ಪ್ರಧಾನ ಸುದ್ದಿ

ಕಾಂಗ್ರೆಸ್ಸೇತರ ಮೈತ್ರಿಗೆ ಸೋಲಿನ ಆತಂಕ

Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ. 26
ರಾಜ್ಯದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳ ಮೈತ್ರಿಕೂಟ ಸ್ಥಾಪಿಸುವ ಬಿಜೆಪಿ, ಜೆಡಿಎಸ್‌ನ ಉದ್ದೇಶ ಆಡಳಿತ ಪಕ್ಷದ ಅಲೆಯಲ್ಲಿ ಕೊಚ್ಚಿಹೋಗಲಿದೆ.
ಲೋಕಸಭೆ ಉಪ ಚುನಾವಣೆ ಜತೆಗೆ ವಿಧಾನ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ಸೇತರ ಪಕ್ಷಗಳ ಹೊಂದಾಣಿಕೆ ವಿಫಲವಾಗಿದ್ದು, ಬಿಜೆಪಿ ಮತ್ತು ಕೆಜೆಪಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಮುಂದೆ ತಲೆಬಾಗುವಂತಾಗಿದೆ.
ಅದರಲ್ಲೂ ಗೆದ್ದೇ ಗೆಲ್ಲುತ್ತೇವೆ ಎನ್ನುತ್ತಿದ್ದ ಅವಿಭಜಿತ ಧಾರವಾಡ ವಿಧಾನ ಪರಿಷತ್ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ್ ಶೆಟ್ಟರ್ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಅವರೆದುರು ಸೋತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಇದರೊಂದಿಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್-ಕೆಜೆಪಿ ಮೈತ್ರಿ ಕೂಡ ಸೋಲು ಅನುಭವಿಸಿದ್ದು, ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರದ ಕುರಿತು ಬಿಜೆಪಿ ನಾಯಕರು ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ.
ಲೋಕಸಭೆ ಉಪ ಚುನಾವಣೆಯಲ್ಲಾದರೆ ಜೆಡಿಎಸ್ ನಾಯಕರ ಗೊಂದಲದ ಹೇಳಿಕೆಗಳಿಂದ ಮೈತ್ರಿ ಬಗ್ಗೆ ಗೊಂದಲವಾಗಿ ಜೆಡಿಎಸ್ ಸೋಲು ಅನುಭವಿಸಬೇಕಾಯಿತು. ಆದರೆ, ಮೇಲ್ಮನೆ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರೂ ಬಿಜೆಪಿ ಸೋಲು ಅನುಭವಿಸಿದೆ. ಜೆಡಿಎಸ್ ಜತೆಗಿನ ಮೈತ್ರಿಯೇ ಇದಕ್ಕೆ ಕಾರಣ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರಲಾರಂಭಿಸಿದೆ.
ಮೈತ್ರಿ ಬಗ್ಗೆ ಅಪಸ್ವರ: ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್ಸೇತರ ಮೈತ್ರಿಕೂಟ ಸೋಲು ಅನುಭವಿಸುತ್ತಿದ್ದಂತೆ ಜೆಡಿಎಸ್ ಜತೆ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸುವ ಬಗ್ಗೆ ಬಿಜೆಪಿಯಲ್ಲಿ ಅಪಸ್ವರ ಕೇಳಿಬರಲಾರಂಭಿಸಿದೆ. ಪಕ್ಷದ ತಳಮಟ್ಟದಿಂದಲೂ ಈ ಕುರಿತು ಚರ್ಚೆ ಆರಂಭವಾಗಿದೆ. ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಕಾರ್ಯಕರ್ತರ ವಲಯಕ್ಕೆ ಇಷ್ಟವಿರಲಿಲ್ಲ.
ಆದರೂ ಮುಖಂಡರ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳಲಾಯಿತು. ಇದರಿಂದ ಕಾರ್ಯಕರ್ತರು ಮತ್ತು ಪಕ್ಷದ ಸಾಂಪ್ರದಾಯಿಕ ಮತದಾರರು ಮತದಾನದಿಂದ ದೂರುವೇ ಉಳಿದಿದ್ದರು. ಇದೀಗ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಲು ಜೆಡಿಎಸ್ ಜತೆಗಿನ ಮೈತ್ರಿಯೇ ಕಾರಣ ಎಂದು ಬಿಜೆಪಿಯ ಒಂದು ಬಣ ವಾದ ಆರಂಭಿಸಿದೆ. ಇದರ ಬದಲು ಕೇವಲ ಕೆಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಸಾಕಿತ್ತು ಎಂಬ ಮಾತುಗಳು ಕೇಳಿಬರುತ್ತಿದೆ. ಏಕೆಂದರೆ ಜೆಡಿಎಸ್‌ನಿಂದ 2007-08ರಲ್ಲಿ ನಂಬಿಕೆ ದ್ರೋಹವಾಗಿದೆ. ಈ ಕಾರಣದಿಂದಲೇ ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು. ಹೀಗಿರುವಾಗ ಪಕ್ಷಕ್ಕೆ ದ್ರೋಹ ಬಗೆದವರೊಂದಿಗೆ ಮತ್ತೆ ಹೊಂದಾಣಿಕೆ ಮಾಡಿಕೊಳ್ಳುವುದೇಕೆ ಎಂಬುದು ಪಕ್ಷದ ಒಂದು ಗುಂಪಿನ ವಾದ. ಕಾರ್ಯಕರ್ತರ ವಲಯದಲ್ಲೂ ಈ ವಾದಕ್ಕೆ ಬೆಂಬಲ ವ್ಯಕ್ತವಾಗಿರುವುದರಿಂದ ಜೆಡಿಎಸ್ ಜತೆ ಮೈತ್ರಿ ಮುಂದುವರಿಸುವ ಬಗ್ಗೆ ಯೋಚಿಸುತ್ತಿರುವ ನಾಯಕರಿಗೆ ಸ್ವಲ್ಪ ಹಿನ್ನಡೆಯಾಗಿದೆ.
ಸೋಲಿನ ಕುರಿತು ಪರಾಮರ್ಶೆ ಆರಂಭ: ಇದೀಗ ಮೇಲ್ಮನೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿಯಲ್ಲಿ ಸೋಲಿನ ಕುರಿತಂತೆ ಪರಾಮರ್ಶೆ ಆರಂಭವಾಗಿದೆ. ಗೆದ್ದೇ ಗೆಲ್ಲುತ್ತೇವೆ ಎಂದುಕೊಂಡಿದ್ದ ಕ್ಷೇತ್ರದಲ್ಲಿ ಪಕ್ಷ ಮಗುಚಿ ಬಿದ್ದದ್ದು ಇದಕ್ಕೆ ಕಾರಣ. ಹೀಗಾಗಿ ಸೋಲಿಗಾಗಿ ಕಾರಣಗಳನ್ನು ಹುಡುಕುವ ಕೆಲಸವನ್ನು ಪಕ್ಷದ ನಾಯಕರು ಆರಂಭಿಸಿದ್ದಾರೆ.
ಈ ಕುರಿತಂತೆ ಚರ್ಚಿಸಲು ತಿಂಗಳಾಂತ್ಯಕ್ಕೆ ಪಕ್ಷದ ನಾಯಕರ ಸಭೆ ಕರೆಯಲು ತೀರ್ಮಾನಿಸಲಾಗಿದ್ದು, ಸಭೆಯಲ್ಲಿ ಸೋಲಿನ ಕುರಿತಂತೆ ಆತ್ಮಾವಲೋಕನ ಮಾಡಿಕೊಳ್ಳುವುದರ ಜತೆಗೆ ಮುಂದೆ ಏನು ಮಾಡಬೇಕು ಎಂಬ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಲೋಕಸಭೆ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಸೋಲು ಉಂಟಾಗಿರುವುದು ಆ ಪಕ್ಷದ ನಾಯಕರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಜೆಡಿಎಸ್ ಜತೆ ಮೈತ್ರಿ ಮುಂದುವರಿಸಬೇಕೇ? ಮುಂದುವರಿಸಿದರೆ ಅದು ಯಾವ ರೀತಿ ಇರಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಮೇಲ್ಮನೆಯಲ್ಲೂ 'ಕೈ'ಚಳಕ!
ಬೆಂಗಳೂರು:
ಎರಡು ದಿನಗಳ ಹಿಂದೆ 2 ಕ್ಷೇತ್ರಗಳ ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದು ಬೀಗಿದ್ದ ಆಡಳಿತಾರೂಢ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಯ 3 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ 2 ಸ್ಥಾನಗಳನ್ನು ಗೆದ್ದು ಪಾರುಪತ್ಯ ಮೆರೆದಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಿದ್ದು, ಬಿಜೆಪಿ, ಜೆಡಿಎಸ್, ಕೆಜೆಪಿ ಮೈತ್ರಿಗೆ ಮತ್ತೆ ಮುಖಭಂಗವಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.