ಮುಗಿಯದ ರಾಜಿನಾಮೆ ಪರ್ವ
ಬಿಜೆಪಿಗೆ ರಾಜಿನಾಮೆ ನೀಡಿ ಕೆಜೆಪಿ ಸೇರುವ ಶಾಸಕರ ಸಂಖ್ಯೆ ಹೆಚ್ಚುವ ಸಾಧ್ಯತೆ, ಬೋಪಯ್ಯ ಪ್ರವಾಸದಿಂದ ಹಿಂತಿರುಗಿದ ಬಳಿಕ 17 ಶಾಸಕರ ರಾಜಿನಾಮೆ.

ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ರಾಜಿನಾಮೆ ನೀಡಿ ಕೆಜೆಪಿ ಸೇರುವ ಶಾಸಕರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ಪ್ರವಾಸದಿಂದ ಹಿಂತಿರುಗಿದ ಬಳಿಕ 13 ಶಾಸಕರ ಜತೆಗೆ ಇನ್ನೂ ನಾಲ್ವರು ಶಾಸಕರು ರಾಜಿನಾಮೆ ನೀಡಲಿದ್ದಾರೆ.
ಸ್ಪೀಕರ್ ಅವರ ಗೈರು ಹಾಜರಿಯಲ್ಲಿ ವಿಧಾನಸಭೆ ಜಂಟಿ ಕಾರ್ಯದರ್ಶಿಗಳಿಗೆ ಬುಧವಾರ ರಾಜಿನಾಮೆ ಸಲ್ಲಿಸಿದ್ದ 13 ಶಾಸಕರು, ಸ್ಪೀಕರ್ ಅವರಿಗೆ ತಮ್ಮ ರಾಜಿನಾಮೆ ಸಲ್ಲಿಸಲಿದ್ದಾರೆ. ಇವರ ಜತೆಗೆ ಚಿಂಚೋಳಿ ಶಾಸಕ ಸುನೀಲ್ ವಲ್ಯಾಪುರೆ, ಗದಗ ಶಾಸಕ ಶ್ರೀಶೈಲಪ್ಪ ಬಿದರೂರು, ನರಗುಂದ ಶಾಸಕ ಸಿ.ಸಿ. ಪಾಟೀಲ್ ಹಾಗೂ ಜಗಳೂರು ಶಾಸಕ ರಾಮಚಂದ್ರ ಅವರೂ ರಾಜಿನಾಮೆ ನೀಡಲಿದ್ದಾರೆ ಎಂದು ಕೆಜೆಪಿ ಮೂಲಗಳು ಹೇಳಿವೆ.
ಇವರೊಂದಿಗೆ ಸಚಿವರಾದ ಮುರುಗೇಶ್ ನಿರಾಣಿ, ರೇಣುಕಾಚಾರ್ಯ ಕೂಡ ರಾಜಿನಾಮೆ ನೀಡುತ್ತಾರೆ. ಕಡೂರು ಶಾಸಕ ಡಾ. ವಿಶ್ವನಾಥ್ ಮತ್ತು ಶಿರಹಟ್ಟಿ ಶಾಸಕ ರಾಮಪ್ಪ ಲಮಾಣಿ ಅವರೂ ಇವರೊಂದಿಗೆ ಸೇರಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಕೆಜೆಪಿಯವರಿಗೇ ಈ ಬಗ್ಗೆ ಸಂಪೂರ್ಣ ಭರವಸೆ ಇಲ್ಲ.
ಬಹುಮತ ಕಳೆದುಕೊಳ್ಳಲು ಸಾಕು: ಕೆಜೆಪಿ ಬಯಸಿದಂತೆ ರಾಜಿನಾಮೆ ಸಲ್ಲಿಸುವ ಶಾಸಕರ ಸಂಖ್ಯೆ 20 ತಲುಪದೇ ಇದ್ದರೂ 17 ಶಾಸಕರು ರಾಜಿನಾಮೆ ನೀಡಿದರೆ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವ ಮೂವರು ಬಿಜೆಪಿ ಶಾಸಕರು ಹಾಗೂ ಸಚಿವ ವರ್ತೂರು ಪ್ರಕಾಶ್ ಬೆಂಬಲಿಸಿದರೂ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ.
ಏಕೆಂದರೆ, 222 ಸದಸ್ಯರಿರುವ ವಿಧಾನಸಭೆಯಲ್ಲಿ ಬಿಜೆಪಿ ಸ್ಪೀಕರ್ ಸೇರಿ 118 ಶಾಸಕರನ್ನು ಹೊಂದಿದೆ. 17 ಶಾಸಕರು ರಾಜಿನಾಮೆ ನೀಡಿದರೆ ಆ ಸಂಖ್ಯೆ 101ಕ್ಕೆ ಇಳಿಯುತ್ತದೆ. ವಿಧಾನಸಭೆ ಬಲಾಬಲ 204ಕ್ಕೆ ಕುಸಿಯುತ್ತದೆ. ಈ ಸಂದರ್ಭದಲ್ಲಿ ಬಹುಮತಕ್ಕೆ 103 ಸ್ಥಾನ ಬೇಕಾಗುತ್ತದೆ. ಆಗ ಪಕ್ಷೇತರರು ಅಥವಾ ಜೆಡಿಎಸ್ ಬೆಂಬಲಿಸಿದರೆ ಮಾತ್ರ ಸರ್ಕಾರ ಉಳಿಯಲು ಸಾಧ್ಯ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾಯುತ್ತಿರುವುದೇ ಈ ಸಂದರ್ಭಕ್ಕಾಗಿ. ಸರ್ಕಾರ ಉಳಿಸಲು ಜೆಡಿಎಸ್ ಬೆಂಬಲಿಸಿದರೆ ಆ ಪಕ್ಷದ ಬಣ್ಣ ಬಯಲಾಗುತ್ತದೆ. ಇದು ಕಾಂಗ್ರೆಸ್ ಮತ್ತು ತಮಗೆ ಇನ್ನಷ್ಟು ಶಕ್ತಿ ನೀಡುತ್ತದೆ ಎಂಬುದು ಅವರ ನಿರೀಕ್ಷೆ. ಹೀಗಾಗಿಯೇ ತಮ್ಮ ಬೆಂಬಲಿಗರಿಂದ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಿಸಿ ಆಡಳಿತ ಪಕ್ಷ ಬಹುಮತ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ.
ಸಮಯಾವಕಾಶ ಕೋರಿ ಸ್ಪೀಕರ್ಗೆ ಪತ್ರ: ಈ ಮಧ್ಯೆ ಬುಧವಾರ ರಾಜಿನಾಮೆ ಸಲ್ಲಿಸಲು ಸ್ಪೀಕರ್ ಕಚೇರಿಗೆ ತೆರಳಿ ಬರಿಗೈಲಿ ವಾಪಸಾಗಿದ್ದ 13 ಶಾಸಕರು ಖುದ್ದಾಗಿ ರಾಜಿನಾಮೆ ಸಲ್ಲಿಸಲು ಸಮಯಾವಕಾಶ ಕೋರಿ ಸಿ.ಎಂ. ಉದಾಸಿ ಅವರು ಸ್ಪೀಕರ್ ಕೆ.ಜಿ. ಬೋಪಯ್ಯ ಅವರಿಗೆ ಇ-ಮೇಲ್ ಮೂಲಕ ಪತ್ರ ರವಾನಿಸಿದ್ದಾರೆ. 13 ಶಾಸಕರ ಸಹಿ ಇರುವ ಪತ್ರವನ್ನು ಸ್ಪೀಕರ್ ಅವರಿಗೆ ಕಳುಹಿಸಿಕೊಟ್ಟಿರುವ ಉದಾಸಿ ಅವರು, ಖುದ್ದಾಗಿ ರಾಜಿನಾಮೆ ಸಲ್ಲಿಸಲು ನಿಮ್ಮ ಭೇಟಿಗೆ ಅವಕಾಶ ಮಾಡಿಕೊಡಿ. ನೀವು ನಿಗದಿಪಡಿಸಿದ ವೇಳೆ ಮತ್ತು ದಿನ ಬರುತ್ತೇವೆ ಎಂದು ಕೋರಿದ್ದಾರೆ.
ಪತ್ರದ ಪೂರ್ಣ ಪಾಠ ಇಂತಿದೆ: 'ನಾವು 13 ಶಾಸಕರು ರಾಜಿನಾಮೆಗಾಗಿ ಜ. 23ರಂದು ತಮ್ಮ ಕಚೇರಿಗೆ ಬಂದಿದ್ದೆವು. ಆದರೆ, ತಾವು ಕಚೇರಿಯಲ್ಲಿ ಇರಲಿಲ್ಲ. ಸಚಿವಾಲಯದ ಅಧಿಕಾರಿಗಳು, ಇತರೇ ಜವಾಬ್ದಾರಿಯುತ ಅಧಿಕಾರಿಗಳು ರಾಜಿನಾಮೆ ಸ್ವೀಕರಿಸಲು ನಿರಾಕರಿಸಿದರು. ಈ ಮಧ್ಯೆ ನಿಮ್ಮ ಸಚಿವಾಲಯದ ಜಂಟಿ ಕಾರ್ಯದರ್ಶಿ ಪಿ. ಗಲಗಲಿ ಬಂದರಾದರೂ ಅವರು ರಾಜಿನಾಮೆ ಪತ್ರ ಸ್ವೀಕರಿಸಿ, ಅದಕ್ಕೆ ಸ್ವೀಕೃತಿ ಪತ್ರ ನೀಡಲು ನಿರಾಕರಿಸಿದರು.
ಹೀಗಾಗಿ ನಮಗೆ ದಾರಿ ಇಲ್ಲದೆ ರಾಜ್ಯಪಾಲರನ್ನು ಭೇಟಿಯಾಗಿ ಘಟನಾವಳಿಗಳನ್ನು ವಿವರಿಸಿದ್ದೇವೆ.' 'ನಾವೆಲ್ಲರೂ ಫೆ. 27ರಂದು ಅಥವಾ ಅದಕ್ಕೆ ಮುನ್ನ ರಾಜಿನಾಮೆ ನೀಡಲು ಉತ್ಸುಕರಾಗಿದ್ದೇವೆ. ಆದ್ದರಿಂದ ನೀವು ಕಚೇರಿಯಲ್ಲಿ ಹಾಜರಿದ್ದು ನಾವು ನಿಮ್ಮನ್ನು ಭೇಟಿ ಮಾಡಲು ಅವಕಾಶ ನೀಡಿ. ಇದರಿಂದ ನಿಮ್ಮನ್ನು ಭೇಟಿಯಾಗಿ ವೈಯಕ್ತಿಕವಾಗಿ ರಾಜಿನಾಮೆ ಸಲ್ಲಿಸಲು ಅನುಕೂಲವಾಗುತ್ತದೆ. ನಿಮಗೆ ಸೂಕ್ತವಾದ ದಿನ ಮತ್ತು ಸಮಯ ಗೊತ್ತು ಮಾಡಿ ತಿಳಿಸಿದರೆ ಅಂದು ನಾವು ಬಂದು ರಾಜಿನಾಮೆ ಸಲ್ಲಿಸುತ್ತೇವೆ' ಎಂದು ಉದಾಸಿ ಅವರು ಪತ್ರದಲ್ಲಿ ಕೋರಿದ್ದಾರೆ.
ಸ್ಪೀಕರ್ ಜ.28ಕ್ಕೆ ಬೆಂಗಳೂರಿಗೆ ಬರುತ್ತಾರೆ ಎಂಬ ಮಾಹಿತಿ ಇದೆ. ಅವರ ಬರುವಿಕೆಗಾಗಿ ನನ್ನ ಬೆಂಬಲಿಗ ಶಾಸಕರು ರಾಜಿನಾಮೆ ಪತ್ರ ಹಿಡಿದು ಬೆಂಗಳೂರಿನಲ್ಲೇ ಕಾಯುತ್ತಿದ್ದಾರೆ. ಬಂದ ತಕ್ಷಣ 13 ಶಾಸಕರ ಜತೆಗೆ ಇನ್ನೂ ಕೆಲವರು ರಾಜಿನಾಮೆ ನೀಡಲಿದ್ದಾರೆ.
-ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ಪಾಪದ ಕೃತ್ಯಗಳಲ್ಲಿ ಮುಳುಗಿರುವ ಬಿಜೆಪಿ ಸರ್ಕಾರಕ್ಕೆ ಜೆಡಿಎಸ್ನಿಂದ ಪ್ರತ್ಯಕ್ಷ ಇಲ್ಲವೇ ಪರೋಕ್ಷ ಬೆಂಬಲದ ಪ್ರಶ್ನೆಯೇ ಇಲ್ಲ. ತಮ್ಮ ಪಕ್ಷದ ನಿರ್ಧಾರದಲ್ಲಿ ಯಾವುದೇ ಬದಲಾವಣೆಯೂ ಇಲ್ಲ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನನ್ನನ್ನು ತಮ್ಮ ಸಂಪುಟದಲ್ಲಿ ಸಚಿವನನ್ನಾಗಿ ಮಾಡಿದರು. ಅವರು ಇವತ್ತೇ ನೀನು ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಹೇಳಿದರೆ ನೀಡುತ್ತೇನೆ.
-ಮುರುಗೇಶ ನಿರಾಣಿ, ಕೈಗಾರಿಕಾ ಸಚಿವ
ಸರ್ಕಾರಕ್ಕೆ ಗಂಡಾಂತರವಿಲ್ಲ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಫೆ.8ರಂದು ಬಜೆಟ್ಮಂಡಿಸುತ್ತಾರೆ. ಅದು ವಿಭಿನ್ನವಾಗಿ ಇರಲಿದ್ದು, ಉತ್ತರ ಕರ್ನಾಟಕಕ್ಕೆ ಸಿಂಹಪಾಲು ಸಿಗಲಿದೆ.
-ಬಸವರಾಜ ಬೊಮ್ಮಾಯಿ, ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


