ಸ್ಥಳೀಯ ಮುಖ್ಯಸ್ಥರ ಆಯ್ಕೆಗೆ ಆಯೋಗ ಆಸಕ್ತಿ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು. 1-
ನಗರ-ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಪಾಲಿಕೆಗಳ ಮೇಯರ್- ಉಪ ಮೇಯರ್ ಹುದ್ದೆಗೆ ಚುನಾವಣೆ ನಡೆಸುವ ಹಕ್ಕನ್ನು ತನಗೇ ನೀಡುವಂತೆ ರಾಜ್ಯ ಚುನಾವಣೆ ಆಯೋಗ ಸರ್ಕಾರಕ್ಕೆ ಪ್ರಸ್ತಾವ
ಸಲ್ಲಿಸಿದೆ. ಹೀಗಾಗಿ ನಗರ-ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಪಾಲಿಕೆಗಳ ಮೇಯರ್- ಉಪ ಮೇಯರ್ ಚುನಾವಣೆ ವಿಚಾರ ಇನ್ನಷ್ಟು ಜಟಿಲವಾಗುವ ಸಾಧ್ಯತೆ ಇದೆ.
ಸಂವಿಧಾನದ 73 ಹಾಗೂ 74ನೇ ವಿಧಿ, ನಗರ-ಸ್ಥಳೀಯ ಸಂಸ್ಥೆಗಳ ಕಾಯಿದೆ ಸೆಕ್ಷನ್ 243 ಝೆಡ್ ಎ, 243 ಕೆ ಹಾಗೂ ವಿವಿಧ ನ್ಯಾಯಾಲಯಗಳು ನೀಡಿದ ತೀರ್ಪಿನ ಆಧಾರದ ಮೇಲೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸುವ ಹಕ್ಕನ್ನು ತನಗೆ ನೀಡುವಂತೆ ಆಯೋಗ ಸರ್ಕಾರವನ್ನು ಕೇಳಿದೆ.
ಅಷ್ಟು ಮಾತ್ರವಲ್ಲ ಕರ್ನಾಟಕ ಮುನಿಸಿಪಾಲಿಟೀಸ್ ಅಧಿನಿಯಮ-1964, ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಅಧಿನಿಯಮ -1976 ಹಾಗೂ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಅಧಿನಿಯಮ 1987 ರ ಅಡಿ 15 ಅವಶ್ಯಕ ತಿದ್ದುಪಡಿಗಳನ್ನು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ತಪ್ಪಿಸುವುದು ಹಾಗೂ ಅನಗತ್ಯ ವಿಳಂಬ ತಡೆಯುವ ಉದ್ದೇಶದಿಂದ ಮೇ 27ರಂದೇ ಈ ಪ್ರಸ್ತಾಪ ಸಲ್ಲಿಸಲಾಗಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಶಿಷ್ಟಾಚಾರದ ಭೇಟಿ ಸಂದರ್ಭದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಿ.ಆರ್.ಚಿಕ್ಕಮಠ್ ಮೌಖಿಕವಾಗಿ ವಿಷಯ ತಿಳಿಸಿದ್ದು, ಈ ಬಗ್ಗೆ ಚರ್ಚಿಸುವುದಕ್ಕೆ ಸಮಯ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಆಡಳಿತದಲ್ಲಿ ತನ್ನ ಹಿಡಿತ ಬಿಟ್ಟುಕೊಡಲು ಯಾವ ಪಕ್ಷಗಳೂ ಸಿದ್ಧವಿಲ್ಲದೇ ಇರುವುದರಿಂದ ಪ್ರಕರಣ ಮತ್ತೆ ನ್ಯಾಯಾಲಯದ ಮೆಟ್ಟಿಲು ಏರುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.
ಏನಿದು ವಿವಾದ : ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾಯಿದೆ ಪ್ರಕಾರ, ಎಲ್ಲ ಚುನಾವಣೆಗಳನ್ನು ನಡೆಸುವ ಅಧಿಕಾರ ರಾಜ್ಯ ಚುನಾವಣಾ ಆಯೋಗದ್ದು ಎಂದಿದೆ.
ಇದಕ್ಕೆ ಸಂವಿಧಾನದ 73 ಹಾಗೂ 74 ನೇ ವಿಧಿಯ ಬಲವೂ ಇದೆ. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾತ್ರ ನಡೆಸುವುದಕಷ್ಟೇ ಕರ್ನಾಟಕದಲ್ಲಿ ಆಯೋಗಕ್ಕೆ ಅವಕಾಶ ನೀಡಲಾಗಿದ್ದು, ಅಧ್ಯಕ್ಷರು, ಉಪಾಧ್ಯಕ್ಷರು, ಮೇಯರ್-ಉಪಮೇಯರ್ ಮೀಸಲು ನೀತಿ ಹಾಗೂ ಚುನಾವಣೆ ನಡೆಸುವ ಅಧಿಕಾರವನ್ನು ರಾಜ್ಯ ಸರ್ಕಾರವೇ ಉಳಿಸಿಕೊಂಡಿದೆ.
ಆಯೋಗದ ಪ್ರಕಾರ 'ಎಲ್ಲ ಚುನಾವಣೆ' ಎಂಬ ಪದದ ವ್ಯಾಪ್ತಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ, ಮೇಯರ್-ಉಮೇಯರ್ ಚುನಾವಣೆಯೂ ಬರುತ್ತದೆ. ಹೀಗಾಗಿ ನ್ಯಾಯ ಸಮ್ಮತವಾದ ಈ ಅಧಿಕಾರವನ್ನು ತನಗೆ ನೀಡಿ ಎಂಬ ವಾದವನ್ನು ಮುಂದಿಟ್ಟಿದೆ.
ಬೇರೆ ರಾಜ್ಯಗಳಲ್ಲಿ ಇದೆ : ಇದೆಲ್ಲಕ್ಕಿಂತ ಹೆಚ್ಚಾಗಿ ದೇಶದ ಹಲವು ರಾಜ್ಯಗಳಲ್ಲಿ ಎಲ್ಲ ಚುನಾವಣೆ ನಡೆಸುವ ಅಧಿಕಾರವನ್ನು ಅಲ್ಲಿನ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ಆಂಧ್ರಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಓರಿಸ್ಸಾ, ತಮಿಳುನಾಡು, ಉತ್ತರಾಂಚಲ, ಉತ್ತರಖಂಡ ರಾಜ್ಯಗಳು ಈಗಾಗಲೇ ಈ ಪದ್ಧತಿಯನ್ನು ಜಾರಿಗೆ ತಂದಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಮೀನಮೇಷ ಎಣಿಸುವ ಬಗ್ಗೆ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಕಾನೂನು ತಿದ್ದುಪಡಿ ಮಾಡುವಂತೆ ಆಯೋಗದ ಅಧ್ಯಕ್ಷ ಚಿಕ್ಕಮಠ್, ಹಿಂದಿನ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಪ್ರಸ್ತಾಪ ಸಲ್ಲಿಸಿದ್ದರು.
ಆದರೆ ಹಿಂದಿನ ಬಿಜೆಪಿ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವಂತೆ ಪ್ರಯತ್ನ ಮಾಡಿತ್ತೇ ಹೊರತು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಆಯೋಗ ಮತ್ತೆ ರಾಜ್ಯ ಸರ್ಕಾರದ ಮೊರೆ ಹೋಗಿದೆ.
ಇದು ಕೇಂದ್ರ ಸರ್ಕಾರದ ಪ್ರಸ್ತಾಪ
ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯ ಚುನಾವಣಾ ಆಯೋಗವನ್ನು ಬಲಪಡಿಸುವ ಉದ್ದೇಶವನ್ನು ಕೇಂದ್ರದ ಯುಪಿಎ ಸರ್ಕಾರವೇ ಹೊಂದಿದೆ. 2011ರಲ್ಲಿ ದೆಹಲಿಯಲ್ಲಿ ಎಲ್ಲ ರಾಜ್ಯಗಳ ಚುನಾವಣಾ ಆಯೋಗದ ಸಭೆ ನಡೆಸಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಇಲಾಖೆ, ಒಂದು ಕಾರ್ಯಪಡೆಯನ್ನು ರಚಿಸಿ, ಎಲ್ಲ ಚುನಾವಣೆ ನಡೆಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗಕ್ಕೆ ನೀಡಲು ಮುಂದಾಗಿತ್ತು. ಮಾತ್ರವಲ್ಲ ಆ ಸಭೆಯ ನಡಾವಳಿಯನ್ನೇ 2011-12ನೇ ಸಾಲಿನ ಇಲಾಖೆಯ ವಾರ್ಷಿಕ ವರದಿಯಾಗಿ ಪರಿಗಣಿಸಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಅದು ಈ ವರದಿಯನ್ನು ಒಪ್ಪಿಕೊಳ್ಳುತ್ತದೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ನಾನು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಪ್ರಸ್ತಾಪ ಸಲ್ಲಿಸಿದ್ದೇನೆ. ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಹಿಂದೆ ರಾಂಚಿಯಲ್ಲಿ ಎಲ್ಲ ರಾಜ್ಯಗಳ ಚುನಾವಣಾ ಆಯುಕ್ತರ ಜತೆ ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷರು ಸಭೆ ನಡೆಸಿದ್ದರು. ಆ ಸಂದರ್ಭದಲ್ಲಿ ಆಯೋಗಕ್ಕೆ ಬೇಕಾದ ಹಕ್ಕುಗಳನ್ನು ಕೆಲವೊಮ್ಮೆ ನ್ಯಾಯಾಲಯದ ಮೂಲಕ ಪಡೆಯುವುದು ಅನಿವಾರ್ಯವಾಗುತ್ತದೆ.
-ಸಿ.ಆರ್.ಚಿಕ್ಕಮಠ್ ಮುಖ್ಯ ಚುನಾವಣಾ ಅಧಿಕಾರಿ
- ರಾಘವೇಂದ್ರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

