ಅಲಂಕಾರಿಕ ಮಾತುಗಾರ

ವಿಜ್ಞಾನ ವಿದ್ಯಾರ್ಥಿಯಾಗಿದ್ದ ನಾನು ಜಿಎಸ್ಎಸ್ ಅವರಿಂದ ಪ್ರಭಾವಿತನಾಗಿಯೇ ವಿಜ್ಞಾನ ವಿಷಯ ಬಿಟ್ಟು ಕನ್ನಡ ಆನರ್ಸ್ ಆಯ್ಕೆ ಮಾಡಿಕೊಂಡೆ. ಮುಂದೆ ನಾನು ಕನ್ನಡ ಉಪಾಧ್ಯಾಯನಾಗಲು ಮತ್ತು ಕನ್ನಡ ಸಂಶೋಧಕನಾಗಲು ಅವರೇ ನನಗೆ ಪ್ರೇರೇಪಣೆ.
1949-50ರಲ್ಲಿ ನಾನು ದಾವಣಗೆರೆಯಲ್ಲಿ ಸೀನಿಯರ್ ಇಂಟರ್ಮೀಡಿಯೆಟ್ ಓದುತ್ತಿದ್ದೆ. ಜಿ.ಎಸ್. ಶಿವರುದ್ರಪ್ಪನವರು ಆಗತಾನೇ ಬಿಎ ಆನರ್ಸ್ ಓದಿಕೊಂಡು ಮೊಟ್ಟ ಮೊದಲು ಕನ್ನಡ ಅಧ್ಯಾಪಕರಾಗಿ ದಾವಣಗೆರೆಗೆ ಬಂದರು. ಅವರು ಮೊದಲ ಬಾರಿ ಪಾಠ ಮಾಡಿದ ಹಿಂದಿನ ದಿನ ಕಣ್ಣಾರೆ ಕಂಡಿದ್ದು ನೆನಪಿದೆ. ಆ ಕಾಲದಲ್ಲಿ ಕನ್ನಡ ಉಪಾಧ್ಯಾಯರು ಸೂಟ್ ಹಾಕುತ್ತಿರಲಿಲ್ಲ. ಇವರು ಸೂಟು ಬೂಟು ಹಾಕಿ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಓಡಾಡುತ್ತಿದ್ದರು. ಮಾರನೇ ದಿನ ಪಾಠ ಮಾಡಲು ಕೊಠಡಿಗೆ ಬಂದರು. ಆಗ ನಾನು ಅವರ ಮೊಟ್ಟ ಮೊದಲ ವಿದ್ಯಾರ್ಥಿ. ನೇರವಾಗಿ ಖುರ್ಚಿ ಮುಂದೆ ಕುಳಿತು ಅವರ ಪಾಠ ಕೇಳಿದೆ. ಮುಂದೆ ಅವರಿಂದ ಬಹಳ ಪ್ರಭಾವಿತನಾದೆ.
ಜಿ.ಎಸ್. ಶಿವರುದ್ರಪ್ಪ ಅವರ ಪಾಠ ಎಲ್ಲಾ ವಿದ್ಯಾರ್ಥಿಗಳಿಗೆ ಮೊದಮೊದಲು ಅರ್ಥವಾಗುತ್ತಿರಲಿಲ್ಲ. ಅಷ್ಟೊಂದು ಆಲಂಕಾರಿಕವಾಗಿ ಮಾತನಾಡೋರು. ಏಕೆಂದರೆ, ಅವರು ಕುವೆಂಪು ಅವರ ವಿದ್ಯಾರ್ಥಿ, ಕವಿ ಮತ್ತು ಯುವಕರು. ಮುಂದಿನ ದಿನಗಳಲ್ಲಿ ಅವರ ಈ ಆಲಂಕಾರಿಕ ಮಾತು, ಪಾಠವೇ ವಿದ್ಯಾರ್ಥಿಗಳಿಗೆ ಆತ್ಮೀಯವಾಯಿತು.
ಕುವೆಂಪು ಅವರ ರಾಮಾಯಣದರ್ಶನಂ ಮೊದಲ ಸಂಪುಟ ಆಗತಾನೇ ಪ್ರಕಟವಾಗಿತ್ತು. ಮಧ್ಯಾಹ್ನ ಬಿಡುವು ಸಿಕ್ಕಾಗಲೆಲ್ಲಾ ವಾರದಲ್ಲಿ 3-4 ದಿನ ಮಧ್ಯಾಹ್ನ ರಾಮಾಯಣ ದರ್ಶನಂ ಓದುತ್ತಿದ್ದರು. ಕೇವಲ ಅವರೊಬ್ಬರೇ ಓದುತ್ತಿರಲಿಲ್ಲ. ತಾವು ಓದುವ ನೆಪದಲ್ಲಿ ವಿದ್ಯಾರ್ಥಿಗಳಿಗೂ ಅದನ್ನು ತಿಳಿಸಿ ಸಂತೋಷಪಡಿಸಿದರು.
ವಿಜ್ಞಾನ ವಿದ್ಯಾರ್ಥಿಯಾಗಿದ್ದ ನಾನು ಜಿಎಸ್ಎಸ್ ಅವರಿಂದ ಪ್ರಭಾವಿತನಾಗಿಯೇ ವಿಜ್ಞಾನ ವಿಷಯ ಬಿಟ್ಟು ಕನ್ನಡ ಆನರ್ಸ್ ಆಯ್ಕೆ ಮಾಡಿಕೊಂಡೆ. ಮುಂದೆ ನಾನು ಕನ್ನಡ ಉಪಾಧ್ಯಾಯನಾಗಲು ಮತ್ತು ಕನ್ನಡ ಸಂಶೋಧಕನಾಗಲು ಅವರೇ ನನಗೆ ಪ್ರೇರೇಪಣೆ.
ನಾನು ಅಧ್ಯಾಪಕನಾದ ನಂತರವೂ ಬಹಳ ಆತ್ಮೀಯವಾಗಿ ನೋಡಿಕೊಂಡರು. ಎಷ್ಟೋ ದಿನ ಅವರ ಮನೆಯ ಭಾಗವಾಗಿದ್ದೆ ನಾನು. ಮೈಸೂರಿನಲ್ಲಿ ಹಳ್ಳಿ ಹೆಂಚು ಹಾಕಿದ ಮನೆಯಲ್ಲಿ ಅನೇಕ ತಿಂಗಳು ಇಬ್ಬರೂ ಜತೆಗಿದ್ದೆವು. ಮುಂದೆ ನಾನು ಬೇರೆ ಬೇರೆ ಕಡೆ ಹೋದರೂ ಆಗಾಗ್ಗೆ ಅವರ ಮನೆಗೆ ಬರುತ್ತಿದ್ದೆ. ಅಷ್ಟೊಂದು ಆತ್ಮೀಯವಾಗಿ ನನ್ನನ್ನು ನೋಡಿಕೊಳ್ಳುತ್ತಿದ್ದವರು ಜಿಎಸ್ಎಸ್.
ಜಿಎಸ್ಎಸ್ ಅವರ ಪತ್ನಿಗೆ ಗಂಡುಮಗುವಾಯಿತು. ಆಕೆ ಮೊದಲ ಬಾಣಂತನ ಮುಗಿಸಿಕೊಂಡು ರೈಲಿನಲ್ಲಿ ಮಗುವನ್ನು ಕರೆದುಕೊಂಡು ಮೈಸೂರಿಗೆ ಬಂದರು. ಮೈಸೂರು ರೇಲ್ವೆ ನಿಲ್ದಾಣದಲ್ಲಿ ಮಗುವಿನೊಂದಿರೆ ಅವರನ್ನು ರೈಲಿನಿಂದ ಇಳಿಸಿಕೊಂಡಿದ್ದು ನಾನು. ಅದುವರೆಗೆ ನನ್ನನ್ನು ಅವರು ನೋಡಿರಲಿಲ್ಲ. ಹೀಗಾಗಿ ನನ್ನನ್ನು ಯಾರೋ ರೇಲ್ವೆ ಕೂಲಿಯಾಳು ಅಂದುಕೊಂಡಿದ್ದರಂತೆ. ಹೀಗೆ ತಮಾಷೆಗೆ ಹೇಳುತ್ತಿದ್ದರು. ಮುಂದಿನ ದಿನಗಳಲ್ಲಿ ಜಿಎಸ್ಎಸ್ ಅವರು ಮಾತ್ರವಲ್ಲ, ಅವರ ಪತ್ನಿಯೂ ನನ್ನೊಂದಿಗೆ ಅಷ್ಟೇ ಆತ್ಮೀಯವಾಗಿದ್ದರು.
ಬೆಂಗಳೂರಿನಲ್ಲಿ ಜಿ.ಎಸ್. ಶಿವರುದ್ರಪ್ಪ ಅವರು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾಗ ನಾನು ಕೂಡ ಆ ವಿಭಾಗದಲ್ಲಿ ಕೆಲಸ ಮಾಡಿದ್ದೆ. ಅವರದ್ದು ಕಾವ್ಯ, ವಿಮರ್ಶೆ ಕ್ಷೇತ್ರವಾದರೆ ನನ್ನದು ಸಂಶೋಧನಾ ಕ್ಷೇತ್ರ. ಆದರೂ ಸಂಶೋಧಕನಾದ ನನಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ಬೇರೆ ಬೇರೆ ವಿಚಾರ ಸಂಕಿರಣಗಳಿಗೆ ಹೋಗಿ ಅಲ್ಲಿ ನನ್ನ ವಾದ ಮಂಡಿಸಲು ಅನುಕೂಲ ಮಾಡಿಕೊಟ್ಟರು.
ಇನ್ನು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅವರ ಕುರಿತು ಹೇಳುವುದಾದರೆ ಜಿಎಸ್ಎಸ್ ಅವರಿಗೆ ಸಾಹಿತ್ಯ ಎನ್ನುವುದು ರಕ್ತಗತವಾಗಿ ಬಂದಿತ್ತು. ಒಂದು ದಿನ ಅವರ ಮನೆಯಲ್ಲಿ ಇಬ್ಬರೂ ಕುಳಿತು ಮಾತನಾಡುತ್ತಿದ್ದೆವು. ಮನೆಯ ಹಿತ್ತಲಲ್ಲಿ ಹೂ ಬಿಟ್ಟಿತ್ತು. ಮಾತಿನ ಮಧ್ಯೆ ಎದ್ದುಹೋಗಿ ಒಂದು ಹೂ ಕಿತ್ತುಕೊಂಡು ಬಂದು ಅಲ್ಲೇ ಇದ್ದ ಮೇಜಿನ ಮೇಲಿಟ್ಟರು. ಕೈಗೆ ಪೆನ್ನು, ಪೇಪರ್ ತೆಗೆದುಕೊಂಡು 'ಇಲ್ಲರಳಿ ನಗುತಿದೆ...' ಎಂಬ ಕವನ ರಚಿಸಿದರು.
ಇದನ್ನು ಏಕೆ ಹೇಳಿದೆ ಎಂದರೆ ಅವರು ಎಲ್ಲವನ್ನೂ ಕಾವ್ಯಾತ್ಮಕವಾಗಿ ನೋಡುತ್ತಿದ್ದರು. ಕಾವ್ಯದ ಜತೆಗೆ ಅವರ ಮತ್ತೊಂದು ಪ್ರಮುಖ ಕ್ಷೇತ್ರ ವಿಮರ್ಶೆ. ಅವರು ರಚಿಸಿದ ಸೌಂದರ್ಯ ಮಿಮಾಂಸೆ ವಿಮರ್ಶಾ ಗ್ರಂಥ ಕನ್ನಡದ ಕುರಿತ ಸಂಶೋಧನೆ ಮಾಡುವವರಿಗೆ ಆಕರ ಗ್ರಂಥವಾಗಿದೆ.
ನಾನು ಸಂಶೋಧನೆಯತ್ತ ಹೆಚ್ಚು ಆಸಕ್ತಿ ವಹಿಸಿದ್ದರಿಂದ ಅವರ ಕಾವ್ಯ, ವಿಮರ್ಷೆ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಆದರೆ, ಅವರು ಒಬ್ಬ ವ್ಯಕ್ತಿಯಾಗಿ, ಉಪಾಧ್ಯಾಯನಾಗಿ ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸಿದ್ದನ್ನು ಚೆನ್ನಾಗಿ ಗಮನಿಸಿದ್ದೇನೆ.
ಮೊನ್ನೆತಾನೇ (ಶನಿವಾರ) ಜಿ.ಎಸ್.ಶಿವರುದ್ರಪ್ಪ ಅವರನ್ನು ಭೇಟಿ ಮಾಡಿದೆ. ಅವರು ಆಗ ಇದ್ದ ಪರಿಸ್ಥಿತಿ ನೋಡಿದಾಗಲೇ ಇವರು ಇನ್ನು ಹೆಚ್ಚು ಕಾಲ ಇರಲಾರರು ಎಂದುಕೊಂಡಿದ್ದೆ. ಅವರ ಮನೆಯವರೂ ನನ್ನಲ್ಲಿ ಇದೇ ಭಾವನೆ ವ್ಯಕ್ತಪಡಿಸಿದರು. ಇದೀಗ ಅವರು ಕಣ್ಮುಚ್ಚಿಕೊಂಡಿದ್ದು ಆಘಾತಕಾರಿ ಸಂಗತಿ.
-ಡಾ.ಚಿದಾನಂದಮೂರ್ತಿ , ಸಂಶೋಧಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


