ಪ್ರಧಾನ ಸುದ್ದಿ

ಎಣೆಯಿಲ್ಲದ ದೌರ್ಜನ್ಯ ಕಾಣೆಯಾದ ಸೌಜನ್ಯ

Published On :

ಕನ್ನಡಪ್ರಭ ವಾರ್ತೆ ಬೆಂಗಳೂರು ಡಿ.14
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಗೆ ಮಿತಿಯೇ ಇಲ್ಲ. ದರ್ಪ, ದೌರ್ಜನ್ಯದ ಪ್ರಕರಣಗಳು ಕೆದಕಿದಷ್ಟೂ ಬೆಳಕಿಗೆ ಬರುತ್ತಿವೆ.
ಅಂತೆಯೇ ನೋವುಂಡ ನೌಕರರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿಯೂ ಸಂಸ್ಥೆಯಲ್ಲಿದ್ದಾರೆ. ಸಿಬ್ಬಂದಿಯ ಮೇಲೆ ಅಧಿಕಾರಿಗಳು ನಡೆಸುವ ದೌರ್ಜನ್ಯದ ಬಗ್ಗೆ ಗೊತ್ತಿದ್ದರೂ ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುವುದಿಲ್ಲ. ಹೀಗಾಗಿ ಕಿರುಕುಳದ ಪ್ರಕರಣಗಳು ಮುಂದುವರಿಯುತ್ತಿವೆ. ಸರ್ಕಾರ ಸಹ ಈ ಕುರಿತು ಅಷ್ಟಾಗಿ ಕಾಳಜಿ ವಹಿಸಿಲ್ಲ.
ಇದು 10 ತಿಂಗಳ ಹಿಂದಿನ ಘಟನೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ಡಿಪೋ ವ್ಯಾಪ್ತಿಯ ಬಿಎಂಟಿಸಿ ಚಾಲಕ ಯಲ್ಲಿ ರೇವಣಸಿದ್ದಪ್ಪ ಅವರಿಗೆ ಪ್ರತಿದಿನ ಒಂದೊಂದು ಮಾರ್ಗದಲ್ಲಿ ಕರ್ತವ್ಯಕ್ಕೆ ನಿಯೋಜಿಸುವುದು, ಟ್ರಿಪ್ ಪೂರೈಸಿಲ್ಲವೆಂದು ಕಿರುಕುಳ ಕೊಡುವುದು ಸಾಮಾನ್ಯವಾಗಿತ್ತು. ಇದರಿಂದ ಮಾನಸಿಕ ಖಿನ್ನತೆಗೊಳಗಾದ ರೇವಣ ಸಿದ್ದಪ್ಪ ಕೆಲಸದಿಂದ ಮುಕ್ತಿ ಪಡೆಯುವ ನಿರ್ಧಾರಕ್ಕೆ ಬಂದಿದ್ದರು. ಇದನ್ನು ಪತ್ನಿ ಮುಂದೆಯೂ ವಿವರಿಸಿದರು.
ಆಗ ಪತಿಗೆ ಧೈರ್ಯ ತುಂಬಿದ ಪತ್ನಿ ಘಟಕ ವ್ಯವಸ್ಥಾಪಕರ ಬಳಿ ತೆರಳಿ ಮಾತುಕತೆ ನಡೆಸಿದರು. ಜತೆಗೆ ಪತಿ ರೇವಣ ಸಿದ್ದಪ್ಪ ಕೂಡ ಇದ್ದರು. ಮಾತುಕತೆ ಒಂದು ಹಂತಕ್ಕೆ ಬರುತ್ತಿದೆ ಎನ್ನುವಷ್ಟರಲ್ಲಿ ವಿಷದ ಬಾಟಲಿ ಜತೆಗೆ ತಂದಿದ್ದ ರೇವಣಸಿದ್ದಪ್ಪ ಒಂದೆರಡು ಹನಿ ಕುಡಿದು ಬಿಟ್ಟರು. ತೀವ್ರ ಅಸ್ವಸ್ಥರಾಗಿದ್ದರಿಂದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಅದೃಷ್ಟವಶಾತ್ ಬದುಕುಳಿದರು. ಇಂಥ ಹತ್ತಾರು ಕಿರುಕುಳ ಪ್ರಕರಣಗಳು ಬಿಎಂಟಿಸಿಯಲ್ಲಿ ನಡೆದಿವೆ. ಆದರೆ, ಹಿರಿಯ ಅಧಿಕಾರಿಗಳನ್ನು ಎದುರು ಹಾಕಿಕೊಳ್ಳಲು ಆಗದ್ದರಿಂದ ಬೆಳಕಿಗೆ ಬಂದದ್ದು ಕಡಿಮೆ.
ದುಡ್ಡಿಲ್ಲದಿದ್ದರೂ ಹೆಚ್ಚು'ವರಿ' ಮಾಡಿದರು!: ಮಂಡ್ಯದಲ್ಲಿ ಮಾಡದ ಅಪರಾಧಕ್ಕಾಗಿ ನಿರ್ವಾಹಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಮಂಡ್ಯ ಸಾರಿಗೆ ಸಂಸ್ಥೆಯಲ್ಲಿ ಸಿದ್ದರಾಜು ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು. ಎಂದಿನಂತೆ ಬಸ್ ರೂಟ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಚೆಕ್ಕಿಂಗ್ ಇನ್ಸ್‌ಪೆಕ್ಟರ್ ಬಂದು ತಪಾಸಣೆ ಮಾಡಿದರು.
ಆಗ ಎಲ್ಲ ಪ್ಯಾಸೆಂಜರ್ ಟಿಕೆಟ್ ಪಡೆದು ಪ್ರಯಾಣ ಮಾಡುತ್ತಿದ್ದರು. ಯಾವುದೇ ಪ್ರಕರಣಗಳು ಸಿಗಲಿಲ್ಲ. ಕೊನೆಗೆ ಕಂಡಕ್ಟರ್ ಬಳಿ ಡ್ಯೂಟಿ ಮಾಡುವಾಗ 210 ಹೆಚ್ಚುವರಿ ಹಣ ಇತ್ತು ಎಂಬ ಆರೋಪ ಹೊರಿಸಿ ಕೇಸ್ ಹಾಕಿದರು. ಇದರಿಂದ ಅವಮಾನಗೊಂಡು ಸಿದ್ದರಾಜು ಅಕ್ಟೋಬರ್ ಕೊನೆ ವಾರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಂಚ ಕೊಟ್ಟರೆ ಮಾತ್ರ ಕೆಲಸ

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಗೆ ಒಳಪಡುವ ಬಾಗಲಕೋಟೆ ವಿಭಾಗೀಯ ಸಾರಿಗೆ ಘಟಕ ಸೇರಿದಂತೆ 7 ಘಟಕಗಳಲ್ಲಿ ನೌಕರರು ಮೇಲಧಿಕಾರಿಗಳಿಗೆ ಲಂಚ ಕೊಡದಿದ್ದರೆ ಅವರ ಯಾವುದೇ ಸಣ್ಣ ಕೆಲಸವೂ ಆಗುವುದಿಲ್ಲ. ಇಲ್ಲಿ ಒಟ್ಟು 2130 ಚಾಲಕ ಹಾಗೂ ನಿರ್ವಾಹಕರು ಕಾರ್ಯನಿರ್ವಹಿಸುತ್ತಿದ್ದಾರೆ. ರೂಟ್ ಹಾಕಿಸಿಕೊಳ್ಳಲೂ ಲಂಚ ಕೊಡಬೇಕು. ಕೊಡದಿದ್ದವರಿಗೆ ಬೇಡವಾದ ರೂಟ್ ಹಾಕಲಾಗುತ್ತದೆ. ಈ ಸಂಸ್ಥೆಯಲ್ಲಿ ಕೆಲಸ ನಿಯೋಜಿಸುವವರಿಂದ ಹಿಡಿದು ಡಿಪೋ ವ್ಯವಸ್ಥಾಪಕರೂ ಕಿರುಕುಳ ನೀಡುತ್ತಾರೆ. ಸರ್ಕಾರದ ಸೌಲಭ್ಯ ನೀಡುವಲ್ಲಿಯೂ ತಾರತಮ್ಯವಿದೆ. ಚಾಲಕ ಹಾಗೂ ನಿರ್ವಾಹಕರಿಗೆ ರಾಜ್ಯ ಸರ್ಕಾರ ಇತ್ತೀಚೆಗೆ ನೀಡಿದ ಶೇ.6ರಷ್ಟು ಡಿಎ ಹಣವನ್ನು ಇದುವರೆಗೆ ನೀಡಿಲ್ಲ. ಇದಕ್ಕೂ ಲಂಚ ನೀಡಬೇಕು.

ತರಬೇತಿ ಅವಧಿ ಮುಗಿಸಲು ವಿಷ ಕುಡಿದ
2008, ಮೇ 14ರಂದು ಸುರೇಶ ಮಜ್ಜಗಿ ಎಂಬವರು ಚಾಲಕರಾಗಿ ವೃತ್ತಿಗೆ ಸೇರಿಕೊಂಡಿದ್ದರು. ಐದೂವರೆ ವರ್ಷಗಳ ಕಾಲವಾದರೂ, ತರಬೇತಿ ಅವಧಿ ಮುಗಿಸಿದರೂ ಪರೀಕ್ಷಾರ್ಥ ಸೇವೆ ಎಂದು ಪರಿಗಣಿಸಿ ಸತಾಯಿಸಲಾಗುತ್ತಿತ್ತು. ಪ್ರತಿ ಬಾರಿ ಕೇಳಿದರೂ ಪ್ರಯೋಜನವಾಗುತ್ತಿರಲಿಲ್ಲ. ಇದರಿಂದ ಕಂಗಾಲಾದ ಮಜ್ಜಗಿ ಅವರು 2013, ಅ.15ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಇದರಿಂದ ಬೆದರಿದ ಅಧಿಕಾರಿಗಳು '2011, ಮಾ.29ರಂದೇ ನಿಮ್ಮನ್ನು ಪರೀಕ್ಷಾರ್ಥ ಸೇವೆಗೆ ನಿಯೋಜಿಸಲಾಗಿದೆ' ಎಂದು 2 ವರ್ಷ 7 ತಿಂಗಳ ಹಿಂದಿನ ಅವಧಿಯ ದಿನಾಂಕ ನಮೂದಿಸಿ ಆದೇಶ ಹೊರಡಿಸಿದರು. ವಿಷ ಕುಡಿಯದಿದ್ದರೆ ಇನ್ನೆಷ್ಟು ವರ್ಷಗಳ ಕಾಲ ತರಬೇತಿ ಅವಧಿಯಲ್ಲೇ ಇರುತ್ತಿದ್ದರೋ ಗೊತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.