ಪ್ರತ್ಯೇಕ ಗುಲ್ಬರ್ಗ ರೇಲ್ವೆ ವಿಭಾಗವಾದೀತೆ?
ಕ.ಪ್ರ. ವಾರ್ತೆ, ಬೆಂಗಳೂರು, ಜು.1-
ಹೈದರಾಬಾದ್-ಕರ್ನಾಟಕ ಭಾಗದ ಗುಲ್ಬರ್ಗ, ಬೀದರ್, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ರೇಲ್ವೆ ಯೋಜನೆಗಳ ಜಾರಿಯಲ್ಲಿ ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ.
ಮೊದಲೇ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊಂದಿರುವ ಈ ಭಾಗದ ಪ್ರಮುಖ ಯೋಜನೆಗಳು ಇನ್ನು ಪೂರ್ತಿಗೊಂಡಿಲ್ಲ. ಅನೇಕ ಬೇಡಿಕೆಗಳು ಈಡೇರಿಲ್ಲ, ಕೆಲವು ಯೋಜನೆಗಳು ವಿಳಂಬವಾಗುತ್ತಿವೆ. ಹೈದರಾಬಾದ್- ಕರ್ನಾಟಕದ ಪ್ರಮುಖ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರೇ ಇದೀಗ ರೇಲ್ವೆ ಮಂತ್ರಿಯಾಗಿರುವುದರಿಂದ ರೇಲ್ವೆಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳು ಈ ಭಾಗಕ್ಕೆ ದೊರೆಯಬಹುದು ಎಂಬುದು ಇಲ್ಲಿನವರ ಆಶಾಭಾವನೆ.
ನೈಋತ್ಯ ವಲಯ ಕೇಂದ್ರವಾಗಿಟ್ಟುಕೊಂಡು ಪ್ರತ್ಯೇಕ ಗುಲ್ಬರ್ಗ ರೇಲ್ವೆ ವಿಭಾಗವನ್ನು ಮಾಡಬೇಕು ಎಂಬುದು ಇಲ್ಲಿನವರ ಕನಸು ಮತ್ತು ಬೇಡಿಕೆ. ಆದರೆ, ಈ ಕನಸು ಇನ್ನು ನನಸಾಗಿಲ್ಲ. ಎಚ್.ಸಿ.ಸರೀನ್ ನೇತೃತ್ವದ ಸಮಿತಿ 1984ರಲ್ಲೇ ಗುಲ್ಬರ್ಗ ಪ್ರತ್ಯೇಕ ರೇಲ್ವೆ ವಿಭಾಗಕ್ಕೆ ಶಿಫಾರಸು ಮಾಡಿತ್ತು. ಆದರೆ, ಇದುವರೆಗೂ ಈ ಬೇಡಿಕೆ ಈಡೇರಿಲ್ಲ. ಇನ್ನು ಯಾದಗಿರಿ-ಆಲಮಟ್ಟಿ ರೈಲು ಮಾರ್ಗ ಕೂಡಾ ಅನುಷ್ಠಾನವಾಗಿಲ್ಲ. ಬೀದರ್ನಲ್ಲಿ ಬೋಗಿ ಮತ್ತು ಎಂಜಿನ್ ಸ್ವಚ್ಛಗೊಳಿಸುವ ಘಟಕ ಆರಂಭಿಸಬೇಕು ಎಂಬುದು ಬಹಳ ದಿನಗಳ ಬೇಡಿಕೆ. 106 ಕಿ.ಮೀ. ಉದ್ದದ ಬೀದರ್-ಗುಲ್ಬರ್ಗ ರೈಲು ಮಾರ್ಗಕ್ಕೆ 2001ರಲ್ಲೇ ಶಂಕುಸ್ಥಾಪನೆ ಮಾಡಲಾಗಿತ್ತು. ಒಂದು ದಶಕವಾದರೂ ಈ ಯೋಜನೆ ಪೂರ್ತಿಯಾಗಿಲ್ಲ. ಹೀಗೆ ಹಲವಾರು ರೇಲ್ವೆ ಯೋಜನೆಗಳು ಅನುಷ್ಠಾನ ವಿಳಂಬವಾಗಿದ್ದರೆ, ಇನ್ನೂ ಅನೇಕ ಯೋಜನೆಗಳು ಕೈಗೊಡಬೇಕಿದೆ. ಅನೇಕ ಹೊಸ ರೈಲುಗಳನ್ನು ಓಡಿಸಬೇಕಾದ ಅನಿವಾರ್ಯತೆ ಕೂಡಾ ಇಲ್ಲಿದೆ.
ಆಗಬೇಕಾಗಿರುವುದೇನು?
1. ಪ್ರತ್ಯೇಕ ಗುಲ್ಬರ್ಗ ರೇಲ್ವೆ ವಿಭಾಗೀಯ ಕೇಂದ್ರ ರಚನೆಯಾಗಬೇಕು. 3 ದಿನಕ್ಕೊಮ್ಮೆ ಓಡುವ ಸೊಲ್ಲಾಪುರ-ಯಶವಂತಪುರ ರೈಲು ಪ್ರತಿನಿತ್ಯ ಸಂಚರಿಸಬೇಕು.
2. ಗುಲ್ಬರ್ಗ ಜಿಲ್ಲೆಯ ವಾಡಿ ಜಂಕ್ಷನ್ ಅನ್ನು ಮೇಲ್ಜರ್ಜೆಗೇರಿಸಬೇಕಾದ ಅನಿವಾರ್ಯತೆ. ಬೆಂಗಳೂರಿನಿಂದ ಉತ್ತರ ಭಾರತಕ್ಕೆ ತೆರಳುವ ರೈಲುಗಳು ವಾಡಿ ಜಂಕ್ಷನ್ಗೆ ಬರದೇ ಹಲಕಟ್ಟಾ ಮಾರ್ಗವಾಗಿ ತೆರಳುತ್ತೇವೆ. ವಾಡಿ ಜಂಕ್ಷನ್ ಮೇಲ್ದರ್ಜೆಗೇರಿಸಿದರೆ ಇನ್ನಷ್ಟು ಲಾಭವಾಗುತ್ತದೆ.
3. 106 ಕಿ.ಮೀ. ಉದ್ದರ ಗುಲ್ಬರ್ಗ-ಬೀದರ್ ರೈಲು ಮಾರ್ಗ ಕಾಮಗಾರಿ ನೆನೆಗುದಿಗೆಗೆ ಬಿದ್ದಿದೆ. ಬೀದರ್ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ಗುಲ್ಬರ್ಗ ಭಾಗದ 53 ಕಿ.ಮೀ. ಮಾರ್ಗ ಇನ್ನೂ ರೆಡಿಯಾಗಿಲ್ಲ. ಇದಕ್ಕೆ ಹಣದ ಕೊರತೆ ಎದುರಾಗಿದ್ದು, ನಿವಾರಿಸಬೇಕಿದೆ.
4. ಹೈದರಾಬಾದ್-ಗುಲ್ಬರ್ಗ-ಗೋವಾ ಸೂಪರ್ಫಾಸ್ಟ್ ರೈಲು ಓಡಿಸಬೇಕೆಂಬುದು ಜನರ ಬೇಡಿಕೆ. ಇದರಿಂದ ಗುಲ್ಬರ್ಗ ಮತ್ತು ಮಧ್ಯ ಕರ್ನಾಟಕ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಸೊಲ್ಲಾಪುರದಿಂದ ಬೆಂಗಳೂರಿಗೆ ಪ್ರತ್ಯೇಕ ಗರೀಬ್ ರಥ ಓಡಿಸಬೇಕೆಂಬ ಬೇಡಿಕೆಯೂ ಇದೆ.
5. ನಾಂದೇಡ್ ಎಕ್ಸ್ಪ್ರೆಸ್ ರೈಲು ಬದಲಾವಣೆ ಮಾಡಬೇಕೆಂಬ ಒತ್ತಾಯಕ್ಕೆ ಇನ್ನೂ ಬೆಲೆ ಸಿಕ್ಕಿಲ್ಲ.
6. ಬೀದರ್ನಲ್ಲಿ ರೈಲು ಎಂಜಿನ್ ಮತ್ತು ಬೋಗಿಗಳ ಸ್ವಚ್ಛಗೊಳಿಸುವ ಘಟಕ ಆರಂಭಿಸಬೇಕು. ಲಾತೂರು-ಮುಂಬೈ ಹಾಗೂ ನಾಂದೇಡ್-ಅಮೃತಸರ ರೈಲುಗಳನ್ನು ಬೀದರ್ ಮಾರ್ಗವಾಗಿ ಓಡಿಸಬೇಕು. ಇದಿರಂದ ಬೀದರ್ ಜಿಲ್ಲೆಯ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.
7. ಬೀದರ್ನಿಂದ ನೇರವಾಗಿ ದೆಹಲಿಗೆ ಸಂಪರ್ಕ ಕಲ್ಪಿಸುವ ರೈಲುಗಳಿಲ್ಲ. ಹಾಗಾಗಿ, ಹೈದ್ರಾಬಾದ್ನಿಂದ ಹೊರಡುವ ಸಾಕಷ್ಟು ರೈಲುಗಳ ಪೈಕಿ ಒಂದನ್ನಾದರೂ ಬೀದರ್ ಮಾರ್ಗವಾಗಿ ಓಡಿಸಬೇಕು. ಇದರಿಂದ ದೆಹಲಿಗೆ ಮಾರ್ಗದಲ್ಲಿ 200 ಕಿ.ಮೀ.ನಷ್ಟು ಅಂತರ ಕಡಿಮೆಯಾಗಲಿದೆ.
8. ದಶಕಗಳಷ್ಟು ಹಳೆಯದಾದ ಮುನಿರಾಬಾದ್-ಮೆಹಬೂಬ್ ನಗರ ಉದ್ದೇಶಿತ ರೈಲು ಮಾರ್ಗ ಇನ್ನು ಅನುಷ್ಠಾನವಾಗಿಲ್ಲ. 165 ಕಿ.ಮೀ. ಉದ್ದದ ಈ ಮಾರ್ಗ ಒಟ್ಟು 1180 ಎಕರೆ ಭೂಸ್ವಾಧೀನವಾಗಬೇಕಿದೆ. ಇದರಲ್ಲಿ 1068 ಎಕರೆ ಸ್ವಾಧೀನ ಪ್ರಕ್ರಿಯೆ ಬಹುತೇಕ ಮುಕ್ತಾಯ ಹಂತದಲ್ಲಿದೆ. ಆದರೆ, ಕೆಲವರು ಕೋರ್ಟ್ ಮೊರೆ ಹೋಗಿರುವುದರಿಂದ ವಿಳಂಬವಾಗಿದೆ. ಇದನ್ನು ನಿವಾರಿಸಬೇಕಿದೆ.
9. ಗದಗ-ವಾಡಿ, ರಾಯಚೂರು-ಬಾಗಲಕೋಟೆ-ಬೆಳಗಾವಿ ರೈಲು ಮಾರ್ಗ ನಿರ್ಮಾಣದ ಪ್ರಸ್ತಾಪವಿದೆ. ಈ ಬಗ್ಗೆ ಬಜೆಟ್ನಲ್ಲಿ ಘೋಷಣೆ ಕೂಡಾ ಆಗಿದೆ. ಆದರೆ, ಕೇಂದ್ರ ಸರ್ಕಾರ ಇನ್ನು ಈ ಬಗ್ಗೆ ತೀವ್ರತರ ಗಮನವಹಿಸಿಲ್ಲ.
10. ಯಾದಗಿರಿ ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಪಡಿತರ ಆಹಾರ ಸಂಗ್ರಹಕ್ಕಾಗಿ ರೇಕ್ ಪಾಯಿಂಟ್ ಒದಗಿಸಬೇಕು ಎಂಬುದು ಬಹಳ ದಿನಗಳ ಬೇಡಿಕೆ ಇದೆ. ಯಾದಗಿರಿ ರೇಲ್ವೆ ನಿಲ್ದಾಣ ಮೇಲ್ದರ್ಜೇಗೇರಿಸಬೇಕಿದೆ.
11. ಗುಲ್ಬರ್ಗದಿಂದ ಬೆಂಗಳೂರು ಮತ್ತು ರಾಯಚೂರಿನಿಂದ ಹೈದರಾಬಾದ್ಗೆ ವಾಡಿ ಮಾರ್ಗವಾಗಿ ಪ್ಯಾಸೆಂಜರ್ ರೈಲು ಓಡಿಸಿಬೇಕು. ಅಲ್ಲದೆ, ಗುಲ್ಬರ್ಗ-ರಾಯಚೂರು ಮಧ್ಯೆ ಇಂಟರ್ಸಿಟಿ ರೈಲು ಓಡಿಸಬೇಕು ಎಂಬುದು ಇಲ್ಲಿನವರ ಬಹು ದಿನದ ಬೇಡಿಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

