ಪ್ರಧಾನ ಸುದ್ದಿ

ಬಿಜೆಪಿಗೆ ನಾನು ಇಲ್ದೇ ಇರೋದು ಗೊತ್ತಾಗುತ್ತೆ

ಬಿಜೆಪಿಗೆ ನಾನು ಇಲ್ದೇ ಇರೋದು ಗೊತ್ತಾಗುತ್ತೆ
Published On :

ಬೆಂಗಳೂರು: ಯಡಿಯೂರಪ್ಪ ಇಲ್ಲದ ಬಿಜೆಪಿ ಏನೆಂಬುದು ನಗರ ಸ್ಥಳೀಯ ಸಭೆ ಚುನಾವಣೆ ಫಲಿತಾಂಶದ ಬಳಿಕ ಬಹಿರಂಗವಾಗಲಿದೆ. ಚುನಾವಣೆ ಫಲಿತಾಂಶ ಬಿಜೆಪಿಯ ಹಣೆಬರಹ ನಿರ್ಧರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಲೋಕಾಯುಕ್ತ ವರದಿಯ ನೆಪವಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ನಾಯಕರು ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು. ನಂತರ ಬಂದ ಮುಖ್ಯಮಂತ್ರಿ ಸದಾನಂದಗೌಡರಿಂದ ನಾನು ಸಿಬಿಐ ತನಿಖೆ ಎದುರಿಸಬೇಕಾಯಿತು.
ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ಇದಕ್ಕೆ ಉತ್ತರ ನೀಡಲಿದ್ದಾರೆ. ಬಿಎಸ್‌ವೈ ಇಲ್ಲದ ಬಿಜೆಪಿ ಏನೆಂಬುದು ಮಾರ್ಚ್ 2ನೇ ವಾರದಲ್ಲಿ ಬರುವ ಚುನಾವಣೆ ಫಲಿತಾಂಶದಲ್ಲಿಯೇ ತಿಳಿಯಲಿದೆ ಎಂದು 71ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಸುವರ್ಣ ಸುದ್ದಿವಾಹಿನಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರು ನೀಡಿದ ವಿಶೇಷ ಸಂದರ್ಶನದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ವಿಧಾನಸಭೆ ಅಥವಾ ಇನ್ಯಾವುದೇ ಚುನಾವಣೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ, ಲೋಕಸಭೆ ಚುನಾವಣೆಗೆ ತಯಾರಿ ನಡೆಸುವುದು ಪಕ್ಷದ ಉದ್ದೇಶವಾಗಿದೆ.
ಲೋಕಸಭೆಯಲ್ಲಿ ಪಕ್ಷದ 15 ಸಂಸದರಾದರೂ ಇದ್ದು ಕೇಂದ್ರದ ಮೇಲೆ ರಾಜ್ಯದ ಪರವಾಗಿ ಒತ್ತಡ ಹೇರಲು ಸಹಾಯವಾಗುತ್ತದೆ. ಇಂತಹ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಕಾವೇರಿ ನದಿ ನೀರಿನಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಇದಕ್ಕೆ ಪಕ್ಕದ ತಮಿಳುನಾಡು ರಾಜಕೀಯ ನಿದರ್ಶನವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಬಿಟ್ಟ ನೋವಿದೆ. ಆದರೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸುತ್ತಿರುವ ಬಗ್ಗೆ ತೃಪ್ತಿಯಿದೆ. ಹೈಕಮಾಂಡ್ ಸಂಸ್ಕೃತಿಯಿಂದ ಹೊರಬಂದಿರುವುದು ಒಳ್ಳೆಯದಾಗಿದೆ. ಇಲ್ಲಿ ರಾಜ್ಯದ ಜನತೆಯೇ ನನಗೆ ಹೈಕಮಾಂಡ್ ಎಂದು ಯಡಿಯೂರಪ್ಪ ಹೇಳಿದ್ದಾರೆ.             
ಯಾರೋ ಶಾಸಕರು ಅಥವಾ ಮಂತ್ರಿಗಳು ಬರುತ್ತಾರೆ ಎಂದು ಕೆಜೆಪಿ ಸ್ಥಾಪಿಸಿಲ್ಲ. ರಾಜ್ಯದ ಜನತೆಯ ಮೇಲಿನ ವಿಶ್ವಾಸದಿಂದ ಕಟ್ಟಿದ್ದೇನೆ. ಯಾರೇ ಬರಲಿ, ಬಿಡಲಿ ಪಕ್ಷವನ್ನು ರಾಜ್ಯಾದ್ಯಂತ ಕಟ್ಟುತ್ತೇನೆ.
ಪಕ್ಷ ಕಟ್ಟಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಹಾಯ ಮಾಡಿದೆ. ರಾಜ್ಯದಲ್ಲಿ ಕೆಜೆಪಿಯನ್ನು ಕಟ್ಟಿ 3 ತಿಂಗಳು ಕಳೆದಿದೆಯಷ್ಟೆ. ಆದರೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 2600 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಆದ್ದರಿಂದ ಪಕ್ಷ ಕಟ್ಟುವಾಗ ಇದ್ದ ಉತ್ಸಾಹ ಕಡಿಮೆಯಾಗಿದೆ ಎಂಬ ವಿಷಯಗಳೆಲ್ಲ ಕೇವಲ ಆರೋಪವಷ್ಟೆ ಎಂದು ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ.
ನನಗೆ ಸಿಎಂ ಆಗುವ ಹುಚ್ಚಿಲ್ಲ: ನನಗೆ ಮತ್ತೆ ಸಿಎಂ ಆಗುವ ಹುಚ್ಚಿಲ್ಲ. ರಾಜ್ಯವನ್ನು ಅಭಿವೃದ್ಧಿ ಮಾಡುವ ಹುಚ್ಚಿದೆ. ನಾನು ಅಧಿಕಾರದಿಂದ ಕೆಳಗಿಳಿದ ಮೇಲೆ ಅಭಿವೃದ್ಧಿಯಲ್ಲಿ ರಾಜ್ಯ 2ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಇಳಿದಿದೆ. ಇದು ಮತ್ತೆ ಅಭಿವೃದ್ಧಿ ಪಥದತ್ತ ಸಾಗಬೇಕು. ಅಧಿಕಾರ ಎನ್ನುವುದು ನನಗೆ ಲಾಲಸೆಯಾಗಿದ್ದರೆ ಸಿಎಂ ಕುರ್ಚಿಯಿಂದ ಕೆಳಗಿಳಿಯುವಾಗಲೇ ವಿಸರ್ಜನೆ ಮಾಡುತ್ತಿದ್ದೆ. ಆದರೆ ಬಿಜೆಪಿ ನಾಯಕರು ನನಗೆ ವಿಶ್ವಾಸ ದ್ರೋಹ ಮಾಡಿದರು ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ.
ಬಿಜೆಪಿ ಬಿಡುವ ಸಂದರ್ಭದಲ್ಲಿಯೂ ರಾಜ್ಯಾಧ್ಯಕ್ಷ ಸ್ಥಾನ ಕೋರಿದ್ದೆ. ವಿಧಾನಸಭೆ ಚುನಾವಣೆಗೂ ನಿಲ್ಲಲ್ಲ, ಮತ್ತೆ ಅಧಿಕಾರಕ್ಕೆ ತಂದು ದೆಹಲಿ ರಾಜಕೀಯಕ್ಕೆ ಹೋಗುತ್ತೇನೆ ಎಂದಿದ್ದೆ. ಆದರೆ ಸ್ಥಳೀಯ ಬಿಜೆಪಿ ನಾಯಕರು ಅದಕ್ಕೂ ಒಪ್ಪಲಿಲ್ಲ. ಪಕ್ಷಕ್ಕೇ ನಾನು ಬೇಡವಾದ ಮೇಲೆ ಅಲ್ಲಿದ್ದು ಪ್ರಯೋಜನವಿಲ್ಲ ಎಂದು ಬಿಎಸ್‌ವೈ, ಬಿಜೆಪಿ ಬಿಟ್ಟ ಕುರಿತು ಸಮರ್ಥನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.