ಪ್ರಧಾನ ಸುದ್ದಿ

ಹುಬ್ಬಳ್ಳಿಯಲ್ಲಿ ಸಿಗುತ್ತಂತೆ ಫುಲ್ ವಿಶ್ವರೂಪಂ

25 ಕೊಟ್ಟರೆ ಕೈಯಲ್ಲಿರುತ್ತೆ ಸಿನಿಮಾ ಸಿಡಿ, ದಂಧೆಗೆ ದುಬೈ, ಉತ್ತರ ಭಾರತವೇ ಮೂಲ

ಹುಬ್ಬಳ್ಳಿಯಲ್ಲಿ ಸಿಗುತ್ತಂತೆ ಫುಲ್ ವಿಶ್ವರೂಪಂ
Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 3
ಕಮಲ್‌ಹಾಸನ್ ನಿರ್ದೇಶಿಸಿ ಅಭಿನಯಿಸಿರುವ 'ವಿಶ್ವರೂಪಂ' ಸಿನಿಮಾದಲ್ಲಿ 7 ದೃಶ್ಯಗಳಿಗೆ ಕತ್ತರಿ ಪ್ರಯೋಗವಾಗಿರಬಹುದು. ಆದರೆ, ಹುಬ್ಬಳ್ಳಿಯಲ್ಲಿ ಮಾತ್ರ ಸಂಪೂರ್ಣ ಸಿನಿಮಾ ಸಿಗುತ್ತದೆ. ಪೈರಸಿಯಾದ ಸಿಡಿಗಳು ಕೇವಲ 25ಕ್ಕೆ ನಿಮಗೆ ಸಿಗುತ್ತವೆ.
ಇಂಥ ಒಂದು ವಿಚಾರ  'ಕನ್ನಡಪ್ರಭ' ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ ಮಾಹಿತಿಯ ಜಾಡು ಹಿಡಿದು ಹೊರಟಾಗ ಅದರ ನಿಜರೂಪ ಬಯಲಾಗಿದೆ.
ಸಣ್ಣಪುಟ್ಟ ಅಂಗಡಿಯಲ್ಲೂ: ಹುಬ್ಬಳ್ಳಿಯ ಸಣ್ಣಪುಟ್ಟ ಸಿಡಿ ಅಂಗಡಿಗಳಲ್ಲಿಯೂ 'ವಿಶ್ವರೂಪಂ'  ಪೈರಸಿ ಸಿಡಿಗಳು  ಸಿಗುತ್ತಿವೆ. ರೇಲ್ವೆ ಸ್ಟೇಷನ್ ರಸ್ತೆಯಲ್ಲಿರುವ 'ಅಂಕುಶ ಆರ್ಕೆಡ್‌'ನಲ್ಲಿ ಸಿಡಿಗಳನ್ನು ಯಾವ ಅಂಜಿಕೆಯಿಲ್ಲದೆ ಮಾರಾಟ ಮಾಡಲಾಗುತ್ತಿದೆ.
ಸಿಡಿ ಅಂಗಡಿಯೊಂದಕ್ಕೆ ನುಗ್ಗುತ್ತಿದ್ದಂತೆ ಮಾಲೀಕ ಏನು ಬೇಕೆಂದು ಪ್ರಶ್ನಿಸಿದ. ಆಗ ನಾವು ಇತ್ತೀಚೆಗಷ್ಟೇ ಬಿಡುಗಡೆಯಾದ 'ವಿಶ್ವರೂಪಂ'  ಚಿತ್ರದ ಸಿಡಿ ಬೇಕೆಂದೆವು. ಆತ ತಕ್ಷಣಕ್ಕೆ ನಮ್ಮನ್ನು ಪರೀಕ್ಷಿಸಲು ಹೊಸ ಸಿನಿಮಾ ಸಿಡಿ ಅದ್ಹೇಗೆ ಸಿಗುತ್ತದೆ ಎಂದು ಮರು ಪ್ರಶ್ನೆ ಹಾಕಿದ. ಹತ್ತಾರು ಬಾರಿ ಇನ್ನೂ ಬಿಡುಗಡೆಯಾಗದ ಚಿತ್ರದ ಸಿಡಿಗಳನ್ನು ನಿಮ್ಮಲ್ಲಿಂದ ತೆಗೆದುಕೊಂಡು ಹೋಗಿದ್ದೇವೆ. 'ವಿಶ್ವರೂಪಂ'  ಕೇಳಿದರೆ ಹೀಗೆನ್ನುತ್ತೀರಲ್ಲ ಎಂದಾಗ ತಕ್ಷಣ ಕಮಲ್‌ಹಾಸನ್ ಸೇರಿದಂತೆ ಮತ್ತಿತರರ ಭಾವಚಿತ್ರವುಳ್ಳ 'ವಿಶ್ವರೂಪಂ' ಸಿಡಿಯನ್ನು ನಮ್ಮ ಕೈಗಿತ್ತ. ಬೆಲೆ ಕೇಳಿದಾಗ ಆತ ನಮಗೆ ಕೇವಲ ರು. 25 ಎಂದ!        
ನಾವು ಕಾಲೇಜು ವಿದ್ಯಾರ್ಥಿಗಳು:  'ನಾವು ಕಾಲೇಜು ವಿದ್ಯಾರ್ಥಿಗಳು ಓದಲೆಂದು ಹುಬ್ಬಳ್ಳಿಗೆ ಬಂದು ನೆಲೆಸಿದ್ದೇವೆ ಎಂದು ಸ್ನೇಹ ಬೆಳೆಸುತ್ತಿದ್ದಂತೆ ಮತ್ತಷ್ಟು ಗಿರಾಕಿ ತಂದು ಕೊಡಿ ಸಾಹೇಬರೆ ನಿಮಗೆ ಒಂದಿಷ್ಟು ಸಿಡಿ ಫ್ರೀ ಗಿಫ್ಟ್ ಕೊಡುತ್ತೇನೆ' ಎಂದು  ಆಫರ್ ಮಾಡಿದ.
ಸಾಲದ್ದಕ್ಕೆ ನೀಲಿ ಚಿತ್ರಗಳೂ ನಮ್ಮ ಬಳಿ ಸಿಗುತ್ತವೆ ಎಂದು ಸಿಡಿಯೊಂದನ್ನು ಕೈಗಿತ್ತ. ಇದನ್ನು 100ಗೆ ಕಮ್ಮಿ ಮಾರುವುದಿಲ್ಲ, ನಿಮಗೆಂದು ರು. 50 ಎಂದ!
ದುಬೈ, ಉತ್ತರ ಭಾರತವೇ ಲಿಂಕ್: 'ನೀವು  ಇಂಥ ಸಿಡಿ ಮಾರುತ್ತಿರುವುದರಿಂದ ನಿಮಗೆ ಪೊಲೀಸರ ಕಾಟವಿಲ್ಲವೇ'  ಎಂದಾಗ 'ಮಂಥ್ಲಿ ಕೊಡ್ತೇವೆ, ಇಲ್ಲದಿದ್ದರೆ ದಂಧೆ ಮಾಡಲು ಬಿಡ್ತಾರಾ ಅವ್ರು. ಎಲ್ಲ ಅಂಡರ್‌ಸ್ಟ್ಯಾಂಡಿಗ್ ಮೇಲೆ ನಡೆಯುತ್ತದೆ' ಎಂದ. ಪೈರಸಿ ಮಾಡುವುದು ತುಂಬಾ ರಿಸ್ಕಿ ವರ್ಕ್. ದುಬೈ ಹಾಗೂ ಉತ್ತರ ಭಾರತ ಪೈರಸಿ ಸಿಡಿಗಳ ದಂಧೆಯ ಮೂಲ ಎಂದು ಬಾಯ್ಬಿಟ್ಟ. ಅಲ್ಲಿನ ಚಿತ್ರ ಮಂದಿರದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಆ ಬಳಿಕ ಇಂಟರ್‌ನೆಟ್ ಮುಖಾಂತರ ಸಿಡಿ ಹುಬ್ಬಳ್ಳಿಗೆ ಬರುತ್ತದೆ. ಅದನ್ನು ಇಲ್ಲಿ ಪ್ರತಿ ಮಾಡಿಕೊಳ್ಳಲಾಗುತ್ತದೆ. ಹಿಟ್ ಚಿತ್ರಗಳಿದ್ದರೆ ಜಾಸ್ತಿ ದುಡ್ಡು ಕೊಟ್ಟು ತರಿಸಿಕೊಳ್ಳಬೇಕು. ಏನಿಲ್ಲವೆಂದರೂ ಒಂದು ಚಿತ್ರಕ್ಕೆ 10 ಸಾವಿರ ಕೊಡಬೇಕು. ಕೆಲವೊಂದು ಸಾರಿ ಲಾಭ ಆಗುತ್ತದೆ ಕೆಲವೊಮ್ಮೆ ನಷ್ಟವಾಗುತ್ತದೆ. ವಿವಾದದಿಂದಾಗಿ 'ವಿಶ್ವರೂಪಂ' ನಮಗೆ ಒಳ್ಳೆ ಲಾಭ ಮಾಡಿಕೊಟ್ಟಿದೆ ನೋಡಿ ಎಂದು ವಿವರಿಸಿದ.

ತಕ್ಷಣ ಮಾರುಕಟ್ಟೆಗೆ
'ವಿಶ್ವರೂಪಂ' ಅಷ್ಟೇ ಅಲ್ಲ ಯಾವುದೇ ಹೊಸ ಚಿತ್ರಗಳು ಬಿಡುಗಡೆಯಾಗಲಿ ಅದರ ಪೈರಸಿ ಸಿಡಿಗಳು ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ದೇಶ-ವಿದೇಶದ ಯಾವುದೇ ಮೂಲೆಯಲ್ಲಿ ಹೊಸ ಚಿತ್ರದ ಮೊದಲ ಪ್ರದರ್ಶನ ಮುಗಿದು ಇನ್ನೇನು ಎರಡನೇ ಪ್ರದರ್ಶನ ಆರಂಭವಾಗಲಿದೆ ಎನ್ನುತ್ತಿರುವಾಗಲೇ ಪೈರಸಿ ಸಿಡಿಗಳು ಹುಬ್ಬಳ್ಳಿ ಮಾರುಕಟ್ಟೆಯನ್ನು ಪ್ರವೇಶಿಸಿ ಬಿಡುತ್ತವೆ. ಪೈರಸಿ ದಂಧೆ ಮಾಡುವವರಿಗಂತೂ ಇಂಟರ್‌ನೆಟ್ ಒಳ್ಳೆಯ ಸಾಧನವಾಗಿ ಬಿಟ್ಟಿದೆ.

-ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.