ಪ್ರಧಾನ ಸುದ್ದಿ

ಯಡಿಯೂರಪ್ಪ ರಾಜಿನಾಮೆಗೆ ಲೋಕಾ ತಪ್ಪು ಕಾರಣವಾಯ್ತೆ?

ಯಡಿಯೂರಪ್ಪ ರಾಜಿನಾಮೆಗೆ ಲೋಕಾ ತಪ್ಪು ಕಾರಣವಾಯ್ತೆ?
Published On :

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವಂಥ ಸನ್ನಿವೇಶ ನಿರ್ಮಾಣವಾಗುವುದಕ್ಕೆ ಲೋಕಾಯುಕ್ತ ಅಧಿಕಾರಿಗಳು ಮಾಡಿದ ತಪ್ಪು ದಾಖಲೆ ಸಂಗ್ರಹ ಕಾರಣವಾಯ್ತೆ?
ಇಂಥದೊಂದು ಅನುಮಾನಕ್ಕೆ ಕಾರಣವಾಗುವಂತ ಅಧಿಕೃತ ದಾಖಲೆಗಳು ಈಗ ಲಭ್ಯವಾಗಲಾರಂಭಿಸಿವೆ. ಈ ಕಡತಗಳಲ್ಲಿ ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆಯನ್ನು ಮಟ್ಟ ಹಾಕುವುದಕ್ಕೆ ಭಾರಿ ಪ್ರಯತ್ನ ನಡೆಸಿದ ಅಂಶಗಳು ಅನಾವರಣವಾಗುತ್ತಿದೆ.
2011ರ ಜುಲೈ 27ರಂದು ಅಂದಿನ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ್ ಹೆಗ್ಡೆ ಸರ್ಕಾರಕ್ಕೆ ಅಕ್ರಮ ಗಣಿಗಾರಿಕೆಯ ತನಿಖಾ ವರದಿಯನ್ನು ಸಲ್ಲಿಸಿದ್ದರು. ಆ ವರದಿಯ 27ನೇ ಅಧ್ಯಾಯದಲ್ಲಿ ಜಿಂದಾಲ್ ಸಂಸ್ಥೆಗೆ ಸೇರಿದ ಸೌತ್ ವೆಸ್ಟ್ ಮೈನಿಂಗ್ ಕಂಪನಿಯ ಪರವಾನಗಿ ನವೀಕರಿಸುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಹಕರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಎಸ್‌ವೈ ಕುಟುಂಬ ವರ್ಗದವರು ಸದಸ್ಯರಾಗಿರುವ ಪ್ರೇರಣಾ ಟ್ರಸ್ಟ್‌ಗೆ ಜಿಂದಾಲ್ ಸಂಸ್ಥೆ 10 ಕೋಟಿ ದೇಣಿಗೆ ನೀಡಿದೆ. ಪರವಾನಗಿ ನವೀಕರಿಸಿದ್ದಕ್ಕಾಗಿ ಈ ಸಂಸೆ ನೀಡಿದ ಕಪ್ಪ ಕಾಣಿಗೆ ರೂಪದಲ್ಲಿ ದೇಣಿಗೆ ನೀಡಿದೆ. ಹೀಗಾಗಿ ಈ ಬಗ್ಗೆ ಕ್ರಿಮಿನಲ್ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಲೋಕಾಯುಕ್ತರು ವರದಿ ನೀಡಿದ್ದರು. ಇದು ಯಡಿಯೂರಪ್ಪ ಅವರ ಮೇಲೆ ಅಕ್ರಮ ಗಣಿಗಾರಿಕೆಯ ಕಳಂಕ ಹಚ್ಚಿದ್ದು ಮಾತ್ರವಲ್ಲ, ಅವರು ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವಂತಹ ಸನ್ನಿವೇಶ ನಿರ್ಮಿಸಿತು.
ಸಿಎಂ ಆಗಿದ್ದಾಗ ಅಗಿರಲಿಲ್ಲ: 'ಕನ್ನಡಪ್ರಭ'ಕ್ಕೆ ಲಭ್ಯವಾಗಿರುವ ದಾಖಲೆ ಪ್ರಕಾರ, ಗಣಿಗಾರಿಕೆ ಪರವಾನಗಿ ನವೀಕರಣ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿರಲಿಲ್ಲ!      


ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ನವೀಕರಣ ನಡೆದಿತ್ತು. ಹೀಗಾಗಿ ತಾವು ಅಧಿಕಾರದಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ನಡೆದ ಆಡಳಿತಾತ್ಮಕ ಪ್ರಕ್ರಿಯೆಗೆ ಯಡಿಯೂರಪ್ಪ ಹೇಗೆ ಹೊಣೆಗಾರರಾದರು? ಎಂಬ ಪ್ರಶ್ನೆ ಉದ್ಭವವಾಗಿದೆ.
ಗೊಂದಲಕ್ಕೆ ಕಾರಣ ಏನು?: ಆದರೂ ಕೂಡಾ ಯಡಿಯೂರಪ್ಪ ಅವರೇ ಸೌತ್ ವೆಸ್ಟ್ ಮೈನಿಂಗ್ ಸಂಸ್ಥೆ ಪರವಾನಗಿ ನೀಡಿದರು ಎಂಬರ್ಥದ ದಾಖಲೆ ಲೋಕಾಯುಕ್ತ ವರದಿ ಸೇರುವುದಕ್ಕೆ ಕಾರಣವೇನು? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಆದರೆ ಇಂಥ ಗೊಂದಲಕ್ಕೆ ಕಾರಣವಾಗುವ ಬೆಳವಣಿಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿದೆ. 2010ರ ಮಾರ್ಚ್ 18 ರಂದು ಕೇಂದ್ರ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸೌತ್ ವೆಸ್ಟ್ ಮೈನಿಂಗ್ ಸಂಸ್ಥೆಗೆ ಸಂಬಂಧಿಸಿದಂತೆ ಯಾವುದಾದರೂ ತಡೆಯಾಜ್ಞೆ ಇದೆಯೇ? ಎಂದು ಪ್ರಶ್ನಿಸಿ ಅಂದಿನ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದಕ್ಕೆ ರಾಜ್ಯ ಸರ್ಕಾರದ ಗಣಿ, ಭೂವಿಜ್ಞಾನ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಗಳ ಕಚೇರಿಯಿಂದ 2010 ಮಾರ್ಚ್ 23ರಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟೀಕರಣ ನೀಡಲಾಗಿತ್ತು. ಈ ಸಂಸ್ಥೆಗೆ ಸಂಬಂಧಿಸಿದಂತೆ ಯಾವುದೇ ತಡೆಯಾಜ್ಞೆ ಇಲ್ಲ ಎಂದು ಹೇಳಲಾಗಿತ್ತು. ಆದರೆ ಈ ದಾಖಲೆ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿದ್ದು, ಸೌತ್ ವೆಸ್ಟ್ ಮೈನಿಂಗ್ ಸಂಸ್ಥೆಗೆ ಯಡಿಯೂರಪ್ಪ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಅನುಮಾನ ಪಡುವುದಕ್ಕೆ ಮತ್ತು ಅವರ ರಾಜೀನಾಮೆಗೆ ಕಾರಣವಾಗುವಂಥ ಸ್ಥಿತಿಯನ್ನು ನಿರ್ಮಿಸಿತ್ತು.
ಇನ್ನಷ್ಟು ದಾಖಲೆ: ಇದರ ಜತೆಗೆ ಬಿ.ಎಸ್. ಯಡಿಯೂರಪ್ಪ ಸೌತ್ ವೆಸ್ಟ್ ಮೈನಿಂಗ್ ಸಂಸ್ಥೆಗೆ ಲಾಭವಾಗುವಂಥ ಯಾವುದೇ ನಿರ್ಣಯ ತೆಗೆದುಕೊಂಡಿರಲಿಲ್ಲ ಎಂಬುದಕ್ಕೆ ಪೂರಕವಾಗುವ ದಾಖಲೆಗಳೂ ಈಗ ಲಭಿಸುತ್ತಿವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರು ಮಿನರಲ್ಸ್ ಸಂಸ್ಥೆ (ಎಂಎಂಎಲ್ ) ನಷ್ಟದಲ್ಲಿತ್ತು. ವೈಜ್ಞಾನಿಕ ವಿಧಾನದಲ್ಲಿ ರಾಯಧನ ಸರ್ಕಾರಕ್ಕೆ ಸಂದಾಯವಾಗುತ್ತಿರಲಿಲ್ಲ. ಎಂಎಂಎಲ್ ಮೂಲಕ ಗಣಿಗಾರಿಕೆ ಮತ್ತು ಅದಿರು ಸಾಗಣೆ ಮಾಡುವ ಸಂಸ್ಥೆಗಳು ಕಡಿಮೆ ರಾಯಧನವನ್ನು ಸರ್ಕಾರದ ಬೊಕ್ಕಸಕ್ಕೆ ನೀಡುತ್ತಿದ್ದರು. 1997ರಿಂದ 2010- 11ರವರೆಗೆ ಶೇ.6ರ ದರದಲ್ಲಿ ರಾಯಧನವನ್ನು ವಸೂಲು ಮಾಡಲಾಗುತ್ತಿತ್ತು. ಹೀಗಾಗಿ ಎಂಎಂಎಲ್ ಉಳಿಸಬೇಕು. ಜತೆಗೆ ಮೌಲ್ಯವರ್ಧಿತ ಗಣಿಗಾರಿಕೆ ನಡೆಸಬೇಕೆಂಬ ನಿರ್ಧಾರಕ್ಕೆ ಬಂದ ಯಡಿಯೂರಪ್ಪ, ಗಣಿ ಸಂಸ್ಥೆಗಳು ನೀಡಬೇಕಿದ್ದ ರಾಯಧನದಲ್ಲಿ ಪರಿಷ್ಕರಣೆ ಮಾಡಿದ್ದರು. ಸೌತ್ ವೆಸ್ಟ್ ಮೈನಿಂಗ್ ಸಂಸ್ಥೆ ನೀಡುತ್ತಿದ್ದ ಶೇ.6ರ ರಾಯಧನವನ್ನು ಶೇ.50ಕ್ಕೆ ಹೆಚ್ಚಿಸಲು ನಿರ್ಧರಿಸಿದರು. ಮಾತ್ರವಲ್ಲ 2011ರಲ್ಲಿ ಶೇ.50ರ ರಾಯಧನದಲ್ಲಿ 1746801.520 ಸಂಗ್ರಹಿಸಲಾಗಿತ್ತು. 20001ರಿಂದ 2010ರ ಅವಧಿಯಲ್ಲಿ ಎಂಎಂಎಲ್ ಸೌತ್ ವೆಸ್ಟ್ ಮೈನಿಂಗ್ ಸಂಸ್ಥೆಯಿಂದ ಸಂಗ್ರಹಿಸಿದ ರಾಯಧನ ಕೇವಲ ರು. 9253674 ಮಾತ್ರ ! ಈ ಹಿನ್ನೆಲೆಯಲ್ಲಿ ಸೌತ್ ವೆಸ್ಟ್ ಮೈನಿಂಗ್ ಸಂಸ್ಥೆ 24-8-2009ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ರಾಯಧನ ಪರಿಷ್ಕರಣೆಗೆ ಮನವಿ ಮಾಡಿತ್ತು. ಆದರೆ ಇದಕ್ಕೆ ಒಪ್ಪದ ರಾಜ್ಯ ಸರ್ಕಾರ ಎಂಎಂಎಲ್ಸ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ 17-3-2010ರಂದು ಪತ್ರ ಬರೆದು 1997ರಲ್ಲಿ ಸೌತ್ ವೆಸ್ಟ್ ಮೈನಿಂಗ್ ಸಂಸ್ಥೆಯ ಜತೆಗೆ ಎಂಎಂಎಲ್ ಮಾಡಿಕೊಂಡ ಒಪ್ಪಂದ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಾರ್ಪಾಡು ಮಾಡಬೇಕು. ಮಾತ್ರವಲ್ಲ ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪ್ರಮಾಣದಲ್ಲಿ ಅಂದರೆ ಶೇ.50ರ ದರದಲ್ಲಿ ರಾಯಧನ ವಸೂಲಿಗೆ ಸೂಚಿಸಲಾಗಿತ್ತು. ಹೀಗಾಗಿ 1997ರಿಂದ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದ ಸಂಸ್ಥೆ ಅಧಿಕ ಕರಭಾರ ಹಾಕಿದ್ದಕ್ಕಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಪ್ಪ ನೀಡಲು ಸಾಧ್ಯವೇ? ಪರವಾನಗಿ ನೀಡದೇ ಇದ್ದರೂ ಅವರಿಗೆ ಅಕ್ರಮ ಗಣಿಗಾರಿಕೆಯ ಕಳಂಕ ತಗುಲಿದ್ದಾದರೂ ನ್ಯಾಯವೇ? ಎಂಬ ಪ್ರಶ್ನೆಯನ್ನು ದಾಖಲೆಗಳೇ ಕೇಳುತ್ತಿವೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.