ಪಾಪಿ ಹೆಡ್ಲಿಗೆ 35 ವರ್ಷ ಜೈಲು

ಷಿಕಾಗೋ: ಮುಂಬೈ ದಾಳಿ ಪ್ರಮುಖ ಸಂಚುದಾರ ಡೇವಿಡ್ ಕೋಲ್ಮನ್ ಹೆಡ್ಲಿಗೆ ಇಲ್ಲಿನ ಕೋರ್ಟ್ 35 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆ ಡೇವಿಡ್ಗೆ ಈಗ ವಿಧಿಸಿರುವ ಶಿಕ್ಷೆ ಕಡಿಮೆಯೇ. ಈತ ತಪ್ಪೊಪ್ಪಿಕೊಂಡ ಪರಿಣಾಮ ಅಮೆರಿಕ ಸರ್ಕಾರ ಶಿಕ್ಷೆ ಕಡಿಮೆಗೊಳಿಸುವಂತೆ ಕೋರ್ಟ್ಗೆ ಕೇಳಿಕೊಂಡಿತ್ತು. ಈ ಪರಿಣಾಮ ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯಿಂದ ಹೆಡ್ಲಿ ಪಾರಾಗಿದ್ದಾನೆ. ಮುಂಬೈ ದಾಳಿಯಲ್ಲಿ ಹೆಡ್ಲಿಯ ಪಾತ್ರ ತಳ್ಳಿಹಾಕಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್, ಆತನನ್ನು ಭಯೋತ್ಪಾದಕ ಎಂದು ನಿಸ್ಸಂಶಯವಾಗಿ ಕರೆಯಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
'ಈತ ಅಪರಾಧ ಎಸಗಿದ್ದಾನೆ, ಉಗ್ರರಿಗೆ ಸಹಾಯ ಮಾಡಿದ್ದಾನೆ, ಆತ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾನೆ' ಎಂದು ಷಿಕಾಗೋ ಕೋರ್ಟ್ ನ್ಯಾಯಾಧೀಶ ಹ್ಯಾರಿ ಡಿ ಲೈನ್ವೆಬರ್ ಆದೇಶ ನೀಡಿದ್ದಾರೆ.
ಜನರನ್ನು ಕಾಪಾಡುವುದು ಮತ್ತು ಇಂಥ ಉಗ್ರರು ಮತ್ತೆ ಭಯೋತ್ಪಾದನಾ ಕೃತ್ಯ ಎಸಗದಿರುವಂತೆ ಮಾಡುವುದು ನನ್ನ ಕರ್ತವ್ಯ. ಹಾಗಾಗಿ 35 ವರ್ಷ ಜೈಲು ಶಿಕ್ಷೆ ವಿಧಿಸುತ್ತಿದ್ದೇನೆ. ಹೆಡ್ಲಿಗೆ 12 ಅಪರಾಧಗಳ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಲಷ್ಕರ್ ಎ ತೋಯ್ಬಾಗೆ ಸಹಾಯ ಮಾಡಿದ ಆರೋಪವೂ ಸೇರಿದೆ. ಇದರೊಂದಿಗೆ ಸೇರಿ ಮುಂಬೈ ಮೇಲೆ ದಾಳಿ ನಡೆಸಿದ್ದ ಎಂಬ ಅಪರಾಧವೂ ಸೇರಿದೆ.
ಶಿಕ್ಷೆ ಕಡಿಮೆಗೊಳಿಸಲು ಯತ್ನ: 2009ರಲ್ಲಿ ಹೆಡ್ಲಿ ಮತ್ತು ರಾಣಾನನ್ನು ಅಮೆರಿಕ ಪೊಲೀಸರು ಬಂಧಿಸಿದ್ದರು. ಇವರಿಬ್ಬರ ಮೇಲೆ ಮುಂಬೈ ದಾಳಿ, ಡೆನ್ಮಾರ್ಕ್ನ ಕಾರ್ಟೂನಿಸ್ಟ್ ಮೇಲಿನ ದಾಳಿ ಆರೋಪದ ಮೇಲೆ ಬಂಧಿಸಲಾಗಿತ್ತು. ಇವರಿಬ್ಬರಲ್ಲಿ ಹೆಡ್ಲಿ ತಪ್ಪೊಪ್ಪಿಕೊಂಡ. ಶಿಕ್ಷೆ ಕಡಿಮೆಗೊಳಿಸಿದಲ್ಲಿ ಎಲ್ಲಾ ವಿವರ ನೀಡುವುದಾಗಿ ಹೇಳಿದ್ದ. ಈ ಸಂದರ್ಭದಲ್ಲಿ ಭಾರತಕ್ಕೆ ಹಸ್ತಾಂತರ ಮಾಡಬಾರದು ಎಂಬ ಷರತ್ತನ್ನೂ ವಿಧಿಸಿದ್ದ.
166 ಮಂದಿ ಮಾರಣಹೋಮ: ಮುಂಬೈ ದಾಳಿಗಾಗಿಯೇ ಹೆಡ್ಲಿ 5 ಬಾರಿ ಭಾರತಕ್ಕೆ ಬಂದಿದ್ದ. ಈತ ಉದ್ಯಮಿಯ ವೇಷ ಹಾಕಿಕೊಂಡು ದೇಶದೆಲ್ಲೆಡೆ ಸುತ್ತಾಡಿದ್ದ. ಇದನ್ನು ಆಧಾರವಾಗಿಟ್ಟುಕೊಂಡೇ ಉಗ್ರರು 2008ರ ನವೆಂಬರ್ 26 ರಂದು ಮುಂಬೈನಲ್ಲಿ ದಾಳಿ ನಡೆಸಿದ್ದರು. ಇದರಲ್ಲಿ 166 ಮಂದಿ ಸಾವನ್ನಪ್ಪಿದ್ದರು. ಸೆರೆ ಹಿಡಿದಿದ್ದ ಕಸಬ್ನನ್ನು ಕಳೆದ ವರ್ಷ ನೇಣಿಗೇರಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


