ಪ್ರಧಾನ ಸುದ್ದಿ

ಭೂ ಒತ್ತುವರಿ

ವಿಧಾನಸಭೆಯಲ್ಲಿ ಸ್ಫೋಟಗೊಂಡ ಕನ್ನಡಪ್ರಭ ವರದಿ, ಬಾಲಸುಬ್ರಮಣಿಯನ್ ವಿರುದ್ಧ ಕ್ರಮಕ್ಕೆ ಸ್ಪೀಕರ್ ಆದೇಶ

ಭೂ ಒತ್ತುವರಿ
Published On :

ವಿಧಾನಸಭೆ: ಸರ್ಕಾರಿ ಭೂಮಿ ಒತ್ತುವರಿ ವಿಚಾರ ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಧ್ವನಿಸಿದ್ದಲ್ಲದೆ,  ಒತ್ತುವರಿ ತೆರವು ಮತ್ತು ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಹ್ಮಣ್ಯನ್ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಪರಿಶೀಲನೆ ನಡೆಸಲು ವಿಧಾನಸಭೆ ಹಕ್ಕು ಬಾದ್ಯತಾ ಸಮಿತಿಗೆ ಸ್ಪೀಕರ್ ಆದೇಶ ನೀಡಿದ್ದಾರೆ.
ಸರ್ಕಾರಿ ಭೂಮಿ ಒತ್ತುವರಿ ಸಂಬಂಧ 'ಕನ್ನಡಪ್ರಭ'ದಲ್ಲಿ ಸರಣಿ ಲೇಖನ ಪ್ರಕಟವಾಗಿತ್ತು. ಜೊತೆಗೆ ಪತ್ರಿಕೆಗೆ ಬಾಲಸುಬ್ರಹ್ಮಣ್ಯನ್ ಅವರು ಸಂದರ್ಶನ ನೀಡಿದ್ದರು. ಸಂದರ್ಶನವನ್ನು ಸದನದಲ್ಲಿ ಉಲ್ಲೇಖಿಸಿ ಮಾತನಾಡಿದ ಶಾಸಕರು ಹಕ್ಕುಚ್ಯುತಿಯಾಗಿದೆ ಎಂದು ಆರೋಪಿಸಿದರು.
ಸಂದರ್ಶನದಲ್ಲಿ ತಮ್ಮ ಶಾಸಕತ್ವದ ಹಕ್ಕು ಚ್ಯುತಿಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ನ  ರಮೇಶ್‌ಕುಮಾರ್ ಹಕ್ಕುಚ್ಯುತಿ ನಿರ್ಣಯದ ಪ್ರಸ್ತಾವನೆ ಮಂಡಿಸಿದ ಹಿನ್ನೆಲೆಯಲ್ಲಿ ಹಾಗೂ ಜೆಡಿಎಸ್‌ನ ಎಚ್.ಡಿ. ರೇವಣ್ಣ, ಬಿಜೆಪಿಯ ಕೆ.ಜಿ. ಬೋಪಯ್ಯ  ಜೀವರಾಜ್  ವಿಚಾರ ಪ್ರಸ್ತಾಪಿಸಿದ್ದರಿಂದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಈ ಆದೇಶ ನೀಡಿದ್ದಾರೆ.
ಸಂದರ್ಶನದಲ್ಲಿ  ಭಾವನೆಗಳಿಗೆ ಹಾಗೂ ಸದಸ್ಯರ ಗೌರವಕ್ಕೆ ಧಕ್ಕೆಯಾಗುವ ಅಭಿಪ್ರಾಯವನ್ನು ವಿ.ಬಾಲಸುಬ್ರಮಣಿಯನ್  ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿ ನಿಯಮ 191ರ ಅನ್ವಯ ರಮೇಶ್‌ಕುಮಾರ್ ಹಕ್ಕುಚ್ಯುತಿ ನಿರ್ಣಯದ ಪ್ರಸ್ತಾವನೆ ಮಂಡಿಸಿದರು.

ರಮೇಶ್‌ಕುಮಾರ್ ಆರೋಪವೇನು?:
ಬಾಲಸುಬ್ರಹ್ಮಣ್ಯನ್ ಅವರು ನನ್ನನ್ನು ಮೋಸಗಾರ ಎಂಬಂತೆ ವ್ಯಾಖ್ಯಾನ ಮಾಡಿದ್ದಾರೆ. ಶ್ರೀನಿವಾಸಪುರದಲ್ಲಿ ನಾನು ಬೇರೆ ಬೇರೆ ಖಾತೆದಾರರಿಂದ ಹಣ ಕೊಟ್ಟು ಭೂಮಿ ಖರೀದಿಸಿದ್ದೇನೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ಪ್ರಕರಣ ವಜಾಗೊಂಡ ಮರುದಿನವೇ ನನ್ನ ವಿರುದ್ಧ ಆರೋಪ ಮಾಡಿದ್ದಾರೆ.
ಬಹುಶಃ ನನ್ನ ಬಗ್ಗೆ ಅವರಲ್ಲಿ ವಿಶೇಷ ಮಾಹಿತಿ ಇರಬೇಕು. ಆದರೆ ಐದು ವರ್ಷ ಈ ಸದನದ ಅಧ್ಯಕ್ಷನಾಗಿದ್ದ ನನ್ನ ಬಗ್ಗೆ ಕನಿಷ್ಠ ಗೌರವ ನೀಡಿಲ್ಲ. ಅಷ್ಟು ಮಾತ್ರವಲ್ಲ, ಸರ್ಕಾರಿ ಭೂಮಿ ಒತ್ತುವರಿ ತನಿಖೆಗೆ ಉನ್ನತಮಟ್ಟದ ಸಮಿತಿ ರಚಿಸಿದರೆ ಅದಕ್ಕೆ ರಮೇಶ್‌ಕುಮಾರ್ ಅವರಂಥವರು ಸದಸ್ಯರಾಗುತ್ತಾರೆ ಎಂದಿರುವುದು ಮಾತ್ರವಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೋರ್ಟ್‌ನಲ್ಲಿ ನಾನು ದಾಖಲೆಗಳನ್ನು ಪ್ರಭಾವ ಬಳಸಿ ತಿರುಚಿದ್ದೇನೆ ಎಂದಿದ್ದಾರೆ.
ಇದರಿಂದ ನನ್ನ ಮನಸಿಗೆ ತೀವ್ರ ನೋವಾಗಿದೆ. ಇವರು ನನ್ನ ಬಗ್ಗೆ ಏನು ತಿಳಿದುಕೊಂಡಿದ್ದಾರೆ? ಒಬ್ಬ ನಿವೃತ್ತ ಅಧಿಕಾರಿ ಹೀಗೆ ಮಾತನಾಡಿದರೆ ಹೇಗೆ? ಇವರು ಅಧಿಕಾರದಲ್ಲಿದ್ದಾಗ ಸಹೋದ್ಯೋಗಿಗಳನ್ನು ಹೇಗೆ ನಡೆಸಿಕೊಂಡಿರಬೇಕು? ಅವರೊಬ್ಬ ಜಗಳಗಂಟ, ಮಾರೀಚ ಸ್ವಭಾವದವ, ರಾಕ್ಷಸಿ ಪ್ರವೃತ್ತಿ ವ್ಯಕ್ತಿ. ಫ್ರಾನ್ಸ್‌ನ್ನು ಆಳಿದ ನೆಪೋಲಿಯನ್‌ನ ಸೋದರನಂತೆ ವರ್ತಿಸುತ್ತಿದ್ದಾರೆ.
ನಾನೊಬ್ಬನೇ ಸರಿ ಎಂಬ ಮನೋಭಾವ ಹೊಂದಿರುವ ಅವರು ನನ್ನ ಬಗ್ಗೆ ದ್ವೇಷ ಭಾವನೆ ಹೊಂದಿದ್ದಾರೆ. ನಾನು ಖರೀದಿಸಿದ ಭೂಮಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ.
ಹೀಗಾಗಿ ಖುದ್ದು ನಾನೇ ಜಂಟಿ ಸರ್ವೆ ನಡೆಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದೆ. ಮಾತ್ರವಲ್ಲ ದಕ್ಷ ಅರಣ್ಯಾಧಿಕಾರಿ ಡಾ.ಯು.ವಿ. ಸಿಂಗ್ ಅವರು, ನನ್ನ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದಿದ್ದರು. ಅಂಥದರಲ್ಲಿ ನಾನು ಸೇರಿದಂತೆ ಈ ಸದನದ ಕೆಲ ಸದಸ್ಯರ ವಿರುದ್ಧ ಆರೋಪ ಮಾಡಿದ್ದಾರೆ. ಭೂ ಒತ್ತುವರಿಗೆ ರಾಜಕಾರಣಿಗಳೇ ಕಾರಣ ಎಂದು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ವಿಧಾನಸಭಾಧ್ಯಕ್ಷನಾಗಿ ಸೇವೆ ಸಲ್ಲಿಸಿದ ನಾನು ಅಧಿಕಾರಿಗಳಿಂದ ಕಿಂಚಿತ್ ಗೌರವ ಬಯಸುವುದು ತಪ್ಪೇ? ನಾನು ಒಮ್ಮೆ ಇವರ ಕಚೇರಿಗೆ ಹೋದಾಗ ನನ್ನನ್ನು ಸಂದರ್ಶಿಸಲಿಲ್ಲ. ಒಬ್ಬ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಈ ರೀತಿ ವರ್ತಿಸಿದರೆ ಜನರಿಗೆ ಯಾವ ರೀತಿ ಸೇವೆ ನೀಡಬಹುದು. ಅವರು ಹಿಟ್ಲರ್‌ಗಿಂತ ಯಾವ ವಿಚಾರದಲ್ಲೂ ಕಡಿಮೆ ಇಲ್ಲ. ಅವರು ಹೇಳಿದ ಅವಗುಣಗಳು ನನ್ನಲ್ಲಿ ಇದ್ದರೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ಜನರಿಗೆ ಛೀಮಾರಿ ಹಾಕಬೇಕಾಗುತ್ತದೆ. ಮರ್ಯಾದಸ್ಥರ ಗೌರವ ಹಾಳು ಮಾಡುವ ಇಂಥವರ ಬೇಜವಾಬ್ದಾರಿ ನಾಲಿಗೆ ಕತ್ತರಿಸಬೇಕಾಗುತ್ತದೆ. ಲಂಗು- ಲಗಾಮು ಹಾಕಬೇಕಾಗುತ್ತದೆ ಎಂದು ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ರಮೇಶ್‌ಕುಮಾರ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಬಿಜೆಪಿಯ ಕೆ.ಜಿ. ಬೋಪಯ್ಯ, 'ಕನ್ನಡಪ್ರಭ'ದಲ್ಲಿ ಬಾಲಸುಬ್ರಹ್ಮಣ್ಯನ್ ನೀಡಿರುವ ಸಂದರ್ಶನದಲ್ಲಿ ಒತ್ತುವರಿಗೆ ರಾಜಕಾರಣಿಗಳ ಶ್ರೀರಕ್ಷೆ ಎಂದಿದ್ದಾರೆ. ರಾಜಕಾರಣಿಗಳು ಕಳ್ಳರು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕ ಜೀವರಾಜ್ ಮಾತನಾಡಿ, ಬಾಲಸುಬ್ರಹ್ಮಣ್ಯನ್ ಅವರು ನನ್ನ ಬಗ್ಗೆ ಪೂರ್ವಗ್ರಹ ಹಾಗೂ ವೈಯಕ್ತಿಕ ದ್ವೇಷವಿಟ್ಟುಕೊಂಡು ಈ ಆರೋಪ ಮಾಡಿದ್ದಾರೆ. ನಾನು ಶಾಸಕನಾದ ನಂತರ ಇದುವರೆಗೆ ಯಾರೊಬ್ಬರಿಗೂ ಸಾಗುವಾಳಿ ಚೀಟಿ ನೀಡಿಲ್ಲ. ಆದರೂ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
ಎಚ್.ಡಿ. ರೇವಣ್ಣ ಮಾತನಾಡಿ, ನಾನು ಸರ್ಕಾರದಿಂದ ಇದುವರೆಗೆ ನಿವೇಶನ ಕೋರಿ ಅರ್ಜಿ ಸಲ್ಲಿಸಿಲ್ಲ. ಪಡೆದೂ ಇಲ್ಲ. ಬಡವರಿಗೆ ಜಮೀನು ಕೊಡಿಸಿದ್ದನ್ನು ಭೂ ಒತ್ತುವರಿ ಎಂದಿದ್ದಾರೆ. ಇಂಥ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.