ಕಂದಾಯ ಇಲಾಖೆ ಅವಾಂತರ ವಿವಾಹ ಭಾಗ್ಯಕ್ಕೆ ಗಂಡಾಂತರ!
ಕನ್ನಡಪ್ರಭ ವಾರ್ತೆ , ಬಿಜಾಪುರ , ಜು.6
ಸರ್ಕಾರದ 'ನಿಧಾನಗತಿ'ಯಿಂದ ಕಂಕಣ ಭಾಗ್ಯಕ್ಕೆ ಕಲ್ಲು ಬಿದ್ದಿದೆ!
ಹೌದು. ಕಂದಾಯ ಇಲಾಖೆಯ ಸರ್ವೆಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡುವಲ್ಲಿ ವಿಳಂಬವಾಗಿದ್ದರಿಂದ ಇಂಥ ಅವಾಂತರ ಎದುರಾಗಿದ್ದು, ಬಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಕೋಳೂರಿಗಿ ಗ್ರಾಮದ ಭೀಮನಗೌಡ ಪಾಟೀಲ್ (ಹೆಸರು ಬದಲಿಸಲಾಗಿದೆ) ಅವರಿಗೆ ಮದುವೆ ಮಾಡಿಕೊಡಲು ವಧುವಿನ ಕುಟುಂಬ ಸದಸ್ಯರು ನಿರಾಕರಿಸಿದ್ದಾರೆ. ಅಲ್ಲದೇ ಸರ್ಕಾರಿ ನೌಕರಿಗೆ ಆಯ್ಕೆಯಾದ ಆದೇಶ ಪತ್ರ ತರುವಂತೆ ತಾಕೀತು ಮಾಡಿದ್ದಾರೆ. 2012ರ ಡಿಸೆಂಬರ್ನಲ್ಲಿಯೇ ಕಂದಾಯ ಇಲಾಖೆಯ ಸರ್ವೆಯರ್ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಮೇ ತಿಂಗಳಲ್ಲಿ ಅಂತಿಮ ಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಆದೇಶ ಪತ್ರ ಮಾತ್ರ ಇದುವರೆಗೂ ಬಂದಿಲ್ಲ. ಹೀಗಾಗಿ ಶುಭ ಗಳಿಗೆ ವಿಘ್ನ ಎದುರಾಗಿದೆ.
ಇಂಡಿ ತಾಲೂಕಿನ ಕೋಳೂರಿಗಿ ಯ ಭೀಮನಗೌಡನಿಗೆ ಹಣಗುಣಕಿ ಗ್ರಾಮದ ಶಾಂತಾ (ಹೆಸರು ಬದಲಿಸಲಾಗಿದೆ) ಜತೆ ಕಳೆದ ಜೂನ್ನಲ್ಲಿ ಮದುವೆ ನಿಶ್ಚಯವಾಗಿತ್ತು. ಹುದ್ದೆಗೆ ಪ್ರಕಟವಾದ ಅಂತಿಮ ಪಟ್ಟಿಯಲ್ಲಿ ವರನ ಹೆಸರಿದ್ದರಿಂದ ವಧುವಿನ ಕುಟುಂಬದವರು 'ಸರ್ಕಾರಿ ಉದ್ಯೋಗಿ' ಎಂದು ಸಮ್ಮತಿ ಸೂಚಿಸಿದ್ದರು.
ಕಾರಣ ಏನು?
ಬಿಜಾಪುರ ಜಿಲ್ಲೆಯಲ್ಲಿಯೇ ಸುಮಾರು 200 ಅಭ್ಯರ್ಥಿಗಳು ಸರ್ವೆಯರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸಿಂಧುತ್ವ ಪರಿಶೀಲನೆ, ಪೊಲೀಸ್ ಇಲಾಖೆ ಪರಿಶೀಲನೆ ಎಲ್ಲವೂ ಮುಗಿದಿದೆ. ಆದರೆ, ಆದೇಶ ಪತ್ರ ಬಂದಿಲ್ಲ. ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿನ 370 ಅಭ್ಯರ್ಥಿಗಳನ್ನು ವಿವಿಧ ಕಾರಣಗಳಿಂದ ನೇಮಕಾತಿಯಿಂದ ಕೈ ಬಿಡಲಾಗಿದೆ. ಈ ಅಭ್ಯರ್ಥಿಗಳು ನೇಮಕಾತಿಯಿಂದ ತಮ್ಮನ್ನು ಕೈ ಬಿಡದೇ ಆಯ್ಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅಂತಿಮ ಆಯ್ಕೆ ಪಟ್ಟಿಯಲ್ಲಿನ 1,704 ಅಭ್ಯರ್ಥಿಗಳಿಗೆ ಆದೇಶ ನೀಡುವುದು ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.
-ರುದ್ರಪ್ಪ ಆಸಂಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

