ಪ್ರಧಾನ ಸುದ್ದಿ

ಕೆಪಿಎಸ್‌ಸಿ ನೇಮಕಾತಿಗೆ ಹೊಸ ರೂಪ

Published On :

ಕ.ಪ್ರ.ವಾರ್ತೆ ಬೆಂಗಳೂರು ಆ. 23-
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಮೂಲಕ ನಡೆದ ಗೆಜೆಟೆಡ್ ಪ್ರೊಬೆಷನರ್ಸ್, ಗ್ರೂಪ್ ಎ, ಬಿ ಹುದ್ದೆಗಳ ನೇರ ನೇಮಕದಲ್ಲಿ, ಅದರಲ್ಲೂ ಮುಖ್ಯವಾಗಿ ವ್ಯಕ್ತಿತ್ವ ಪರೀಕ್ಷೆಯಲ್ಲಿ ವ್ಯಾಪಕ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ ಕೆಪಿಎಸ್ಸಿ ನೇಮಕ ಪ್ರಕ್ರಿಯೆಗೆ ಹೊಸ ರೂಪ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಈ ನಿಟ್ಟಿನಲ್ಲಿ ಯುಪಿಎಸ್ಸಿ ಮಾದರಿಯಲ್ಲಿ ವ್ಯಕ್ತಿತ್ವ ಪರೀಕ್ಷೆ ಪೂರ್ಣಗೊಳ್ಳುವವರೆಗೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಗೌಪ್ಯವಾಗಿಡಲು ತೀರ್ಮಾನಿಸಿದೆ. ಅಲ್ಲದೆ, ಬಹುತೇಕ ನೇಮಕ ಪ್ರಕ್ರಿಯೆಗಳೆಲ್ಲಾ ಯುಪಿಎಸ್ಸಿ ಮಾದರಿಯಲ್ಲೇ ನಡೆಯಲಿದೆ. ಕೆಪಿಎಸ್ಸಿ ಮೂಲಕ ನಡೆದ ಪಿಡಿಒ ನೇಮಕದಲ್ಲಿ ನಡೆದ ಅಕ್ರಮ ಕುರಿತ ವರದಿಯಲ್ಲಿ 'ಕನ್ನಡಪ್ರಭ' ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿತ್ತು.
ಈ ನಿಟ್ಟಿನಲ್ಲಿ ಕೆಪಿಎಸ್ಸಿ ಪುನಾರಚನೆ ಕುರಿತಂತೆ ರಚಿಸಲಾದ ಯುಪಿಎಸ್ಸಿ ಮಾಜಿ ಅಧ್ಯಕ್ಷ ಪಿ.ಸಿ. ಹೋಟಾ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಸರ್ಕಾರ ಬಹುತೇಕ ಒಪ್ಪಿಕೊಂಡಿದೆ. ಆದರೆ, ಶೋಧನಾ ಸಮಿತಿ ಮೂಲಕ ಕೆಪಿಎಸ್ಸಿ ಸದಸ್ಯರನ್ನು ನೇಮಕ ಮಾಡಬೇಕು ಎಂಬ ಸಮಿತಿಯ ಶಿಫಾರಸನ್ನು ಸರ್ಕಾರ ತಿರಸ್ಕರಿಸಿದ್ದು, ಈಗಿನಂತೆಯೇ ರಾಜಕೀಯ ನೇಮಕವನ್ನೇ ಮುಂದುವರಿಸಲು ತೀರ್ಮಾನಿಸಿದೆ.  

ಬಿಜೆಪಿ ಸರ್ಕಾರದ ಗೋಹತ್ಯೆ ನಿಷೇಧ ತಿದ್ದುಪಡಿ ವಾಪಸ್
ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಗೀಕರಿಸಿದ ಎರಡು ತಿದ್ದುಪಡಿ ವಿಧೇಯಕಗಳನ್ನು ವಾಪಸ್ ಪಡೆಯಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಮತ್ತು ಗೋ ಸಂರಕ್ಷಣಾ ಕಾಯ್ದೆ- 1964 ಮುಂದುವರಿಯಲಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2010ರಲ್ಲಿ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಮಸೂದೆ (ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ) ಮತ್ತು 2012ರಲ್ಲಿ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಗೋ ಸಂವರ್ಧನೆ ತಿದ್ದುಪಡಿ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಅಂಗೀಕರಿಸಿತ್ತು. ಈ ಪೈಕಿ 2010ರ ಮಸೂದೆ ರಾಷ್ಟ್ರಪತಿಗಳ ಬಳಿ ಬಾಕಿ ಇದ್ದರೆ 2012ರ ತಿದ್ದುಪಡಿ ವಿಧೇಯಕ ರಾಜ್ಯಪಾಲರ ಬಳಿ ಉಳಿದುಕೊಂಡಿದೆ.

ಬಿಐಎಎಲ್ ಬಳಕೆದಾರರ ಶುಲ್ಕ ಹೆಚ್ಚಳಕ್ಕೆ ಸಮ್ಮತಿ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ತೆರಳುವ ಪ್ರಯಾಣಿಕರಿಗೆ ಕಹಿ ಸುದ್ದಿ. ಶೀಘ್ರದಲ್ಲೇ ವಿಮಾನ ನಿಲ್ದಾಣ ಬಳಕೆದಾರರ ಶುಲ್ಕ ಹೆಚ್ಚಾಗಲಿದೆ. ಇದರಿಂದ ವಿಮಾನ ಪ್ರಯಾಣವೂ ದುಬಾರಿಯಾಗಲಿದೆ. ಬಿಐಎಎಲ್‌ನಲ್ಲಿ ವಿಮಾನ ನಿಲ್ದಾಣ ಬಳಕೆದಾರರ ಶುಲ್ಕ (ಯೂಸರ್ ಫೀ) ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ವಿಮಾನ ನಿಲ್ದಾಣ ವಿಸ್ತರಣೆಗೆ ಸರ್ಕಾರದ ಷೇರು ಮೊತ್ತ ಹೆಚ್ಚಿಸಬೇಕು ಎಂಬ ಬಿಐಎಎಲ್ ಕೋರಿಕೆ ತಳ್ಳಿಹಾಕಿರುವ ಸಚಿವ ಸಂಪುಟ, ಈ ಮೊತ್ತ ಭರಿಸಲು ಬಳಕೆದಾರರ ಶುಲ್ಕ ಹೆಚ್ಚಿಸಿಕೊಳ್ಳುವಂತೆ ಸೂಚಿಸಿದೆ. ಪ್ರಸ್ತುತ ಬಿಐಎಎಲ್ ಮೂಲಕ ತೆರಳುವ ದೇಶೀಯ ಪ್ರಯಾಣಿಕರಿಗೆ 231 ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 952 ಬಳಕೆದಾರರ ಶುಲ್ಕ ವಿಧಿಸಲಾಗುತ್ತದೆ. ಇದನ್ನು ಹೆಚ್ಚಿಸಿಕೊಳ್ಳುವಂತೆ ಸೂಚಿಸಿರುವ ಸರ್ಕಾರ, ಈ ಮೊತ್ತ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಧಿಸುವ ಶುಲ್ಕಕ್ಕಿಂತ ಹೆಚ್ಚಾಗಿರಬಾರದು ಎಂದು ಹೇಳಿದೆ.

ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ...
ರಾಜ್ಯದಲ್ಲಿ ವೃತ್ತಿಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಲು ಕೊನೆಗೂ ಮುಂದಾಗಿರುವ ರಾಜ್ಯ ಸರ್ಕಾರ 2014-15ನೇ ಸಾಲಿನಿಂದ ವೃತ್ತಿಪರ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯ್ದೆ- 2006ನ್ನು ಜಾರಿಗೆ ತರಲು ತೀರ್ಮಾನಿಸಿದೆ. ಶುಕ್ರವಾರದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರವೇಶ ಮೇಲ್ವಿಚಾರಣಾ ಸಮಿತಿ ಮತ್ತು ಶುಲ್ಕ ನಿಗದಿ ಸಮಿತಿಗಳನ್ನು ರಚಿಸಲು ನಿರ್ಧರಿಸಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಿಸುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಪ್ರವೇಶ ಮೇಲ್ವಿಚಾರಣಾ ಸಮಿತಿಯಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಮತ್ತಿತರರಿರುತ್ತಾರೆ. ಅದೇ ರೀತಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಶುಲ್ಕ ನಿಗದಿ ಸಮಿತಿಯಲ್ಲಿ ಭಾರತೀಯ ವೈದ್ಯ ಮಂಡಳಿ ಪ್ರತಿನಿಧಿ ಮತ್ತಿತರರಿರುತ್ತಾರೆ.

ರೈತರಿಗೆ ಪೂರಕವಾದ ನೂತನ ಕೃಷಿ ಮಾರುಕಟ್ಟೆ ನೀತಿ
ರಾಜ್ಯದ ಎಪಿಎಂಸಿಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದು ಹಾಗೂ ರೈತರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಮತ್ತು ಬೆಲೆ ಸಿಗುವಂತೆ ಮಾಡಲು ನೂತನ ಕೃಷಿ ಮಾರಾಟ ನೀತಿ ಜಾರಿಗೆ ಸಚಿವ ಸಂಪುಟ ತೀರ್ಮಾನಿಸಿದೆ. ಎಲ್ಲಾ ಮಾರಾಟ ಚಟುವಟಿಕೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಮಾಹಿತಿ ತಂತ್ರಜ್ಞಾನ ಬಳಕೆ ಮೂಲಕ ರೈತರಿಗೆ ಪರಿಣಾಮಕಾರಿಯಾಗಿ ಮಾರುಕಟ್ಟೆ ಬೆಲೆ ಮಾಹಿತಿಯ ಪ್ರಸಾರ ಮತ್ತು ಉತ್ತಮ ಬೆಲೆ ಪಡೆಯಲು ಸ್ಪರ್ಧೆ ಹೆಚ್ಚಿಸಿ ಧಕ್ಷತೆ ಮೂಡಿಸುವುದು, ಪ್ರಾಥಮಿಕ ಕೃಷಿ ಮಾರಾಟ ಹಂತದಲ್ಲಿ ಹಣಕಾಸು ಸಂಸ್ಥೆಗಳ ಮೂಲಕ ಸಂಪರ್ಕ ಕಲ್ಪಿಸುವುದು ಮತ್ತು ಮಾರಾಟ ವಿಧಾನಗಳನ್ನು ಸರಳೀಕರಣಗೊಳಿಸುವುದು ಈ ನೀತಿಯ ಉದ್ದೇಶ.

ಅನ್ನಭಾಗ್ಯ ಯೋಜನೆಯಲ್ಲಿ ಜೋಳ, ರಾಗಿ, ಗೋದಿ
ಬಿಪಿಎಲ್ ಕಾರ್ಡ್‌ದಾರರಿಗೆ ಕೆ.ಜಿ.ಗೆ 1ರಂತೆ 30 ಕೆ.ಜಿ.ವರೆಗೆ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಯಡಿ ಅಕ್ಟೋಬರ್ ತಿಂಗಳಿನಿಂದ ಜೋಳ, ರಾಗಿ, ಗೋದಿ ಜತೆಗೆ ಕುಚ್ಚಲಕ್ಕಿಯನ್ನೂ ನೀಡಲು ಸರ್ಕಾರ ತೀರ್ಮಾನಿಸಿದೆ. ಅನ್ನ ಭಾಗ್ಯ ಯೋಜನೆಯಲ್ಲಿ ಇದುವರೆಗೆ ಕೇವಲ ಬಿಳಿ ಅಕ್ಕಿಯನ್ನು ಮಾತ್ರ ನೀಡಲಾಗುತ್ತಿತ್ತು. ಆದರೆ, ಜೋಳ, ರಾಗಿ, ಗೋದಿ ಮತ್ತು ಕುಚ್ಚಲಕ್ಕಿಗೆ ಬೇಡಿಕೆ ಬಂದಿರುವುದರಿಂದ ಇವುಗಳನ್ನು ಕೂಡ ವಿತರಿಸಲು ತೀರ್ಮಾನಿಸಲಾಗಿದೆ. ಅ. 2ರಂದು ಈ ಯೋಜನೆ ಆರಂಭವಾಗಲಿದೆ. ಅದುವರೆಗೆ ಅಗತ್ಯ ಜೋಳ, ರಾಗಿ ಸಂಗ್ರಹಿಸಲಾಗುತ್ತದೆ.

 ಇತರೆ ನಿರ್ಧಾರಗಳು

  • ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆಯನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಳಿಸಲು ಅನುಮೋದನೆ. ಬಿಪಿಎಲ್ ಕಾರ್ಡ್‌ದಾರರನ್ನು ಈ ಕಾಯ್ದೆ ವ್ಯಾಪ್ತಿಗೆ ತರಲು ನಿರ್ಧಾರ
  • ರೇಲ್ವೆ ಇಲಾಖೆಯಿಂದ ಕೋಲಾರದಲ್ಲಿ ರೈಲು ಭೋಗಿ ಕಾರ್ಖಾನೆ ಆರಂಭಿಸಲು ಕೋಲಾರ-ಶ್ರೀನಿವಾಸಪುರ ತಾಲೂಕುಗಳಲ್ಲಿ 1118 ಎಕರೆ ಭೂಮಿ ನೀಡಲು ಅನುಮೋದನೆ. ಪ್ರಸ್ತುತ 550 ಎಕರೆ ಸರ್ಕಾರಿ ಭೂಮಿ ಲಭ್ಯವಿದ್ದು, 568 ಎಕರೆ ಖಾಸಗಿ ಭೂಮಿ ಖರೀದಿಸುವ ಪ್ರಕ್ರಿಯೆ ಆರಂಭಿಸಲು 25 ಕೋಟಿ ಮಂಜೂರು
  • ರೇಲ್ವೆ ಯೋಜನೆಗಳು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಈ ಯೋಜನೆಯ ಸಮರ್ಪಕ ಜಾರಿಗಾಗಿ ಪ್ರತ್ಯೇಕ ಉಪ ವಿಭಾಗಾಧಿಕಾರಿಗಳ ನೇಮಕಕ್ಕೆ ನಿರ್ಧಾರ
  • ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಧಿ ಬಳಕೆಗೆ ಪ್ರತ್ಯೇಕ ಮಾರ್ಗಸೂಚಿ ರಚನೆ
  • ಭೂ ದಾಖಲೆಗಳನ್ನು ಸಮಗ್ರವಾಗಿ ಸಿದ್ಧಪಡಿಸುವ ಭೂಮಿ ಸಾಫ್ಟ್‌ವೇರ್ ಅಭಿವೃದ್ಧಿ. ಇದಕ್ಕಾಗಿ 8 ಕೋಟಿ ಮಂಜೂರು
  • ಗುಲ್ಬರ್ಗ ಮತ್ತು ಕಾರವಾರದಲ್ಲಿ ಹೊಸ ಸರ್ಕಾರಿ ವೈದ್ಯ ಕಾಲೇಜು ಸ್ಥಾಪನೆ ಜತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಖಾಸಗಿ ವೈದ್ಯ ಕಾಲೇಜು ಸ್ಥಾಪನೆಗೆ ಆಕಾಶ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ಅನುಮತಿ
  • ಬೆಂಗಳೂರು ಕೆಂಪೇಗೌಡ ರಸ್ತೆಯಲ್ಲಿರುವ ಕಂದಾಯ ಭವನದಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಗೆ ಅನುಕೂಲವಾಗುವಂತೆ ಭವನದ 6 ಮತ್ತು 7ನೇ ಮಹಡಿ ಮರುವಿನ್ಯಾಸ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.