡೆ ಬೆನ್ನಿಂದ ಚೂರಿ ಹಾಕಿದೆ ಎಂಬ ಸತ್ಯ ಗೊತ್ತಾಗಿದೆ. ಆ.5ರ ಮಧ್ಯರಾತ್ರಿಯ ಬಳಿಕ ನಮ್ಮ ಐವರು ಯೋಧರು ಸಾವಿಗೀಡಾಗಿದ್ದು ಗುಂಡಿನ ಚಕಮಕಿಯಲ್ಲಲ್ಲ. ಮಲಗಿದ್ದ ಯೋಧರ ತಲೆಗೆ ಪಾಯಿಂಟ್-ಬ್ಲ್ಯಾಂಕ್ ರೇಂಜ್ನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಸೇನೆಯ ಆಂತರಿಕ ತನಿಖೆಯಿಂದ ಈ ವಿಚಾರ ಬಹಿರಂಗಗೊಂಡಿರುವುದಾಗಿ ಸಿಎನ್ಎನ್-ಐಬಿಎನ್ ಸುದ್ದಿವಾಹಿನಿ ವರದಿ ಮಾಡಿದೆ.
ಚಿರನಿದ್ದೆಗೆ ಶರಣಾದರು: ಅಂದು ಪೂಂಛ್ ಗ್ರಾಮದ ಚೀತಾ ಪೋಸ್ಟ್ನಿಂದ ಗಸ್ತು ಮುಗಿಸಿ ಡೆಲ್ಟಾ ಪೋಸ್ಟ್ಗೆ ಬಂದಿದ್ದ 6 ಮಂದಿ ಯೋಧರು ತುಂಬಾ ಸುಸ್ತಾಗಿದ್ದರು. ಹಾಗಾಗಿ ಅವರು ಅಲ್ಲೇ ನಿದ್ದೆಗೆ ಜಾರಿದರು.
ಈ ವೇಳೆ ಒಬ್ಬ ಯೋಧ ಮಾತ್ರ ಮಲಗದೇ ಸ್ವಲ್ಪ ದೂರ ತೆರಳಿದ್ದರು. ಈ ವೇಳೆ ಅಲ್ಲಿಗೆ ದಾಳಿ ನಡೆಸಿದ ಪಾಕ್ ವಿಶೇಷ ಪಡೆ ಮಲಗಿದ್ದ ಯೋಧರ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿತ್ತು. ಕೆಲವರ ತಲೆಗೆ ಮೂರು- ನಾಲ್ಕು ಗುಂಡುಗಳು ಹೊಕ್ಕಿದ್ದವು. ಹೊರಹೋಗಿದ್ದ ಯೋಧ ಬಂದು ನೋಡಿದಾಗಲೇ ಈ ಆಘಾತಕಾರಿ ದೃಶ್ಯ ಕಣ್ಣಿಗೆ ಬಿದ್ದಿತ್ತು. ಹೊರಗೆ ಹೋಗಿದ್ದ ಕಾರಣ ಆ ಯೋಧ ಮಾತ್ರ ಬದುಕುಳಿದಿದ್ದರು ಎಂದು ಆಂತರಿಕ ತನಿಖೆಯಿಂದ ತಿಳಿದುಬಂದಿದೆ.
ಎಲ್ಓಸಿ ಚಕಮಕಿ: ಪಾಕ್ ಸಂಸತ್ನಲ್ಲಿ ನಿರ್ಣಯ
ಮಾಡಿದ್ದೆಲ್ಲ ಮಾಡಿ ತನ್ನದೇನೂ ತಪ್ಪಿಲ್ಲ ಎಂಬಂತೆ ನಾಟಕವಾಡುತ್ತಿರುವ ಪಾಕಿಸ್ತಾನ ಗುರುವಾರ ಸಂಸತ್ನಲ್ಲಿ ಎಲ್ಓಸಿ ಗುಂಡಿನ ಚಕಮಕಿಗೆ ಸಂಬಂಧಿಸಿ ನಿರ್ಣಯ ಅಂಗೀಕರಿಸಿದೆ. ಜತೆಗೆ, ಭಾರತದೊಂದಿಗೆ ರಚನಾತ್ಮಕ ಹಾಗೂ ಫಲಿತಾಂಶ-ಕೇಂದ್ರಿತ ಮಾತುಕತೆ ನಡೆಸುವ ನಿರ್ಧಾರ ಕೈಗೊಂಡಿದೆ.
ಇದೇ ವೇಳೆ ಪಾಕಿಸ್ತಾನ ಸರ್ಕಾರ ಇಸ್ಲಾಮಾಬಾದ್ನಲ್ಲಿರುವ ಭಾರತ ಹೈಕಮಿಷನರ್ ಅವರನ್ನು ಕರೆಸಿ ಎಲ್ಓಸಿಯಲ್ಲಿ ಭಾರತೀಯ ಯೋಧರು ಪಾಕ್ ಸೈನಿಕರ ಹತ್ಯೆ ಮಾಡಿದ್ದಾರೆ ಎಂದು ಪ್ರತಿಭಟನೆ ಸಲ್ಲಿಸಿದೆ.
ಮತ್ತೆ ಕದನ ವಿರಾಮ ಉಲ್ಲಂಘನೆ
ಜಮ್ಮು ಮತ್ತು ಕಾಶ್ಮೀರದ ಎಲ್ಓಸಿಯಲ್ಲಿ ಬುಧವಾರ ಮತ್ತೆ ಪಾಕ್ ಕದನ ವಿರಾಮ ಉಲ್ಲಂಘಿಸಿದೆ. ಪೂಂಛ್ ಜಿಲ್ಲೆಯಲ್ಲಿ ಪಾಕ್ ಸೇನೆಯು ಒಂದೇ ದಿನದಲ್ಲಿ 2 ಬಾರಿ ಅಪ್ರಚೋದಿತ ಹಾಗೂ ನಿರಂತರ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತಿಕ್ರಿಯೆ ನೀಡಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಪೂಂಛ್- ರಜೌರಿ ವಲಯದ 225 ಕಿ.ಮೀ. ಉದ್ದದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಆ.10ರಿಂದ ನಿರಂತರವಾಗಿ ದಾಳಿ ನಡೆಯುತ್ತಿದ್ದು, ಒಟ್ಟು 28 ಬಾರಿ ಕದನ ವಿರಾಮ ಉಲ್ಲಂಘನೆ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

