ಪ್ರಧಾನ ಸುದ್ದಿ

ನಾಳೆ ಕಲಾಗ್ರಾಮದಲ್ಲಿ ಜಿಎಸ್‌ಎಸ್ ಅಂತ್ಯಕ್ರಿಯೆ

ನಾಳೆ ಕಲಾಗ್ರಾಮದಲ್ಲಿ ಜಿಎಸ್‌ಎಸ್ ಅಂತ್ಯಕ್ರಿಯೆ
Published On :

ಬೆಂಗಳೂರು: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ  ಅಂತ್ಯಕ್ರಿಯೆ ಗುರುವಾರ ಸಂಜೆ 5 ಗಂಟೆಗೆ ಜ್ಞಾನಭಾರತಿ ಸಮೀಪದ ಕರ್ನಾಟಕ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅತ್ಯಂತ ಸರಳವಾಗಿ ನಡೆಯಲಿದೆ.
ಜಿಲ್ಲಾಧಿಕಾರಿ ಪ್ರಕಾಶ್, ಸಾಹಿತ್ಯ ಕ್ಷೇತ್ರದ ಮುಖಂಡರೊಂದಿಗೆ ಮಂಗಳವಾರ ಕಲಾಗ್ರಾಮಕ್ಕೆ ಭೇಟಿ ನೀಡಿ ಅಂತ್ಯ ಸಂಸ್ಕಾರಕ್ಕೆ ಜಾಗ ನಿಗದಿಪಡಿಸಿದರು. ಇದಕ್ಕೆ ಸರ್ಕಾರದಿಂದಲೂ ಒಪ್ಪಿಗೆ ಪಡೆದುಕೊಂಡರು. ಜೊತೆಗೆ ಜಿಎಸ್‌ಎಸ್ ಕುಟುಂಬವೂ ಒಪ್ಪಿಗೆ ನೀಡಿದೆ.

ಜಿಎಸ್‌ಎಸ್ ದರ್ಶನ ಎಲ್ಲೆಲ್ಲಿ ?: ಜಿಎಸ್‌ಎಸ್ ಪಾರ್ಥಿವ ಶರೀರವನ್ನು ಕಿಮ್ಸ್ ಆಸ್ಪತ್ರೆಯಿಂದ ಬೆಳಗ್ಗೆ 7ಗಂಟೆಗೆ ಬನಶಂಕರಿಯಲ್ಲಿರುವ ಅವರ ನಿವಾಸಕ್ಕೆ ತರಲಾಗುತ್ತದೆ. ಬೆ.8ರಿಂದ 8.30ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ. ನಂತರ 9.30ರಿಂದ 10ಗಂಟೆವರೆಗೂ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಪಾರ್ಥಿವ ಶರೀರ ಇರಿಸಲಾಗುವುದು.  
ಬಳಿಕ 10ಗಂಟೆಗೆ ರವೀಂದ್ರ ಕಲಾಕ್ಷೇತ್ರಕ್ಕೆ ತಂದು ಮಧ್ಯಾಹ್ನ 2ಗಂಟೆವರೆಗೂ ಸಾರ್ವಜನಿಕರ ದರ್ಶನಕ್ಕಿಡಲಾಗುತ್ತದೆ.  ಇದಾದ ಬಳಿಕ ಮೈಸೂರು ರಸ್ತೆ ಮೂಲಕ ಜ್ಞಾನಭಾರತಿಯಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತದೆ. ಅಲ್ಲಿ ಗೌರವ ಸಮರ್ಪಣೆ ನಂತರ ಕರ್ನಾಟಕ ಕಲಾಗ್ರಾಮಕ್ಕೆ ಕೊಂಡೊಯ್ಯಲಾಗುವುದು.

ಯಾವುದೇ ಪೂಜೆ, ಪುನಸ್ಕಾರ ಇಲ್ಲ: ಜಿಎಸ್‌ಎಸ್ ಅವರು ಬಯಸಿದಂತೆ ಅವರು ಪಾರ್ಥಿವ ಶರೀರವನ್ನು ಚಿತೆಗೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.
   ಯಾವುದೇ ವಿಧಿವಿಧಾನಬೇಡ ಎಂದು ಜಿಎಸ್‌ಎಸ್ ಅವರು ಮೊದಲೇ ಸೂಚಿಸಿರುವುದರಿಂದ ಅಂತ್ಯಕ್ರಿಯೆ ವೇಳೆ ಯಾವುದೇ ಪೂಜೆ, ಪುನಸ್ಕಾರ ನಡೆಸದಿರಲು ತೀರ್ಮಾನಿಸಿದೆ. ಹಾಗೆಯೇ ಪೌರೋಹಿತ್ಯರಿಂದ ಕ್ರಿಯಾದಿಗಳನ್ನು ನಡೆಸಬಾರದು ಎಂದು ಕುಟುಂಬದವರು ಹೇಳಿರುವುದರಿಂದ ಅದೆಲ್ಲವನ್ನು ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದರು.

ಕಿಮ್ಸ್ ಬಳಿ ಶೋಕದ ವಾತಾವರಣ: ಸಾಹಿತಿಗಳು, ಕಲಾವಿದರು, ರಾಜಕೀಯ ಮುಖಂಡರು, ಕನ್ನಡಪರ ಸಂಘಟನೆಗಳ ಮುಖಂಡರು ಕಿಮ್ಸ್ ಆಸ್ಪತ್ರೆಯ ಶವಾಗಾರದ ಬಳಿ ಇರಿಸಲಾಗಿದ್ದ ಜಿಎಸ್‌ಎಸ್ ಅವರ ದೊಡ್ಡ ಭಾವಚಿತ್ರಕ್ಕೆ ನಮಿಸಿ ಭಾವುಕರಾಗುತ್ತಿದ್ದರು. ಇದೇವೇಳೆ ಮಲ್ಲೇಶ್ವರ, ರಾಜಾಜಿನಗರ ಸೇರಿದಂತೆ ನಗರದ ಅನೇಕ ಕಡೆ ಜಿಎಸ್‌ಎಸ್ ಭಾವಚಿತ್ರವನ್ನು ಇರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸ್ಮಾಕರ ಬೇಡ ,ಅಧ್ಯಯನ ಕೇಂದ್ರ ಸಾಕು
ಅಂತ್ಯಕ್ರಿಯೆ ತಂದೆ ಆಶಯದಂತೆ ಆಗಬೇಕು. ಅವರು ಯಾವ ತತ್ವ ಸಿದ್ಧಾಂತ ನಂಬಿದ್ದರೋ ಅದಕ್ಕೆ  ಬದ್ಧವಾಗಿಯೇ ನಡೆಯಬೇಕು. ಅವರ ಚಿಂತನೆಗೆ ವಿರುದ್ಧವಾಗಿ ಏನೂ ನಡೆಯಬಾರದು. ಹೀಗಾಗಿ ಅಂತ್ಯಕ್ರಿಯೆ ಅವರ ಇಚ್ಛೆಯಂತೆಯೇ ನಡೆಯಲಿದೆ. ಯಾವುದೇ ಧಾರ್ಮಿಕ ವಿಧಿ ವಿಧಾನವಿಲ್ಲದೆ ತುಂಬಾ ಸರಳ ರೀತಿಯಲ್ಲಿ ನೆರವೇರಲಿದೆ.
ತಂದೆಯವರ ಸಿದ್ಧಾಂತದಂತೆ ಕಲಾಗ್ರಾಮದಲ್ಲಿ ಅಂತ್ಯಕ್ರಿಯೆ ನಡೆದರೂ ಅಲ್ಲಿ ಯಾವುದೇ ಸ್ಮಾರಕ, ಸಮಾಧಿ ಬೇಡ. ಬದಲಾಗಿ ಅಲ್ಲೊಂದು ಗ್ರಂಥಾಲಯ ಅಥವಾ ಅಧ್ಯಯನ ಕೇಂದ್ರ ತೆರೆಯಬೇಕು. ಅಲ್ಲಿ ಅನೇಕ ಸಾಹಿತಿಗಳ ಕೃತಿಗಳನ್ನು ಸಂಗ್ರಹಿಸಿಡಬೇಕು.
- ಜಯದೇವ್, ಜಿಎಸ್‌ಎಸ್ ಪುತ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.