ಕೆಎಂಎಫ್ ನೇಮಕಾತಿಯಲ್ಲಿ ಗೋಲ್ಮಾಲ್!
ಮಂಡ್ಯ: ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಕಟು ಸತ್ಯ ಹೊರಬಿದ್ದ ಬೆನ್ನಲ್ಲೇ ಕರ್ನಾಟಕ ಹಾಲು ಉತ್ಪಾದಕ ಮಂಡಳಿ (ಕೆಎಂಎಫ್) ನೇಮಕಾತಿ ಪ್ರಕ್ರಿಯೆಯಲ್ಲೂ ಭಾರೀ ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ.
ಧಾರವಾಡ, ಶಿವಮೊಗ್ಗ, ಬಳ್ಳಾರಿ, ಕೋಲಾರ, ಹಾಸನ, ಮಂಡ್ಯ ಹಾಲು ಒಕ್ಕೂಟಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಆಶ್ಚರ್ಯವೆಂದರೆ ಸರ್ಕಾರವೇ ಇದಕ್ಕೆ ಬೆನ್ನೆಲುಬಾಗಿ ನಿಂತಿದೆ. ತಮಗೆ ಅನುಕೂಲವಾಗುವಂತೆ ನಿಯಮ ಸಡಿಲುಗೊಳಿಸಿ ಅರ್ಹ ಅಭ್ಯರ್ಥಿಗಳಿಗೆ ನಿರಾಶೆಯುಂಟು ಮಾಡಿದೆ.
ನಿಯಮ ಬದಲಾವಣೆ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಹಾಲು ಒಕ್ಕೂಟ ಮಂಡಳಿಗೆ ನೇಮಕಾತಿ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕಾನೂನನ್ನು ಸಡಿಲಗೊಳಿಸಿದೆ. ಈ ಮೊದಲು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 30 (ಬಿ) ಅನ್ವಯ ಪಾರದರ್ಶಕತೆ ಕಾಯ್ದುಕೊಳ್ಳಲು ಯಾವುದೇ ಒಕ್ಕೂಟಗಳು ಅಥವಾ ಸಹಕಾರ ಬ್ಯಾಂಕ್ಗಳ ಮೂಲಕ ಮಾಡಿಕೊಳ್ಳುವ ನೇಮಕಾತಿಗಳಿಗೆ ಕಡ್ಡಾಯವಾಗಿ ಲಿಖಿತ ಪರೀಕ್ಷೆ ನಡೆಸಬೇಕು. ನಂತರ ಮೌಖಿಕ ಸಂದರ್ಶನದಲ್ಲಿ 5 ಅಂಕಗಳನ್ನು ನೀಡುವ ಅವಕಾಶ ಮಾಡಿಕೊಡಲಾಗಿತ್ತು.
ಆದರೆ 7 ತಿಂಗಳ ಹಿಂದಷ್ಟೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಸಹಕಾರ ಸಂಘಗಳ ಅಧಿನಿಯಮಕ್ಕೆ ತಿದ್ದುಪಡಿ ತಂದು ಲಿಖಿತ ಪರೀಕ್ಷೆ ಕಡ್ಡಾಯವಲ್ಲ. ಪದವಿ ವ್ಯಾಸಂಗದ ಶೇ.85 ಅಂಕಗಳ ಜತೆಯಲ್ಲಿ ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು ನೀಡಿ ನೇಮಕಾತಿ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಇದರಿಂದ ಹಾಲು ಒಕ್ಕೂಟ ಅಥವಾ ಡಿಸಿಸಿ ಬ್ಯಾಂಕ್ಗಳಲ್ಲಿ ಯಾವುದೇ ನೇಮಕಾತಿ ನಡೆದರೂ ಆಯಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ರಚಿಸಲಾಗುವ ನೇಮಕಾತಿ ಸಮಿತಿ ಆಯ್ಕೆಯೇ ಅಂತಿಮ ಎನ್ನುವ ತೀರ್ಮಾನ ಅಕ್ರಮಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ.
ಮಂಡ್ಯದಲ್ಲಿ ಆಗಿರುವುದೇನು?: ಮಂಡ್ಯ ಹಾಲು ಒಕ್ಕೂಟ 2013, ಅ.24ರಂದು ಜಾಹೀರಾತಿನ ಮೂಲಕ ವಿವಿಧ ಹಂತದ 138 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿತ್ತು. ಅಂದಾಜು 5000 ಅರ್ಜಿಗಳು ಬಂದಿದ್ದವು. ಪ್ರತಿ ಅರ್ಜಿಗೆ 400 ನಿಗದಿ ಮಾಡಿದ್ದರಿಂದ ಒಟ್ಟು 20 ಲಕ್ಷ ಸಂಗ್ರಹವಾಗಿತ್ತು. ಇದರಲ್ಲಿ 900 ಅಧಿಕ ಅರ್ಜಿಗಳನ್ನು ವಿವಿಧ ಕಾರಣಗಳಿಗೆ ತಿರಸ್ಕರಿಸಲಾಗಿದೆ. ಉಳಿದಂತೆ ಅಂಕಗಳ ಆಧಾರದ ಮೇಲೆ 1 ಹುದ್ದೆಗೆ 10 ಅಥವಾ 5 ಅಭ್ಯರ್ಥಿಗಳ ಆಯ್ಕೆ ಮಾದರಿಯಲ್ಲಿ ಡಿ.17ರಿಂದ ಮೌಖಿಕ ಸಂದರ್ಶನವೂ ನಡೆಯಲಿದೆ. ಡಿ.31ರೊಳಗೆ ನೇಮಕಾತಿ ಆದೇಶವನ್ನು ನೀಡಲು ಸಿದ್ಧತೆ ಮಾಡಲಾಗಿದೆ.
ಮಂಡ್ಯ ಒಕ್ಕೂಟ ಅಧ್ಯಕ್ಷ ಎಂ.ಬಿ. ಹರೀಶ್ ಅಧಿಕಾರ ಅವಧಿ 2014 ಮಾರ್ಚ್- ಏಪ್ರಿಲ್ನಲ್ಲಿ ಅಂತ್ಯಗೊಳ್ಳಲಿದೆ. ಅವಧಿ ಮುಗಿಯುವ ಮೂರು ತಿಂಗಳ ಮೊದಲು ನೇಮಕಾತಿ ಮಾಡಲು ಅವಕಾಶವಿದೆ. ಹಾಗಾಗಿ ಅತ್ಯಂತ ತರಾತುರಿಯಲ್ಲಿ ಡೈರಿಯಲ್ಲಿ ಖಾಲಿ ಇರುವ ಹುದ್ದೆಯನ್ನು ನೇಮಕಾತಿ ಮಾಡಿ ಮುಗಿಸುವ ಹುನ್ನಾರ ನಡೆದಿದೆ ಎಂದು ಬಿಜೆಪಿ ಜಿಲ್ಲಾ ನಾಯಕ ಕೆ. ಬಲರಾಂ ಆರೋಪಿಸಿದ್ದಾರೆ.
ಡೈರಿಯಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡುವ ಮುನ್ನ ಮುಖ್ಯಮಂತ್ರಿಗಳಿಗೆ 10, ಸಹಕಾರ ಸಚಿವರಿಗೆ 10, ಜಿಲ್ಲಾ ಮಂತ್ರಿಗಳಿಗೆ 10, ದೇವೇಗೌಡ ಹಾಗೂ ಚಲುವರಾಯಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರಿಗೆ ಒಂದಷ್ಟು ಹುದ್ದೆಗಳನ್ನು ನೀಡಲಾಗಿದೆ. ಉಳಿದಂತೆ ಕುದುರೆ ವ್ಯಾಪಾರ ಮೂಲಕ ಹಣ ಕೊಟ್ಟವರಿಗೆ ಹುದ್ದೆಗಳನ್ನು ಹರಾಜು ಮಾಡಿ, ಭರ್ತಿ ಮಾಡಲು ನಿರ್ಧರಿಸಿರುವ ಕ್ರಮ ವಿರೋಧಿಸಿ ಕೆಲವು ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಲು ಚಿಂತಿಸಿದ್ದಾರೆಂದು ಬಲರಾಂ ಆರೋಪಿಸಿದ್ದಾರೆ.
ಅರ್ಹರಿಗೆ ಅನ್ಯಾಯ: ಅನೇಕ ಅರ್ಹ ಮತ್ತು ಹೆಚ್ಚು ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳನ್ನು ಉದ್ದೇಶ ಪೂರ್ವಕವಾಗಿ ಸಂದರ್ಶನದಿಂದ ಹೊರಗಿಡಲಾಗಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಕೊತ್ತಿತ್ತಿ ಗ್ರಾಮದ ಪ್ರಮೀಳಾ ಎಂಬವರು ಪದವಿಯಲ್ಲಿ ಶೇ.84.47 ಅಂಕಗಳನ್ನು ಪಡಿದ್ದಾರೆ. ಅರ್ಜಿ ಸಲ್ಲಿಸುವ ಮುನ್ನ ಡಿಡಿ ಲಗತಿಸಿಲ್ಲ ಎಂದು ತಿರಸ್ಕರಿಲಾಗಿದೆ. ಹೀಗಾಗಿ ಪ್ರಮೀಳಾ ಪುನಃ ನ.23ರೊಳಗೆ ಮತ್ತೊಂದು ಅರ್ಜಿ ಜತೆ ಡಿಡಿ ಕೊಟ್ಟಿದ್ದಾರೆ. ಸ್ವೀಕೃತಿಯನ್ನೂ ಪಡೆದಿದ್ದಾರೆ. ಆದರೂ ಸಂದರ್ಶನದಿಂದ ಪ್ರಮೀಳಾ ಅವರನ್ನು ಹೊರಗಿಡಲಾಗಿದೆ. ಅದೇ ರೀತಿಯಲ್ಲಿ ಕೆಲವು ಅಭ್ಯರ್ಥಿಗಳಿಗೆ ಸಂದರ್ಶನಕ್ಕಾಗಿ ಪತ್ರ ಕಳುಹಿಸಿ, ಬೆರಳಚ್ಚಿನ ತಪ್ಪಿನಿಂದಾಗಿ ನಿಮ್ಮ ಹೆಸರು ನಮೂದಾಗಿದೆ. ಹೀಗಾಗಿ ನಿಮ್ಮ ಸಂದರ್ಶನ ರದ್ದುಪಡಿಸಲಾಗಿದೆ. ಅದಕ್ಕಾಗಿ ವಿಷಾದಿಸುತ್ತೇವೆ ಎಂಬ ಪತ್ರವನ್ನೂ ಕಳುಹಿಸಲಾಗಿದೆ.
ಹಿಂದೆ ಸರಿದ ಮೈಸೂರು ಒಕ್ಕೂಟ
ಲಿಖಿತ ಪರೀಕ್ಷೆ ಕಡ್ಡಾಯವಲ್ಲ ಎಂದ ಕೂಡಲೇ ಮೈಸೂರು ಹಾಲು ಒಕ್ಕೂಟ ಅಕ್ರಮ, ಭ್ರಷ್ಟಾಚಾರ ನಡೆಯುವುದನ್ನು ತಡೆಯಲು ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ಕೈ ಬಿಟ್ಟು ಮಾದರಿಯಾಗಿದೆ. ಆದರೆ ಮಂಡ್ಯ ಸೇರಿದಂತೆ ಉಳಿದ ಬಹುತೇಕ ಜಿಲ್ಲೆಗಳ ಹಾಲು ಒಕ್ಕೂಟಗಳು ಈಗಾಗಲೇ ನೇಮಕಾತಿಗೆ ಮುಂದಾಗಿವೆ. ನೇಮಕಾತಿ ಸಮಿತಿಯಲ್ಲಿ ಆಯಾ ಹಾಲು ಒಕ್ಕೂಟ ಅಧ್ಯಕ್ಷರು, ಕೆಎಂಎಫ್ ಪ್ರತಿನಿಧಿ, ಸಹಕಾರ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಒಕ್ಕೂಟದ ಎಂಡಿ ಇದ್ದಾರೆ. ಇವರು ಪ್ರತಿ ಅಭ್ಯರ್ಥಿಗೆ ನೀಡುವ ಗರಿಷ್ಠ 15 ಅಂಕಗಳೇ ಆಯ್ಕೆಗೆ ಸಹಕಾರಿಯಾಗಲಿವೆ ಎಂದ ಮೇಲೆ ಪಾರದರ್ಶಕ ನೇಮಕಾತಿ ತುಸು ಕಷ್ಟವೇ ಸರಿ.
- ಕೆ.ಎನ್. ರವಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

