ಪ್ರಧಾನ ಸುದ್ದಿ

ರಜೆ ಕೊಡದ್ದಕ್ಕೆ ಎಸ್‌ಐ ಕೊಂದ ಪೊಲೀಸ್ ಪೇದೆ

ರಜೆ ಕೊಡಲಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಪೇದೆಯೇ ಗುಂಡು ಹಾರಿಸಿ ಸಬ್ ಇನ್ಸ್‌ಪೆಕ್ಟರ್‌ರನ್ನು ಹತ್ಯೆ ಮಾಡಿರುವ ಆತಂಕಕಾರಿ ...

ರಜೆ ಕೊಡದ್ದಕ್ಕೆ ಎಸ್‌ಐ ಕೊಂದ ಪೊಲೀಸ್ ಪೇದೆ
Published On :

ಯಲಹಂಕ: ರಜೆ ಕೊಡಲಿಲ್ಲ ಎಂಬ  ಕಾರಣಕ್ಕೆ ಪೊಲೀಸ್ ಪೇದೆಯೇ ಗುಂಡು ಹಾರಿಸಿ ಸಬ್ ಇನ್ಸ್‌ಪೆಕ್ಟರ್‌ರನ್ನು ಹತ್ಯೆ ಮಾಡಿರುವ ಆತಂಕಕಾರಿ ಘಟನೆ ರಾಜಾನುಕುಂಟೆ ಠಾಣೆಯಲ್ಲಿ ಭಾನುವಾರ ನಡೆದಿದೆ.
ಚನ್ನಪಟ್ಟಣ ಮೂಲದ ಹಾರೋಹಳ್ಳಿ ವಾಸಿ ರಾಜಾನುಕುಂಟೆ ಠಾಣೆ ಎಸ್‌ಐ ವಿಜಯಕುಮಾರ್ (42)ಗುಂಡಿಗೆ ಬಲಿಯಾದವರು. ಅದೇ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿರುವ ಆನಂದ್‌ಕುಮಾರ್ ಹತ್ಯೆಗೈದ ಆರೋಪಿ. ಕೊಲೆಗೈದು ಪರಾರಿಯಾಗಿದ್ದ ಆತನನ್ನು ಬಂಧಿಸಲಾಗಿದೆ. ರಜೆ ಸಂಬಂಧ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಮೃತರಿಗೆ ಪತ್ನಿ ಭಾಗ್ಯಲಕ್ಷ್ಮಿ ಮತ್ತು ಮಕ್ಕಳಾದ ಮುಕ್ತ, ವರ್ಷಿತ ಇದ್ದಾರೆ.
ಮೂಲತಃ ಗೌರಿಬಿದನೂರು ತಾಲೂಕು ಬಚ್ಚಾರೆಡ್ಡಿ ಪಾಳ್ಯದ ವಾಸಿ, ಪೇದೆ ಆನಂದ್ ಕುಮಾರ್ ಕರ್ತವ್ಯದಲ್ಲಿದ್ದಾಗಲೇ ಕಚೇರಿ ರೈಫಲ್‌ನಿಂದ ಮೂರು ಸುತ್ತು ಗುಂಡು ಹಾರಿಸಿ ಇನ್ಸ್‌ಪೆಕ್ಟರ್  ಹತ್ಯೆ ಮಾಡಿದ್ದಾನೆ.
ಘಟನೆ ವಿವರ: ರಾಮನಗರ ಜಿಲ್ಲೆ ತಲಘಟ್ಟಪುರ ಠಾಣೆಯಲ್ಲಿ ಪ್ರೊಬೆಷನರಿ ಹುದ್ದೆಯಿಂದ ಬಡ್ತಿ ಹೊಂದಿದ್ದ ವಿಜಯಕುಮಾರ್ ಅವರು ರಾಜಾನುಕುಂಟೆ ಠಾಣೆಯಲ್ಲಿ ಎಸ್‌ಐ ಆಗಿ ಡಿಸೆಂಬರ್ 5ರಂದು ಅಧಿಕಾರ ವಹಿಸಿಕೊಂಡಿದ್ದರು.ಠಾಣೆಯಲ್ಲಿ ಶಿಸ್ತು ಪರಿಪಾಲನೆ ಮಾಡುವುದಕ್ಕೆ ಮುಂದಾಗಿದ್ದ ಅವರು ಪೇದೆಗಳಿಗೆ ರಜೆ ನೀಡುತ್ತಿರಲಿಲ್ಲ. ಈ ವಿಚಾರದಲ್ಲಿ  15 ದಿನಗಳಿಂದ ಪೊಲೀಸ್ ಪೇದೆಗಳು ಮತ್ತು ಎಸ್‌ಐ ಮಧ್ಯೆ  ಮಾತಿನ  ಚಕಮಕಿ ನಡೆಯುತ್ತಿತ್ತು.
ಠಾಣೆಯಲ್ಲಿ ಸೆಂಟ್ರಿ ಆಗಿದ್ದ ಆನಂದ್‌ಕುಮಾರ್ ದಿನಬಿಟ್ಟು ದಿನ ರಜೆ ಕೇಳುತ್ತಿದ್ದ. ಇದಕ್ಕೆ ಠಾಣಾಧಿಕಾರಿ ರಜೆ ಕೊಡಲು ಒಪ್ಪುತ್ತಿರಲಿಲ್ಲ. ಇದರಿಂದ 2-3 ದಿನಗಳಿಂದ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಭಾನುವಾರ ರಜೆ ನೀಡುವಂತೆ ಆನಂದ್‌ಕುಮಾರ್ ಕೇಳಿದಾಗ ಎಸ್‌ಐ  ನಿರಾಕರಿಸಿದರು.  ಅದಕ್ಕೆ ಒಪ್ಪದಿದ್ದಾಗ ಆನಂದ್ ರೈಫಲ್‌ನಿಂದ ಗುಂಡು ಹಾರಿಸಿದ. ಇದರಿಂದ ಎಸ್ಸೈ ಕುಸಿದು ಬಿದ್ದರು. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

ತನಿಖಾ ತಂಡ ರಚನೆ
ಪಿಎಸ್‌ಐ ವಿಜಯ್‌ಕುಮಾರ್ ಕೊಲೆಗೆ ಸಂಬಂಧಿಸಿದಂತೆ ಎಡಿಜಿ ಬಿಪಿನ್ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, 10 ದಿನದಲ್ಲಿ ವರದಿ ನೀಡುವಂತೆ ಆದೇಶಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಗೃಹಸಚಿವ ಆರ್.ಅಶೋಕ ತಿಳಿಸಿದರು.
ಮರಣೋತ್ತರ ಪರೀಕ್ಷೆಗಾಗಿ ವಿಜಯ್‌ಕುಮಾರ್ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ತರಲಾಗಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ರಜೆ ವಿಚಾರದಲ್ಲಿ ಗಲಾಟೆ ಆಗಿದೆ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ನಂತರ ಹೆಚ್ಚಿನ ಮಾಹಿತಿ ಹೊರಬೀಳಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.