ಪ್ರಧಾನ ಸುದ್ದಿ

ನಾ ಕೇಳಿಲ್ಲ

ನಾ ಕೇಳಿಲ್ಲ
Published On :

ಬೆಂಗಳೂರು: ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸುವುದಾಗಿ ಶುಕ್ರವಾರ ಹೇಳಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮಾರನೇ ದಿನವೇ ತಮ್ಮ ವರಸೆ ಬದಲಿಸಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಸಾಂವಿಧಾನಿಕ ಬಿಕ್ಕಟ್ಟು ಕಂಡುಬಂದಿಲ್ಲ. ಆದ್ದರಿಂದ ಬಹುಮತ ಸಾಬೀತುಪಡಿಸುವ ಅವಶ್ಯಕತೆಯಿಲ್ಲ ಎಂದು ಶನಿವಾರ ಹೇಳಿದ್ದಾರೆ. ಮಾಣೆಕ್‌ಷಾ ಪೆರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ಮಂಡನೆಯವರೆಗೆ ಪ್ರತಿದಿನವೂ ಸರ್ಕಾರಕ್ಕೆ ಪರೀಕ್ಷೆ ಎದುರಾಗಲಿದೆ. ಪ್ರತಿ ಕ್ಷಣದ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.      
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶುಕ್ರವಾರ ತಮ್ಮನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಬಿಜೆಪಿ 13 ಶಾಸಕರು ರಾಜಿನಾಮೆ ಪತ್ರ ಸೇರಿದಂತೆ ವಿಧಾನಸಭೆ ಇತರೆ ದಾಖಲೆಗಳನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದ್ದೇನೆ. ರಾಜಿನಾಮೆ ಶಾಸಕಾಂಗಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಇದರಲ್ಲಿ ತಾವು ಮಧ್ಯಪ್ರವೇಶಿಸುವುದಿಲ್ಲ ಎಂದರು.
ಸದ್ಯಕ್ಕೆ ಸರ್ಕಾರ ಬಹುಮತ ಕಳೆದುಕೊಂಡಂತೆ ಕಾಣುತ್ತಿಲ್ಲ. ಹೀಗಾಗಿ ವಿಶ್ವಾಸಮತ ಯಾಚನೆಗೆ ಸೂಚಿಸುವ ಪರಿಸ್ಥಿತಿ ಉದ್ಭವವಾಗುವುದಿಲ್ಲ. ಆದರೆ, ಆಡಳಿತ ಪಕ್ಷದಲ್ಲಿ ಬಹುಮತಕ್ಕೆ ಒಂದು ಸದಸ್ಯತ್ವದ ಕೊರತೆ ಕಂಡುಬಂದರೂ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿಗಳಿಗೆ ಸೂಚಿಸುತ್ತೇನೆ ಎಂದು ಅವರು ತಿಳಿಸಿದರು.
ಈ ಬದಲಾವಣೆಗೆ ಕಾರಣವೇನು?: ವಿಶ್ವಾಮತ ಯಾಚನೆ ವಿಚಾರದಲ್ಲಿ ರಾಜ್ಯಪಾಲರು ತಮ್ಮ ಹೇಳಿಕೆ ಬದಲಿಸಲು ಕಾರಣ ಶುಕ್ರವಾರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸರ್ಕಾರಕ್ಕೆ ಬಹುಮತ ಇರುವ ವಿಚಾರದಲ್ಲಿ ಸಮಗ್ರ ವಿವರಣೆ ನೀಡಿದ್ದು.
ಫೆ. 4ರಂದು ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವಂತೆ ರಾಜ್ಯಪಾಲರನ್ನು ಆಹ್ವಾನಿಸಲು ಶುಕ್ರವಾರ ಭೇಟಿ ಮಾಡಿದ ಸಂದರ್ಭದಲ್ಲಿ ವಿಧಾನಸಭೆ ಬಲಾಬಲ, ಆಡಳಿತ ಪಕ್ಷದ ಬಲ ಹಾಗೂ 13 ಶಾಸಕರು ರಾಜಿನಾಮೆ ನೀಡಿದ ಬಳಿಕ ಇರುವ ಬಲಾಬಲಗಳ ಬಗ್ಗೆ ವಿವರಣೆ ನೀಡಿದ್ದ ಮುಖ್ಯಮಂತ್ರಿಗಳು, 15 ಶಾಸಕರು ರಾಜಿನಾಮೆ ನೀಡಿದರೂ ಸರ್ಕಾರ ಬಹುಮತ ಕಳೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ತಮ್ಮ ಹೇಳಿಕೆ ಬದಲಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಬಹುಮತ ಹೊಂದಿದೆ ಎಂದು ಹೇಳಿದ್ದಾರೆ. ಆದರೆ, ರಾಜಿನಾಮೆ ನೀಡುವ ಶಾಸಕರ ಸಂಖ್ಯೆ 15 ಅಥವಾ ಅದಕ್ಕಿಂತ ಹೆಚ್ಚಾದರೆ ಜಂಟಿ ಅಧಿವೇಶನವನ್ನುದ್ದೇಶಿಸಿ ತಮ್ಮ ಭಾಷಣ ಮುಗಿದ ಬಳಿಕ ವಿಶ್ವಾಸಮತ ಯಾಚಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.