ಪ್ರಧಾನ ಸುದ್ದಿ

ಅಕ್ಕಿ ಲೆವಿ; ಗಿರಣಿ ಮಾಲೀಕರ ಮುಷ್ಕರ

Published On :

ಕ.ಪ್ರ. ವಾರ್ತೆ, ಬೆಂಗಳೂರು, ಡಿ. 16-
'ಅನ್ನಭಾಗ್ಯ'ಕ್ಕೆ ಅಕ್ಕಿ ಹೊಂದಿಸಲು ಲೆವಿ ಹೆಚ್ಚಿಸಿರುವ ರಾಜ್ಯ ಸರ್ಕಾರದ ಅವೈಜ್ಞಾನಿಕ ನೀತಿ ಖಂಡಿಸಿ ಅಕ್ಕಿ ಗಿರಣಿ ಮಾಲೀಕರು ಅಕ್ಕಿ ಗಿರಣಿಗಳನ್ನು ಬಂದ್ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಸೋಮವಾರ ರಾಯಚೂರು, ಗಂಗಾವತಿ, ದಾವಣಗೆರೆ, ಮೈಸೂರು, ಹಾಸನ, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಗಿರಣಿ ಮಾಲೀಕರು ಅಕ್ಕಿ ಉತ್ಪಾದನೆ, ಚಟುವಟಿಕೆ ಸ್ತಬ್ಧಗೊಳಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಸುಮಾರು 120 ಅಕ್ಕಿ ಗಿರಣಿ ಮಾಲೀಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಸೋಮವಾರ ಬೆಳಗ್ಗೆಯಿಂದಲೇ ಯಾವುದೇ ರೀತಿಯ ಉತ್ಪಾದನಾ ಚಟುವಟಿಕೆಗಳು ನಡೆಯಲಿಲ್ಲ. ಎಲ್ಲೆಡೆ ಅಕ್ಕಿ ಗಿರಣಿಗಳು ಹಾಗೂ ಅಕ್ಕಿ ಹೋಲ್‌ಸೇಲ್ ಮಾರಾಟ ಮಳಿಗೆಗಳನ್ನು ಮುಚ್ಚಲಾಗಿದೆ. ಅಕ್ಕಿ ಗಿರಣಿಗಳ ಎದುರು 'ಸರ್ಕಾರದ ಲೆವಿ ಅಕ್ಕಿ ನೀತಿ ಖಂಡಿಸಿ ಅನಿರ್ದಿಷ್ಟಾವಧಿ ಹೋರಾಟ ಜಾರಿಯಲ್ಲಿದೆ' ಎಂಬ ಬ್ಯಾನರ್ ಅಳವಡಿಸಲಾಗಿದೆ. ಅಕ್ಕಿ ಗಿರಣಿಗಳಲ್ಲಿ ಸುಮಾರು 5 ಸಾವಿರ ಕೂಲಿ ಕಾರ್ಮಿಕರು, ಲಾರಿಗಳ ಚಾಲಕರು ಹಾಗೂ ಕ್ಲೀನರ್‌ಗಳೂ ಸೇರಿದಂತೆ ಒಟ್ಟು 10 ಸಾವಿರ ಕಾರ್ಮಿಕರಿಗೆ ಅಕ್ಕಿ ಗಿರಣಿಗಳ ಮಾಲೀಕರ ಮುಷ್ಕರದಿಂದಾಗಿ ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ. ಗಂಗಾವತಿಯಲ್ಲೂ ಸಿಬಿಎಸ್ ಗಂಜ್‌ನಲ್ಲಿರುವ ತಾಲೂಕು ರೈಸ್ ಮಿಲ್‌ರ್ಸ್ ಅಸೋಸಿಯೇಷನ್ ಕಚೇರಿ ಮುಂದೆ ಮಾಲೀಕರು ಪ್ರತಿಭಟನೆ ನಡೆಸಿ ಸರ್ಕಾರ ಘೋಷಣೆ ಕೂಗಿದರು. ಈ ಗಿರಣಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಕೆಲಸವಿಲ್ಲದೆ ಖಾಲಿ ಕುಳಿತಿದ್ದರು. ಅಲ್ಲದೇ ಲಾರಿ ಹಾಗೂ ವಾಹನ ಮಾಲೀಕರು ಸಹ ಕೆಲಸವಿಲ್ಲದೇ ಅಲೆಯುವಂತಾಗಿದೆ.

ದಾವಣಗೆರೆಯಲ್ಲಿ 125 ಗಿರಣಿ ಬಂದ್: ದಾವಣಗೆರೆ ತಾಲೂಕಿನಲ್ಲಿ 59, ಹರಿಹರದ 23, ಹೊನ್ನಾಳಿ 23, ಚನ್ನಗಿರಿ 19 ಸೇರಿದಂತೆ ದಾವಣಗೆರೆ ಜಿಲ್ಲಾದ್ಯಂತ 125 ಅಕ್ಕಿ ಗಿರಣಿಗಳನ್ನು ಬಂದ್ ಮಾಡಲಾಗಿದೆ. ಈ ಗಿರಣಿಗಳನ್ನೇ ಅವಲಂಬಿಸಿದ್ದ ಸುಮಾರು 5000ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಅತಂತ್ರರಾಗಿದ್ದಾರೆ. ಹೊಳೆನರಸೀಪುರ, ಮೈಸೂರು, ಶಿವಮೊಗ್ಗದಲ್ಲೂ ಗಿರಣಿ ಮಾಲೀಕರು ಕೆಲಸ ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಮಂಡ್ಯದಲ್ಲಿ 250ಕ್ಕೂ ಹೆಚ್ಚು ಗಿರಣಿ ಮಾಲೀಕರು ಹೋರಾಟಕ್ಕಿಳಿದಿದ್ದು ನ್ಯಾಯ ಸಿಗುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಕೇಳಿದ್ದೇನು?

ಸರ್ಕಾರ 'ಅನ್ನಭಾಗ್ಯ' ಯೋಜನೆಗೆ ಅಕ್ಕಿ ಹೊಂದಿಸಲು ರಾಯಚೂರು ಜಿಲ್ಲೆಯ ರೈಸ್ ಮಿಲ್‌ಗಳಿಗೆ 84,728 ಮೆಟ್ರಿಕ್ ಟನ್, ಬಳ್ಳಾರಿ ಜಿಲ್ಲೆಗೆ 81,590 ಮೆಟ್ರಿಕ್ ಟನ್, ತುಮಕೂರು 71,516 ಮೆಟ್ರಿಕ್ ಟನ್, ದಾವಣಗೆರೆಗೆ 56,658 ಮೆಟ್ರಿಕ್ ಟನ್, ಕೊಪ್ಪಳಕ್ಕೆ 51,105 ಮೆಟ್ರಿಕ್ ಟನ್ ಲೆವಿ ಅಕ್ಕಿ ನಿಗದಿಪಡಿಸಿದೆ. ಇದು ಗಿರಣಿ ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದನ್ನು ಖಂಡಿಸಿ ಅಕ್ಕಿ ಗಿರಣಿ ಮಾಲೀಕರು ಲೆವಿ ನಿಗದಿ ಅವೈಜ್ಞಾನಿಕವೆಂದು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ಅವೈಜ್ಞಾನಿಕ ಲೆವಿ ನೀತಿ ಖಂಡಿಸಿ ರಾಜ್ಯಾದ್ಯಂತ 1850 ಅಕ್ಕಿ ಗಿರಣಿಗಳು ಬಂದ್ ಆಗಿವೆ. ಇದರ ಬಿಸಿ ಮೊದಲು ಗಿರಣಿ ಕಾರ್ಮಿಕರು, ಜನ ಸಾಮಾನ್ಯರು ನಂತರ ರೈತರಿಗೆ ತಟ್ಟುತ್ತದೆ. ಆ ನಂತರ ಮಾಲೀಕರೂ ಸಂಕಷ್ಟಕ್ಕೆ ತುತ್ತಾಗುತ್ತಾರೆ. ಹೀಗಾಗಿ ಅಕ್ಕಿ ಗಿರಣಿ ಮಾಲೀಕರ ತುರ್ತು ಸಭೆ ನಡೆಸಿ 24 ಗಂಟೆಯಲ್ಲಿ ಲೆವಿ ನಿಗದಿಪಡಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು.
-ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.