ಪ್ರಧಾನ ಸುದ್ದಿ

865 ಹಳ್ಳಿಗಳ ಆಪೋಷನಕ್ಕೆ ಮಹಾ ಸಿದ್ಧತೆ

Published On :

ಕನ್ನಡಪ್ರಭ ವಾರ್ತೆ ಬೆಂಗಳೂರು ಜ.27
ರಾಜ್ಯದ ಚಾಮರಾಜನಗರ ಜಿಲ್ಲೆ ಹೊಗೇನಕಲ್ ಬಳಿ ಜಲಾಶಯ ನಿರ್ಮಿಸಿರುವ ತಮಿಳುನಾಡು ಸರ್ಕಾರ ರಾಜ್ಯದ ಹಳ್ಳಿಗಳನ್ನು ಮುಳುಗಿಸಿದರೆ, ಇನ್ನೊಂದೆಡೆ ಮಹಾರಾಷ್ಟ್ರ ಸರ್ಕಾರ ರಾಜ್ಯದ ನಾಲ್ಕು ಜಿಲ್ಲೆಗಳ 865 ಹಳ್ಳಿಗಳನ್ನೇ ನುಂಗುವ ಪ್ರಯತ್ನದಲ್ಲಿದೆ.
ಮಹಾರಾಷ್ಟ್ರ ಸರ್ಕಾರ 2008ರಿಂದ ನಡೆಸುತ್ತಿರುವ ಈ ಹುನ್ನಾರಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸುವುದು ಇರಲಿ, ಕನಿಷ್ಠ ಪ್ರತಿಭಟನೆಯನ್ನೂ ಸಲ್ಲಿಸುವ ಗೋಜಿಗೆ ಹೋಗಿಲ್ಲ. ಒಕ್ಕೂಟ ವ್ಯವಸ್ಥೆಗೇ ಧಕ್ಕೆ ತರುವ ಮಹಾರಾಷ್ಟ್ರದ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.
ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ಗುಲ್ಬರ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಒಟ್ಟು 12 ತಾಲೂಕುಗಳ 865 ಹಳ್ಳಿಗಳನ್ನು ವಿವಾದಿತ ಪ್ರದೇಶ ಎಂದು ಪರಿಗಣಿಸಿರುವ ಮಹಾರಾಷ್ಟ್ರ, ಇಲ್ಲಿ ಮರಾಠಿ ಭಾಷಿಕರು ಹೆಚ್ಚಾಗಿದ್ದಾರೆ. ಹೀಗಾಗಿ ಹಳ್ಳಿಗಳು ತನಗೆ ಸೇರಬೇಕು ಎಂದು ವಾದಿಸಿ ಆ ಹಳ್ಳಿಯ ನಿವಾಸಿಗಳಿಗೆ ಮಹಾರಾಷ್ಟ್ರದ ಸರ್ಕಾರಿ ನೌಕರಿಯಲ್ಲಿ ಅವಕಾಶ ಕಲ್ಪಿಸುತ್ತಿದೆ. ಈ ಮೂಲಕ ಹಳ್ಳಿಗಳ ಜನರಿಂದಲೇ ತಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಡ ಹೇರುವ ಪ್ರಯತ್ನದಲ್ಲಿದೆ. ಒಂದೊಮ್ಮೆ ಸಮೀಕ್ಷೆ ಕಾರ್ಯ ನಡೆದಲ್ಲಿ ಇಲ್ಲಿನ ಜನರು ಮಹಾರಾಷ್ಟ್ರ ಪರ ಒಲವು ತೋರಲಿ ಎಂಬುದು ಪಿತೂರಿಯ ಮೂಲವಾಗಿದೆ.
ಇಷ್ಟಾದರೂ ನಮ್ಮ ರಾಜ್ಯ ಸರ್ಕಾರ ಮಾತ್ರ ಗಾಢ ನಿದ್ದೆಯಿಂದ ಎಚ್ಚೆತ್ತಿಲ್ಲ. ಹಳ್ಳಿಗಳ ಜನರಿಗೆ ನೌಕರಿ ಕೊಡಿಸುವುದಿರಲಿ, ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು, ಮಹಾರಾಷ್ಟ್ರ ಸರ್ಕಾರದ ಪ್ರಯತ್ನಗಳನ್ನು ವಿರೋಧಿಸುವ ಬಗ್ಗೆಯೂ ಯೋಚಿಸಿಲ್ಲ.                         
ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ಈ ಹಳ್ಳಿಗಳ ಜನರೇ ಖುದ್ದಾಗಿ ನಮಗೆ ಕರ್ನಾಟಕ ಬೇಡ, ಮಹಾರಾಷ್ಟ್ರವೇ ಇರಲಿ ಎಂದು ಹೇಳುವ ಕಾಲ ಸನ್ನಿಹಿತವಾಗಿದೆ.
ವಿವಾದಿತ ಪ್ರದೇಶದ ಹಳ್ಳಿಗಳು!:
ರಾಜ್ಯಗಳ ಪುನರ್ವಿಂಗಡಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ಸೇರಿದ ಬೆಳಗಾವಿ ಜಿಲ್ಲೆ ಅಥಣಿ, ಬೆಳಗಾವಿ, ಚಿಕ್ಕೋಡಿ, ಹುಕ್ಕೇರಿ, ಖಾನಾಪುರ, ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಸೂಪಾ, ಹಳಿಯಾಳ, ಬೀದರ್ ಜಿಲ್ಲೆಯ ಹುಮ್ನಾಬಾದ್, ಬಾಲ್ಕಿ, ಔರಾದ್ ಹಾಗೂ ಗುಲ್ಬರ್ಗ ಜಿಲ್ಲೆಯ ಅಳಂದ ತಾಲೂಕಿನ 865 ಹಳ್ಳಿಗಳ ಪ್ರದೇಶವನ್ನು ಕರ್ನಾಟಕ- ಮಹಾರಾಷ್ಟ್ರ ಗಡಿಯ 'ವಿವಾದಿತ ಪ್ರದೇಶ' ಎಂದು ಮಹಾರಾಷ್ಟ್ರ ಸರ್ಕಾರ ಪರಿಗಣಿಸಿದೆ.
ಆದರೆ, ನೆಹರೂ ಆಯೋಗ, ಫಜಲ್‌ಅಲಿ ಆಯೋಗ, ಫಣಿಕ್ಕರ್ ಆಯೋಗ, ಮಹಾಜನ್ ಆಯೋಗ ಸೇರಿದಂತೆ ಗಡಿ ವಿವಾದ ಕುರಿತಂತೆ ರಚಿಸಲಾದ ಎಲ್ಲಾ ಆಯೋಗಗಳು ಈ ಪ್ರದೇಶಗಳು ಕರ್ನಾಟಕಕ್ಕೆ ಸೇರಿದ್ದು ಎಂದು ಹೇಳಿದ್ದು, ಎಲ್ಲಿಯೂ ವಿವಾದಿತ ಪ್ರದೇಶ ಎಂದು ಹೇಳಿಲ್ಲ. ಹೀಗಿದ್ದರೂ ಒಕ್ಕೂಟ ವ್ಯವಸ್ಥೆಯ ನಿಯಮಕ್ಕೆ ವಿರುದ್ಧವಾಗಿ ಮಹಾರಾಷ್ಟ್ರ ಸರ್ಕಾರ ಈ ಹಳ್ಳಿಗಳನ್ನು ವಿವಾದಿತ ಪ್ರದೇಶ ಎಂದು ಆದೇಶ ಹೊರಡಿಸಿ, ಅಲ್ಲಿನ ಜನರಿಗೂ ಮಹಾರಾಷ್ಟ್ರ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ಕಲ್ಪಿಸಿ ಒಕ್ಕೂಟ ವ್ಯವಸ್ಥೆಯ ಅಸ್ತಿತ್ವವನ್ನೇ ಪ್ರಶ್ನಿಸಿದೆ.
ಸರ್ಕಾರಿ ಉದ್ಯೋಗ: ವಿವಾದಿತ ಎಂದು ಹೇಳಿಕೊಂಡಿರುವ ಪ್ರದೇಶಗಳಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಈ ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಹಳ್ಳಿಗಳ ಮೇಲೆ ತನ್ನ ಹಕ್ಕು ಪ್ರತಿಪಾದಿಸುತ್ತಿದೆ. 2008ರಲ್ಲಿ ಆದೇಶವೊಂದನ್ನು ಹೊರಡಿಸಿದ್ದು, ಈ 865 ಹಳ್ಳಿಗಳಲ್ಲಿ 15 ವರ್ಷ ವಾಸವಿದ್ದ ಪ್ರಮಾಣಪತ್ರ ತರುವವರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಹೇಳಿದೆ. ಅದರಂತೆ ಹಳ್ಳಿಗಳ ನಿವಾಸಿಗಳಿಗೆ ಸರ್ಕಾರಿ ನೌಕರಿಯಲ್ಲಿ ಅವಕಾಶವನ್ನೂ ಮಾಡಿಕೊಡುತ್ತಿದೆ.
2012ರಲ್ಲಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಈ ಹಳ್ಳಿಗಳ ಜನರಿಗೆ ಉದ್ಯೋಗ ನಿರಾಕರಿಸಿದಾಗ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅಲ್ಲಿನ ಸರ್ಕಾರ, ಈ ಹಳ್ಳಿಗಳ ಜನರಿಗೆ ಸರ್ಕಾರಿ ನೌಕರಿ ಮಾತ್ರವಲ್ಲ, ಸಾರಿಗೆ ಸಂಸ್ಥೆಯಲ್ಲೂ ನೌಕರಿ ನೀಡಲು ನಿಯಮ ಬದಲಿಸುವುದಾಗಿ ಹೇಳಿದೆ.
ಎಚ್ಚೆತ್ತುಕೊಳ್ಳದ ಸರ್ಕಾರ: ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರ ಮಾತ್ರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ವಿವಾದ ಹೆಚ್ಚಾದಾಗ ಮಹಾರಾಷ್ಟ್ರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳಿ ಕಣ್ಣೊರಸುವ ತಂತ್ರ ಮಾಡಿದೆಯೇ ಹೊರತು ಆ ಕೆಲಸವನ್ನೂ ಮಾಡಿಲ್ಲ.
ಮಹಾರಾಷ್ಟ್ರ ಸರ್ಕಾರದ ಈ ಕುತಂತ್ರದ ಬಗ್ಗೆ ಬೆಳಗಾವಿಯ ಅನೇಕ ಮುಖಂಡರು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದರೂ ಕೇವಲ ಭರವಸೆ ಮಾತ್ರ ಸಿಕ್ಕಿದೆಯೇ ಹೊರತು ವಿವಾದ ಬಗೆಹರಿಸುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ.

ಕೇಂದ್ರಕ್ಕೆ ಪ್ರತಿಭಟನೆ ಸಲ್ಲಿಸಿ
ಇದು ಒಕ್ಕೂಟ ವ್ಯವಸ್ಥೆಯ ವಿಚಾರವಾಗಿರುವುದರಿಂದ ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುವುದಕ್ಕಿಂತ ಮುಖ್ಯವಾಗಿ ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳ ಮುಂದೆ ತನ್ನ ಪ್ರತಿಭಟನೆ ಸಲ್ಲಿಸಬೇಕು ಎನ್ನುತ್ತಾರೆ ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್.
ಮಹಾರಾಷ್ಟ್ರ ಸರ್ಕಾರ 865 ಹಳ್ಳಿಗಳನ್ನು ವಿವಾದಿತ ಪ್ರದೇಶ ಎಂದು ಕರೆದಿರುವುದು ಒಕ್ಕೂಟ ವ್ಯವಸ್ಥೆಯನ್ನೇ ಪ್ರಶ್ನಿಸಿದಂತಾಗಿದ್ದು, ಗಡಿ ಉಲ್ಲಂಘನೆಯನ್ನೂ ಮಾಡಿದಂತಾಗುತ್ತದೆ. ಯಾವುದೇ ಆಯೋಗಗಳು ಇದನ್ನು ವಿವಾದಿತ ಪ್ರದೇಶ ಎಂದು ಹೇಳದಿದ್ದರೂ ಮಹಾರಾಷ್ಟ್ರ ಆ ರೀತಿ ಪರಿಗಣಿಸಿರುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ. ರಾಜ್ಯದ ಸಾರ್ವಭೌಮತೆಯನ್ನೂ ಪ್ರಶ್ನಿಸಿದಂತಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳನ್ನು ಭೇಟಿಯಾಗಿ ಮಹಾರಾಷ್ಟ್ರ ಸರ್ಕಾರದ ಕುತಂತ್ರದ ವಿರುದ್ಧ ದೂರು ಸಲ್ಲಿಸಬೇಕು. ಇಲ್ಲದೇ ಇದ್ದಲ್ಲಿ ರಾಜ್ಯದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

-ಪ್ರದೀಪ್ ಕುಮಾರ್ ಎಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.