ಕೋಲಾರ ಚಿನ್ನದ ಗಣಿಗೆ ಪುನಶ್ಚೇತನ
ಬೆಂಗಳೂರು: ಕೋಲಾರ ಚಿನ್ನದ ಗಣಿ ಪುನಶ್ಚೇತನದ ಟೆಂಡರ್ ಪ್ರಕ್ರಿಯೆ ಎರಡು ಮೂರು ತಿಂಗಳಲ್ಲಿ ಆರಂಭಗೊಳ್ಳಲಿದೆ ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ. ಇಂಡೋ- ಅರಬ್ ವಾಣಿಜ್ಯ ಮಹಾಸಂಸ್ಥೆ (ಐಎಸಿಸಿ) ನಗರದಲ್ಲಿ ಏರ್ಪಡಿಸಿದ್ದ 'ಟ್ರಾನ್ಸೆಂಡಿಂಗ್ ಅರಬ್ ಬಾರ್ಡರ್ಸ್ (ಟ್ಯಾಬ್)-2013' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋಲಾರ ಚಿನ್ನದ ಗಣಿ (ಕೆಜಿಎಫ್) ಪುನಶ್ಚೇತನ ಸಂಬಂಧ ಕೇಂದ್ರ ಗಣಿ ಮತ್ತು ಭೂವಿಜ್ಞಾನ ಸಚಿವರನ್ನು ಗುರುವಾರ ಭೇಟಿ ಮಾಡಿದ್ದು, ಸಮಗ್ರವಾಗಿ ಚರ್ಚಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದ ಅವರು, ಇನ್ನು ಎರಡು- ಮೂರು ತಿಂಗಳ ಒಳಗೆ ಗಣಿ ಪುನಶ್ಚೇತನ ಕುರಿತ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.
ಕೋಲಾರದಲ್ಲಿ ಕೋಚ್ ಫ್ಯಾಕ್ಟರಿ ನಿರ್ಮಾಣ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಸಂಬಂಧ ಸ್ಪಷ್ಟ ರೂಪುರೇಷೆ ರಚನೆ ಕುರಿತ ನಿರ್ಧಾರ ಇನ್ನು ಒಂದು ವಾರದಲ್ಲಿ ಕೈಗೊಳ್ಳಲಾಗುವುದು ಎಂದರು. ಎಂಎಸ್‌ಎಂಇ ಕ್ಷೇತ್ರ ದೇಶದ ಜಿಡಿಪಿಗೆ ಶೇ. 9ರಷ್ಟು ಕೊಡುಗೆ ನೀಡುತ್ತಿದ್ದು, ರಫ್ತು ಹಾಗೂ ಉತ್ಪಾದನೆಯಲ್ಲಿ ಕ್ರಮವಾಗಿ ಶೇ.36 ಮತ್ತು ಶೇ.45ರಷ್ಟು ಪಾಲು ಹೊಂದಿದೆ. ಜತೆಗೆ, ಕಳೆದ 5 ವರ್ಷದಲ್ಲಿ ಈ ಕ್ಷೇತ್ರ ಶೇ. 10ರಷ್ಟು ಪ್ರಗತಿ ಕಾಣುತ್ತಿದೆ ಎಂದರು.
ಭಾರತ ಮತ್ತು ಅರಬ್ ಮಧ್ಯೆ 110 ಬಿಲಿಯನ್ ಅಮೆರಿಕನ್ ಡಾಲರ್ ವಹಿವಾಟು ನಡೆಯುತ್ತಿದೆ. ದೇಶದ ತಜ್ಞರ ಸಲಹೆ ಮುಖೇನ ದುಬೈನಲ್ಲಿ ನಿರ್ಮಾಣಗೊಂಡಿರುವ ತರಬೇತಿ ಸಂಸ್ಥೆ ಉದ್ಘಾಟನೆ ಸೆ.3ರಂದು ನಡೆಯಲಿದ್ದು, ತಾವು ಅದರಲ್ಲೂ ಭಾಗಿಯಾಗಲಿರುವುದಾಗಿ ಹೇಳಿದರು.
ಇಲ್ಲೇ ಪರವಾಗಿಲ್ಲ: ಆರ್ಥಿಕ ಕುಸಿತದ ಬಗ್ಗೆ ಪ್ರತಿಕ್ರಿಯಿಸಿದ ಅವರು ಬೇರೆ ದೇಶಗಳಲ್ಲಿ ಇದಕ್ಕಿಂತಲೂ ವಿಷಮ ಪರಿಸ್ಥಿತಿ ಇದೆ. ಅವುಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಕೆ.ಎಚ್. ಮುನಿಯಪ್ಪ ಸುದ್ದಿಗಾರರಿಗೆ ತಿಳಿಸಿದರು.
ಭಾರತದಲ್ಲಿರುವ ಬ್ರೂನಿ ದರುಸ್ಸಲಾಂನ ಹೈಕಮಿಷನರ್ ದಟೊ ಪಡುಕಾ ಸಿದೆಕ್ ಅಲಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ, ಐಎಸಿಸಿ ಅಧ್ಯಕ್ಷ ಎಸ್. ಕೃಷ್ಣಕುಮಾರ್, ಕಾರ್ಯನಿರ್ವಾಹಕ ನಿರ್ದೇಶಕ ಆಸಿಫ್ ಇಕ್ಬಾಲ್, ಎಫ್‌ಕೆಸಿಸಿಐ ಅಧ್ಯಕ್ಷ ಆರ್. ಶಿವಕುಮಾರ್ ಹಾಜರಿದ್ದರು.
ಬಿಜಿಎಂಎಲ್ ಆಸ್ತಿ ಮಾರಾಟಕ್ಕೆ ಗ್ಲೋಬಲ್ ಟೆಂಡರ್
ನವದೆಹಲಿ: ಕೋಲಾರದಲ್ಲಿ ಚಿನ್ನದ ಗಣಿಗಾರಿಕೆ ಪುನಾರಂಭಿಸುವ ನಿಟ್ಟಿನಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿ.(ಬಿಜಿಎಂಎಲ್)ನ ಆಸ್ತಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಟೆಂಡರ್ ಕರೆಯಲು ನಿರ್ಧರಿಸಿದೆ. ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸರ್ಕಾರದ ಷರತ್ತುಗಳ ಅನುಸಾರ ಈ ಪ್ರಕ್ರಿಯೆ ನಡೆಯಲಿದೆ ಎಂದು ಗಣಿಗಾರಿಕೆ ಸಚಿವ ದಿನ್ಷಾಪಟೇಲ್ ಮಾಹಿತಿ ನೀಡಿದ್ದಾರೆ. ಆದರೆ, ಟೆಂಡರ್ ಪ್ರಕ್ರಿಯೆ ಯಾವಾಗ ಆರಂಭವಾಗುತ್ತದೆ ಎನ್ನುವ ಕುರಿತು ಅವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಭಾರತೀಯ ಭೂಗರ್ಭಶಾಸ್ತ್ರ ಸರ್ವೆ ಇಲಾಖೆಯು ಕೋಲಾರದಲ್ಲಿ ಈವರೆಗೆ ಗಣಿಗಾರಿಕೆ ಪುನಾರಂಭಿಸುವ ಕುರಿತು ಅಧ್ಯಯನ ನಡೆಸಿಲ್ಲ. ಗಣಿಕಾರ್ಯಾಚರಣೆ ಪುನಾರಂಭಿಸುವ ಮೊದಲು ಲಾಭದಾಯಕತೆ ಮತ್ತು ಹಣಕಾಸು ವಿಚಾರಗಳ ಕುರಿತು ಪರಿಶೀಲಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ. ಕೋಲಾರದಲ್ಲಿ ಚಿನ್ನದ ಗಣಿಗಾರಿಕೆ ಪುನಾರಂಭಿಸಲು ಅನುವಾಗುವಂತೆ ಅಂತಾರಾಷ್ಟ್ರೀಯ ಟೆಂಡರ್ ಕರೆಯುವ ಸರ್ಕಾರದ ಪ್ರಸ್ತಾಪಕ್ಕೆ ಸುಪ್ರೀಂಕೋರ್ಟ್ ಕಳೆದ ತಿಂಗಳು ಅನುಮತಿ ನೀಡಿತ್ತು. ಹೆಚ್ಚುತ್ತಿದ್ದ ನಷ್ಟದಿಂದಾಗಿ 2001ರಲ್ಲಿ ಕೋಲಾರದಲ್ಲಿ ಚಿನ್ನದ ಗಣಿಗಾರಿಕೆ ಸ್ಥಗಿತಗೊಳಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

