ಪ್ರಧಾನ ಸುದ್ದಿ

ಭೂ ಒತ್ತು, ತೆರವು ಯಾವತ್ತು?

Published On :

ಕನ್ನಡಪ್ರಭ ವಾರ್ತೆ  ಬೆಂಗಳೂರು  ಜು. 14-
ಒಂದು ಇಂಚು ಸರ್ಕಾರಿ ಭೂಮಿ ಒತ್ತುವರಿ ಆಗಲು ಬಿಡುವುದಿಲ್ಲ. ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರ ಮೇಲೆ ಕಾನೂನು ಕ್ರಮ ಗ್ಯಾರಂಟಿ... ಕಳೆದ 10 ವರ್ಷಗಳಲ್ಲಿ ರಾಜ್ಯದ ಏಳು ಮುಖ್ಯಮಂತ್ರಿಗಳು ಹೇಳಿದ ಮಾತಿದು.
ಇಷ್ಟೆಲ್ಲ ಘೋಷಣೆ ಮಾಡುವ ರಾಜಕಾರಣಿಗಳು ಐದು ಬಜೆಟ್ ಮಂಡಿಸಬಹುದಾದಷ್ಟು ಮೌಲ್ಯದ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಮಾತ್ರ ಮನಸ್ಸು ಮಾಡಿಲ್ಲ. ಎಸ್.ಎಂ. ಕೃಷ್ಣ, ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಒತ್ತುವರಿ ತೆರವಿನ ಮಾತುಗಳನ್ನಾಡಿದ್ದಾರೆ. ಇಂತಹದ್ದೇ ಮಾತನಾಡಿದರ ಸಚಿವರ ಸಂಖ್ಯೆ ಲೆಕ್ಕ ಸಿಗದಷ್ಟಿದೆ. ಆದರೆ, ಸರ್ಕಾರಿ ಭೂಮಿ ಹಾಗೂ ಅರಣ್ಯ ಭೂಮಿ ಸರ್ಕಾರಕ್ಕೆ ವಾಪಸ್ ಬಂದೇ ಇಲ್ಲ. ಪ್ರಭಾವಿಗಳ ಲಾಬಿಗೇ ಇಲ್ಲಿಯವರೆಗಿನ ಎಲ್ಲ ಸರ್ಕಾರಗಳೂ ಮಣಿದಿರುವುದಕ್ಕೆ ಇದೇ ಸಾಕ್ಷಿ.
ಈಗ ಸಿದ್ದರಾಮಯ್ಯ ಸರದಿ. ಅಧಿಕಾರ ವಹಿಸಿಕೊಂಡ ಪ್ರಥಮ ದಿನದಿಂದಲೂ ಸರ್ಕಾರಿ ಭೂಮಿ ಒತ್ತುವರಿ ಬಿಡುವುದಿಲ್ಲ. ಎ.ಟಿ. ರಾಮಸ್ವಾಮಿ ವರದಿ ಹಾಗೂ ವಿ. ಬಾಲಸುಬ್ರಮಣಿಯನ್ ವರದಿ ಅನುಷ್ಠಾನಗೊಳಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಹಿಂದಿನವರೂ ಇದನ್ನೇ ಹೇಳಿದ್ದರು. ಆದರೆ ಯಾರೂ ಅಧಿಕೃತವಾಗಿ ಒಂದೇ ಒಂದು ಸರ್ಕಾರಿ ಆದೇಶ ಹೊರಡಿಸಲಿಲ್ಲ.
ಇದಕ್ಕೆ ಕಾರಣ ರಾಜಕಾರಣಿಗಳು ಅಥವಾ ಜನಪ್ರತಿನಿಧಿಗಳು. ಇದರಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು ಸಂಸದರು, ಶಾಸಕರೆಲ್ಲರೂ ಸೇರಿಕೊಳ್ಳುತ್ತಾರೆ. ಅದಕ್ಕೇ ಜಿಲ್ಲಾಧಿಕಾರಿಗಳ ಮಟ್ಟದಲ್ಲೇ ಒತ್ತುವರಿ ತೆರವು ಕಾರ್ಯ ಮುಗಿಯಬೇಕಿದ್ದರೂ ಅವರು ಅಂತಹ ಕಾರ್ಯ ಮಾಡದಂತೆ ಅವರನ್ನು ಆದೇಶದಿಂದ ಕಟ್ಟಿಹಾಕಲಾಗಿದೆ.        

ರಾಜ್ಯ ಸರ್ಕಾರದ್ದೇ ಆದೇಶದ ಪ್ರಕಾರ ರಚಿತವಾದ 'ಸಾರ್ವಜನಿಕ ಭೂಮಿಯನ್ನು ಹಿಂದಕ್ಕೆ ಪಡೆಯಲು ಮತ್ತು ಸಂರಕ್ಷಿಸುವ ಸಲುವಾಗಿ ಕಾರ್ಯಪಡೆ'ಯ ಕಾರ್ಯಕ್ಕೇ ತಡೆಯಾಯಿತು.
ವಿ. ಬಾಲಸುಬ್ರಮಣಿಯನ್ ಅಧ್ಯಕ್ಷತೆಯ ಈ ಕಾರ್ಯಪಡೆಗೆ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವಿಗೆ  ಸಾಕಷ್ಟು ಅಧಿಕಾರ ನೀಡಲಾಗಿತ್ತು. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಬಹುದಿತ್ತು. ಇಂತಹ ಕಾರ್ಯಕ್ಕೆ ಮುಂದಾದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಅವರದ್ದೇ ಪಕ್ಷದ ಸಂಸದರು, ಶಾಸಕರು ಹಾಗೂ ಎಲ್ಲ ಪಕ್ಷದ ಶಾಸಕರ ಒತ್ತಡ ಹೆಚ್ಚಾಯಿತು. ಹೀಗಾಗಿ, ಜಿಲ್ಲಾಧಿಕಾರಿಗಳ ಒತ್ತುವರಿ ಕಾರ್ಯಕ್ಕೆ 2010ರ ಆಗಸ್ಟ್‌ನಲ್ಲಿ ವಿರಾಮ ಹಾಕಿದ್ದರು. ಅಂದಿನಿಂದಲೂ ಈ ವಿರಾಮಕ್ಕೆ ಅಂತ್ಯ ಹಾಡುವ ಕೆಲಸ ಇನ್ನೂ ಆಗಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ರೈತ ಮುಖಂಡರು ಅಂದಿನ ಸಂಸದರೊಂದಿಗೆ ಮಾಡಿಕೊಂಡ ಮನವಿಯಂತೆ 2010ರ ಆಗಸ್ಟ್ 4ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕಾರ್ಯದರ್ಶಿಯವರು ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದರು. 'ಅರ್ಜಿದಾರರ ಮನವಿಯನ್ನು ಪರಿಗಣಿಸಲು ಆದೇಶಿಸಿದೆ ಹಾಗೂ ಸರ್ಕಾರದ ಮಟ್ಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಯಾವುದೇ ಪ್ರಿಸಿಪಿಟೇಟಿವ್ ಆಕ್ಷನ್ (ಶಾಶ್ವತ ಕ್ರಮ) ತೆಗೆದುಕೊಳ್ಳದಿರುವಂತೆ ಆದೇಶಿಸಿದೆ' ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಯವರಿಗೆ ಪತ್ರ ರವಾನಿಸಿದ್ದಾರೆ.
ಇದೇ ರೀತಿ, ಬೇಲೂರು ಶಾಸಕ ವೈ.ಎನ್. ರುದ್ರೇಶ್‌ಗೌಡ ಅವರ ಕೋರಿಕೆಯಂತೆ ಇದೇ ರೀತಿಯ ಆದೇಶವನ್ನು ಹಾಸನ ಜಿಲ್ಲಾಧಿಕಾರಿ ಅವರಿಗೂ 2010ರ ನವೆಂಬರ್ 19ರಂದು ರವಾನಿಸಲಾಗಿದೆ.  ರಾಜಕಾರಣಿಗಳು ಈ ಎರಡು ಆದೇಶಗಳನ್ನೇ ಬಳಸಿಕೊಂಡು ಸರ್ಕಾರಿ ಭೂಮಿ ಒತ್ತುವರಿ ತೆರವಾಗದಂತೆ ತಡೆಯಾಗಿದ್ದಾರೆ. ಸರ್ಕಾರದ ಆದೇಶವೇ ಇರುವಾಗ ನಾವೇಕೆ ವಿರೋಧ ಕಟ್ಟಿಕೊಳ್ಳಬೇಕು ಎಂದು ಅಧಿಕಾರಿಗಳೂ ಸುಮ್ಮನಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಭೂಮಿ ಒತ್ತುವರಿ ತೆರವಿನ ನಿರ್ಧಾರದಲ್ಲಿ ಅಚಲವಾಗಿದ್ದರೆ, ಜಿಲ್ಲಾಧಿಕಾರಿಗಳಿಗೆ ನೀಡಿರುವ ಈ ಆದೇಶವನ್ನು ಮೊದಲು ತೆರವುಗೊಳಿಸಬೇಕು. ಕ್ಷಿಪ್ರಗತಿಯಲ್ಲಿ ಒತ್ತುವರಿ ತೆರವಾಗಬೇಕು ಎಂದು ಸೂಚಿಸಬೇಕು. ಇದು ಕೇವಲ ಮಾತಿನಲ್ಲಿ ಆದರೆ ಸಾಲದು. ಲಿಖಿತ ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ ತಲುಪಬೇಕು. ಈ ಪ್ರಥಮ ಕೆಲಸ ಸಿದ್ದರಾಮಯ್ಯ ಅವರಿಂದಾದೀತೇ?

ಒತ್ತುವರಿ ಮೌಲ್ಯ 7.5 ಲಕ್ಷ ಕೋಟಿ

ರಾಜ್ಯದಲ್ಲಿ ಒಟ್ಟಾರೆ ಸರ್ಕಾರಿ ಭೂಮಿ ಒತ್ತುವರಿ 12ರಿಂದ 15 ಲಕ್ಷ ಎಕರೆಗಳು. ಅಂದರೆ, ಸರ್ಕಾರದ ಸುಮಾರು ಶೇ.15ರಷ್ಟು ಭೂಮಿ ಒತ್ತುವರಿಯಾಗಿದೆ. ಇದನ್ನು ವಿ. ಬಾಲಸುಬ್ರಮಣಿಯನ್ ವರದಿ ಸವಿವರವಾಗಿ ವಿವರಿಸಿದೆ. ಯಾರ್ಯಾರು ಎಷ್ಟೆಷ್ಟು ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ. ಆ ವ್ಯಕ್ತಿಯ ಹಿನ್ನೆಲೆಯನ್ನೂ ತಿಳಿಸಿದೆ. ಏಕೆಂದರೆ ಸರ್ಕಾರಿ ಭೂಮಿ ಒತ್ತುವರಿಯಲ್ಲಿ ಶೇ.75ರಷ್ಟು ಮಂದಿ ಖಂಡಿತಾ ಬಡವರಲ್ಲ. ಒತ್ತುವರಿಯಾಗಿರುವ ಸರ್ಕಾರಿ ಭೂಮಿಯ ಕನಿಷ್ಠ ಬೆಲೆ ಎಷ್ಟಾಗುತ್ತದೆ ಗೊತ್ತೇ? ಸುಮಾರು 750,00,00,00,000 ರುಪಾಯಿ. (7.5 ಲಕ್ಷ ಕೋಟಿ ರುಪಾಯಿ) ಒಂದು ಎಕರೆಗೆ ಸರಾಸರಿ ಐದು ಲಕ್ಷ ರುಪಾಯಿ ಎಂದು ಲೆಕ್ಕ ಮಾಡಿದರೆ ಇಷ್ಟು ಮೊತ್ತವಾಗುತ್ತದೆ. ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಷ್ಟು ಗಾತ್ರ ಆರು ಬಜೆಟ್ ಮೊತ್ತ ಇದಾಗುತ್ತದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಮಾಡಿಕೊಂಡು ಹೋದರು ಐದು ಬಜೆಟ್‌ನ ಮೌಲ್ಯವಂತೂ ಆಗುತ್ತದೆ.

- ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.