ಮಹಾಲಕ್ಷ್ಮಿಗೆ ಬೇಕಂತೆ ಉರ್ದು ಬಲ್ಲ ಮಾವುತ

ಕನ್ನಡಪ್ರಭ ವಾರ್ತೆ, ಮಂಗಳೂರು, ಡಿ.9-
ಕಟೀಲು ಕ್ಷೇತ್ರದ ಆನೆಗೆ ಶೀಘ್ರದಲ್ಲಿ ಗಂಡಾನೆ ಜತೆ ಮಿಲನಕ್ಕೆ ಆಡಳಿತ ಮಂಡಳಿ ನಿಶ್ಚಯ ಮಾಡಿದೆ. ಹೀಗಾಗಿ ಚರ್ಮರೋಗ ನಿವಾರಣೆ ಮತ್ತು ಬೊಜ್ಜು ಕರಗಿಸಿಕೊಂಡು ಸುಂದರವಾಗಿ ಕಾಣಲು ಹೆಣ್ಣಾನೆ 'ಮಹಾಲಕ್ಷ್ಮಿ' ಪಿಲಿಕುಳ ನಿಸರ್ಗಧಾಮಕ್ಕೆ ತೆರಳಲಿದ್ದಾಳೆ. ಆದರೆ, ಈ ಆನೆಗೆ ಸಂವಹನ ಸಮಸ್ಯೆ ಎದುರಾಗಿದೆ.
ಮಹಾಲಕ್ಷ್ಮೀಯನ್ನು ನೋಡಿಕೊಳ್ಳುತ್ತಿದ್ದ ಈ ಹಿಂದಿನ ಮಾವುತ ಉರ್ದುವಿನಲ್ಲಿ ಕಮಾಂಡ್ ಕೊಡುತ್ತಿದ್ದರು. ಆ ಮಾವುತ ತೀರಿಕೊಂಡಿದ್ದಾರೆ. ಉರ್ದುವಿನಲ್ಲಿ ಕಮಾಂಡ್ ಕೊಡುವ ಮಾವುತರು ಸಿಗುತ್ತಿಲ್ಲ. ಕೇರಳದ ಮಾವುತರೊಬ್ಬರನ್ನು ನೇಮಿಸಲಾಗಿದೆಯಾದರೂ ಅವರ ಮಲೆಯಾಳ ಭಾಷೆಯ ಕಮಾಂಡ್ ಅನ್ನು ಆನೆ ಕೇಳುತ್ತಿಲ್ಲ!
ಬೊಜ್ಜು ಹೆಚ್ಚಾದರೆ ಆರೋಗ್ಯ ಹಾಳಾಗುತ್ತದೆ. ಪ್ರೌಢಾವಸ್ಥೆಯಲ್ಲಿ ಗರ್ಭಧರಿಸದಿದ್ದರೆ ಆನೆಯ ಮಾನಸಿಕ ಸಮತೋಲನ ಹೆಚ್ಚೂಕಡಿಮೆಯಾಗಬಹದು ಎಂಬ ವೈದ್ಯರ ಸೂಚನೆಯಂತೆ ಇದೀಗ ಆನೆಯನ್ನು ಪಿಲಿಕುಳ ನಿಸರ್ಗ ಧಾಮದಲ್ಲಿ 4-5 ತಿಂಗಳು ತರಬೇತಿ ನೀಡಿ, ಬೊಜ್ಜು ಕರಗಿಸಿ ಸಕ್ರೆಬೈಲ್ ಆನೆ ಬಿಡಾರಕ್ಕೆ ಕಳುಹಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ಕಮಾಂಡ್ ಪ್ರಾಬ್ಲಂ: ಆರೋಗ್ಯ ಹಾಳಾಗಲು ಭಕ್ತರು ಕೊಡುವ ಬಾಳೆಹಣ್ಣು ಕಾರಣವಾದರೆ ಆನೆಗೆ ಮಾವುತನ ಭಾಷೆ ಅರ್ಥವಾಗದೆ ಇರುವುದು ಇನ್ನೊಂದು ಕಾರಣ.
ಕಟೀಲು ಕ್ಷೇತ್ರದ ಆನೆ ಮಹಾಲಕ್ಷ್ಮೀಗೆ ಗೊತ್ತಿರುವ ಭಾಷೆ(ಕಮಾಂಡ್) ಉರ್ದು. ಆದರೆ ಮಾವುತ ಅನ್ವರ್ ಸಾಹೇಬ್ ಸಾವಿನ ಬಳಿಕ ಆನೆಗೆ ಸಂವಹನ ಸಮಸ್ಯೆ ಎದುರಾಗಿದೆ. ಮುಸ್ಲಿಂ ಮಾವುತರ ನೇಮಿಸಿದರೆ ತೊಡಕಾಗುತ್ತದೆ ಎಂಬ ಕಾರಣ ನೀಡಿ ಆಡಳಿತ ಮಂಡಳಿ ಮಲೆಯಾಳಿ ಮಾವುತನ ನೇಮಿಸಿದೆ. ಮಲೆಯಾಳಿ ಕಮಾಂಡ್ಗೆ ಆನೆ ಸ್ಪಂದಿಸುತ್ತಿಲ್ಲ! ಆರೋಗ್ಯ ಸುಧಾರಣೆಗೆ ಸ್ವಲ್ಪ ಸಮಯ ನಿಸರ್ಗಧಾಮದಲ್ಲಿ ಬಿಟ್ಟು ಚಿಕಿತ್ಸೆ ನೀಡಲಾಗುತ್ತದೆ. ಅಲ್ಲಿಂದ ಸಕ್ರೆಬೈಲ್ಗೆ ಕಳುಹಿಸಲು ಆಡಳಿತ ಮಂಡಳಿ ನಿರ್ಣಯಿಸಿ ಆಡಳಿತಾಧಿಕಾರಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. 'ಪಿಲಿಕುಳ ನಿಸರ್ಗಧಾಮದಲ್ಲಿ ಪಶುವೈದ್ಯರಿದ್ದಾರೆ. ಅಲ್ಲಿ 3 ತಿಂಗಳ ಚಿಕಿತ್ಸೆಗೆ ಕಳುಹಿಸುತ್ತಿದ್ದೇವೆ' ಎಂದು ಆಡಳಿತಾಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಒಗ್ಗದ ಭಾಷೆ
20 ವರ್ಷ ಹಿಂದೆ ಕಟೀಲು ದೇಗುಲಕ್ಕೆ ಉದ್ಯಮಿ ನಾಗರಾಜ ಆನೆ ದೇಣಿಗೆ ನೀಡಿದ್ದರು. ಆರಂಭದಲ್ಲಿ ಮಾವುತ ಅನ್ವರ್ ಸಾಹೇಬ್ ಪಳಗಿಸಿದ್ದರು. ಅವರು ಆನೆಗೆ ಉರ್ದುವಿನಲ್ಲಿ ಕಮಾಂಡ್ ಮಾಡುತ್ತಿದ್ದರು. ಅನ್ವರ್ ನಿಧನದ ಬಳಿಕ ಉರ್ದು ಕಮಾಂಡ್ ನೀಡುವ ಮಾವುತರೇ ಸಿಗುತ್ತಿಲ್ಲ. ಮಲೆಯಾಳಿ ಮಾವುತನ ಕಮಾಂಡ್ ಅನ್ನು ಆನೆ ಕೇಳುತ್ತಿಲ್ಲ. '2003ರ ಧಾರ್ಮಿಕ ದತ್ತಿ ಕಾಯ್ದೆಯಂತೆ 33 ವರ್ಷ ಮೇಲ್ಪಟ್ಟವರನ್ನು ಮಾವುತರಾಗಿ ನೇಮಕ ಮಾಡುವಂತಿಲ್ಲ. ಹಿಂದೂ ದೇವಸ್ಥಾನಗಳಲ್ಲಿ ಬೇರೆ ಧರ್ಮದವರನ್ನು ನೇಮಿಸುವಂತಿಲ್ಲ. ಉರ್ದು ಕಮಾಂಡ್ ಬಲ್ಲ ಹಿಂದೂ ಮಾವುತರು ಸಿಗುತ್ತಿಲ್ಲ. ಮಾವುತ ಬೇಕೆಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದೇವೆ. ಸಕ್ರೆಬೈಲ್ ಆನೆ ಬಿಡಾರದಲ್ಲಿಮಾತುಕತೆ ನಡೆಸಿದ್ದೇವೆ. ಅಲ್ಲಿ 33 ವರ್ಷ ಕೆಳಗಿನ ಮಾವುತರೂ ಯಾರೂ ಇಲ್ಲ' ಎನ್ನುತ್ತಾರೆ ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ.
ಬೆಂಗಾಲಿ, ಉರ್ದು ಮಿಶ್ರಿತ ಕಮಾಂಡ್
ಆನೆಗಳನ್ನು ಪಳಗಿಸಲು 64 ಕಮಾಂಡ್ಗಳಿವೆ. ಎಲ್ಲವೂ ಬೆಂಗಾಲಿ ಮಿಶ್ರಿತ ಉರ್ದು ಭಾಷೆ. ಮೊಘಲ್ ಆಡಳಿತ ಸಂದರ್ಭದಲ್ಲಿ ಬಂಗಾಳದ ಆನೆಗಳನ್ನು ಉರ್ದು ಮಾತನಾಡುವ ಮುಸ್ಲಿಮರು ಪಳಗಿಸಿ ತಂದಿದ್ದರು. ಅಂದಿನಿಂದ ಇಲ್ಲಿನ ಆನೆಗಳ ಭಾಷೆ ಉರ್ದು ಮಿಶ್ರಿತ ಬೆಂಗಾಲಿ ಎಂದು ಡಾ.ಚಂದ್ರಶೇಖರ್ ಹೇಳುತ್ತಾರೆ.
ಗಂಡು ಕಾಡಾನೆ ಆಯ್ಕೆ!
ಹೆಣ್ಣಾನೆ ಸಂಗಾತಿ ಆಯ್ಕೆಯಲ್ಲಿ ಚ್ಯೂಸಿ ಆಗಿರುತ್ತದೆ. ತನ್ನ ಮನಸ್ಸಿಗೆ ಒಪ್ಪುವ ದಷ್ಟಪುಷ್ಟ ಸಾಮರ್ಥ್ಯದ ಆನೆಯನ್ನು ಮಾತ್ರ ಸೇರಿಕೊಳ್ಳುತ್ತದೆ. ಕಾಡಿನಲ್ಲಿ 3 ಗಂಡಾನೆಗಳಿವೆ. ಅವುಗಳ ಜತೆ ಬಿಟ್ಟರೆ ಆಯ್ಕೆ ಮಾಡಿಕೊಳ್ಳುತ್ತವೆ. ಇಲ್ಲಿ ಇದುವರೆಗೆ ಬೆದೆಗೆ ಬಂದ ಹೆಣ್ಣಾನೆಗಳು ಸಾಕಾನೆಗಳ ಜತೆ ಲೈಂಗಿಕವಾಗಿ ಸೇರುವುದಿಲ್ಲ. ಕಾಡಾನೆಗಳು ಗಟ್ಟಿಮುಟ್ಟಾಗಿರುತ್ತವೆ. ಶಕ್ತಿಯುತವಾಗಿರುತ್ತವೆ. ಆದ್ದರಿಂದ ಇದುವರೆಗೆ ಇಲ್ಲಿಗೆ ಬಂದ ಹೆಣ್ಣಾನೆಗಳು ಕಾಡಾನೆಗಳ ಜತೆಯೇ ಸೇರುತ್ತವೆ ಎನ್ನುತ್ತಾರೆ ಡಾ. ಚಂದ್ರಶೇಖರ್.
ಆನೆಗೆ ವ್ಯಾಯಾಮ, ನಡೆದಾಟ ಇಲ್ಲದೆ ಬೊಜ್ಜು ಬಂದಿದೆ. ಪ್ರತಿದಿನ ಕಾಡಿನಲ್ಲಿ 8-10 ಕಿ.ಮೀ. ನಡೆಯಬೇಕು. ರಸ್ತೆಗಳಲ್ಲಿ ನಡೆದರೆ ಕಾಲು ಸವೆಯುತ್ತದೆ. ಚರ್ಮ ರೋಗವೂ ಕಾಣಿಸಿಕೊಂಡಿದೆ. ಆರೋಗ್ಯ ಸುಧಾರಣೆ ಮತ್ತು ಗರ್ಭಧಾರಣೆಗೆ ಆನೆಯನ್ನು ಸಕ್ರೆಬೈಲ್ಗೆ ತರುವಂತೆ ಶಿಫಾರಸು ಮಾಡಿದ್ದೇನೆ.
- ಡಾ.ಚಂದ್ರಶೇಖರ್
ಸಕ್ರೆಬೈಲ್ ಆನೆ ಬಿಡಾರದ ವೈದ್ಯ
- ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


