ರೇಪಿಸ್ಟ್ಗಳ 'ಗುರುತು ಪತ್ತೆ' ಆಗಿಲ್ಲ
ಕ.ಪ್ರ.ವಾರ್ತೆ, ಉಡುಪಿ, ಜು.23-
ಮಣಿಪಾಲ ವೈದ್ಯ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದು ತಿಂಗಳು ಕಳೆದರೂ, ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಬರುವಾಗ ಅವರ ಮುಖಕ್ಕೆ ಇನ್ನೂ ಕಪ್ಪು ಬಟ್ಟೆಯ ಮುಸುಕು ಹಾಕುತ್ತಿದ್ದಾರೆ. ಅವರ ಮುಖವನ್ನು ನೋಡುವುದಕ್ಕೆ ಮಾಧ್ಯಮದವರಿಗೆ, ಸಾರ್ವಜನಿಕರಿಗೆ ಇನ್ನೂ ಅವಕಾಶ ನೀಡುತ್ತಿಲ್ಲ
ಕಾರಣ ಆರೋಪಿಗಳ 'ಗುರುತು ಪತ್ತೆ ಪರೇಡ್' (ಐಡಿಂಟಿಫಿಕೇಶನ್ ಪರೇಡ್) ಇನ್ನೂ ಆಗಿಲ್ಲ. ಪರೆಡ್ ಆಗದೇ ಇರುವುದರಿಂದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸುವುದಕ್ಕೆ ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಜೂ.20ರಂದು ಮಧ್ಯರಾತ್ರಿ ಮೂವರು ಆಟೋ ಚಾಲಕರು ಮಣಿಪಾಲ ವಿವಿ ವೈದ್ಯ ವಿದ್ಯಾರ್ಥಿನಿಯನ್ನು ಅಪಹರಿಸಿ ಅಮಾನುಷವಾಗಿ ಅತ್ಯಾಚಾರ ನಡೆಸಿದ್ದರು. ಆರೋಪಿಗಳ ಬಗ್ಗೆ ಯಾವುದೇ ಗಟ್ಟಿ ಸುಳಿವಿಲ್ಲದಿದ್ದರೂ, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ವಾರದೊಳಗಾಗಿ ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ಪರೇಡ್?: ಪೊಲೀಸರಿಗೆ ಅತ್ಯಾಚಾರದ ಆರೋಪಿಗಳು ಇವರೇ ಎಂದು ತಿಳಿದಿದ್ದರೂ, ಅದನ್ನು ಜಾರ್ಚ್ಶೀಟ್ನಲ್ಲಿ ದಾಖಲಿಸುವುದಕ್ಕೆ ಪಕ್ಕಾ ಸಾಕ್ಷ್ಯಾಧಾರಗಳು ಬೇಕಾಗುತ್ತವೆ. ಕಾನೂನು ಪ್ರಕ್ರಿಯೆಗಳಿಗೆ ಅನುಸಾರವಾಗಿ, ಅತ್ಯಾಚಾರಕ್ಕೊಳಗಾದ ಯುವತಿ ಆರೋಪಿಗಳನ್ನು ನೋಡಿ ತನ್ನ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಇವರೇ ಎಂದು ಗುರುತಿಸಬೇಕಾಗುತ್ತದೆ. ಇದನ್ನೇ 'ಗುರುತು ಪತ್ತೆ ಪರೇಡ್' ಎನ್ನುತ್ತಾರೆ. ಆದರೆ, ಈ ಪರೇಡ್ನಲ್ಲಿ ಭಾಗವಹಿಸುವುದಕ್ಕೆ ಅತ್ಯಾಚಾರಕ್ಕೊಳಗಾದ ವೈದ್ಯ ವಿದ್ಯಾರ್ಥಿನಿ ನಿರಾಕರಿಸಿದ್ದಾಳೆ. ಆದ್ದರಿಂದ ಕಾನೂನಿನ ದೃಷ್ಟಿಯಲ್ಲಿ 'ಇವರೇ ಅತ್ಯಾಚಾರ ನಡೆಸಿದ್ದು' ಎಂದು ಆರೋಪಿಗಳನ್ನು ಜಾರ್ಚ್ಶೀಟ್ನಲ್ಲಿ ದಾಖಲಿಸುವುದಕ್ಕೆ ಪೊಲೀಸರಿಗೆ ತೊಂದರೆಯಾಗುತ್ತಿದೆ.
ಮುಂದೇನು?: ಅತ್ಯಾಚಾರಕ್ಕೊಳಗಾದ ಯುವತಿ ಪೊಲೀಸರಿಗೆ ಸಹಕರಿಸುವುದಕ್ಕೆ ನಿರಾಕರಿಸಿರುವುದರಿಂದ, ಪೊಲೀಸರು ಆರೋಪಿಗಳನ್ನು ವೈಜ್ಞಾನಿಕವಾಗಿ ಐಡೆಂಟಿಫಿಕೇಶನ್(ಗುರುತಿಸುವ ಪ್ರಕ್ರಿಯೆ)ಗೆ ಒಳಪಡಿಸಲು ನಿರ್ಧರಿಸಿದ್ದಾರೆ. ಇದರೊಂದಿಗೆ ಇದು ಅತ್ಯಂತ ಅಪರೂಪದ ಪ್ರಕರಣವಾಗಿ ಬದಲಾಗುತ್ತಿದೆ. ಅಂದರೆ, ಅತ್ಯಾಚಾರ ನಡೆಸಿದಾಗ ಯುವತಿ ಮೈಮೇಲೆ ಉಳಿದಿದ್ದ ಅತ್ಯಾಚಾರಿಗಳ ವೀರ್ಯ, ಕೂದಲು, ಎಂಜಲು, ರಕ್ತ, ಯುವತಿ ಮತ್ತು ಆರೋಪಿಗಳ ಒಳಉಡುಪು, ಬಟ್ಟೆ ಇತ್ಯಾದಿಗಳನ್ನು ಸಂಗ್ರಹಿಸಿ, ಬೆಂಗಳೂರಿನಲ್ಲಿರುವ ಸರ್ಕಾರಿ ವಿಧಿ ವಿಜ್ಞಾನ ಪ್ರಯೋಗಾಲಯ(ಫೊರೆನ್ಸಿಕ್ ಸೈನ್ಸ್ ಲ್ಯಾಬ್)ಗೆ ಕಳುಹಿಸಲಾಗಿದೆ. ಜೊತೆಗೆ, ನ್ಯಾಯಾಲಯದ ಒಪ್ಪಿಗೆ ಮೇರೆಗೆ ಆರೋಪಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಅದನ್ನೂ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ.
ಈ ಎರಡೂ ಪರೀಕ್ಷೆಗಳ ವರದಿಗಳು ಒಂದೇ ಆಗಿದ್ದಲ್ಲಿ, ಪೊಲೀಸರು ಬಂಧಿಸಿದ ಆರೋಪಿಗಳೇ ಅತ್ಯಾಚಾರ ನಡೆಸಿದ್ದು ಎಂದು ಗುರುತಿಸಿದಂತಾಗುತ್ತದೆ. ಮಾತ್ರವಲ್ಲ, ಮುಂದೆ ನ್ಯಾಯಾಲಯದಲ್ಲಿ ಆತ್ಯಾಚಾರದ ಆರೋಪ ಸಾಬೀತು ಮಾಡುವಲ್ಲಿಯೂ ಈ ವರದಿಗಳ ಮಹತ್ತರ ಸಾಕ್ಷಿಗಳಾಗುತ್ತವೆ.
ಮತ್ತೆ ಮುಸುಕು ಇಲ್ಲ: ಇದರ ನಂತರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ. ಬಳಿಕ, ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಬರುವಾಗ ಮುಸುಕು ಹಾಕಲಾಗುವುದಿಲ್ಲ ಎಂದು ಉಡುಪಿ ಎಸ್ಪಿ ಡಾ. ಬೋರಲಿಂಗಯ್ಯ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ತಿಂಗಳ ಕೊನೆಗೆ ವರದಿ ನಿರೀಕ್ಷೆ: ಆರೋಪಿಗಳ ರಕ್ತದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಈಗಾಗಲೇ 2 ವಾರ ಕಳೆದಿವೆ. ಈ ತಿಂಗಳ ಕೊನೆಗೆ ವರದಿ ಬರುವ ನಿರೀಕ್ಷೆ ಇದೆ. ನಂತರ ವಾರದೊಳಗೆ ಚಾರ್ಜ್ಶೀಟ್ ಸಲ್ಲಿಸುತ್ತೇವೆ ಎಂಬ ವಿಶ್ವಾಸವನ್ನು ಎಸ್ಪಿ ವ್ಯಕ್ತಪಡಿಸಿದ್ದಾರೆ. ಜು.29ಕ್ಕೆ ಆರೋಪಿಗಳ ನ್ಯಾಯಾಂಗ ಬಂಧನ ಮುಗಿಯಲಿದೆ. ಅಂದು ಆರೋಪಿಗಳನ್ನು ಪೊಲೀಸರು ಮತ್ತೊಮ್ಮೆ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಅತ್ಯಾಚಾರ ಯತ್ನದ ಆರೋಪಿಗೆ ನ್ಯಾಯಾಂಗ ಬಂಧನ
ಕ.ಪ್ರ.ವಾರ್ತೆ ಉಪ್ಪಿನಂಗಡಿ ಜು.23-
ಪೆರಿಯಡ್ಕ ಆಲಾಜೆ ಎಂಬಲ್ಲಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಕಲ್ಲಡ್ಕ ಅಜೀಜ್ ಎಂಬಾತನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೋಮವಾರ ಸಂಜೆ ಸ್ಥಳೀಯ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಮನೆಗೆ ಕಾಲ್ನಡಿಗೆಯಲ್ಲಿ ತೆರಳುತಿದ್ದಾಗ, ಆಲಾಜೆ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಬೈಕ್ನಲ್ಲಿ ಬಂದ ಆರೋಪಿ ಆಕೆಯ ಕೈಹಿಡಿದೆಳೆದು ಮಾನ ಭಂಗಕ್ಕೆ ಯತ್ನಿಸಿದ. ವಿದ್ಯಾರ್ಥಿನಿ ರಕ್ಷಣೆಗಾಗಿ ಕಿರುಚಿದಾಗ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದರು. ಆರೋಪಿ ಅಜೀಜ್ ಚಪ್ಪಲಿಯನ್ನು ಅಂಗಡಿಗೆ ಸರಬರಾಜು ಮಾಡುವ ಕಾಯಕದವನಾಗಿದ್ದು, ವಿವಾಹಿತನಾಗಿ ಮಕ್ಕಳ ತಂದೆಯಾಗಿದ್ದಾನೆ. ವಿದ್ಯಾರ್ಥಿನಿ ನೀಡಿದ ದೂರು ಪರಿಶೀಲಿಸಿದ ಪೊಲೀಸರು, ದೂರು ದಾಖಲಿಸಿದರು.
- ಸುಭಾಶ್ಚಂದ್ರ ಎಸ್. ವಾಗ್ಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

