ಪ್ರಧಾನ ಸುದ್ದಿ

ಇನ್ಫೋಸಿಸ್‌ಗೆ ಅಶೋಕ್ ವೇಮುರಿ ವಿದಾಯ

Published On :

ಬೆಂಗಳೂರು: ದೇಶದ ಐಟಿ ದಿಗ್ಗಜ ಇನ್ಫೋಸಿಸ್‌ನ ದೊಡ್ಡ ತಲೆಗಳ ನಿರ್ಗಮನದ ಸರದಿ ಮುಂದುವರಿದಿದೆ.
ಬೋರ್ಡ್ ಸದಸ್ಯ ಹಾಗೂ ಸಂಸ್ಥೆಯ ಅಮೆರಿಕದ ವ್ಯವಹಾರಗಳ ಮುಖ್ಯಸ್ಥರಾಗಿದ್ದ ಅಶೋಕ್ ವೇಮುರಿ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಇದು ಇನ್ಫೋಸಿಸ್‌ಗೆ ಮತ್ತೊಂದು ಆಘಾತ ನೀಡಿದೆ.

ವಿದಾಯ ಹೇಳಿದ ವೇಮುರಿ:  ಉತ್ಪಾದನೆ ಹಾಗೂ ಎಂಜಿನಿಯರಿಂಗ್ ಸೇವೆಗಳ ಜಾಗತಿಕ ಮುಖ್ಯಸ್ಥರೂ ಆಗಿದ್ದ ವೇಮುರಿ ಅವರು ಕಳೆದ 15 ವರ್ಷಗಳಿಂದ ಇನ್ಫೋಸಿಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ಈಗ ದಿಢೀರನೆ ಅವರು ಸಂಸ್ಥೆಗೆ ವಿದಾಯ ಹೇಳಿದ್ದಾರೆ. ಇನ್ಫೋಸಿಸ್ ಸಹಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ಸಂಸ್ಥೆಯ ಪುನರ್‌ನಿರ್ಮಾಣಕ್ಕೆ ಕ್ರಮಕೈಗೊಳ್ಳುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.
 ಕಂಪನಿಯ ವ್ಯಾವಹಾರಿಕ ಕಾರ್ಯತಂತ್ರವನ್ನು ಸಿದ್ಧಪಡಿಸಲೆಂದು ಕಾರ್ಯಕಾರಿ ಮಂಡಳಿ ಎಂಬ ಉನ್ನತ ಮಟ್ಟದ ಸಮಿತಿಯೊಂದನ್ನು ಮೂರ್ತಿ ರಚಿಸಿದ್ದರು. ವೇಮುರಿ ಅವರೂ ಈ ಮಂಡಳಿಯಲ್ಲಿ ಸ್ಥಾನ ಪಡೆದಿದ್ದರು.

ಶುಭಹಾರೈಕೆ: ಕಂಪನಿಯಿಂದ ನಿರ್ಗಮಿಸುತ್ತಿರುವ ವೇಮುರಿ ಅವರಿಗೆ ಇನ್ಫೋಸಿಸ್ ಶುಭಹಾರೈಸಿದೆ. ಸಂಸ್ಥೆಯಲ್ಲಿದ್ದಾಗ ವಿವಿಧ ನಾಯಕತ್ವ ಹುದ್ದೆ ವಹಿಸಿಕೊಂಡು ನೀವು ಕಂಪನಿಗೆ ಅಭೂತಪೂರ್ವ ಕೊಡುಗೆಯನ್ನು ನೀಡಿದ್ದೀರಿ. ಅದಕ್ಕಾಗಿ ನಿಮಗೆ ಧನ್ಯವಾದಗಳು ಹಾಗೂ ನಿಮ್ಮ ಮುಂದಿನ ಜೀವನಕ್ಕೆ ಶುಭಾಶಯಗಳು ಎಂದು ಇನ್ಫೋಸಿಸ್ ತಿಳಿಸಿದೆ.  ಇದೇ ವೇಳೆ, ಕಂಪನಿಯಲ್ಲಿ ಬದಲಾವಣೆಗಳಾಗುತ್ತಿದ್ದು ಸಂಜಯ್ ಜಲೋನಾ ಅವರು ಕಂಪನಿಯ ಉತ್ಪಾದನಾ ವಿಭಾಗದ ಜಾಗತಿಕ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಇನ್ಫಿ ಹೇಳಿದೆ. ಜಲೋನಾ ಅವರು ಸದ್ಯ ಉತ್ತರ ಅಮೆರಿಕದಲ್ಲಿ ಉತ್ಪಾದನಾ ವಿಭಾಗದ ಪ್ರಾದೇಶಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಿರ್ಗಮನದ ಸರದಿ: ಕಳೆದ ವಾರವಷ್ಟೇ ಇನ್ಫೋಸಿಸ್ ಉಪಾಧ್ಯಕ್ಷ ಹಾಗೂ ಅಮೆರಿಕದ ಹಣಕಾಸು ಸೇವೆ ಮುಖ್ಯಸ್ಥ ಸುಧೀರ್ ಚೌಧರಿ ರಾಜಿನಾಮೆ ಸಲ್ಲಿಸಿದ್ದರು. ನಂತರ ಅವರು ಎನ್‌ಐಐಟಿ ಟೆಕ್ನಾಲಜೀಸ್‌ನ ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದರು. ಜುಲೈನಲ್ಲಿ ಇನ್ಫೋಸಿಸ್‌ನ ಜಾಗತಿಕ ಮಾರಾಟ ವಿಭಾಗದ ಮುಖ್ಯಸ್ಥ ಬಸಬ್ ಪ್ರಧಾನ್ ರಾಜಿನಾಮೆ ನೀಡಿದ್ದರು. ಬಳಿಕ ಹಿರಿಯ ಉಪಾಧ್ಯಕ್ಷರಾಗಿದ್ದ ಶಾಜಿ ಫಾರೂಕ್ ಕೂಡ ಸಂಸ್ಥೆಗೆ ವಿದಾಯ ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.