ಕನ್ನಡಕ್ಕೆ ಶಾಸ್ತ್ರಕ್ಕಷ್ಟೇ ಸ್ಥಾನಮಾನ!
ಕನ್ನಡಿಗರ ಬಹಳ ವರ್ಷಗಳ ನಿರೀಕ್ಷೆಯಂತೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಿತು. ಮೈಸೂರಿನಲ್ಲಿ ಶಾಸ್ತ್ರೀಯ ಭಾಷೆಗಳ ಅತ್ಯುನ್ನತ ಅಧ್ಯಯನ ಕೇಂದ್ರದ ಉದ್ಘಾಟನೆಯೂ ನೆರವೇರಿತು. ಆದರೆ...

ಕನ್ನಡಪ್ರಭ ವಾರ್ತೆ, ಮೈಸೂರು, ಫೆ.3
ಕನ್ನಡಿಗರ ಬಹಳ ವರ್ಷಗಳ ನಿರೀಕ್ಷೆಯಂತೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಿತು. ಮೈಸೂರಿನಲ್ಲಿ ಶಾಸ್ತ್ರೀಯ ಭಾಷೆಗಳ ಅತ್ಯುನ್ನತ ಅಧ್ಯಯನ ಕೇಂದ್ರದ ಉದ್ಘಾಟನೆಯೂ ನೆರವೇರಿತು. ಆದರೆ, ಈ ಕೇಂದ್ರದ ಯೋಜನಾ ನಿರ್ದೇಶಕರ ಹುದ್ದೆ ನೇಮಕಾತಿಗೆ ಇರುವ ನಿಯಮ ತಿದ್ದುಪಡಿಯಾಗದೆ ಯಾವುದೇ ಹೊಸ ಯೋಜನೆಗಳು ಆರಂಭವಾಗುತ್ತಿಲ್ಲ ಎಂಬುದು ಮಾತ್ರ ಕನ್ನಡಿಗರ ದುರಂತ! ಸದ್ಯಕ್ಕೆ ಭಾರತೀಯ ಭಾಷಾ ಸಂಸ್ಥಾನ ಕನ್ನಡದ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದೆ.
ನಿಯಮಗಳ ಪ್ರಕಾರ ಯೋಜನಾ ನಿರ್ದೇಶಕರ ಹುದ್ದೆಗೆ ಬೇರೆಡೆ ಕೆಲಸ ಮಾಡುತ್ತಿರುವ ಪ್ರಾಧ್ಯಾಪಕರು ಬರುವಂತಿಲ್ಲ. ಕನ್ನಡ ಶಾಸ್ತ್ರೀಯ ಭಾಷೆಯ ಕೆಲಸವಾಗಬೇಕಾದರೆ ಕನ್ನಡದ ಎಲ್ಲ ಪ್ರಕಾರಗಳ ಬೋಧನಾನುಭವ ಹೊಂದಿರುವ ಪ್ರಾಧ್ಯಾಪಕರೇ ಬೇಕು.
ಪ್ರಾಧ್ಯಾಪಕರಿಗೆ ಯುಜಿಸಿ ವೇತನ ಶ್ರೇಣಿಯ ಪ್ರಕಾರ ಸುಮಾರು 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ವೇತನ ಸಿಗುತ್ತಿದೆ. ಆದರೆ ಯೋಜನಾ ನಿರ್ದೇಶಕರಿಗೆ ಅಷ್ಟೊಂದು ವೇತನ ಇಲ್ಲ. ಹೀಗಾಗಿ ಪ್ರಾಧ್ಯಾಪಕರ ಹುದ್ದೆಯನ್ನು ತ್ಯಜಿಸಿ, ಯಾರೊಬ್ಬರೂ ಯೋಜನಾ ನಿರ್ದೇಶಕ ಹುದ್ದೆಗೆ ಬರುತ್ತಿಲ್ಲ. ಅಲ್ಲದೆ ವಯೋವುತಿಯನ್ನು ಕೂಡ 62 ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಹೀಗಾಗಿ ಹಾಲಿ ಇರುವ ನಿಯಮಗಳನ್ನು ಸಡಿಲಿಸಿ, ಬೇರೆಡೆ ಕೆಲಸ ಮಾಡುವ ಕನ್ನಡ ಪ್ರಾಧ್ಯಾಪಕರು ಕೂಡ ನಿಯೋಜನೆ ಮೇರೆಗೆ ಬರಬಹುದು. ಬಂದಲ್ಲಿ ಅವರ ವೇತನವನ್ನು ಸಂರಕ್ಷಿಸಲಾಗುತ್ತದೆ ಜತೆಗೆ ನಿಯೋಜನೆ ಭತ್ಯೆ ನೀಡಲಾಗುತ್ತದೆ ಎಂದು ಬದಲಿಸಬೇಕು ಎಂದು ಸಿಐಐಎಲ್ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿದೆ. ಈ ಪ್ರಸ್ತಾವನೆಯನ್ನು ಕಳುಹಿಸಿ ಆರೇಳು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ನೇಮಕಾತಿ ಇಲ್ಲ: ಇದರ ಪರಿಣಾಮ ಪ್ರತಿವರ್ಷ ಕನ್ನಡದ ಕೆಲಸಕ್ಕೆಂದು ಬರುತ್ತಿರುವ 2 ಕೋಟಿ ಆರ್ಥಿಕ ವರ್ಷದ ಅಂತ್ಯದ ನಂತರ ಬಳಕೆಯಾಗದೆ ಕೇಂದ್ರ ಸರ್ಕಾರಕ್ಕೆ ವಾಪಸ್ ಹೋಗುತ್ತಿದೆ! ಯೋಜನಾ ನಿರ್ದೇಶಕರೇ ಅತ್ಯುನ್ನತ ಅಧ್ಯಯನ ಕೇಂದ್ರದ ಮಖ್ಯಸ್ಥರು. ಅವರ ನೇಮಕವಾಗದ ಹೊರತು ಇತರೆ ನೇಮಕಾತಿ ನಡೆಯದು. ಅವರು ಯೋಜನೆಗಳನ್ನು ರೂಪಿಸಿ ಅದಕ್ಕೆ ತಕ್ಕಂತೆ ವಿದ್ಯಾರ್ಹತೆ, ಅನುಭವವುಳ್ಳ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಸಿಐಐಎಲ್ ನಿರ್ದೇಶಕರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ವಿದ್ವಾಂಸರಿರುವ ಯೋಜನಾ ನಿರ್ವಹಣಾ ಮಂಡಳಿಯ ಅಣತಿಯಂತೆ ನಡೆಯಬೇಕಾಗುತ್ತದೆ. ಹೀಗಾಗಿ ಯಾವುದೇ ನೇಮಕಾತಿ ನಡೆದಿಲ್ಲ.
ಕನ್ನಡದ ಕೆಲಸ ನಿಂತಿಲ್ಲ: ಯೋಜನಾ ನಿರ್ದೇಶಕರ ನೇಮಕಾತಿಯಾಗದೆ ಕನ್ನಡದ ಕೆಲಸಗಳು ನಿಂತಿಲ್ಲ ಎನ್ನುತ್ತಾರೆ ಸಿಐಐಎಲ್ ಉಪನಿರ್ದೇಶಕ ಹಾಗೂ ಕನ್ನಡ ಪ್ರಾಧ್ಯಾಪಕ ಡಾ.ಆರ್. ಸುಬ್ಬಕೃಷ್ಣ. ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಗುವ ಮೊದಲು ಕೂಡ ಸಿಐಐಎಲ್ ಕನ್ನಡದ ಕೆಲಸಗಳನ್ನು ಮಾಡುತ್ತಾ ಬಂದಿತ್ತು. ಈ ಯೋಜನೆಗೆ ಕೇಂದ್ರ ಹಣ ಬಿಡುಗಡೆ ಮಾಡುವ ಮುನ್ನಾ ಕೂಡ ಸಿಐಐಎಲ್ ತನ್ನ ಹಣದಿಂದಲೇ ಕನ್ನಡದ ಕೆಲಸಗಳನ್ನು ಮಾಡಿದೆ. ಈಗಲೂ ಕೂಡ ಯೋಜನೆ ನಿರ್ದೇಶಕರು ಸೇರಿದಂತೆ ಕನ್ನಡ ಶಾಸ್ತ್ರೀಯ ಭಾಷೆ ಯೋಜನೆಯ ಸಿಬ್ಬಂದಿಯ ವೇತನ ಭಾಗ ಹೊರತುಪಡಿಸಿ ಇತರೆ ಭಾಗದ ಹಣ ಬಳಕೆ ಮಾಡಿಕೊಂಡು ಬೇರೆ ಬೇರೆ ಕೆಲಸ ಮಾಡುತ್ತಿದೆ ಎಂಬುದು ಅವರ ಸಮರ್ಥನೆ.
ಭಾಷೆಯ ಎಲ್ಲೆ ನಿಗದಿ: ಡಾ. ಎಂ.ಎಂ. ಕಲಬುರ್ಗಿ, ಡಾ. ಎಂ. ಚಿದಾನಂದಮೂರ್ತಿ ಸೇರಿದಂತೆ ನಾಡಿನ 100 ವಿದ್ವಾಂಸರನ್ನು ಆಹ್ವಾನಿಸಿ, ಶಾಸ್ತ್ರೀಯ ಭಾಷೆ ಎಲ್ಲಿಯವರೆಗೆ ಇರಬೇಕು ಎಂಬ ಬಗ್ಗೆ ಚರ್ಚಿಸಿ, ಕ್ರಿ.ಶ. 1750 ರವರೆಗೆ ಎಂದು ನಿಗದಿಪಡಿಸಲಾಗಿದೆ. ಸದ್ಯದಲ್ಲಿಯೇ ಕಾಸರಗೋಡಿನಲ್ಲಿ ಗಮಕ ಕಲೆ ಕುರಿತ ಗೋಷ್ಠಿ ನಡೆಯಲಿದೆ ಎಂದು ಸುಬ್ಬಕೃಷ್ಣ ತಿಳಿಸಿದ್ದಾರೆ.
ಉದ್ಘಾಟನೆಯ ದಿನ ಯಾರು? ಏನು ಹೇಳಿದ್ದರು?
ಕನ್ನಡ ಭಾಷೆಗೆ ದೊರಕಿರುವ ಶಾಸ್ತ್ರೀಯ ಸ್ಥಾನಮಾನದ ಯೋಜನೆಗಳು ಹಾಗೂ ಕಾರ್ಯ ಚಟುವಟಿಕೆಗಳಿಗಾಗಿ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರದಲ್ಲಿ ಆರಂಭಿಸಿರುವ ಶಾಸ್ತ್ರೀಯ ಕನ್ನಡದ ಅತ್ಯುನ್ನತ ಅಧ್ಯಯನ ಕೇಂದ್ರವನ್ನು 2011ರ ಡಿ.17ರಂದು ಅಂದಿನ ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ ಉದ್ಘಾಟಿಸಿದ್ದರು.
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


